More

    43 ವರ್ಷವಾದರೂ ಹಸನಾಗದ ರೈತರ ಬದುಕು

    ನವಲಗುಂದ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ರೈತರ ಶಕ್ತಿ ಏನೆಂಬುದನ್ನು ತೋರಿಸಿ ರೈತ ಸಮುದಾಯದಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ ನವಲಗುಂದ-ನರಗುಂದ ಬಂಡಾಯಕ್ಕೀಗ ಮಂಕು ಕವಿದಿದೆ. ಇದೀಗ 43ನೇ ಹುತಾತ್ಮ ದಿನಾಚರಣೆ ಬಂದರೂ ರೈತರ ಸಮಸ್ಯೆಗಳು ಸಮಸ್ಯೆಯಾಗಿಯೆ ಉಳಿದಿದ್ದು, ಸ್ಪಂದನೆಯೂ ದೊರೆತಿಲ್ಲ.

    ಪಟ್ಟಣ ಹಾಗೂ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಜು. 21ರಂದು ರೈತ ಹುತಾತ್ಮ ದಿನಾಚರಣೆಗೆ ಸಿದ್ಧತೆ ನಡೆಸಲಾಗಿದೆ. ಅನ್ನದಾತರ ಬಂಡಾಯ ನೆನಪಿಸುವ ಈ ದಿನಕ್ಕೆ ರೈತ ಚಳವಳಿಗಳಲ್ಲಿಯೇ ವಿಶೇಷ ಸ್ಥಾನವಿದೆ.

    ಏಳು ವರ್ಷದಿಂದ ಮಲಪ್ರಭಾ ನದಿಗೆ ಮಹದಾಯಿ ಜೋಡಣೆ ಮಾಡುವಂತೆ ಒತ್ತಾಯಿಸಿ ನಡೆಸಿದ ವಿವಿಧ ರೀತಿಯ ಪ್ರತಿಭಟನೆಗೆ ಫಲ ದೊರೆತಿಲ್ಲ. ಈ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ಆರೋಪವಿದೆ. ನಂತರ ದಿನಗಳಲ್ಲಿ ರೈತ ಸಂಘ ಅಸ್ತಿತ್ವ ಕಳೆದುಕೊಂಡು ರಾಜಕೀಯ ರೂಪ ತಾಳಿ ರೈತ ಸಂಘಟನೆಗಳು ಛಿದ್ರಗೊಂಡಿವೆ. ಮತ್ತೆ ಒಗ್ಗಟ್ಟು ಪ್ರದರ್ಶನಕ್ಕೆ ರೈತ ಸಂಘಟನೆಗಳು ಮುಂದಾಗಿ ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಕೋರುವುದೇ ಎಂಬುದನ್ನು ಕಾದು ನೋಡಬೇಕಿದೆ.

    ಏನಿದು ರೈತರ ಬಂಡಾಯ

    1979ರಲ್ಲಿ ಬರ ಬಂದು ಕಾಲುವೆ ಗಳಿಂದ ಹೊಲ ಗಳಿಗೆ ನೀರು ಬರುವುದು ನಿಂತು ಹೋಯಿತು. ಹತ್ತಿ, ಗೋವಿನ ಜೋಳದ ಬೆಲೆ ಕುಸಿದು ರೈತರು ಕಂಗಾಲಾ ಗಿದ್ದರು. ಕಷ್ಟದ ಸ್ಥಿತಿಯಲ್ಲೂ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಾರದ ನೀರಿಗೆ ನೀರಿನ ಕರ (ಬೆಟರ್​ವೆುಂಟ್ ಲೇವಿ) ಕಾಯ್ದೆ ಜಾರಿಗೆ ತಂದಿತ್ತು. ಕಾಯ್ದೆ ವಿರುದ್ಧ ನರಗುಂದ, ನವಲಗುಂದ, ಸವದತ್ತಿ ಭಾಗದ ರೈತರು ಹೋರಾಟಕ್ಕೆ ತಯಾರಾಗಿದ್ದರು.

    1980ರ ಜುಲೈ 21ರಂದು ನರಗುಂದ, ನವಲಗುಂದ ಹಾಗೂ ಸವದತ್ತಿ ತಾಲೂಕುಗಳಲ್ಲಿ ಬಂದ್ ಕರೆ ನೀಡಲಾಯಿತು. ರೈತರು ಬ್ಯಾಂಕ್, ಅಂಚೆ ಕಚೇರಿ ಬಂದ್ ಮಾಡಿಸುತ್ತಾ ಬರುತ್ತಿದ್ದರು. ಕೆಲ ರೈತರು ತಹಸೀಲ್ದಾರ್ ಕಚೇರಿಗೆ ಅಡ್ಡಲಾಗಿ ಮಲಗಿದ್ದರೂ ಅವರನ್ನು ದಾಟಿಕೊಂಡು ಕಚೇರಿಗೆ ಪ್ರವೇಶ ಮಾಡಿದ್ದ ಅಂದಿನ ತಹಸೀಲ್ದಾರ್ ಎಫ್.ಎಸ್. ವರೂರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾತಿಗೆ ಮಾತು ಬೆಳೆದು ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿ ಪಿಎಸ್​ಐ ಸಿಕಂದರ್ ಪಟೇಲ್ ಹಾರಿಸಿದ ಗುಂಡೇಟಿಗೆ ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ ಸ್ಥಳ ದಲ್ಲಿಯೇ ಮೃತಪಟ್ಟರು. ನವಲಗುಂದ ತಾಲೂ ಕಿನಲ್ಲಿ ಅಳಗವಾಡಿಯ ಬಸಪ್ಪ ಲಕ್ಕುಂಡಿ ಹುತಾತ್ಮರಾದರು. ಇದರಿಂದ ಆಕ್ರೋಶಗೊಂಡ ರೈತರು ಮೇಳಿ (ಕೃಷಿ ಪರಿಕರಗಳಿಂದ) ಸಿಕ್ಕಸಿಕ್ಕವರನ್ನು ಥಳಿಸಿದರು.

    ಪಿಎಸ್​ಐ ಸಿಕಂದರ್ ಪಟೇಲ್ ಸೇರಿ ಅನೇಕ ಪೊಲೀಸ್ ಪೇದೆಗಳು ಸಾವನ್ನಪ್ಪಿದರು. ರೈತರ ಮೇಳಿ ಹೊಡೆತಕ್ಕೆ ಅಂದಿನ ತಹಸೀಲ್ದಾರ್ ಫಕೀರಪ್ಪ ವರೂರ ಅವರ ಕಿವಿ ತುಂಡಾಗಿತ್ತು. ಗೋಲಿಬಾರ್​ನಲ್ಲಿ ಬಹುತೇಕ ರೈತರು ಗಾಯಗೊಂಡಿದ್ದರು. ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ರೈತರನ್ನು ಬಂಧಿಸಲಾಯಿತು. ಇದರ ಸ್ಮರಣಾರ್ಥ ಪ್ರತಿವರ್ಷ ಜು. 21ರಂದು ನರಗುಂದದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತದೆ. ಈ ಹೋರಾಟದಿಂದ ರಾಜ್ಯಾದ್ಯಂತ ರೈತ ಸಂಘಟನೆಗಳ ಸ್ಥಾಪನೆಯಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts