More

    ಯಾವುದೇ ವಿಚಾರವಾದರೂ ದಿಢೀರನೇ ಹೋರಾಟಕ್ಕಿಳಿಯುವ ಎಚ್.ಡಿ.ಕುಮಾರಸ್ವಾಮಿ ಹೀಗ್ಯಾಕೆ ಸುಮ್ಮನಿದ್ದಾರೆ: ದಳಪತಿಗಳ ವಿರುದ್ಧ ಮಾಜಿ ಸಂಸದ ಟೀಕಾ ಪ್ರಹಾರ

    ಮಂಡ್ಯ: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಇದರಿಂದಾಗಿ ಮೈತ್ರಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಆದ್ದರಿಂದ ಎನ್‌ಡಿಎ ಮೈತ್ರಿಯಿಂದ ಜೆಡಿಎಸ್‌ನ್ನು ದೂರ ಇಡುವಂತೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸಲಹೆ ನೀಡಿದರು.
    ಪೆನ್‌ಡ್ರೈವ್ ಪ್ರಕರಣದ ಮುಜುಗರ ತಪ್ಪಿಸುವ ಸಲುವಾಗಿ ವರಿಷ್ಠರು ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಬಿಜೆಪಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಬಲೆಯರ ನೆರವಿಗೆ ಧಾವಿಸಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗುವಂತೆ ಹೋರಾಟ ರೂಪಿಸಬೇಕು. ಅದರಲ್ಲಿ ನಾವೂ ಪಾಲ್ಗೊಳ್ಳುತ್ತೇವೆ. ಯಾವುದೇ ವಿಚಾರವಾದರೂ ಕುಮಾರಸ್ವಾಮಿ ದಿಢೀರನೇ ಹೋರಾಟಕ್ಕೆ ಇಳಿಯುತ್ತಾರೆ. ಆದರೆ ಹಾಸನದ ಪ್ರಕರಣದಲ್ಲಿ ಕೇವಲ ವಿಪಕ್ಷಗಳ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಇಂತಹ ಮಿಥ್ಯಾರೋಪವನ್ನು ಬಿಟ್ಟು ನೈಜ ಹೋರಾಟಕ್ಕೆ ಇಳಿಯಲಿ ಎಂದು ಆಗ್ರಸಿದ್ದಾರೆ.
    ಹಿಂದೆ ನಾಗಮಂಗಲದ ಗಂಗಾಧರಸ್ವಾಮಿ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ವಿರುದ್ಧ ಆತನ ಫೋಟೋ ತಲೆ ಮೇಲೆ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದರು. ಆದರೆ ಇಂದು ಇಂತಹ ಇಳಿ ವಯಸ್ಸಿನಲ್ಲಿ ತನ್ನ ಮನೆಯಲ್ಲೇ ದೊಡ್ಡ ಘಟನೆ ನಡೆದುಹೋಗಿದೆ. ಇಂತಹುದ್ದನ್ನು ಈ ವಯಸ್ಸಿನಲ್ಲಿ ನೋಡಬೇಕಾದ ದುಸ್ಥಿತಿ ಬಂದೊದಗಿದೆ. ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಆದರೂ ನನ್ನನ್ನು ಬಂಧಿಸುವಂತೆ ಹೋರಾಟ ಮಾಡಿದ್ದರು. ನ್ಯಾಯಾಲಯ ನನಗೆ ಕ್ಲೀನ್‌ಚಿಟ್ ನೀಡಿತ್ತು. ಆ ಪ್ರಕರಣದಲ್ಲಿ ನಾನೂ ಕೂಡ ಸಂತಸ್ತನಾಗಿದ್ದೇನೆ. ಜೆಡಿಎಸ್‌ನಲ್ಲಿದ್ದ ಎಷ್ಟೋ ಜನರು ನನ್ನಂತೆಯೇ ಒಂದಲ್ಲ ಒಂದು ಕಾರಣಕ್ಕೆ ಸಂತ್ರಸ್ಥರಾಗಿದ್ದಾರೆ ಎಂದು ದೂರಿದರು.
    ದೇವೇಗೌಡರ ಕುಟುಂಬದಿಂದ ಒಕ್ಕಲಿಗ ನಾಯಕರು ತುಳಿತಕ್ಕೆ ಒಳಗಾಗಿದ್ದಾರೆ. ಚುನಾವಣೆಗೂ ಮುನ್ನ ಹಾಸನದಲ್ಲಿ ಪ್ರಚಾರ ಮಾಡುವ ವೇಳೆ ಪ್ರಜ್ವಲ್ ನನ್ನ ಮಗನಿದ್ದಂತೆ ಆತ ಏನೇ ಮಾಡಿರಲಿ, ನಾನು ಸರಿಪಡಿಸುತ್ತೇನೆ. ಅವನಿಗೆ ಆಶೀರ್ವಾದ ಮಾಡಿ ಎಂದು ಕುಮಾರಸ್ವಾಮಿ ಕೇಳಿದ್ದರು. ಆದರೆ ಲೈಂಗಿಕ ಹಗರಣ ಹೊರ ಬಂದ ನಂತರ ರೇವಣ್ಣ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
    ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಬೇಡ ಎಂದು ಕೇಂದ್ರ ಸಚಿವ ಅಮಿತ್ ಷಾ ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಲಿಲ್ಲ. ಈತನನ್ನು ನಂಬಿ ಟಿಕೆಟ್ ಕೊಟ್ಟು ಅಪಮಾನ ಮಾಡಿಸಿಕೊಂಡಂತಾಗಿದೆ. ಜೆಡಿಎಸ್‌ಗಾಗಿ ನಾನೂ ಸೇರಿದಂತೆ ಹಲವರು ದುಡಿದಿದ್ದೇವೆ. ಕೋಟ್ಯಂತರ ರೂಗಳನ್ನು ಕಳೆದುಕೊಂಡಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೆ ಸುರೇಶ್‌ಗೌಡರಿಗೆ ನೀಡಿದರು. ನಂತರ ಕೇವಲ 5 ತಿಂಗಳ ಅವಧಿಗೆ ಸಂಸದನಾದೆ. ನಂತರ ತಮ್ಮ ಮಗನಿಗೆ ಟಿಕೆಟ್ ಕೊಟ್ಟರು. ನನಗೇನೂ ಕೊಟ್ಟರು. ಕೇವಲ ಬಾಯಿಮಾತಿಯಿಂದ ಆಡಿದ ಸಣ್ಣ ತಪ್ಪುನ್ನು ಗಮನಿಸಿ ಅರ್ಧ ಗಂಟೆಯಲ್ಲೇ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಇಂತಹ ದೊಡ್ಡ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ಅಮಾನತಿಗೆ ಸಭೆ ಮಾಡಿ ನಂತರ ತೀರ್ಮಾನ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಘಟನೆಗೆ ಕಾರಣನಾದ ಆರೋಪಿ, ಪೆನ್‌ಡ್ರೈವ್ ಮೂಲಕ ಹೊರಜಗತ್ತಿಗೆ ತಂದವರು, ಇದರಲ್ಲಿ ಯಾರ‌್ಯಾರು ಶಾಮೀಲಾಗಿದ್ದಾರೋ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
    ಮುಖಂಡರಾದ ಹೇಮಂತರಾಜು, ಚೇತನ, ಕೊಪ್ಪ ರಮೇಶ್, ನಾಗರಾಜು, ವಕೀಲ ಉಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts