More

    ಕನಕಗಿರಿಯಲ್ಲಿ 45 ವರ್ಷದ ಬಳಿಕ ಚುನಾವಣಾಧಿಕಾರಿ ಕಚೇರಿ ಆರಂಭ

    ಕನಕಗಿರಿ: ಕನಕಗಿರಿ 1978ರಿಂದ ವಿಧಾನಸಭಾ ಕ್ಷೇತ್ರವಾಗಿದ್ದರೂ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಪ್ರಚಾರ, ಫಲಿತಾಂಶದ ದಿನದಂದು ಗೆದ್ದವರ ವಿಜಯೋತ್ಸವ ಮಾತ್ರ ಪಟ್ಟಣದಲ್ಲಿ ಕಾಣಬಹುದಾಗಿತ್ತು. ಇದೀಗ ಕನಕಗಿರಿಯಲ್ಲೇ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಅನುಕೂಲವಾಗಿದೆ.

    9ನೇ ಎಲೆಕ್ಷನ್‌ಗೆ ಸಜ್ಜಾಗಿದೆ

    ಕನಕಗಿರಿ ವಿಧಾನಸಭಾ ಕ್ಷೇತ್ರವಾದ ಬಳಿಕ ಈವರೆಗೆ 8 ಚುನಾವಣೆ ಕಂಡಿದ್ದು, 9ನೇ ಎಲೆಕ್ಷನ್‌ಗೆ ಸಜ್ಜಾಗಿದೆ. ಆದರೆ ವಿಧಾನಸಭಾ ಚುನಾವಣೆ ನಡೆದಾಗ ಅವಿಭಜಿತ ಗಂಗಾವತಿಯಲ್ಲಿಯೇ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿತ್ತು. ಅಭ್ಯರ್ಥಿಗಳು, ಬೆಂಬಲಿಗರು ಅಲ್ಲಿಗೆ ತೆರಳಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಬೇಕಿತ್ತು. ನಾಮಪತ್ರ ಪರಿಶೀಲನೆ, ವಾಪಸ್ ಪ್ರಕ್ರಿಯೆಯೂ ಅಲ್ಲೇ ನಡೆಯುತ್ತಿತ್ತು. ಚುನಾವಣೆಯಲ್ಲಿ ಪ್ರಚಾರ ಹಾಗೂ ವಿಜಯೋತ್ಸವಕ್ಕೆ ಮಾತ್ರ ಅಭ್ಯರ್ಥಿಗಳು ಇಲ್ಲಿಗೆ ಬರುತ್ತಿದ್ದರು.

    ಇದನ್ನೂ ಓದಿ: ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಈವರೆಗೆ ಸೀಜ್‌ ಆದ ವಸ್ತುಗಳ ಮೌಲ್ಯ, ದಾಖಲಾದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ!

    ತಾಲೂಕಾಗಿ 5 ವರ್ಷ ಬಳಿಕ ಕಚೇರಿ

    ತಾಲೂಕಾಗಿ 5 ವರ್ಷವಾದ ಬಳಿಕ ಕನಕಗಿರಿ ಪಟ್ಟಣದಲ್ಲಿ ಚುನಾವಣಾಧಿಕಾರಿ ಕಚೇರಿ ಆರಂಭಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಿ, ಮೂರ‌್ನಾಲ್ಕು ತಿಂಗಳ ಹಿಂದೆಯೇ ಅಗತ್ಯ ಸೌಲಭ್ಯಗಳ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಮೂಲಸೌಕರ್ಯ ಇದ್ದರೂ ಕೆಲ ಅಧಿಕಾರಿಗಳು ಇದಕ್ಕೆ ಹಿಂದೇಟು ಹಾಕಿದ್ದು, ಗಂಗಾವತಿಯಲ್ಲಿ ಇಲ್ಲವೇ ಕಾರಟಗಿಯಲ್ಲಿ ನಡೆಸುವ ಮನಸ್ಸು ಮಾಡಿದ್ದರು ಎನ್ನುವ ಮಾತುಗಳು ಹರಿದಾಡಿದ್ದವು.

    ಸಮಯ,ಹಣ ಉಳಿತಾಯ

    ಆದರೆ ಇದಕ್ಕೆ ಸೊಪ್ಪು ಹಾಕದ ಜಿಲ್ಲಾ ಮಟ್ಟದ ಅಧಿಕಾರಿಗಳು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಪ್ರಕ್ರಿಯೆ ಆರಂಭಿಸಿದೆ. ಕ್ಷೇತ್ರವಾದ 45 ವರ್ಷಗಳ ಬಳಿಕ ಚುನಾವಣಾಧಿಕಾರಿ ಕಚೇರಿ ಆರಂಭಿಸಿ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕಾರ, ಪರಿಶೀಲನೆವರೆಗೆ ಕಾರ್ಯ ನಿರ್ವಹಿಸಿರುವುದು ಅನುಕೂಲವಾಗಿದೆ. ಇದರಿಂದ ಸಮಯದ ಉಳಿತಾಯ, ಹಣದ ವ್ಯಯವೂ ಅಭ್ಯರ್ಥಿಗಳಿಗೆ ತಪ್ಪಿದೆ.

    ವ್ಯಾಪಾರಿಗಳಿಗೂ ಲಾಭ: ಚುನಾವಣಾ ಪ್ರಕ್ರಿಯೆ ಪಟ್ಟಣದಲ್ಲಿ ಆರಂಭವಾಗಿರುವುದರಿಂದ ನಾನಾ ಪಕ್ಷಗಳು ಶಕ್ತಿ ಪ್ರದರ್ಶನಕ್ಕಾಗಿ ನಡೆಸುವ ರೋಡ್ ಶೋ, ಪ್ರಚಾರಕ್ಕೆ ಜನರ ಅವಶ್ಯವಾಗಿದ್ದರಿಂದ ಕೆಲವರಿಗೆ ಹಬ್ಬದೂಟದಂತಾಗಿದೆ. ಇನ್ನು ಮದ್ಯದಂಗಡಿ, ಹೋಟೆಲ್, ಡಾಬಾ, ಜೆರಾಕ್ಸ್, ತಂಪು ಪಾನೀಯಾ ಅಂಗಡಿಗಳ ವ್ಯಾಪಾರಸ್ಥರು ಲಾಭ ಕಂಡುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts