More

    ಕಂಬಳ ಓಟಗಾರನಿಗೆ ತೆರೆದೀತೇ ಅಥ್ಲೆಟಿಕ್ಸ್ ದಾರಿ?

    ಮಂಗಳೂರು: ಕಂಬಳದಲ್ಲಿ ಕೋಣದ ಜೊತೆ ಓಡುವಾಗ ಉಸೇನ್ ಬೋಲ್ಟ್‌ಗಿಂತಲೂ ವೇಗವಾಗಿ 100 ಮೀಟರ್ ಫಿನಿಶ್ ಮಾಡಿದ್ದ ಶ್ರೀನಿವಾಸ ಗೌಡ ಟ್ರಾೃಕ್ ಮೇಲೆಯೂ ಅದೇ ಮ್ಯಾಜಿಕ್ ಮಾಡಬಲ್ಲರೇ?
    ಈ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
    ಕೆಸರುಗದ್ದೆಯಲ್ಲಿ ಕಂಬಳದ ಅತಿ ವೇಗದ ಓಟಗಾರನೆಂಬ ಹೆಸರು ಮಾಡಿರುವ ಶ್ರೀನಿವಾಸ ಗೌಡ ಅವರನ್ನು ಟ್ರಾೃಕ್ ಮೇಲೆ ಓಡಿಸಿ ಸಾಮರ್ಥ್ಯ ಒರೆಗೆ ಹಚ್ಚುವ ಕೆಲಸ ಸ್ವತಃ ಕೇಂದ್ರ ಕ್ರೀಡಾ ಇಲಾಖೆಯಿಂದ ನಡೆಯಲಿದೆ. ಅಥ್ಲೆಟಿಕ್ಸ್‌ಗೆ ಸೂಕ್ತವೆನಿಸಿದರೆ ಮುಂದೆ ಸೂಕ್ತ ತರಬೇತಿಯೊಂದಿಗೆ ಭಾರತದ ಕ್ರೀಡಾ ಸಾಧಕರಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಮಿಂಚುವ ಅವಕಾಶಗಳಿವೆ.

    ಕ್ರೀಡಾ ಸಚಿವ ಟ್ವೀಟ್: ಮಹೀಂದ್ರ ಕಂಪನಿಯ ಚೇರ‌್ಮನ್ ಆನಂದ್ ಮಹೀಂದ್ರ ಅವರು ಶ್ರೀನಿವಾಸ ಗೌಡರ ಸಾಧನೆಯನ್ನು ಕಂಡು ಟ್ವೀಟ್ ಮಾಡಿದ್ದರು. ಈತನ ದೇಹದಾರ್ಢ್ಯ ನೋಡಿ, ಈತ ಅತ್ಯದ್ಭುತ ಅಥ್ಲೆಟಿಕ್ಸ್ ಸಾಧಕನಾಗಬಲ್ಲ, ಒಂದೋ ಕಿರಣ್ ರಿಜಿಜು ಸೂಕ್ತ ತರಬೇತಿ ಕೊಡಿಸಬೇಕು ಅಥವಾ ಕಂಬಳ ಒಲಿಂಪಿಕ್ ಕ್ರೀಡೆಯಾಗಬೇಕು. ಯಾವುದೇ ರೀತಿ ಇರಲಿ, ಶ್ರೀನಿವಾಸ ಗೌಡರಿಗೆ ಚಿನ್ನದ ಮೆಡಲ್ ಸಿಗಬೇಕು ಎಂಬುದಾಗಿತ್ತು ಅವರ ಟ್ವೀಟ್. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ್ ಕೂಡ ಕಂಬಳ ಸಾಧಕನ ಕುರಿತು ಟ್ವೀಟ್ ಮಾಡಿದ್ದರು.
    ಇವುಗಳಿಗೆ ಉತ್ತರಿಸಿರುವ ಕ್ರೀಡಾ ಸಚಿವ ರಿಜಿಜು, ಶ್ರೀನಿವಾಸರನ್ನು ಬೆಂಗಳೂರಿಗೆ ಕರೆಸಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತರಬೇತುದಾರರ ಸಮಕ್ಷಮ ಅವರ ಓಟದ ಟ್ರಯಲ್ಸ್ ನಡೆಸಲಾಗುವುದು. ಈಗಾಗಲೇ ಶ್ರೀನಿವಾಸರನ್ನು ಸಾಯ್ ಅಧಿಕಾರಿಗಳು ಸಂಪರ್ಕಿಸಿದ್ದು, ರೈಲು ಟಿಕೆಟ್ ಕಾದಿರಿಸಲಾಗಿದೆ. ಸೋಮವಾರ ಸಾಯ್ ಕೇಂದ್ರ ತಲುಪುವ ಅವರನ್ನು ರಾಷ್ಟ್ರೀಯ ಕೋಚ್‌ಗಳೇ ಸಮರ್ಪಕ ಟ್ರಯಲ್ಸ್ ಮೂಲಕ ಪರಿಶೀಲಿಸುತ್ತಾರೆ. ಭಾರತದ ಯಾವುದೇ ಪ್ರತಿಭೆಯು ಅವಕಾಶದಿಂದ ವಂಚಿತರಾಗಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

    ಟ್ರಯಲ್ಸ್ ಈಗ ಬೇಡ: ಸೋಮವಾರವೇ ಟ್ರಯಲ್ಸ್ ಎಂದರೆ ಭಾಗವಹಿಸುವುದು ಕಷ್ಟ. ಮಾರ್ಚ್‌ವರೆಗೆ ಕಂಬಳಗಳು ನಿಗದಿಯಾಗಿದ್ದು, ಅವುಗಳಲ್ಲಿ ಭಾಗವಹಿಸುವ ಒಪ್ಪಂದ ಶ್ರೀನಿವಾಸ ಗೌಡ ಮಾಡಿಕೊಂಡಿದ್ದಾರೆ. ಕಂಬಳ ಓಟದ ಕೆಲವು ದಾಖಲೆಗಳೂ ಅವರಿಂದ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಕೆಲದಿನಗಳ ನಂತರ ಟ್ರಯಲ್ಸ್ ನಡೆಸುವಂತೆ ಸಾಯ್‌ಗೆ ಮನವಿ ಮಾಡಲಾಗುವುದು ಎಂದು ಕಂಬಳ ಅಕಾಡೆಮಿಯ ಗುಣಪಾಲ ಕಡಂಬ ತಿಳಿಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸಿ ತಕ್ಷಣ ಟ್ರಯಲ್ಸ್‌ನಲ್ಲಿ ಭಾಗವಹಿಸುವುದು ಕಷ್ಟ. ಸುಸ್ತು ಇರಬಹುದು. ಇದನ್ನೂ ಗಮನಿಸಬೇಕು. ಸಾಯ್‌ನವರು ನಮ್ಮ ಅಕಾಡೆಮಿಯಲ್ಲಿ ಓಟ ವೀಕ್ಷಿಸಲಿ, ಶ್ರೀನಿವಾಸ್‌ರದ್ದೇ ರೀತಿಯ ನಿರ್ವಹಣೆ ಇರುವ ಕನಿಷ್ಠ ಐವರಿದ್ದಾರೆ ಎಂದು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ಬೆಳಕಿಗೆ ಬಂದಿದ್ದು ಹೇಗೆ?
    ಫೆ.1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ಸಾಂಪ್ರದಾಯಿಕ ಕಂಬಳದ ವೇಳೆ ಶ್ರೀನಿವಾಸ್ ಗೌಡ 142.50 ಮೀಟರ್ ಅಂತರವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಓಡಿದ್ದರು. ಇದನ್ನು 100 ಮೀಟರ್‌ಗೆ ಬದಲಾಯಿಸಿದಾಗ 9.55 ಸೆಕೆಂಡ್ ಆಗುತ್ತದೆ. ಇಷ್ಟು ವೇಗದ ಓಟ ಕಂಬಳದಲ್ಲಿ ಸಾರ್ವಕಾಲಿಕ ದಾಖಲೆ. ವಿಶ್ವದ ಅತ್ಯಂತ ವೇಗದ ಓಟಗಾರ ಎಂದು ದಾಖಲೆ ಮಾಡಿರುವ ಉಸೇನ್ ಬೋಲ್ಟ್ 100 ಮೀಟರ್ ಓಡಿರುವುದು 9.58 ಸೆಕೆಂಡ್‌ಗಳಲ್ಲಿ. ಸಹಜವಾಗಿ ಭಾರತದ ಉಸೇನ್ ಬೋಲ್ಟ್ ಎಂಬ ಹೆಗ್ಗಳಿಕೆಗೆ ಶ್ರೀನಿವಾಸ ಗೌಡ ಪಾತ್ರರಾಗಿದ್ದಾರೆ.

    ನಾಳೆ ಸಿಎಂ ಭೇಟಿ
    ಶ್ರೀನಿವಾಸ ಅವರ ಸಾಧನೆ ಗುರುತಿಸಿರುವ ಕಾರ್ಮಿಕ ಇಲಾಖೆಯ ಆಯುಕ್ತ ಮಣಿವಣ್ಣನ್ ಅಭಿನಂದಿಸಿದ್ದಾರೆ. ಫೆ.17ರಂದು ಕುಮಾರಕೃಪಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶ್ರೀನಿವಾಸ ಗೌಡ ಭೇಟಿ ನಿಗದಿಯಾಗಿದ್ದು, ಸಿಎಂ ಗೌರವಿಸಲಿದ್ದಾರೆ.

    ಟ್ವಿಟರ್ ಟ್ರೆಂಡ್
    ತುಳುನಾಡಿಗೆ ಸೀಮಿತವಾಗಿ ನಡೆಯುವ ಕಂಬಳ ಈಗ ಶ್ರೀನಿವಾಸ ಗೌಡರ ಸಾಧನೆಯೊಂದಿಗೆ ಜಗದಗಲ ಕುತೂಹಲದಿಂದ ವೀಕ್ಷಿಸುವ ಕ್ರೀಡೆಯಂತಾಗಿದೆ. ರಾಷ್ಟ್ರೀಯ ಟಿವಿ ಚಾನೆಲ್‌ಗಳೂ ಅವರ ಸಂದರ್ಶನ ಮಾಡುತ್ತಿವೆ. ಸಾವಿರಾರು ಮಂದಿ ಟ್ವೀಟ್ ಮಾಡಿ ಅಭಿನಂದಿಸುತ್ತಿದ್ದಾರೆ. ಶನಿವಾರ ಟ್ವಿಟರ್‌ನಲ್ಲಿ ಶ್ರೀನಿವಾಸ ಗೌಡ ಟ್ರೆಂಡ್ ಆಗಿದ್ದರು.

    ಶ್ರೀನಿವಾಸ ಗೌಡ ಕಂಬಳ ಅಕಾಡೆಮಿ ಮೂಲಕ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್) ಕೋಚ್‌ಗಳಿಂದ ಕಂಬಳ ಓಟಕ್ಕೆ ತರಬೇತಿ ಪಡೆದವರು. ಕಂಬಳದಲ್ಲಿ ಉದ್ದದ ಹೆಜ್ಜೆಯಲ್ಲಿ ಓಡಬೇಕಾಗುತ್ತದೆ, ಸಿಂಥೆಟಿಕ್ ಟ್ರಾೃಕ್‌ನಲ್ಲಿ ಓಡುವ ವಿಧಾನ ಬೇರೆ. ಸಾಯ್‌ನವರು ತರಬೇತಿ ಹೆಸರಿನಲ್ಲಿ ದಾರಿ ತಪ್ಪಿಸಬಾರದು.
    -ಗುಣಪಾಲ ಕಡಂಬ, ಕಂಬಳ ಅಕಾಡೆಮಿ ಸಂಚಾಲಕ

    https://www.vijayavani.net/kambala-srinivasa-gowda-athletics-trials-coastal-karnataka/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts