More

    ಕಲ್ಯಾಣಿ ಸ್ವಚ್ಛಗೊಳಿಸಿದ ಕಾಲೇಜು ವಿದ್ಯಾರ್ಥಿಗಳು: ಕದಲಗೆರೆಯಲ್ಲಿ ವಾರ್ಷಿಕ ವಿಶೇಷ ಶಿಬಿರ

    ಮಂಡ್ಯ: ಪಾಂಡವಪುರ ತಾಲೂಕು ಕದಲಗೆರೆ ಗ್ರಾಮದಲ್ಲಿ ನಡೆಯುತ್ತಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಮೇಲುಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪುರಾಣ ಪ್ರಸಿದ್ಧ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.
    ಮಂಡ್ಯ ವಿಶ್ವವಿದ್ಯಾನಿಲಯ ಹಾಗೂ ಮೇಲುಕೋಟೆ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದೆಡೆಗೆ ಯುವಜನತೆ’ ಶೀರ್ಷಿಕೆಯಡಿ ಆಯೋಜಿಸಿರುವ ಶಿಬಿರದಲ್ಲಿ ಕದಲಗೆರೆ ಗ್ರಾಮದಿಂದ ಮೇಲುಕೋಟೆಗೆ ಹೋಗುವ ರಸ್ತೆ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿದ್ದ ಗಿಡ ಗೆಂಟೆಗಳನ್ನು ತೆರವು ಮಾಡಲಾಯಿತು. ಜತೆಗೆ ಸಮೀಪದಲ್ಲಿಯೇ ಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿಯನ್ನು ಸರಿಪಡಿಸಲಾಯಿತು. ಈ ಶ್ರಮದಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
    ಇನ್ನು ಶಿಬಿರ ಉದ್ಘಾಟನಾ ಸಮಾರಂಭ ಸೋಮವಾರ ಆಯೋಜಿಸಲಾಗಿತ್ತು. ಮೈಸೂರು ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
    ವಿಶ್ವವಿದ್ಯಾನಿಲಯಗಳು ಗುಣವಂತ, ಪ್ರಾಮಾಣಿಕ, ನಿಸ್ವಾರ್ಥ, ಸಂಸ್ಕಾರವಂತ ಯುವ ಸಮುದಾಯವನ್ನು ಸಮಾಜಕ್ಕೆ ದಾರಿಯಾಗುವಂತೆ ರೂಪಿಸಬೇಕು. ಆದರಿಂದು ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಮಾರುಕಟ್ಟೆಗಳಾಗಿ ಬದಲಾಗುತ್ತಿವೆ. ಮಕ್ಕಳಲ್ಲಿ ಜೀವನ ಮೌಲ್ಯಗಳ ಬದಲಾಗಿ ಹಣ ಮಾಡುವ ದುರಾಸೆಯನ್ನು ತುಂಬುವಂತಹ ದುಸ್ಥಿತಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಬೆಂಗಳೂರು ಗಾಂಧಿಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜ್ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಸಾರುವ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ಭಾರತ. ಹಾಗಾಗಿ ಯುವಶಕ್ತಿ ಎಂದಿಗೂ ವ್ಯರ್ಥವಾಗಬಾರದು. ಜತೆಗೆ ಒಳ್ಳೆಯ ಕೆಲಸ ಕಾರ್ಯಗಳಿಗೆ ಸಮಾಜಮುಖಿ ಸೇವೆಗಳಿಗೆ ಬಳಕೆ ಆಗಬೇಕು ಎಂದರು.
    ಪ್ರಾಂಶುಪಾಲ ಡಾ.ಈ.ನಂಜುಂಡಯ್ಯ, ಕಾರ್ಯಕ್ರಮಾಧಿಕಾರಿ ಎಂ.ಎಸ್.ಕೃಷ್ಣ, ಸಹ ಶಿಬಿರಾಧಿಕಾರಿಗಳಾದ ಪರಮೇಶ್ವರ್, ಮಹೇಶ್‌ಕುಮಾರ್, ಕಾವ್ಯಾ, ವಿಜಯ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts