More

    ಕಳಿನಜೆಡ್ಡು ಸತ್ಯನಾರಾಯಣ ಪೂಜೆ

    ಸಿದ್ದಾಪುರ: ಜಗತ್ತಿನ ಎಲ್ಲ ರೀತಿಯ ಭಯೋತ್ಪಾದನೆಯನ್ನು ಎದುರಿಸಿ ಹಿಂದು ಸಮಾಜ ಮುನ್ನಡೆಯುತ್ತಿದೆ. ಭಯೋತ್ಪಾದನೆ ವಿರುದ್ಧ ಹೋರಾಡುವ ಮೂಲಕ ಹಿಂದು ಜಾಗರಣ ವೇದಿಕೆ ರಾಷ್ಟ್ರ ಜಾಗೃತಿಯ ಕೆಲಸ ಮಾಡುತ್ತಿದೆ ಎಂದು ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತೀಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಉಳ್ಳೂರು-74 ಗ್ರಾಮದ ಕಳಿನಜೆಡ್ಡು ಹಿಂದು ಜಾಗರಣ ವೇದಿಕೆ ವತಿಯಿಂದ ಇತ್ತೀಚೆಗೆ ಕಳಿನಜೆಡ್ಡು ಶ್ರೀಕೃಷ್ಣ ಗೇರುಬೀಜ ಕಾರ್ಖಾನೆ ವಠಾರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
    ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮಕ್ಕಳಿಗೆ ಹೆತ್ತವರು ಸರಿಯಾದ ಸಂಸ್ಕಾರ ಕಲಿಸಬೇಕು. ಒಳ್ಳೆಯ ಸಂಸ್ಕಾರ ಕಲಿಸಿದ ಮನೆಯ ಮಕ್ಕಳು ದಾರಿ ತಪ್ಪುವುದಿಲ್ಲ. ವಿದೇಶಿಯರು ತಮ್ಮ ದೇಶ ಉಳಿಸಿಕೊಳ್ಳಲು ಹಾಗೂ ಶಾಂತಿಗಾಗಿ ಹಿಂದು ಧರ್ಮದ ಆಚರಣೆ ಹಾಗೂ ಭಾರತೀಯ ಕುಟುಂಬ ಪದ್ಧತಿ ಅರಿಯಲು ಭಾರತಕ್ಕೆ ಬರುತ್ತಿದ್ದಾರೆ. ಭಾರತೀಯರಾದ ನಾವು ವಿದೇಶಿ ಸಂಸ್ಕೃತಿಗೆ ಮಾರು ಹೋಗಿ, ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಧರ್ಮ ಆಚರಣೆಯಿಂದ ದೂರ ಸರಿಯುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಅಪಾಯಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಕಿಶೋರ್‌ಕುಮಾರ ಕೊಡ್ಗಿ ಅಧ್ಯಕ್ಷತೆ ವಹಿಸಿದರು. ವಿಹಿಂಪ ಜಿಲ್ಲಾಧ್ಯಕ್ಷ ಪ್ರಮೋದ್ ಶೆಟ್ಟಿ ಮಂದಾರ್ತಿ ಪ್ರಾಸ್ತಾವಿಕ ಮಾತನಾಡಿದರು. ಹಿಂಜಾವೇ ಜಿಲ್ಲಾ ಸಂಪರ್ಕ ಪ್ರಮುಖ್ ಚಂದ್ರ ಆಚಾರ್ಯ ಶಿರಿಯಾರ, ಕುಂದಾಪುರ ತಾಲೂಕು ಕಾರ್ಯದರ್ಶಿ ವಿಜಯ ಎಡಮಕ್ಕಿ, ಕಳಿನಜೆಡ್ಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಆಚಾರ್ಯ, ಹಿಂಜಾವೇ ಶಂಕರನಾರಾಯಣ ವಲಯಾಧ್ಯಕ್ಷ ಹರೀಶ್ ಮೊಗವೀರ, ಕಳಿನಜೆಡ್ಡು ಘಟಕ ಅಧ್ಯಕ್ಷ ಅಕ್ಷಯಕುಮಾರ ಶೆಟ್ಟಿ, ಪೂಜಾ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಜಿಪಂ ಸದಸ್ಯ ರೋಹಿತ್‌ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಹರ್ಷ ಮೇಲ್ಜೆಡ್ಡು ಸ್ವಾಗತಿಸಿದರು. ಗಣೇಶ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ ಶೆಟ್ಟಿ ಕಾಸ್ಗದ್ದೆ, ಅವಿನಾಶ ಶೆಟ್ಟಿ ಬೆಳ್ವೆ ಸಮ್ಮಾನಿತರ ಪಟ್ಟಿ ವಾಚಿಸಿದರು. ಅವಿನಾಶ ಶೆಟ್ಟಿ ವಂದಿಸಿದರು. ವಿಶ್ವ ಹಿಂದು ಪರಿಷತ್ ಕುಂದಾಪುರ ಪ್ರಖಂಡ ಅಧ್ಯಕ್ಷ ವೈ.ವಿಜಯಕುಮಾರ ಶೆಟ್ಟಿ ಗೋಳಿಯಂಗಡಿ ಹಾಗೂ ಸಿದ್ದಾಪುರ ಹಿಂಜಾವೇ ಮುಖಂಡ ಭಾಸ್ಕರ ಶೆಟ್ಟಿ ಹೆನ್ನಾಬೈಲು ಅವರಿಗೆ ಸೇವಾ ಸಮ್ಮಾನ ಪುರಸ್ಕಾರ ನೀಡಿ, ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವವರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯ ಜರಗಿತು.

    ಜಾತ್ಯತೀತ ಸರ್ಕಾರದಲ್ಲಿ ಹಿಂದು ಸಮಾಜದ ಕೆಲಸ ಮಾಡುವುದೆಂದರೆ ದೊಡ್ಡ ಯುದ್ಧ ಮಾಡಿದಂತೆ. ಆರ್‌ಎಸ್‌ಎಸ್ ಪ್ರಚಾರಕರ ಸೇವೆಯ ಮುಂದೆ ನಮ್ಮಂತವರ ಸೇವೆ ನಗಣ್ಯ. ಹಿಂದು ಧರ್ಮ ವಿಶ್ವಕ್ಕೆ ಗುರುವಾಗುತ್ತಿರುವ ಈ ಸಂದರ್ಭ ನಾವೆಲ್ಲರೂ ಒಗ್ಗಟ್ಟಾಗಿ, ಧರ್ಮ ಜಾಗೃತಿ ಮಾಡುವ ಕಾರ್ಯದಲ್ಲಿ ಭಾಗಿಗಳಾಗಬೇಕು.
    ವೈ.ವಿಜಯಕುಮಾರ ಶೆಟ್ಟಿ ಗೋಳಿಯಂಗಡಿ, ಅಧ್ಯಕ್ಷರು, ವಿಶ್ವ ಹಿಂದು ಪರಿಷತ್ ಕುಂದಾಪುರ ಪ್ರಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts