More

    ರಾಷ್ಟ್ರಕೂಟ ಉತ್ಸವ ಸರ್ಕಾರವೇ ನಡೆಸಲಿ

    ಕಲಬುರಗಿ: ಹಂಪಿ ಉತ್ಸವದಂತೆ ಸರ್ಕಾರದಿಂದಲೇ ಕಲಬುರಗಿಯಲ್ಲಿ ರಾಷ್ಟ್ರಕೂಟ ಉತ್ಸವ ನಡೆಸಬೇಕು ಸೇರಿ ಪ್ರಮುಖ ಆರು ನಿರ್ಣಯಗಳನ್ನು ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ.

    ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮ್ಮೇಳನ ಸಮಾರೋಪದಲ್ಲಿ ಕನ್ನಡ ಭವನದ ಬಾಪುಗೌಡ ರಂಗಮಂದಿರ ನವೀಕರಣ ಮತ್ತು ಮೂಲಸೌಕರ್ಯ ಒದಗಿಸಲು ಕೆಕೆಆರ್‌ಡಿಬಿ ೫ ಕೋಟಿ ಅನುದಾನ ನೀಡಬೇಕು. ತೊಗರಿ ಕಣಜದ ಪ್ರಮುಖ ತೊಗರಿ ಬೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಬೇಕು. ಕಲ್ಯಾಣ ಕರ್ನಾಟಕ ಇತಿಹಾಸ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಸರ್ಕಾರದ ವಿವಿಧ ಅಕಾಡೆಮಿ ನೇಮಕಾತಿ ಹಾಗೂ ಪ್ರಶಸ್ತಿಗಳಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಶ್ರೇಷ್ಠ ಸಾಹಿತಿಗಳ ಹೆಸರಲ್ಲಿ ಪ್ರತಿಷ್ಠಾನ, ಕಲಬುರಗಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ಸ್ಥಾಪಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿತು.

    ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ನಿರ್ಣಯ ಮಂಡಿಸಿದರೆ, ಡಾ.ಶಿವರಂಜನ್ ಸತ್ಯಂಪೇಟೆ ಸೂಚಿಸಿದರು. ಮುಡಬಿ ಗುಂಡೇರಾವ್ ಅನುಮೋದಿಸಿದರು.

    ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಡಾ.ಸಾರಂಧರ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು ನೂರು ವರ್ಷ ದಾಟಿದೆ. ಆದರೆ ಈವರೆಗೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಸಮಾಜದಲ್ಲಿ ಸಮಾನತೆ ತರಲು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಸಲಹೆ ನೀಡಿದರು.

    ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವ-ಶಾಸಕರು, ರಾಜಕಾರಣಿಗಳು ಈ ಕರ‍್ಯಕ್ರಮಕ್ಕೆ ಬಂದಿಲ್ಲ. ಆದರೂ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮತ್ತವರ ತಂಡ ಎರಡು ದಿನದ ಸಮ್ಮೇಳನ ಯಶಸ್ವಿಗೊಳಿಸಿದ್ದು ಸಂತಸದ ಸಂಗತಿ ಎಂದರು.

    ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಣ್ಣ ಗೋನಾಲ್ ಸಮಾರೋಪ ಭಾಷಣ ಮಾಡಿದರು. ಎಚ್.ಎಸ್. ಬರಗಾಲಿ, ಗಣೇಶ ಚಿನ್ನಾಕಾರ, ಎಸ್.ಎಂ.ಪಟ್ಟಣಕರ್, ರಾಜಶೇಖರ ಚೌದ್ರಿ ಇತರರಿದ್ದರು. ಪರಿಷತ್ ಗೌರವ ಕಾರ್ಯದರ್ಶಿ ಪ್ರೊ.ಯಶ್ವಂತರಾಯ ಅಷ್ಟಗಿ, ಪ್ರಕಾಶ ಗೋಣಗಿ ನಿರೂಪಣೆ ಮಾಡಿದರು. ಬಾಬುರಾವ್ ಪಾಟೀಲ್ ಚಿತ್ತಕೋಟಾ ಸ್ವಾಗತಿಸಿದರು. ಜಗದೀಶ ಮರಪಳ್ಳಿ ವಂದಿಸಿದರು.

    ಇದಕ್ಕೂ ಮೊದಲು ನಡೆದ ಯುವ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ವಾಸುದೇವ ಸೇಡಂ ಮಾತನಾಡಿ, ಕವಿತೆಯಲ್ಲಿ ಪಂಚ್ ಇರಬೇಕು. ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವಂತಿರಬೇಕು ಎಂದು ಹೇಳಿದರು. ರೇಣುಕಾ ಎನ್., ಅರ್ಚನಾ ಜೈನ್ ನಿರೂಪಣೆ ಮಾಡಿದರು. ಸಂತೋಷ ಕುಡಳ್ಳಿ ಸ್ವಾಗತಿಸಿದರು. ಡಾ.ರೆಹಮಾನ್ ಪಟೇಲ್ ವಂದಿಸಿದರು. ಸೋಮಶೇಖರಯ್ಯ ಹೊಸಮಠ, ಪ್ರಭವ ಪಟ್ಟಣಕರ್ ನಿರ್ವಹಿಸಿದರು. ಡಾ.ಲಿಂಗಣ್ಣ ಗೋನಾಲ್, ಪ್ರೊ.ಯಶ್ವಂತರಾಯ ಅಷ್ಟಗಿ, ಶರಣರಾಜ ಛಪ್ಪರಬಂದಿ ಇತರರಿದ್ದರು.

    ೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ವಿಶೇಷವಾಗಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದರು. ಆದರೀಗ ಹೇಳಿಕೊಳ್ಳುವಂಥ ಪ್ರಾಮುಖ್ಯ ದೊರೆಯುತ್ತಿಲ್ಲ. ಸಮಾಜದಲ್ಲಿ ಸಮಾನತೆ ತರಲು ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಬೇಕು.
    | ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾರಂಗ ಮಠ, ಶ್ರೀಶೈಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts