More

  ಪೂರ್ವಗ್ರಹ ಪೀಡಿತರಿಂದ ಸೌಹಾರ್ದಕ್ಕೆ ಧಕ್ಕೆ

  ಕಲಬುರಗಿ: ಸಮಾಜದಲ್ಲಿ ಪೂರ್ವಗ್ರಹಪೀಡಿತ ಮನಸುಗಳಿಂದ ಕನ್ನಡ ಛಾಯೆ, ಸೌಹಾರ್ದಕ್ಕೆ ಧಕ್ಕೆ ಬರುತ್ತಿದೆ. ಇದನ್ನು ತೊಲಗಿಸಲು ಪೂರಕ ಸಮಾಜಮುಖಿ ಕಾರ್ಯ ಸಾಹಿತ್ಯ ಮಾಡುವ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಹೇಳಿದರು.

  ಡಾ.ಎಸ್.ಎಂ. ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ತೊಗರಿ ಕಣಜ ಕಲಬುರಗಿಯಲ್ಲಿ ಹೆಚ್ಚು ಬೆಳೆಯಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  ರೈತ ಸಾಯಬಾರದು. ಎಲ್ಲ ರೈತರಿಗೆ ಗಂಗಾಕಲ್ಯಾಣ ಯೋಜನೆ ಜಾರಿಗೊಳಿಸಿ ಬದುಕು ಹಸನಗೊಳಿಸಬೇಕು. ನದಿಗಳಿಗೆ ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಳಕ್ಕೆ ಶ್ರಮಿಸಬೇಕು. ಕನ್ನಡ ಭಾಷೆ ಲಿಪಿಯ ಮೂಲ ಸ್ವರೂಪ, ಕನ್ನಡ ಲಿಪಿಗೆ ಧ್ವನಿ ನೀಡಿದ್ದ ಮೂಲದ ಬಗ್ಗೆ ಅಧ್ಯಯನ ಮಾಡಬೇಕು. ಕನ್ನಡದ ಮೂಲ ಲಿಪಿ ಪತ್ತೆ ಜತೆಗೆ ದೇವನಾಗರಿ, ಪ್ರಾಕೃತ, ಸಂಸ್ಕೃತ ಭಾಷೆಗೆ ಯಾವ ಲಿಪಿ ಬಳಸಲಾಗಿತ್ತು? ೩ನೇ ಶತಮಾನದಿಂದ ಕನ್ನಡ ಭಾಷೆ ಲಿಪಿ ಶಾಸ್ತ್ರ ಬೆಳೆದು ಬಂದದ್ದು ಹೇಗೆ? ಅರಸರು ಯಾರಾಗಿದ್ದರು? ಶಾತವಾಹನರು ಮತ್ತು ಕನ್ನಡ ಲಿಪಿಗಿದ್ದ ಸಂಬಂಧ ಕುರಿತು ಚರ್ಚೆ ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

  ಹಿರಿಯ ಸಾಹಿತಿ ಪ್ರೊ.ರಾಜಪ್ಪ ಧಳವಾಯಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಂವಿಧಾನಬದ್ಧವಾಗಿ ಕಲ್ಯಾಣ ಕರ್ನಾಟಕಕ್ಕೆ ದೊರೆತ ೩೭೧(ಜೆ) ಮೀಸಲು ಬಗ್ಗೆ ಇತರ ಭಾಗದಲ್ಲಿ ಅಸಹನೆ ಇರುವುದು ಸರಿಯಲ್ಲ. ಹಿಂದುಳಿದ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲು ಪೂರಕವಾಗಿದೆ. ತೆಲಂಗಾಣದಲ್ಲಿ ಇದೇ ರೀತಿ ಮೀಸಲಿಗಾಗಿ ರಕ್ತ ಚರಿತ್ರೆ ಇತಿಹಾಸ ಕಂಡಿದೆ. ಆದರೆ ಇಲ್ಲಿ ಶಾಂತಿಯುತವಾಗಿ ೩೭೧(ಜೆ) ವಿಧಿ ದೊರೆತಿದೆ ಎಂದರು.
  ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕಲ್ಯಾಣರಾವ ಜಿ.ಪಾಟೀಲ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಮಾತನಾಡಿದರು.

  ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಡಾಕಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ದತ್ತಪ್ಪ ಸಾಗನೂರ, ಯಶವಂತರಾಯ ಅಷ್ಟಗಿ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂಧಿ ಇತರರಿದ್ದರು.

  ಸಿಮೆಂಟ್ ಕಾರ್ಖಾನೆಗಳು ನಮ್ಮ ಸುತ್ತಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ ಕೆಲಸ ಮಾಡಬೇಕು. ೩೭೧(ಜೆ) ಪರಿಣಾಮಕಾರಿ ಅನುಷ್ಠಾನಗೊಂಡು ಉದ್ಯೋಗ ಸೃಷ್ಟಿಯಾಗಬೇಕು. ವಿಜ್ಞಾನ-ತಂತ್ರಜ್ಞಾನ ಜತೆಗೆ ಅಧ್ಯಾತ್ಮ ಚಿಂತನೆಯೂ ನಡೆಯಲಿ.
  | ಡಾ.ಟಿ.ಎಂ.ಭಾಸ್ಕರ್ ಕುಲಪತಿ, ಜಾನಪದ ವಿಶ್ವವಿದ್ಯಾಲಯ

  ಕಲಬುರಗಿ ಸೂಫಿ-ಸಂತರ ನಾಡು ಆಗಿದ್ದರಿಂದ ಭಾವೈಕ್ಯತೆ, ಸಾಮರಸ್ಯ ಗಟ್ಟಿಯಾಗಿ ನೆಲೆಯೂರಿದೆ. ಪ್ರಸ್ತುತ ಅಸಹನೆ ಹೆಚ್ಚಾಗಿದ್ದು, ಜಾತಿ ತಿಳಿಯದ ಹೊರತು, ಮಾತು ಮುಂದೆ ಸಾಗುತ್ತಿಲ್ಲ. ನಗರ ಪ್ರದೇಶದಲ್ಲಿ ಮನೆ ಬಾಡಿಗೆ ಇದೆ. ವೆಜ್ ಓನ್ಲಿ, ನಾನ್ ವೆಜ್ ಓನ್ಲಿ ಎಂದು ಬೋರ್ಡ್ ಹಾಕುತ್ತಿರುವುದು ಅಸ್ಪೃಶ್ಯತೆ ಪ್ರತಿಬಿಂಬ.
  | ಪ್ರೊ.ರಾಜಪ್ಪ ದಳವಾಯಿ ಹಿರಿಯ ಸಾಹಿತಿ

  ಸಮ್ಮೇಳನದ ಅಧ್ಯಕ್ಷ ಉತ್ಸವ ಮೂರ್ತಿಯಲ್ಲ. ಕಸಾಪದವರು ಕ್ರಿಯಾಶೀಲರಾಗಿ ಹೊರಬರಬೇಕು. ಸಾಹಿತ್ಯಾಸಕ್ತರ ಆಸಕ್ತಿ ಕ್ಷೀಣಿಸುತ್ತಿದ್ದು, ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನಸ್ಸು ಸಾಹಿತ್ಯದತ್ತ ಸೆಳೆಯಬೇಕು. ಶಿಕ್ಷಕರು ವಿಶೇಷವಾಗಿ ಗಮನಹರಿಸಿ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಬೇಕು.
  | ಡಾ.ಕಲ್ಯಾಣರಾವ ಪಾಟೀಲ್ ಸಾಹಿತಿ

  ಸಾಹಿತ್ಯದ ಗಣಿ ಕಲಬುರಗಿ: ಕನ್ನಡಕ್ಕೆ ಮೊಟ್ಟ ಮೊದಲ ಉಪಲಬ್ಧ ಗ್ರಂಥ ಕವಿರಾಜ ಮಾರ್ಗ ನೀಡಿದ ಪುಣ್ಯಭೂಮಿ ಕಲಬುರಗಿಯ ಮಳಖೇಡ. ಹಿಂದು ನ್ಯಾಯಶಾಸ್ತ್ರದ ಮಿತಾಕ್ಷರ ಕೃತಿ ರಚಿಸಿದವರು ಕಾಯಕ, ದಾಸೋಹ, ಸಾಮರಸ್ಯ ಬೆಸೆದ ಈ ನೆಲ ವಚನ ಸಾಹಿತ್ಯ, ದಾಸ ಸಾಹಿತ್ಯ ಕೊಡುಗೆ ಅನನ್ಯ. ಕಲಬುರಗಿ ಸಾಹಿತ್ಯದ ಗಣಿಯಾಗಿದೆ ಎಂದು ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸಂತಸ ವ್ಯಕ್ತಪಡಿಸಿದರು.

  ಐದು ಕೃತಿ ಬಿಡುಗಡೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಧರ್ಮಣ್ಣ ಧನ್ನಿ ಸಂಪಾದಕತ್ವದ ಸಂಕಥನ, ಲೇಖಕ ಸಿ.ಎಸ್.ಆನಂದ ಅವರ ಮಾವು ಮಲ್ಲಿಗೆ(ದ್ವಿಪದಿಗಳ ಸಂಕಲನ), ಪ್ರಾಧ್ಯಾಪಕ ಡಾ.ಬಸವರಾಜ ವಿರಚಿತ ದಲಿತ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆಗಳ ಸಂಘರ್ಷ, ಚಿತ್ರಕಲಾವಿದ ಡಾ.ಬಸವರಾಜ ಕಲೆಗಾರ ಅವರ ಜನಪದ ಕೌದಿಯ ಚಿತ್ತಾರ ಹಾಗೂ ಸಹಾಯಕ ಪ್ರಾಧ್ಯಾಪಕ ಡಿ.ಗಿರೇಗೌಡ ಅರಳಿಹಳ್ಳಿ ಅವರ ಬಹುಧಾರೆ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

  ಜನರಿಗಿಂತ ಕಲಾವಿದರೇ ಹೆಚ್ಚು: ಸಮ್ಮೇಳನ ನಿಮಿತ್ತ ಕನ್ನಡ ಭವನದಿಂದ ಆಯೋಜಿಸಿದ್ದ ಮೆರವಣಿಗೆಗೆ ಮೇಯರ್ ವಿಶಾಲ್ ದರ್ಗಿ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ನೇತೃತ್ವದ ಮೆರವಣಿಗೆಯಲ್ಲಿ ಡೊಳ್ಳು, ಹಲಗೆ, ಚಿಟ್ಟಲಗೆ, ಬಂಜಾರ ನೃತ್ಯ ಸೇರಿ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ಆದರೆ ಸಾಹಿತ್ಯಾಸಕ್ತರು, ಸಾರ್ವಜನಿಕರ ಕೊರತೆ ಎದ್ದು ಕಂಡಿತು. ಸಾರ್ವಜನಿಕರಿಗಿಂತ ಕಲಾವಿದರ ಸಂಖ್ಯೆಯೇ ಹೆಚ್ಚಾಗಿತ್ತು. ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಪದಾಧಿಕಾರಿಗಳು ಒಬ್ಬೊಬ್ಬರನ್ನು ಕರೆತಂದರೂ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಸಮ್ಮೇಳನಕ್ಕೆ ಬಂದ ಕನ್ನಡಾಸಕ್ತರಿಗೆ ಉಣಬಡಿಸಲು ಪಲಾವ್, ಮಜ್ಜಿಗೆ, ಹುಗ್ಗಿ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಮುನ್ನ ರಾಷ್ಟ್ರ ಮತ್ತು ರಾಜ್ಯ ಧ್ವಜಾರೋಹಣ ಮಾಡಲಾಯಿತು.

  ಇಲ್ಲಗಳ ಮಧ್ಯೆ ಕಾರ್ಯಕ್ರಮ: ಸಂಪ್ರದಾಯದಂತೆ ಸಮ್ಮೇಳನಾಧ್ಯಕ್ಷರ ಕನಿಷ್ಠ ಪರಿಚಯ ಭಾಷಣವೂ ಮಾಡಲಿಲ್ಲ. ಎಲ್ಲರೂ ಭರ್ಜರಿ ಭಾಷಣ ಮಾಡಿದರು. ಆದರೆ ಸಮ್ಮೇಳನಾಧ್ಯಕ್ಷರಿಗೆ ಸಮಯದ ಮೀತಿ ಹೇರಿದ್ದು ಚರ್ಚೆಗೆ ಗ್ರಾಸವಾಯಿತು. ಉದ್ಘಾಟಕರ ಭಾಷಣ ವೇಳೆ ವೇದಿಕೆ ಕುರ್ಚಿಗಳೇ ಖಾಲಿಯಾಗಿದ್ದವು. ಸಮ್ಮೇಳನದಲ್ಲಿ ಅಕ್ಷರ ಜಾತ್ರೆ ನಡೆಯಬೇಕಿತ್ತು. ಆದರೆ ಅಳವಡಿಸಿದ್ದ ಮಳಿಗೆಗಳಲ್ಲಿ ಒಂದೇ ಪುಸ್ತಕ ಮಳಿಗೆ ಇತ್ತು. ಉಳಿದಂತೆ ಬಟ್ಟೆ, ಚಿಪ್ಸ್ ಮಾರುವ, ಚಿತ್ರಕಲೆ ಪ್ರದರ್ಶನದ ಮಳಿಗೆಗಳಿದ್ದವು. ಜಿಲ್ಲೆಯ ಕೆಲ ಪ್ರಮುಖ, ಹಿರಿಯ ಸಾಹಿತಿಗಳು ಕಾಣಲಿಲ್ಲ. ಕನ್ನಡಪರ ಸಂಘಟನೆಗಳವರು ಸಹ ಭಾಗವಹಿಸಿರಲಿಲ್ಲ. ಕನಿಷ್ಠ ಒಬ್ಬೇ ಒಬ್ಬ ಜನಪ್ರತಿನಿಧಿ ಕಂಡು ಬರಲಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts