More

    ಜಲ್ಲಿ, ಧೂಳು… ರಸ್ತೆ ಹಾಳು! ಕಜನಡ್ಕ ಮಾರ್ಗ ಕಾಮಗಾರಿ ಸ್ಥಗಿತಗೊಂಡು ಸಂಚಾರ ಸಂಕಷ್ಟ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್
    ರಸ್ತೆ ಕಾಮಗಾರಿ ಸ್ಥಗಿತಗೊಂಡು ತಿಂಗಳುಗಳು ಕಳೆಯುತ್ತಿದ್ದರೂ ಕೆಲಸ ಆರಂಭವಾಗದೆ ಗ್ರಾಮಸ್ಥರು ಧೂಳು ಹಾಗೂ ಜಲ್ಲಿ ಕಲ್ಲಿನಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ಸಂಕಟ ಪಡುವಂತಾಗಿದೆ.
    ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಇನ್ನಾ ಗ್ರಾಮದ ಕಜನಡ್ಕ ರಸ್ತೆಯಿಂದ ಮುಂಡ್ಕೂರು ಮುಲ್ಲಡ್ಕ ರಸ್ತೆ ಸಂಪರ್ಕಿಸುವ ಸುಮಾರು 6.14 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ನಡೆಯುತ್ತಿದ್ದು ಒಂದುವರೆ ತಿಂಗಳಿನಿಂದ ಕೆಲಸ ಸ್ಥಗಿತಗೊಂಡು ಸಂಚಾರ ಕಷ್ಟವಾಗಿದೆ. 6.14 ಕಿ.ಮೀ. ಉದ್ದದ ರಸ್ತೆಯಲ್ಲಿ 4.14 ಕಿ.ಮೀ. ಉದ್ದದ ಡಾಂಬರು ರಸ್ತೆ, 2 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆ ಹಾಗೂ 14 ಮೋರಿಗಳು ನಿರ್ಮಾಣಗೊಳ್ಳುತ್ತಿವೆ. ಗುತ್ತಿಗೆದಾರರು ಕಾಮಗಾರಿಗೆ ಚಾಲನೆ ನೀಡಿ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲು ಹಾಕಿ ಕೆಲಸ ಸ್ಥಗಿತಗೊಳಿಸಿದ್ದು, ಒಂದುವರೆ ತಿಂಗಳಿನಿಂದ ಬರೀ ಜಲ್ಲಿ ಕಲ್ಲಿನ ಮೇಲೆ ಕಜನಡ್ಕ ಗ್ರಾಮದ ಜನ ನಿತ್ಯ ಸಂಚರಿಸುವಂತಾಗಿದೆ.

    ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಡೆದಾಡಲು ಹಾಗೂ ಸಾರ್ವಜನಿಕರು ವಾಹನ ಸಾಗಿಸಲು ಕಷ್ಟಪಡುತ್ತಿದ್ದು, ನಿತ್ಯ ಏನಾದರೂ ಒಂದು ಸಮಸ್ಯೆ ಆಗುತ್ತದೆ. ರಸ್ತೆ ಅಗೆದು ಜಲ್ಲಿ ಹಾಕಿದ್ದರಿಂದ ಧೂಳಿನಿಂದ ಕೂಡಿದ್ದು ಸ್ಥಳೀಯರಿಗೆ ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಕೆಲಸ ವಿಳಂಬವಾದರೂ ಧೂಳಿನ ಸಮಸ್ಯೆ ಮುಕ್ತಿಗಾಗಿ ರಸ್ತೆಗೆ ನೀರಾದರೂ ಹಾಕಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    ರಸ್ತೆಯ ಕಾಮಗಾರಿ ಅರ್ಧದಲ್ಲೆ ಸ್ಥಗಿತವಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಸ್ಥಳೀಯ ಇನ್ನಾ ಗ್ರಾಮ ಪಂಚಾಯಿತಿ ಕೂಡ ಈಗಾಗಲೇ ಗುತ್ತಿಗೆದಾರರಿಗೆ ಕೆಲಸ ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದು, ಕಾಮಗಾರಿ ನಡೆಸುವ ಬಗ್ಗೆ ಭರವಸೆಯನ್ನು ಗುತ್ತಿಗೆದಾರ ನೀಡಿದ್ದಾರೆ.

    ಸುತ್ತು ಬಳಸಿ ಸಾಗುವ ಗ್ರಾಮಸ್ಥರು
    ಕಜನಡ್ಕದಿಂದ ಮುಲ್ಲಡ್ಕ ಪರಿಸರ ಸಂಪರ್ಕಿಸುವ ಈ ಭಾಗದ ಜನ 2 ಕಿ.ಮೀ. ಸಾಗಲು ಈ ರಸ್ತೆಯಲ್ಲಿ ಕಷ್ಟವಾದ ಪರಿಣಾಮ ಸುತ್ತು ಬಳಸಿಕೊಂಡು ಸುಮಾರು 7-8 ಕಿ.ಮೀ. ದೂರ ಕ್ರಮಿಸಬೇಕಾಗಿದೆ. 60 ರೂ. ರಿಕ್ಷಾ ಬಾಡಿಗೆ ಕೊಟ್ಟು ಸಾಗುವ ಪರಿಸರಕ್ಕೆ ಸುಮಾರು 200 ರೂಪಾಯಿಯಷ್ಟು ಹೆಚ್ಚುವರಿ ಬಾಡಿಗೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

    ಬ್ಯಾನರ್ ಅಳವಡಿಕೆ
    ರಸ್ತೆ ಕಾಮಗಾರಿ ಸ್ಥಗಿತಗೊಂಡು ಧೂಳಿನ ಸಮಸ್ಯೆಯಿಂದ ಸಂಕಟ ಅನುಭವಿಸಿದ ಜನ ಸಾಂತೂರು ಕೊಪ್ಪಳ ಪರಿಸರದಲ್ಲಿ ಪ್ರಯಾಣಿಕರ ತಂಗುದಾಣದಲ್ಲಿ ಹಾಗೂ ರಸ್ತೆ ಪಕ್ಕದ ಮರದಲ್ಲಿ ದಮ್ಮು ಕೆಮ್ಮು ಧೂಳು ಉಚಿತ ಬೇಕಾದವರು ಸಂಪರ್ಕಿಸಿರಿ ಎಂಬ ಬ್ಯಾನರ್ ಅಳವಡಿಸಿದ್ದಾರೆ.

    ಮುಲ್ಲಡ್ಕದಿಂದ ಕಾಂಜರಕಟ್ಟೆ ಸಂಪರ್ಕ ರಸ್ತೆ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆಯಾಗಿದೆ. ಕಜನಡ್ಕ ರಸ್ತೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿಲ್ಲ. ಕಾಂಜರಕಟ್ಟೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದು ಒಂದೇ ಲಿಂಕ್ ರಸ್ತೆಯಾಗಿದ್ದು ಕೆಲಸ ಮುಂದುವರಿಯಲಿದೆ.
    ರೇಶ್ಮಾ ಉದಯ್ ಕುಮಾರ್ ಶೆಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯೆ

    ಈ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು ತಿಂಗಳು ಕಳೆಯುತ್ತಿದೆ. ರಸ್ತೆಯುದ್ದಕ್ಕೂ ಧೂಳಿನಿಂದ ಕೂಡಿದ್ದು ಈ ಭಾಗದಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ರಸ್ತೆ ಸರಿಯಿಲ್ಲದ ಪರಿಣಾಮ ಸುತ್ತು ಬಳಸಿ ದುಬಾರಿ ಬಾಡಿಗೆ ನೀಡಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
    ಅಪ್ಪು ಮೂಲ್ಯ, ಸ್ಥಳೀಯ ನಿವಾಸಿ

    ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಗುತ್ತಿಗೆದಾರರಿಗೆ ಬೇಗ ಕಾಮಗಾರಿ ಮುಗಿಸುವಂತೆ ತಿಳಿಸಲಾಗಿದೆ. ಧೂಳಿನ ಸಮಸ್ಯೆಗೆ ಪದೇಪದೆ ನೀರು ಹಾಕುವಂತೆಯೂ ವಿನಂತಿಸಿಕೊಳ್ಳಲಾಗಿದೆ.
    ಕುಶ ಆರ್.ಮೂಲ್ಯ, ಇನ್ನಾ ಗ್ರಾಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts