More

    ಧೂಳು ತಿನ್ನುತ್ತಿದೆ ಹಾಕರ್ ಜೋನ್!

    ಬೆಳಗಾವಿ: ನಗರದ ನಾಥ್‌ಪೈ ವೃತ್ತದಿಂದ ಖಾಸಬಾಗದ ಬಸವೇಶ್ವರ ವೃತ್ತದವರೆಗೆ ಬೀದಿ ವ್ಯಾಪಾರಸ್ಥರಿಗಾಗಿ ಸ್ಮಾರ್ಟ್‌ಸಿಟಿ ಕಂಪನಿಯಿಂದ ಹೈಟೆಕ್ ಮಾರುಕಟ್ಟೆ ಮಳಿಗೆ ನಿರ್ಮಿಸಿ ಎರಡು ವರ್ಷವಾದರೂ ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ.

    ಅಧಿಕಾರಿಗಳ ನಿಷ್ಕಾಳಜಿ, ಬೇಜವಾಬ್ದಾರಿಯಿಂದಾಗಿ ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ ಹೈಟೈಕ್ ಮಳಿಗೆಗಳು ಈಗ ಧೂಳು ತಿನ್ನುತ್ತಿವೆ. ಸ್ಮಾರ್ಟ್‌ಸಿಟಿ ಕಂಪನಿಯಿಂದ 5.45 ಕೋಟಿ ರೂ. ವೆಚ್ಚದಲ್ಲಿ 140 ಮಳಿಗೆಗಳ ಹಾಕರ್ ಜೋನ್ ನಿರ್ಮಿಸಿದ್ದು, ಮಹತ್ವಾಕಾಂಕ್ಷಿ ಯೋಜನೆ ಉದ್ದೇಶ ಈಡೇರುತ್ತಿಲ್ಲ.
    ಪ್ರತಿ ಮಳಿಗೆಯಲ್ಲಿ ತರಕಾರಿ, ಹಣ್ಣು ಇತರ ವಸ್ತುಗಳನ್ನು ಇಡಲು ಶಿಸ್ತುಬದ್ಧ ಶೆಲ್ಫ್‌ಗಳನ್ನು ನಿರ್ಮಿಸಲಾಗಿದೆ. ಅವುಗಳ ನಿರ್ವಹಣೆ, ಬಳಕೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಫಲಾನುಭವಿಗಳನ್ನು ಆಯ್ಕೆ ಮಾಡುವ ಹೊಣೆ ಪಾಲಿಕೆ ಅಧಿಕಾರಿಗಳ ಮೇಲಿದೆ. ಆದರೆ, ವರ್ಷದಿಂದ ಅಧಿಕಾರಿಗಳು ಸಬೂಬು ಹೇಳುತ್ತಲೇ ಬಂದಿದ್ದಾರೆ ಹೊರತು ಮಳಿಗೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿಲ್ಲ.

    ಹೈಟೆಕ್ ಹಾಕರ್ ಜೋನ್: ಖಾಸಬಾಗದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ತರಕಾರಿ ವ್ಯಾಪಾರಸ್ಥರು ಮಳೆಯಲ್ಲೇ ನೆನೆದುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ತೊಂದರೆ ನಿವಾರಿಸುವುದಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹೈಟೆಕ್ ಹಾಕರ್ ಜೋನ್ ನಿರ್ಮಿಸಲಾಗಿದೆ. ಹಾಕರ್ ಜೋನ್ ಎರಡೂ ಬದಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಸಂಚಾರ ದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಅಂಗಡಿಗಳ ಪಕ್ಕದಲ್ಲಿ ಪಾಥ್ ವೇ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಜತೆಗೆ ಚರಂಡಿ ಮೇಲೆ ಫುಟ್‌ಪಾತ್ ನಿರ್ಮಿಸಿರುವುದು ವಿಶೇಷ.ನಗರದ ಬಹಳಷ್ಟು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ಬಿಸಿಲು, ಮಳೆಯಲ್ಲೇ ಕಷ್ಟಪಡುತ್ತ ವ್ಯಾಪಾರ ಮಾಡುವುದನ್ನು ಮನಗಂಡು ಹೈಟೆಕ್ ಹಾಕರ್ ಜೋನ್ ನಿರ್ಮಿಸಲಾಗಿದೆ. ಸ್ಮಾರ್ಟ್‌ಸಿಟಿಯಿಂದ ಮಳಿಗೆಗಳ ನಿರ್ಮಾಣ ಕಾರ್ಯ ಮುಗಿದಿದೆ. ಹೀಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದೇವೆ. ಪಾಲಿಕೆಯಿಂದಲೇ ಫಲಾನುಭವಿಗಳ ಆಯ್ಕೆಯಾಗುತ್ತದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹೇಳುತ್ತಾರೆ. ಪಾಲಿಕೆ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ.

    ಸ್ಮಾರ್ಟ್‌ಸಿಟಿಯಿಂದ ಹಾಕರ್ ಜೋನ್ ನಿರ್ಮಿಸಲಾಗಿದೆ. ಯೋಜನೆಯಲ್ಲಿ ಏನಿದೆ ಎನ್ನುವ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿಗಳ ಆಯ್ಕೆ ಕುರಿತು ಚರ್ಚಿಸಿ ಮುಂದುವರಿಯುತ್ತೇವೆ.
    | ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts