More

    ಕಾರ್ಮಿಕರು ಆರೋಗ್ಯ ಕಡೆ ಹೆಚ್ಚು ಗಮನಹರಿಸಿ

    ಚಿಕ್ಕಮಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರು ದುಡಿಮೆ ಜತೆಗೆ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕು. ನಿರ್ಲಕ್ಷ ತೋರಿದರೆ ಮುಂದೊಂದು ದಿನ ಅನಾರೋಗ್ಯಕ್ಕೆ ಒಳಗಾಗಿ ಕುಟುಂಬ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆಯಿರುತ್ತದೆ ಎಂದು ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸಿ.ವಸಂತಕುಮಾರ್ ಹೇಳಿದರು.

    ನಗರದ ತಮಿಳು ಕಾಲನಿಯಲ್ಲಿ ಎನ್‌ಐಎಂಎ, ತಾಲೂಕು ಕಟ್ಟಡ ಕಾರ್ಮಿಕರ ಸಂಘ ಹಾಗೂ ರಾಜಸ್ಥಾನ ಔಷಧಾಲಯ ಆಶ್ರಯದಲ್ಲಿ ಬುಧವಾರ ಕಟ್ಟಡ ಕಾರ್ಮಿಕರಿಗೆ ಏರ್ಪಡಿಸಿದ್ದ ಆರೋಗ್ಯ ಹಾಗೂ ನೇತ್ರ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
    ಕಾರ್ಮಿಕರು ಕಟ್ಟಡ ಕಟ್ಟುವಾಗ ಧೂಳು ಅಥವಾ ಇನ್ನಿತರೆ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕೆಲಸದ ನಡುವೆ ಬಿಡುವು ಮಾಡಿಕೊಂಡು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಕಾರ್ಮಿಕರ ಮಂಡಳಿಯಿಂದ ಹಲವು ಯೋಜನೆಗಳು ದೊರೆಯುತ್ತಿವೆ. ಅವುಗಳನ್ನು ಬಳಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಕೆಲಸ ಮಾಡುವಾಗ ಅನಾಹುತ ಸಂಭವಿಸಿದರೆ ಇಲಾಖೆಯಿಂದ ಚಿಕಿತ್ಸೆ ಹಾಗೂ ಕುಟುಂಬ ನಿರ್ವಹಣೆಗೆ ಸರ್ಕಾರವು ಸವಲತ್ತು ಒದಗಿಸುತ್ತದೆ ಎಂದು ತಿಳಿಸಿದರು.
    ಎನ್‌ಐಎಂಎ ಮುಖ್ಯಸ್ಥ ಡಾ. ಅನಿತ್‌ಕುಮಾರ್ ಮಾತನಾಡಿ, ನಗರದಾದ್ಯಂತ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಣ್ಣು, ಬಿಪಿ ಮತ್ತಿತರ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜತೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಅವಶ್ಯವಿದ್ದಲ್ಲಿ ಆ ವ್ಯಕ್ತಿಗೆ ಉಚಿತವಾಗಿ ಸರ್ಕಾರಿ ಅಥವಾ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆ ಒದಗಿಸಲಾಗುವುದು ಎಂದು ತಿಳಿಸಿದರು.
    ರಾಜಸ್ಥಾನ ಔಷಧಾಲಯದ ಮುಖ್ಯಸ್ಥ ಮುಜಾಯಿದ್ ಪಾಷಾ ಮಾತನಾಡಿ, ಶಿಬಿರದಲ್ಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವ ಔಷಧಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಆರೋಗ್ಯವು ನಿಧಾನಗತಿಯಲ್ಲಿ ಚೇತರಿಕೆ ಕಾಣಲಿದೆ. 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಇಬ್ಬರಿಗೆ ಕಣ್ಣಿನ ಪೊರೆ ಸಮಸ್ಯೆ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದರು.
    ಕಾರ್ಮಿಕರ ಸಂಘದ ತಾಲೂಕು ಉಪಾಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಜಾನಕಿ, ಮಾತೃಭೂಮಿ ಸಂಘದ ಅಧ್ಯಕ್ಷ ಕೆ.ಕುಮಾರ್, ವೈದ್ಯೆ ಡಾ. ಸಹೀದಾ ಕಮಲ್, ಸ್ಥಳೀಯರಾದ ಅಬ್ದುಲ್ ವಾಜೀದ್, ಗುಡ್ಡದೂರು ರವಿ, ಸುರೇಶ್, ಅಬ್ರೋಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts