ಪಡುಬಿದ್ರಿ: ಕಾಪು ಬೀಚ್ ಲೈಟ್ ಹೌಸ್‌ನ ಬಂಡೆಯ ಸುತ್ತಲಿನ ಪ್ರದೇಶದಲ್ಲಿ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್‌ನವರು ಶುಕ್ರವಾರ ಬೆಳಗ್ಗೆ ಬೀಸಿದ ಬಲೆಗೆ ಏಕಕಾಲದಲ್ಲಿ ಭಾರಿ ಪ್ರಮಾಣದಲ್ಲಿ ಮೀನುಗಳು ಸಿಕ್ಕಿವೆ.
ನಿರೀಕ್ಷೆಗೂ ಮೀರಿ, ನೂರು ಪಟ್ಟು ವಿವಿಧ ಜಾತಿಯ ಟನ್‌ಗಟ್ಟಲೆ ಮೀನುಗಳು ಲಭಿಸಿದ್ದು, ಮೀನು ತುಂಬಿದ ಬಲೆಯನ್ನು ದಡಕ್ಕೆ ಎಳೆಯಲು ಮೀನುಗಾರರು ದಿನವಿಡೀ ಶ್ರಮಿಸಿದರು. ಉತ್ತಮ ಜಾತಿಯ ಮೀನುಗಳನ್ನು ಸ್ಥಳದಲ್ಲೇ ವಿಂಗಡಿಸಿ ಬಂದರಿಗೆ ಸಾಗಿಸಿದರೆ, ಲೋಡ್‌ಗಟ್ಟಲೆ ಸಣ್ಣ ಮೀನುಗಳನ್ನು ಫಿಶ್‌ಮಿಲ್‌ಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಕಡಿಮೆ ಬೆಲೆಗೆ ಮೀನು ಮಾರಾಟ ನಡೆಯಿತು. ಸಮುದ್ರ ಪಾಲಾದ ಮತ್ತು ಬಲೆಯಿಂದ ಜಿಗಿದು ದಡ ಸೇರಿದ ಮೀನುಗಳನ್ನು ಹಿಡಿಯಲು ಭಾರಿ ಜನ ಸೇರಿದ್ದರು.
ಮಳೆ – ಮೋಡಗಳ ಚೆಲ್ಲಾಟದಿಂದಾಗಿ ಮೀನುಗಳು ಸಹಜವಾಗಿ ತಂಪಿರುವ ಜಾಗಕ್ಕೆ ಬಂದು ಸೇರುತ್ತವೆ. ಜತೆಗೆ ಕಡಲು ಕೂಡ ಸಣ್ಣದಾಗಿರುವುದರಿಂದ ಗಾಳಿಯ ದಿಕ್ಕನ್ನು ಆಧರಿಸಿ ಮೀನುಗಳು ದಡಕ್ಕೆ ಬರುತ್ತವೆ.
‘ಬಲೆಗೆ ಭಾರಿ ಪ್ರಮಾಣದಲ್ಲಿ ಮೀನು ಬಿದ್ದದ್ದು ಖುಷಿ ಕೊಟ್ಟಿದೆ.
ಆದರೆ ಅದನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ಸಮಸ್ಯೆಯಾಯಿತು. ಬಲೆಯಲ್ಲಿ ಸಿಲುಕಿದ ಮೀನುಗಳ ಪೈಕಿ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಬಲೆ ತುಂಡಾಗಿ ಮತ್ತೆ ಕಡಲು ಸೇರಿವೆ’ ಎಂದು ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್‌ನ ಪ್ರತಿನಿಧಿ ಸೋಮನಾಥ್ ಸುವರ್ಣ ಪ್ರತಿಕ್ರಿಯಿಸಿದ್ದಾರೆ.