More

    ಕಗ್ಗದ ಬೆಳಕು| ನಿರ್ಲಿಪ್ತತೆಯೆಂಬ ಸರಳ ತಪಸ್ಸು

    ಕಗ್ಗದ ಬೆಳಕು| ನಿರ್ಲಿಪ್ತತೆಯೆಂಬ ಸರಳ ತಪಸ್ಸುಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ |
    ಉತ್ತಮವದೆನಿಪುವವು ಕಿಟ್ಟಗಳ ಕಳೆದು ||
    ಚಿತ್ತಸಂಸ್ಕಾರಸಾಧನವಯ್ಯ ಸಂಸಾರ |
    ತತ್ತ್ವಪ್ರವೃತ್ತಂಗೆ – ಮಂಕುತಿಮ್ಮ ||

    ‘ಹಸಿವು-ಮಮತೆಗಳು ಜೀವಕ್ಕೆ ಕುಲುಮೆ-ಸುತ್ತಿಗೆಗಳು. ಅವು ಕಶ್ಮಲಗಳನ್ನು ಕಳೆದುಬಿಡುತ್ತವೆ. ತತ್ತ್ವವನ್ನು ತಿಳಿಯಲು ಹೊರಟವನಿಗೆ ಸಂಸಾರವು ಚಿತ್ತಸಂಸ್ಕಾರದ ಸಾಧನವಾಗಿದೆ’ ಎನ್ನುತ್ತದೆ ಈ ಕಗ್ಗ.

    ಕಬ್ಬಿಣದ ಕೆಲಸ ಮಾಡುವವನು ಕುಲುಮೆಯಲ್ಲಿ ಲೋಹವನ್ನು ಬಿಸಿ ಮಾಡಿದಾಗ ಅದು ತನ್ನಲ್ಲಿರುವ ಕಶ್ಮಲಗಳನ್ನು ಕಳೆದುಕೊಳ್ಳುತ್ತದೆ. ಶುದಟಛಿಗೊಂಡ ಲೋಹಕ್ಕೆ ಆತ ಸುತ್ತಿಗೆಯಿಂದ ಹೊಡೆದು ತನಗೆ ಬೇಕಾದ ಆಕಾರ ಕೊಡುತ್ತಾನೆ. ಬೆಂಕಿಗೆ ಒಡ್ಡಿದಾಗಲೇ ಲೋಹ ಮೃದುವಾಗುವುದು; ಶುದ್ಧವಾಗುವುದು. ಹೀಗೆಯೇ ಸಂಸಾರದ ಕುಲುಮೆಯಲ್ಲಿ ಸಿಲುಕಿದ ಜೀವಾತ್ಮನು ದೌರ್ಬಲ್ಯವನ್ನು ಕಳೆದುಕೊಂಡು ಶುದ್ಧನಾಗಬೇಕು. ಜೀವನದರ್ಥವನ್ನು ತಿಳಿದು ಹದವಾಗಬೇಕು. ಆಗಲೇ ಅವನಿಗೆ ಪರತತ್ತ್ವದ ಉಪಾಸನೆ ಸಾಧ್ಯ.

    ಮನುಷ್ಯನು ಸಾಮಾನ್ಯವಾಗಿ ಪ್ರಾಪಂಚಿಕ ವಸ್ತುಗಳಲ್ಲಿ ಸುಖ-ಸಂತೋಷಗಳನ್ನು ಹುಡುಕುತ್ತಾನೆ. ಉತ್ತಮವಾದುದೆಲ್ಲವನ್ನೂ ಪಡೆಯಬೇಕು ಎಂಬ ಹಸಿವು ಅವನನ್ನು ಕಾರ್ಯೋನ್ಮುಖನನ್ನಾಗಿ ಮಾಡುತ್ತದೆ. ಈ ಪ್ರಯತ್ನದಲ್ಲಿ ಬಯಸಿದುದನ್ನು ಪಡೆದರೆ, ಅದು ತನ್ನದೆಂಬ ಮೋಹಕ್ಕೆ ಒಳಗಾಗುತ್ತಾನೆ. ಏಕೆಂದರೆ ಮನುಷ್ಯನು ಪ್ರಕೃತಿಯ ಅಧೀನ. ಹಾಗಾಗಿ ಸತ್ತ್ವ, ರಜ, ತಮೋಗುಣಗಳು ಆತನಲ್ಲಿ ಅಸಮವಾಗಿ ಸೇರಿಕೊಂಡಿವೆ. ಜೀವನದಲ್ಲಿ ಎದುರಾಗುವ ಸನ್ನಿವೇಶಗಳನ್ನು ಸ್ವೀಕರಿಸುವ ಮತ್ತು ಅದಕ್ಕೆ ಸ್ಪಂದಿಸುವ ರೀತಿಗಳು ಈ ಗುಣಗಳನ್ನೇ ಅವಲಂಬಿಸಿರುತ್ತದೆ. ಇವುಗಳಿಂದಾಗಿಯೇ ಆತ ಸಂಸಾರಕ್ಕೆ ಅಂಟಿಕೊಳ್ಳುತ್ತಾನೆ. ಆತ್ಮಚೈತನ್ಯವನ್ನು ಅರಿಯದೆ ಶರೀರವೇ ತಾನೆಂಬ ಭ್ರಮೆಯಲ್ಲಿರುತ್ತಾನೆ. ಪರಿಣಾಮವಾಗಿ ಸಾಂಸಾರಿಕ ಕಷ್ಟ-ಕೋಟಲೆಗಳಲ್ಲಿ ಒದ್ದಾಡುತ್ತಾನೆ. ತೀವ್ರ ಭೋಗೇಚ್ಛೆ, ಮತ್ತೆಮತ್ತೆ ಅಪ್ಪಳಿಸುವ ಕ್ಲೇಶಗಳು ಚಿಂತನೆಯ ಸಾಮರ್ಥ್ಯವನ್ನೇ ಕುಂದಿಸುತ್ತವೆ. ಅವಿಶ್ರಾಂತವಾದ ಉದ್ವಿಗ್ನ ಮನಸ್ಸು ತಪ್ಪು ಗ್ರಹಿಕೆ, ಜಡತೆಗಳಿಗೆ ಒಳಗಾಗುವುದರಿಂದಾಗಿ ವ್ಯಕ್ತಿ ಭ್ರಷ್ಟನಾಗುತ್ತಾನೆ. ಅವನ ಬದುಕು ಇನ್ನೂ ಕಠಿಣವಾಗುತ್ತದೆ. ಮತ್ತೆಮತ್ತೆ ಸಂಸಾರದ ಕುಲುಮೆಗೆ ಒಡ್ಡಲ್ಪಡುತ್ತಾನೆ. ವಿಧಿಯ ಪೆಟ್ಟುಗಳನ್ನು ತಿನ್ನಬೇಕಾಗುತ್ತದೆ. ಹದವಾಗುವವರೆಗೆ ಖೇದ ತಪ್ಪದು. ಚಪಲಚಿತ್ತ ಪರತತ್ತ್ವದೆಡೆಗೆ ತುಡಿಯದು.
    ಯಾವುದೇ ಕೆಲಸ ಮಾಡಲು ಉತ್ಸಾಹವಷ್ಟೇ ಸಾಲದು, ಅದನ್ನು ಪೂರ್ತಿಗೊಳಿಸುವ ಇಚ್ಛಾಶಕ್ತಿಯೂ ಬೇಕು. ಸಂಗೀತ, ನೃತ್ಯಾದಿಗಳನ್ನು ಕಲಿಯುವ ಆಸಕ್ತಿ ಹಲವರಲ್ಲಿರುತ್ತದೆ. ಆದರೆ ದೃಢ ಇಚ್ಛಾಶಕ್ತಿಯಿಂದ ಕಲಿಕೆಯನ್ನು ಮುಂದುವರಿಸುವವರು, ಸಾಧಿಸುವವರು ಎಷ್ಟು ಮಂದಿ? ಸಂಸಾರದ ದುಃಖ-ದುಮ್ಮಾನಗಳು ವ್ಯಕ್ತಿಯನ್ನು ವಿರಕ್ತನನ್ನಾಗಿಸಬಹುದು. ಆದರೆ ಆತನಲ್ಲಿ ಇಚ್ಛಾಶಕ್ತಿ ಬಲಗೊಳ್ಳದಿದ್ದರೆ ಭಾವೋದ್ವೇಗ ಇಳಿಯುತ್ತಿದ್ದಂತೆಯೇ ಮನಸ್ಸು ಮತ್ತೆ ಲೌಕಿಕದತ್ತ ಹೊರಳಬಹುದು. ಜೀವನಾನುಭವಗಳು ಚಿತ್ತಶುದ್ಧಿಗೆ, ಸ್ಥಿರತೆಗೆ ಕಾರಣವಾಗಬೇಕು.
    ಜನ್ಮ, ಮರಣ, ಮುಪ್ಪು ಮತ್ತು ವ್ಯಾಧಿಗಳಿಂದ ಬಾಧಿತವಾಗುವ ಜೀವನ, ಮೋಸ, ದ್ವೇಷ, ಅಸೂಯೆಗಳಿಂದ ಹಿಂಸಿಸುವ ಬಾಂಧವ್ಯಗಳು, ಏಳುಬೀಳುಗಳಲ್ಲಿ ಛಿದ್ರವಾಗುವ ಸುಂದರ ಕನಸುಗಳು ಚಿತ್ತಸಂಸ್ಕಾರ ಸಾಧನಗಳಂತೆ ವ್ಯಕ್ತಿಯನ್ನು ಪರಿಶುದ್ಧಗೊಳಿಸುತ್ತವೆ. ದುರ್ಗಣಗಳು, ನಕಾರಾತ್ಮಕ ಭಾವಗಳು ತೊಲಗಿ ಆತ ಸದ್ಗುಣಿಯಾಗುತ್ತಾನೆ. ನಿರಂತರ ಆತ್ಮಪರೀಕ್ಷೆಯಿಂದ ದುರಭ್ಯಾಸಗಳು ಕಳಚಿಕೊಂಡು ಜ್ಞಾನಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಹೀಗೆ ತನ್ನನ್ನು ತಾನರಿಯಲು ಯತ್ನಿಸುವುದೇ ತತ್ತ್ವವನ್ನು ಅರಿಯುವುದಕ್ಕಿರುವ ಮೊದಲ ಮೆಟ್ಟಿಲು.
    ಲೌಕಿಕದ ಬಾಳನ್ನು ತುಚ್ಛವೆಂದೋ, ತೊಡಕೆಂದೋ ಭಾವಿಸಬೇಕಿಲ್ಲ. ವಿವೇಕವು ಲುಪ್ತವಾಗದಂತೆ ಸ್ವನಿಯಂತ್ರಣ ಸಾಧಿಸುತ್ತ, ನಿಮೋಹದಿಂದ ಕರ್ಮವನ್ನು ಮಾಡುವುದೇ ವಿಹಿತ. ಅಂದರೆ ಸಂಸಾರದಲ್ಲಿ ಯಾವುದಕ್ಕೂ ಅತಿಯಾಗಿ ನೆಚ್ಚಿಕೊಳ್ಳದೆ ತನೊಗದಗಿದ ಕರ್ತವ್ಯಗಳನ್ನು ನಿರ್ಲಿಪ್ತನಂತೆ ಮಾಡುವುದೇ ನಿಜವಾದ ತಪಸ್ಸು, ಸ್ಥಿತಪ್ರಜ್ಞನಾಗಿ ಬಾಳುವುದೇ ಸ್ಥಿರವಾದ ಯಶಸ್ಸು.
    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ರಾಹುಲ್ ಗಾಂಧಿಯವರ ಮಾಜಿ ಕ್ಷೇತ್ರ ಅಮೇಠಿಯ ಗೌರಿಗಂಜ್​​ ರೈಲ್ವೆ ನಿಲ್ದಾಣದ ಚಿತ್ರ ಅಂದು-ಇಂದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts