More

    ಪ್ರಕೃತಿಯ ಎರಡು ರೂಪಗಳು ಯಾವುವು? ಡಿವಿಜಿಯವರ ಕಗ್ಗದ ಬೆಳಕಿನಲ್ಲಿದೆ ಉತ್ತರ

    ಘೊರವನು ಮೋಹವನು ದೇವತೆಗಳಾಗಿಪರು |

    ಭೀರು ಯಾಚಕರಾಸ್ಥೆ ತಪ್ಪದಿರಲೆಂದು ||

    ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ |

    ಪಾರಮಾರ್ಥಿಕನಿಗೆಲೊ? – ಮಂಕುತಿಮ್ಮ ||

    ‘ಮನುಷ್ಯರಿಗೆ ಭಯ, ಯಾಚಕಾವಸ್ಥೆ ತಪ್ಪದಿರಲೆಂದು ದೇವತೆಗಳು ಘೊರ ಮತ್ತು ಮೋಹವನ್ನಾಗಿಸುತ್ತಾರೆ. ಯಾರಿಂದ ಏನು ಭಯ? ಏನು ಬಂದರೂ ಸ್ವೀಕರಿಸೋಣ ಎಂಬಂತೆ ಬಾಳುವವನಿಗೆ ಇದರಿಂದ ಏನಾಗಲುಂಟು?’ ಎಂದು ಪ್ರಶ್ನಿಸುತ್ತದೆ ಈ ಕಗ್ಗ.

    ಪ್ರಕೃತಿಯ ಎರಡು ರೂಪಗಳು ಯಾವುವು? ಡಿವಿಜಿಯವರ ಕಗ್ಗದ ಬೆಳಕಿನಲ್ಲಿದೆ ಉತ್ತರಜಗತ್ತಿನ ಚಾಲಕ ಶಕ್ತಿಯಾದ ಪ್ರಕೃತಿಗೆ ಎರಡು ರೂಪಗಳಿವೆ. ಮೊದಲನೆಯದು ಭಕ್ತಿ-ಶ್ರದ್ಧೆಗಳನ್ನು ಪ್ರೇರೇಪಿಸುವ ಸಾತ್ತಿ್ವಕ ರೂಪ. ಇನ್ನೊಂದು ಅರಿಷಡ್ವರ್ಗಗಳನ್ನು ಪ್ರಚೋದಿಸುವ ಆಸುರಿ ರೂಪ. ಸತ್ತ್ವ, ರಜ, ತಮೋಗುಣಗಳನ್ನು ಹೊಂದಿಕೊಂಡು ಸ್ವಭಾವ ರೂಪುಗೊಳ್ಳುತ್ತದೆ. ವ್ಯಕ್ತಿಯು ಭಾವ-ಬುದ್ಧಿಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾನೆ ಎನ್ನುವುದರ ಮೇಲೆ ಆತನ ಸಾಧನೆಯ ನೆಲೆಯು ಸ್ಪಷ್ಟವಾಗುತ್ತದೆ. ಹಿಮಾಲಯವನ್ನು ಕಾಣುವ ಹಂಬಲ ಎಲ್ಲರಲ್ಲೂ ಇರುತ್ತದೆ. ಕೆಲವರಿಗೆ ಅದನ್ನು ಏರಬೇಕು ಎಂಬ ಆಸೆಯೂ ಇರಬಹುದು. ಆದರೆ ಅದನ್ನು ಸಾಧಿಸಿದವರೆಷ್ಟು ಮಂದಿ? ಅರ್ಹರಾಗದೆ, ಸರಿಯಾದ ಪೂರ್ವತಯಾರಿ, ದೃಢಸಂಕಲ್ಪ ಇಲ್ಲದೆ ಶಿಖರಾಗ್ರ ತಲುಪಲು ಸಾಧ್ಯವಿಲ್ಲ. ಉನ್ನತವಾದುದನ್ನು ಸಾಧಿಸಲು ಹೊರಟವನಿಗೆ ನಿಚ್ಚಳವಾದ ಗುರಿ ಇರಬೇಕು, ಇಡುವ ಪ್ರತಿ ಹೆಜ್ಜೆಯ ಔಚಿತ್ಯದ ಅರಿವು ಮತ್ತು ದೃಢ ಸಂಕಲ್ಪಶಕ್ತಿ ಬೇಕು.

    ಶಕ್ತಿಕೇಂದ್ರವಾದ ದೇಗುಲವನ್ನು ಸಂದರ್ಶಿಸಲು ಹೊರಟವನು ಹೊರಭಾಗದಲ್ಲಿರುವ ಶಿಲ್ಪಕಲಾ ಸೌಂದರ್ಯ, ಶಿಲಾಬಾಲಿಕೆಯರನ್ನು ನೋಡುತ್ತ ಹೊರಾಂಗಣದಲ್ಲೇ ಉಳಿದುಹೋದಂತೆ ಜೀವನದಲ್ಲೂ ಮನುಜರು ಕಳೆದುಹೋಗುವುದಿದೆ. ಕ್ಷಣಿಕ ಸುಖ-ಸಂತೋಷಗಳಲ್ಲಿ ಪರವಶರಾಗುತ್ತ, ಸಂಸಾರದ ಜಂಜಾಟಗಳಲ್ಲಿ ತೊಳಲಾಡುತ್ತ ದುಃಖ, ಭಯ, ಮೋಹ, ನೋವು, ಪ್ರೇಮ ಮುಂತಾದ ಲೌಕಿಕ ಅವಸ್ಥೆಗಳಲ್ಲಿ ಒದ್ದಾಡುವುದುಂಟು. ಆಗ ದೇವತೆಗಳು ಘೊರ ರೂಪವನ್ನು, ಸನ್ನಿವೇಶಗಳನ್ನು ಎದುರಿಗಿಟ್ಟು ಹೆದರಿಸುತ್ತಾರೆ, ಆಕರ್ಷಣೆಗಳನ್ನೊಡ್ಡಿ ದಾರಿ ತಪ್ಪಿಸುತ್ತಾರೆ. ಮದವೇರಿದ ಆನೆಯಂತೆ ಮದೋನ್ಮತ್ತ ಮನುಜನನ್ನು ಯಾವುದೋ ರೂಪದಲ್ಲಿ ದಂಡಿಸುತ್ತಾರೆ. ಅಂಜಿಕೆ, ಯಾಚಕತೆಯಲ್ಲೇ ಬದುಕಿರುವಂತೆ ಮಾಡುತ್ತಾರೆ. ವ್ಯಕ್ತಿ ತನ್ನ ಅರಿವನ್ನು ಶರೀರಕ್ಕಷ್ಟೇ ಸೀಮಿತ ಮಾಡಿಕೊಂಡಿರುವುದೇ ಹೀಗಾಗಲು ಕಾರಣ. ಪಾರಲೌಕಿಕ ಚಿಂತನೆಗಳು ಅವನ ಆಂತರ್ಯವನ್ನು ಸೋಕಿರುವುದೇ ಇಲ್ಲ. ಹಾಗಾಗಿ ಬದುಕಿನಲ್ಲಿ ಬಗೆಬಗೆಯ ಕಷ್ಟ-ಕಾರ್ಪಣ್ಯ, ದಯನೀಯ ಸ್ಥಿತಿಯನ್ನು ಅನುಭವಿಸುತ್ತಾನೆ.

    ಜೀವನವೆಂದರೆ ಬೇಡುವುದು, ಕಾಡುವುದು, ನರಳುವುದು ಅಷ್ಟೇ ಅಲ್ಲ. ಉನ್ನತ ಉದ್ದೇಶವನ್ನಿಟ್ಟುಕೊಂಡು ಯಾತ್ರೆ ಹೊರಟಿರುವ ಆತ್ಮನನ್ನು ಗ್ರಹಿಸುವ, ಎಲ್ಲರಲ್ಲೂ ಕಾಣುವ ಜ್ಞಾನವು ಜಾಗೃತವಾಗಬೇಕು. ಆಗ ಇಹಜೀವನದ ಏಳುಬೀಳುಗಳು ವ್ಯಕ್ತಿಯನ್ನು ಕಂಗೆಡಿಸವು. ಆತನ ಲಕ್ಷ್ಯವು ಸರ್ವಶ್ರೇಷ್ಠ ಪುರುಷಾರ್ಥವಾದ ಪರಮಾರ್ಥವನ್ನು ಪಡೆಯುವುದರತ್ತ ನೆಟ್ಟಿರುತ್ತದೆ. ಹೀಗೆ ಪಾರಮಾರ್ಥಿಕತೆಯ ಪಥದಲ್ಲಿ ಮುನ್ನಡೆಯುವ ವ್ಯಕ್ತಿಯು ದೇವತೆಗಳಿಂದ ಪರೀಕ್ಷೆಗೆ ಒಳಪಡುತ್ತಾನೆ. ಅವರು ಮತ್ತೆಮತ್ತೆ ಇಚ್ಛಾಶಕ್ತಿಯನ್ನು ಕುಂದಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಭಗವಂತನ ದರ್ಶನಕ್ಕೆ ಆವಶ್ಯಕವಾದ ಮನಸ್ಸು, ದೇಹದ ಸಮಾಧಾನ, ಸ್ವಾಸ್ಥ್ಯ ಕಳೆದುಕೊಳ್ಳಬಾರದೆಂದರೆ ಪ್ರಕೃತಿಯು ಅನುಕೂಲಳಾಗಿರಬೇಕು. ಲೋಕ ಜೀವನವನ್ನು ಮಾಡುತ್ತ ಅಲ್ಲೇ ಉಳಿದು ಹೋಗದೆ ಮುಂದುವರಿಯಬೇಕು. ಇವೆಲ್ಲದಕ್ಕೂ ಅನುವು ಮಾಡಿಕೊಡುವವರು ದೇವತೆಗಳು. ಹಾಗಾಗಿ ಯಾವುದೇ ಕೆಲಸಕ್ಕೂ ಮೊದಲು ಅವರಿಗೆ ಪ್ರಾರ್ಥನೆ ಸಲ್ಲಿಸಿ ಕೃಪೆ ಬೇಡುವ ಪದ್ಧತಿಯಿದೆ. ಯಾರು ಪರಬ್ರಹ್ಮನೆಡೆಗೆ ದೃಷ್ಟಿ ನೆಟ್ಟಿರುತ್ತಾರೋ, ಭಗವಂತನನ್ನೇ ಅಚಲವಾಗಿ ನಂಬಿರುತ್ತಾರೋ, ಆತನನ್ನು ಈ ಬಗೆಯ ತಾಪಗಳು ಕಂಗೆಡಿಸವು. ಅವು ಆತ್ಮೋತ್ಕರ್ಷಕ್ಕೆ ಪೋಷಕವಾಗುತ್ತವೆ. ಸ್ವಶಕ್ತಿ ಅಭಿವೃದ್ಧಿಗೊಂಡು ಆತ್ಮವಿಕಾಸಕ್ಕೆ ಕಾರಣವಾಗುತ್ತದೆ.

    ಲಾಕ್​ಡೌನ್​ ತೆರವುಗೊಳಿಸುವ ಬಗ್ಗೆ ಸಿಎಂ ಸಮಾಲೋಚನೆ, ಖಾಸಗಿ ಸಂಸ್ಥೆಯಿಂದ ಸ್ಮಾರ್ಟ್​ ಲಾಕ್​ಡೌನ್​ ಕುರಿತು ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts