More

    ರಸ್ತೆ ಅಭಿವೃದ್ಧಿಗಾಗಿ ಬುಡಮೇಲಾದ ಸಾಲುಮರ

    ರಸ್ತೆ ಅಭಿವೃದ್ಧಿಗಾಗಿ ಬುಡಮೇಲಾದ ಸಾಲುಮರ

    ಚಿಕ್ಕಮಗಳೂರು: ಕಡೂರಿನಿಂದ ಚಿಕ್ಕಮಗಳೂರು ತಾಲೂಕಿನ ವಸ್ತಾರೆವರೆಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದ್ದು, ಈ ಸಂಬಂಧ ರಸ್ತೆ ಬದಿಯಲ್ಲಿದ್ದ 3455 ಸಾಲು ಮರಗಳು ತೆರವಾಗಲಿವೆ. ಈಗಾಗಲೇ ಎರಡು ಸಾವಿರ ಮರಗಳಿಗೆ ಕೊಡಲಿ ಪಟ್ಟು ಬಿದ್ದಿದೆ. ಇನ್ನೂ 1455 ಮರಗಳ ಹನನ ನಡೆಯಲಿದೆ.

    ಕಡೂರಿನಿಂದ ಸಖರಾಯಪಟ್ಟಣದವರೆಗೂ 1137 ಮರಗಳಲ್ಲಿ 1116 ಮರ ನೆಲಸಮವಾಗಿವೆ. ಪಟ್ಟಣದ ಬಳಿ 21 ಮರ ಮಾತ್ರ ತೆರವು ಮಾಡಲು ಬಾಕಿ ಇದೆ. ಈ ಮಾರ್ಗದಲ್ಲಿ ಕೆಲವೆಡೆ ಸೇತುವೆ ನಿರ್ಮಾಣ ಕಾರ್ಯ ಹೊರತುಪಡಿಸಿ ಹೆದ್ದಾರಿ ಅಭಿವೃದ್ಧಿ ಕೆಲಸ ಬಹುತೇಕ ಪೂರ್ಣಗೊಂಡಿದೆ. ಬೃಹದಾಕಾರವಾಗಿ ಬೆಳೆದು ನಿಂತು ಜನಕ್ಕೆ ನೆರಳಾಗಿ, ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ್ದ ಮರಗಳನ್ನು ತೆರವು ಮಾಡಿರುವುದರಿಂದ ಹಚ್ಚ ಹಸಿರಿನಿಂದ ಆವರಿಸಿದ್ದ ರಸ್ತೆಗಳು ಈಗ ಬಯಲಾಗಿವೆ.

    ಸಖರಾಯಪಟ್ಟಣದಿಂದ ವಸ್ತಾರೆವರೆಗೂ 2318 ಮರಗಳಲ್ಲಿ 863 ಕಡಿಯಲಾಗಿದ್ದು, 1655 ಮರಗಳು ಸದ್ಯದಲ್ಲೇ ನೆಲಕ್ಕುರಳಲಿವೆ. ಕಡೂರಿಂದ ಚಿಕ್ಕಮಗಳೂರಿನ ಎಪಿಎಂಸಿವರೆಗೂ ಮರಗಳ ತೆರವು ಕಾರ್ಯ ಭರದಿಂದ ಸಾಗಿದೆ. ಕೆಲವೆಡೆ ವಿದ್ಯುತ್ ಲೈನ್ ಇರುವುದರಿಂದ ಕೆಲ ಮರಗಳನ್ನು ತೆರವು ಮಾಡಿಲ್ಲ.

    ಮಾವು, ಹಲಸಿನ ಮರಗಳು ಮಳೆಯಿಂದ ಬೆಳೆಯುವುದರಿಂದ ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ರಸ್ತೆಗಳಲ್ಲಿ ಮತ್ತು ಅತ್ತಿ, ಗೋಣಿ, ಬಸರಿ ಮರಕ್ಕೆ ಹೆಚ್ಚು ನೀರು ಬೇಕಿಲ್ಲವಾದ್ದರಿಂದ ಬಯಲುಸೀಮೆ ಭಾಗದ ರಸ್ತೆಗಳ ಬದಿ ಹಾಕಲಾಗಿದೆ.

    ಗುಣಮಟ್ಟಕ್ಕೆ ತಕ್ಕ ಬೆಲೆ: ಒಂದು ಮರಕ್ಕೆ ಕನಿಷ್ಠ 1 ಸಾವಿರದಿಂದ 15 ಸಾವಿರ ರೂ. ವರೆಗೂ ಹರಾಜು ಕೂಗಿದ್ದಾರೆ ಎಂದು ತಿಳಿದುಬಂದಿದೆ. ಆಲ, ಅತ್ತಿ, ಅರಳಿ, ಬೇವು, ಹುಣಸೆ, ನೇರಲು, ಗುಲ್​ವೋರ್, ರೈನ್​ಟ್ರೀ, ಅಕೇಶಿಯಾ, ನೀಲಗಿರಿ, ಕಹಿಬೇವು ಸೇರಿ ಹತ್ತಾರು ಜಾತಿ ಮರಗಳು ಇಲ್ಲಿದ್ದವು. ಅವುಗಳ ಗಾತ್ರ, ಎತ್ತರ ಗಮನಿಸಿ ಅದಕ್ಕೆ ತಕ್ಕನಾದ ಬೆಲೆ ಕೊಟ್ಟು ಖರೀದಿಸುತ್ತಾರೆ. ಗೋಣಿ, ಬಸರಿ, ಅರಳಿ, ಆಲ, ಅತ್ತಿ ಇನ್ನಿತರೆ ಮರಗಳು ಯಂತ್ರಗಳ ಬಾಕ್ಸ್ ಪ್ಯಾಕಿಂಗ್, ಸೆಂಟ್ರಿಂಗ್​ಗೆ ಉಪಯೋಗಿಸುವುದು ಬಿಟ್ಟರೆ ಕಟ್ಟಿಗೆಗೆ ಮಾತ್ರ ಬಳಸಲಾಗುತ್ತದೆ. ನೀಲಗಿರಿ ಮರಗಳು ಹೆಂಚಿನ ಮನೆಯ ತೀರು ಹಾಗೂ ರೀಪ್​ಗೆ. ಮಾವು, ಹುಣಸೆ, ಬೇವು ಮರಗಳು ಉತ್ತಮವಾಗಿದ್ದರೆ ಹಲಗೆ, ಪಕ್ಕಾಸು, ಕಿಟಕಿ, ಬಾಗಿಲುಗಳಿಗೆ ಉಪಯೋಗವಾಗುವುದರಿಂದ ಅದಕ್ಕೆ ತಕ್ಕನಾದ ಬೆಲೆಗೆ ಹರಾಜು ಕೂಗುತ್ತಾರೆ.

    ಹೆದ್ದಾರಿಯ ರಸ್ತೆ ಬದಿಗಳಲ್ಲಿ ಆಲ, ಅರಳಿ, ಅತ್ತಿ, ಬೇವು, ಹುಣಸೆ, ಹಲಸು, ಹೆಬ್ಬಲಸು, ನೇರಲು ಗಿಡಗಳನ್ನು ನೆಡಲಾಗುತ್ತದೆ. 16,800 ಜಾತಿಯ 12 ರಿಂದ 15 ಅಡಿ ಎತ್ತರದ ಗಿಡಗಳು ಇವೆ. ಕಡೂರಿನಿಂದ ಸಖರಾಯಪಟ್ಟಣವರೆಗೂ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. 250-300 ವರ್ಷ ಬಾಳುವ ಅತ್ಯುತ್ತಮ ಸಸಿಗಳನ್ನು ಕಡೂರಿನಿಂದ ನೆಡಲಾಗುವುದು ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts