More

    ಕದಂಬೋತ್ಸವಕ್ಕೆ ಕವಿದ ‘ಮಂಕು’!

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಸಿಯಲ್ಲಿ ಪ್ರತಿವರ್ಷ ನಡೆಯಬೇಕಿದ್ದ ಕದಂಬೋತ್ಸವಕ್ಕೆ ‘ಮಂಕು’ ಕವಿದಿದೆ. ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಬಿಡುಗಡೆಗೊಳಿಸದ ಕಾರಣ 4 ವರ್ಷಗಳಿಂದ ಉತ್ಸವವೇ ನಡೆದಿಲ್ಲ. ಈ ವರ್ಷವೂ ನಡೆಯುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.

    2014ರ ಫೆಬ್ರವರಿ ಮತ್ತು 2015ರ ಅಕ್ಟೋಬರ್‌ನಲ್ಲಿ ಆಗಿನ ಸಚಿವ ಆರ್.ವಿ. ದೇಶಪಾಂಡೆ ಆಸಕ್ತಿ ವಹಿಸಿದ್ದರಿಂದ ಸರ್ಕಾರ ಇಲ್ಲಿ ಅದ್ದೂರಿಯಾಗಿ ಕದಂಬೋತ್ಸವ ಆಚರಿಸಿತ್ತು. ಸಾವಿರಾರು ಜನ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದ್ದರು. ಆದರೆ, ನಂತರದ ವರ್ಷಗಳಲ್ಲಿ ಈ ಉತ್ಸವವನ್ನೇ ಸರ್ಕಾರ ಮರೆತಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

    ಎರಡನೇ ರಾಜಧಾನಿ: ಕನ್ನಡಿಗರ ಮೊದಲ ರಾಜಮನೆತನ ಕದಂಬರ ಆಳ್ವಿಕೆ ಅವಧಿಯಲ್ಲಿ ಹಲಸಿ ಎರಡನೇ ರಾಜಧಾನಿಯಾಗಿತ್ತು. ಅವರ ಇತಿಹಾಸ ಸಾರುವ ಕುರುಹುಗಳು ಹೆಜ್ಜೆ ಹೆಜ್ಜೆಗೂ ಇಲ್ಲಿ ದೊರಕುತ್ತವೆ. ಪ್ರಾಚೀನ ಕಾಲದ ತಪೋಭೂಮಿ ಎಂದೇ ಗುರುತಿಸಿಕೊಂಡಿರುವ ಇಂದಿನ ಹಲಸಿ ಗ್ರಾಮವು (4ರಿಂದ 13ನೇ ಶತಮಾನ)ಅಂದು ಪಾಲಸಿಕಾ ಪ್ರಾಂತವಾಗಿತ್ತು. ಇಂದಿಗೂ ಸ್ಥಳೀಯ ಅಂಚೆ ಕಚೇರಿಯಲ್ಲಿ ಕದಂಬರ ಲಾಂಛನ(ಸಿಂಹ)ವನ್ನೇ ಬಳಸಲಾಗುತ್ತಿದೆ. ಪುರಾತನ ಕಾಲದ ಭೂವರಾಹ ನರಸಿಂಹ ದೇವಸ್ಥಾನ, ಕಲ್ಮೇಶ್ವರ ದೇಗುಲ, ಜೈನ ಬಸದಿ ಇರುವ ಕಾರಣ ಐತಿಹಾಸಿಕ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದಲೂ ಗ್ರಾಮ ಶ್ರೀಮಂತವಾಗಿದೆ. ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ.

    ನಮ್ಮ ಉತ್ಸವ ಏಕಿಲ್ಲ?: ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ರಾಯಣ್ಣನ ಉತ್ಸವ, ಬೆಳವಡಿಯಲ್ಲಿ ಮಲ್ಲಮ್ಮನ ಉತ್ಸವವನ್ನು ಪ್ರತಿವರ್ಷ ಅದ್ದೂರಿಯಾಗಿ ಆಚರಿಸಲು ಸರ್ಕಾರ ಒಲವು ತೋರುತ್ತದೆ. ಇದಕ್ಕೆ ನಮ್ಮ ಆಕ್ಷೇಪವೂ ಇಲ್ಲ. ನಾವು ಅಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆ. ಆದರೆ, ಎಲ್ಲ ಉತ್ಸವಗಳ ಬಗ್ಗೆ ಆಸಕ್ತಿ ತೋರುತ್ತಿರುವ ಸರ್ಕಾರ ಕದಂಬೋತ್ಸವ ನಿರ್ಲಕ್ಷಿಸುತ್ತಿರುವುದು ಏಕೆ ಎಂಬುದು ಹಲಸಿ ಗ್ರಾಮಸ್ಥರ ಪ್ರಶ್ನೆ.


    ಕದಂಬರ ಎರಡನೇ ರಾಜಧಾನಿ ಎನ್ನುವ ಕಾರಣ ಹಲಸಿ ಕರ್ನಾಟಕ ಮಾತ್ರವಲ್ಲ, ದೇಶದಲ್ಲೇ ಖ್ಯಾತಿ ಗಳಿಸಿದೆ. ಇಲ್ಲಿ ಉತ್ಸವ ಆಚರಣೆಗೆ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ಹೋರಾಟ ಅನಿವಾರ್ಯ.
    | ಆರ್.ಡಿ. ಹಂಜಿ ಅಧ್ಯಕ್ಷ, ಹಲಸಿ ಗ್ರಾಪಂ

    ಪ್ರಸಕ್ತ ವರ್ಷ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಚರಿಸಲಿರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಹಲಸಿ ಕದಂಬೋತ್ಸವ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಬಳಿಕ, ಅದನ್ನು ಆಚರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
    | ಸಿ.ಟಿ.ರವಿ ಪ್ರವಾಸೋದ್ಯಮ ಸಚಿವ

    ಹಲಸಿಯಲ್ಲಿ ಈ ವರ್ಷ ಕದಂಬೋತ್ಸವ ಆಚರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉತ್ಸವ ನಡೆಸುವುದಕ್ಕಾಗಿ 25 ಲಕ್ಷ ರೂ. ಅನುದಾನ ಕೋರಿ ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ.
    | ಸುಭಾಷ ಉಪ್ಪಾರ ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts