More

    ನಕ್ಸಲ್‌ಪೀಡಿತ ಪ್ರದೇಶದಲ್ಲಿ ಅಭಿವೃದ್ಧಿ ಕನಸು: ಕಬ್ಬಿನಾಲೆ, ನಡ್ಪಾಲ್ನಲ್ಲಿ ಉಡುಪಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

    ಹೆಬ್ರಿ: ಹಳ್ಳಿಯ ಸಮಸ್ಯೆ ಅರಿಯುವುದು ಮತ್ತು ಅದಕ್ಕೆ ಸಂಬಂಧಿಸಿ ಶಾಶ್ವತ ಪರಿಹಾರ ಕಲ್ಪಿಸುವುದೇ ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶ. ಕಬ್ಬಿನಾಲೆ, ನಡ್ಪಾಲ್ ಪ್ರದೇಶಗಳ ಜನರ ಸಮಸ್ಯೆ ಆಲಿಸಿ ಪರಿಹಾರ ದೊರಕಿಸಲಾಗುವುದು. ಕಾಟಾಚಾರಕ್ಕೆ ಈ ಕಾರ್ಯಕ್ರಮ ಆಗಲು ಬಿಡುವುದಿಲ್ಲ. ಎಲ್ಲ ಇಲಾಖೆ ಅಧಿಕಾರಿಗಳೂ ಉತ್ಸಾಹದಿಂದ ಭಾಗಿಯಾಗುತ್ತಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
    ಕಬ್ಬಿನಾಲೆ ಕೆಳಮಠದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ಮಾಡಲಾಗಿತ್ತು. 60ಕ್ಕೂ ಅಧಿಕ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಮುಡ್ರಾಡಿ ಗ್ರಾಪಂ ವ್ಯಾಪ್ತಿಯ ಕಬ್ಬಿನಾಲೆ ಮತ್ತು ನಡ್ಪಾಲು ಗ್ರಾಪಂನ ಒಟ್ಟು 119 ಅರ್ಜಿಗಳು ಸಲ್ಲಿಕೆಯಾದವು. ಅವುಗಳಲ್ಲಿ 29 ಅರ್ಜಿಗಳು ಪಂಚಾಯತ್‌ರಾಜ್ ಇಲಾಖೆಗೆ ಮತ್ತು 18 ಮೆಸ್ಕಾಂಗೆ ಸಂಬಂಧಿಸಿದ ಅರ್ಜಿಗಳಾಗಿದ್ದವು. ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿದ ಬಳಿಕ ಕೆಲವನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಹೆಚ್ಚಿನ ಅರ್ಜಿಗಳಲ್ಲಿ ನೆಟ್‌ವರ್ಕ್, ವಿದ್ಯುತ್, ಬಸ್ ಸಂಚಾರ, ಸರ್ಕಾರಿ ಶಾಲೆಗಳ ಸಮಸ್ಯೆ, ಮೆಸ್ಕಾಂ, ರಸ್ತೆ ಸಂಪರ್ಕ, ಸೇತುವೆ ನಿರ್ಮಾಣ, ಡೀಮ್ಡ್ ಫಾರೆಸ್ಟ್, ಕಂದಾಯ ಇಲಾಖೆ, ಕಸ್ತೂರಿರಂಗನ್ ವರದಿ, ಹುಲಿ ಯೋಜನೆ ಕುರಿತ ಸಮಸ್ಯೆಗಳು ಪ್ರಮುಖವಾಗಿದ್ದವು.

    ಕೊಂಕಣರಬೆಟ್ಟು ಶಾಲೆ ಆವರಣ ಗೋಡೆ ಕುಸಿದಿದ್ದು, ಸುಮಾರು 35 ಲಕ್ಷ ರೂ. ಅನುದಾನ ಬೇಕಿದೆ. ಇದಕ್ಕೆ ಜಿಲ್ಲಾಧಿಕಾರಿ 2 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಉಳಿದ ಮೊತ್ತಕ್ಕೆ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
    ಇಲಾಖಾಧಿಕಾರಿಗಳ ಹೊಂದಾಣಿಕೆ ಕೊರತೆ

    ಕಬ್ಬಿನಾಲೆ ಮತ್ತು ಮುನಿಯಾಲು ಸಂಪರ್ಕಿಸುವ ರಸ್ತೆ ವಿಸ್ತರಣೆ ಮತ್ತು ಬಸ್ ಸಂಚಾರ ಕಲ್ಪಿಸಲು ಮುಟ್ಲುಪಾಡಿ ಸತೀಶ ಶೆಟ್ಟಿ ಒತ್ತಾಯಿಸಿದರು. ಇದಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿ ಗಮನ ಹರಿಸುವಂತೆ ಡಿಸಿ ಸೂಚಿಸಿದರು. ಅನೇಕ ಸಮಸ್ಯೆಗಳನ್ನು ಗಮನಿಸಿದಾಗ ಇಲಾಖಾಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ಸಮಸ್ಯೆ ಉದ್ಭವಿಸಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿ ಸೂಚಿಸಿದರು.
    ಮಲೆಕುಡಿಯ ಅಭಿವೃದ್ಧಿಗೆ ಕ್ರಮ

    ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ ಇಲಾಖೆ ಮಲೆಕುಡಿಯ ಸಮುದಾಯದ ಬಹುತೇಕ ಸಮಸ್ಯೆಗಳಾದ ರಸ್ತೆ, ವಿದ್ಯುತ್, ಮತ್ತು ಮೂಲಸೌಕರ್ಯಗಳ ಕೊರತೆ ಬಗ್ಗೆ ಸಮಗ್ರ ಕ್ರಮ ಕೈಗೊಳ್ಳುವಂತೆ ಗಿರಿಜನ ಸಮಗ್ರ ಅಭಿವೃದ್ಧಿ ಯೋಜನಾ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದರು.

    ಪಡಿತರದಲ್ಲಿ ಕಾರ್ಲ ಕಜೆಗೆ ಒತ್ತಾಯ
    ಪಡಿತರ ಚೀಟಿಯಲ್ಲಿ ಕಾರ್ಲ ಕಜೆ ನೀಡಲು ಸ್ಥಳೀಯರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳ ಬಗ್ಗೆ ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದರು. ಜಿಪಂ ಮಾಜಿ ಸದಸ್ಯ ಮಂಜುನಾಥ್ ಪೂಜಾರಿ ಮಾತನಾಡಿ, ಕಸ್ತೂರಿರಂಗನ್ ಮತ್ತು ಹುಲಿ ಯೋಜನೆ ಅನುಷ್ಠಾನದ ಬಗ್ಗೆ ಸರಿಯಾದ ನಿಲುವು ತಿಳಿಸುವಂತೆ ಜಿಲ್ಲಾಧಿಕಾರಿಯಲ್ಲಿ ಒತ್ತಾಯಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಧಿಕಾರಿ ರಾಜು, ಹೆಬ್ರಿ ತಹಸೀಲ್ದಾರ್ ಕೆ.ಪುರಂದರ, ಪೊಲೀಸ್ ಉಪಾಧೀಕ್ಷಕ ಜೈಶಂಕರ್, ಜಿಪಂ ಸದಸ್ಯೆ ಜ್ಯೋತಿ ಹರೀಶ್, ತಾಪಂ ಸದಸ್ಯ ರಮೇಶ್ ಪೂಜಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷ ಮಂಜುನಾಥ್ ಹೆಗ್ಡೆ, ನಡ್ಪಾಲ್ ಗ್ರಾಪಂ ಅಧ್ಯಕ್ಷ ದಿನೇಶ್ ಹೆಗ್ಡೆ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳ ಜತೆ ಸಂವಾದ
    ಕೊಂಕಣರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಸಿದ ಆವರಣ ಗೋಡೆ ಪರಿಶೀಲಿಸಿದರು. ಶಾಲೆಯ ವಾರ್ತಾ ಫಲಕದಲ್ಲಿ ಬರೆದಿದ್ದ ಸುಭಾಷಿತ ಓದಿ ಬರೆದ ವಿದ್ಯಾರ್ಥಿಗಳಾದ ಚಿರಸ್ವಿ ಮತ್ತು ಅಂಜಲಿ ಅವರನ್ನು ಅಭಿನಂದಿಸಿದರು. ಬಳಿಕ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಬಿಸಿಯೂಟ ಪ್ರಾರಂಭಿಸುವ ಬಗ್ಗೆ ವಿದ್ಯಾರ್ಥಿ ಪ್ರಶ್ನೆ ಕೇಳಿದಾಗ, ಜಿಲ್ಲಾಧಿಕಾರಿ ಅಭಿನಂದಿಸಿ ಸರ್ಕಾರ ಇದಕ್ಕೆ ಸಂಬಂಧಿಸಿ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಸನ್ನಿಧಿ ಎಂಬ ವಿದ್ಯಾರ್ಥಿ ಐಎಎಸ್ ಅಧಿಕಾರಿಯಾಗುವ ಕುರಿತು ಪ್ರಶ್ನೆ ಕೇಳಿದಾಗ ಸಮರ್ಪಕ ಉತ್ತರ ನೀಡಿ, ಶಾಲೆಯ ಶಿಸ್ತು, ವಿದ್ಯಾರ್ಥಿಗಳ ನಡವಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂತಿಮವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

    ಸಮಗ್ರ ಅಭಿವೃದ್ಧಿಗೆ ಮನವಿ
    ಸಂಪಿಗೆ ಮಲೆಕುಡಿಯ ಸಮುದಾಯ ಭವನಕ್ಕೆ ಭೇಟಿ ನೀಡಿದಾಗ ಸಮುದಾಯದವರು, ಭವನ ವಿಸ್ತರಿಸುವಂತೆ ಅಹವಾಲು ಸಲ್ಲಿಸಿದರು. ಕಬ್ಬಿನಾಲೆ ಮೇಲ್ಮಠ ಜನತೆ ರಸ್ತೆ, ಶಾಲೆ ಅಭಿವೃದ್ಧಿ ಮತ್ತು ಬಸ್ ಓಡಾಡಲು ಅವಕಾಶ, ನೆಟ್‌ವರ್ಕ್, ಹಕ್ಕುಪತ್ರಗಳ ವಿತರಣೆ, ಹಾಗೂ ಸಮಗ್ರ ಅಭಿವೃದ್ಧಿಗೆ ಅನುದಾನ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಮೇಗದ್ದೆಯಲ್ಲಿ ಆರೋಗ್ಯ ಉಪಕೇಂದ್ರ
    ನಡ್ಪಾಲ್‌ನಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಭಾಗದ ಪ್ರಮುಖ ಸಮಸ್ಯೆಗಳಾದ ಕಾಡುಪ್ರಾಣಿಗಳ ಹಾವಳಿ, ರಸ್ತೆ, ಹಕ್ಕುಪತ್ರ, ಡೀಮ್ಡ್ ಫಾರೆಸ್ಟ್ ಅಹವಾಲು ಸಲ್ಲಿಕೆಯಾಗಿದ್ದು, ಈ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಮೇಗದ್ದೆಯಲ್ಲಿ ಆರೋಗ್ಯ ಉಪಕೇಂದ್ರ ತೆರೆಯುವ ಬಗ್ಗೆ ಅಹವಾಲು ಸ್ವೀಕಾರವಾಗಿದ್ದು, 5000 ಜನಕ್ಕೆ ಒಂದು ಉಪ ಆರೋಗ್ಯ ಕೇಂದ್ರದ ಸರ್ಕಾರದ ನಿಯಮಾನುಸಾರ ನೀಡಲಾಗುವುದೆಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಸಮರ್ಥಿಸಿದರು. ಪದೇಪದೆ ಸಮಸ್ಯೆ ಉಂಟು ಮಾಡುತ್ತಿರುವ ಅರಣ್ಯ ಇಲಾಖೆಯ ಗೇಟ್ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ವಿಜ್ಞಾಪಿಸಿದರು. ಕಾಡುಪ್ರಾಣಿಗಳು ಬೆಳೆ ನಾಶಪಡಿಸುತ್ತಿದ್ದು, ಪರಿಹಾರ ನೀಡುವಂತೆ ನಾರಾಯಣ ಭಟ್ಟ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅರಣ್ಯಾಧಿಕಾರಿ ಅನಿಲ್ ಕುಮಾರ್, ಸೀಯಾಳ ಪರಿಹಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದರು. ಸೋಮೇಶ್ವರ ಪೇಟೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

    ಗಮನ ಸೆಳೆದ ವಿಜಯವಾಣಿ ವರದಿ
    ಮೂಲಸೌಕರ್ಯಗಳಿಂದ ವಂಚಿತವಾಗಿರುವ ಮುದ್ರಾಡಿ ಮತ್ತು ನಡ್ಪಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಸಮಸ್ಯೆಗಳ ಕುರಿತು ವಿಜಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ಸಾರ್ವಜನಿಕರು ಪತ್ರಿಕೆಯ ವರದಿಯನ್ನು ಜೆರಾಕ್ಸ್ ಮಾಡಿ ಅಹವಾಲು ಪತ್ರದೊಂದಿಗೆ ನೀಡಿದ್ದು, ಜಿಲ್ಲಾಧಿಕಾರಿ ಗಮನಿಸಿ ಪರಿಹರಿಸುವ ಭರವಸೆ ನೀಡಿದರು.

    ಆರೋಗ್ಯ ಶಿಬಿರ
    ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ನಿಟ್ಟಿನಲ್ಲಿ ಕಬ್ಬಿನಾಲೆ ಮತ್ತು ನಡ್ಪಾಲ್ನಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಸ್ವತಃ ಜಿಲ್ಲಾಧಿಕಾರಿಯೇ ಆರೋಗ್ಯ ತಪಾಸಣೆಗೆ ಒಳಪಟ್ಟರು. 175ಕ್ಕೂ ಹೆಚ್ಚು ಮಂದಿ ಬಿಪಿ, ಶುಗರ್ ಮತ್ತು ಕರೊನಾ ಪರೀಕ್ಷೆ ಮಾಡಿಸಿಕೊಂಡರು.

    ಕಸ್ತೂರಿರಂಗನ್ ವರದಿ ಜಾರಿಯಾಗಲ್ಲ
    ಗ್ರಾಮೀಣ ಜನರ ಸಮಸ್ಯೆಗಳಿಗೆ ಕಿವಿಯಾದ ಜಿಲ್ಲಾಧಿಕಾರಿ ಸರ್ಕಾರ ಕಸ್ತೂರಿರಂಗನ್ ವರದಿ ಜಾರಿಗೊಳಿಸುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ. ಇದಕ್ಕೆ ಆತಂಕಪಡುವ ಅವಶ್ಯಕತೆಯಿಲ್ಲ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಶೀಘ್ರ ಇತ್ಯರ್ಥವಾಗಲಿದೆ. ಹುಲಿ ಯೋಜನೆ ಅನುಷ್ಠಾನ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts