More

    ರೆಸಾಟ್, ಹೋಂ ಸ್ಟೇಗಳಿಗೆ ಡಿಸಿ ದಿಢೀರ್ ಭೇಟಿ, ಪರಿಶೀಲನೆ

    ಚಿಕ್ಕಮಗಳೂರು: ದತ್ತಪೀಠ ಪ್ರದೇಶದಲ್ಲಿರುವ ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ಜಿಲ್ಲಾಡಳಿತ ಶಾಕ್ ನೀಡಿದೆ. ಬುಧವಾರ ದಿಢೀರ್ ಭೇಟಿ ನೀಡಿದ ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ.ಗೋಪಾಲಕೃಷ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್ ಸೇರಿದಂತೆ ಸ್ಥಳಿಯ ಗ್ರಾಪಂ ಅಧಿಕಾರಿಗಳ ತಂಡ ಅನಧಿಕೃತ ಹೋಂ ಸ್ಟೇಗಳನ್ನು ಬಂದ್ ಮಾಡಿಸಿದೆ. ಜೊತೆಗೆ ಕಾನೂನು ಪಾಲಿಸದವರಿಗೆ ಎಚ್ಚರಿಕೆ ನೀಡಿದೆ.

    ದತ್ತಪೀಠದ ಪ್ರದೇಶದಲ್ಲಿರುವ ಹೊಯ್ಸಳ ಹೋಂ ಸ್ಟೇ, ಅತ್ತಿಗುಂಡಿ ಹೋಂ ಸ್ಟೇಗಳಿಗೆ ಭೇಟಿ ನೀಡಿದಾಗ ಇವುಗಳು ಅನಧಿಕೃತ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಹೋಂ ಸ್ಟೇಗಳಿಗೆ ಬೀಗ ಹಾಕಲಾಯಿತು. ಹಾಲಿಡೇ ಹೋಂ ರೆಸಾರ್ಟ್ನಲ್ಲಿ ಪ್ರವಾಸಿಗರಿಗೆ ಸುರಕ್ಷತೆಯಿಲ್ಲದಂಥ ಟೆಂಟ್‌ಗಳನ್ನು ನಿರ್ಮಿಸಿರುವ ಕಾರಣ ಆ ಟೆಂಟ್‌ಗಳನ್ನು ತೆರವುಗೊಳಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದು ಸೂಕ್ತ ಕಟ್ಟಡ ನಿರ್ಮಿಸುವಂತೆ ಮಾಲೀಕರಿಗೆ ಡಿಸಿ ಸೂಚನೆ ನೀಡಿದರು.
    ಸ್ಟ್ಯಾನ್ಲಿ ಹೋಂ ಸ್ಟೇ ಹಾಗೂ ಗ್ರೀನ್ ವುಡ್ ರೆಸಾರ್ಟ್ ಗಳನ್ನು ಭೇಟಿ ನೀಡಿ ಬಿಲ್‌ಬುಕ್ ನಿರ್ವಹಣೆ ,ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಾಗೂ ಕಸವನ್ನು ಸಮರ್ಪಕ ವಿಲೇವಾರಿ ಮಾಡುವ ಸಂಬಂಧ ಮಾಲೀಕರಿಗೆ ತಿಳಿಹೇಳಲಾಯಿತು.
    ರಸ್ತೆಗಳಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ ರೆಸಾರ್ಟ್, ಹೋಂ ಸ್ಟೇಗಳಿಗೆ ಸಂಬಂಧಿಸಿದ ಅನಧಿಕೃತವಾಗಿ ಅಳವಡಿಸಿರುವ ನಾಮಫಲಕಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳ ತಂಡವು ತೆರವುಗೊಳಿಸಿತು ಹಾಗೂ ಗಿರಿಭಾಗದ ಇತರೆ ಅನಧಿಕೃತ ನಾಮಫಲಕಗಳನ್ನು ತುರ್ತಾಗಿ ತೆರವುಗೊಳಿಸಲು ಗ್ರಾಪಂ ಸಿಬ್ಬಂದಿಗೆ ಅಧಿಕಾರಿಗಳ ತಂಡ ಅದೇಶಿಸಿತು.
    ಗಿರಿಭಾಗದ ಕೆಲವು ಅಂಗಡಿಗಳನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಿದ್ದು, ಅದನ್ನು ಇಲಾಖೆಯ ವಶಕ್ಕೆ ಪಡೆದು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಡ್ಡಾಯವಾಗಿ ಅಂಗಡಿಗಳಲ್ಲಿ ಉಪಯೋಗಿಸದಂತೆ ಎಚ್ಚರಿಕೆ ನೀಡಲಾಯಿತು.
    ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಹೋಂ ಸ್ಟೇಗಳು ಹಾಗೂ ರೆಸಾರ್ಟ್ಗಳಿಗೆ ಅಧಿಕಾರಿಗಳ ತಂಡವು ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಅನಧಿಕೃತ ಎನ್ನುವುದು ಕಂಡುಬಂದಲ್ಲಿ ಬಂದ್ ಮಾಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
    ಅನುಮೋದನೆ ಪಡೆಯದೇ ಇರುವ ಹೋಟೆಲ್, ಹೋಂ ಸ್ಟೇ, ರೆಸಾರ್ಟ್ಗಳು ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಸಕ್ಷಮ ಪ್ರಾಧಿಕಾರಗಳಿಂದಲೂ ಅನುಮೋದನೆ ಪಡೆದು ನಡೆಸಬೇಕು. ಅಲ್ಲದೇ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದಿರುವ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಇಲಾಖೆಯ ನಿಯಮಗಳನ್ನು ಅನುಸರಿಸದೇ ಇರುವುದು ಕಂಡುಬಂದಲ್ಲಿ ಅಂತಹ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಸಹ ರದ್ದುಪಡಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts