More

    ಎನ್.ಮಂಜುಳಾಗೆ ಕೆ-ರೈಡ್ ಎಂಡಿ ಹೊಣೆ: ಕಾಯಂ ಅಧಿಕಾರಿ ನೇಮಕಕ್ಕೆ ಸಿಗದ ಸ್ಪಂದನೆ

    ಬೆಂಗಳೂರು: ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ-ರೈಡ್) ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆಯನ್ನು ಐಎಎಸ್ ಅಧಿಕಾರಿ ಎನ್.ಮಂಜುಳಾ ಅವರಿಗೆ ವಹಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

    ಪ್ರಸ್ತುತ ಎಂಡಿ ಹುದ್ದೆಯನ್ನು ವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ನಿಗಮದ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಗುಪ್ತಾ ಅವರು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಕಾರಣ ಅವರಿಗೆ ಕಾರ್ಯಭಾರ ಆಗುತ್ತಿರುವುದನ್ನು ಗಮನಿಸಿ ಈ ವರ್ಗಾವಣೆ ಮಾಡಲಾಗಿದೆ.

    ಎನ್.ಮಂಜುಳಾ ಕೂಡ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆಗಿದ್ದು, ಕೆ-ರೈಡ್ ಎಂಡಿ ಸ್ಥಾನವನ್ನು ಕಾಯಂ ಅಧಿಕಾರಿ ನೇಮಕವಾಗುವವರೆಗೂ ಮುಂದುವರಿಯುವಂತೆ ಸೂಚಿಸಲಾಗಿದೆ.

    ಮನವಿಗೆ ಸಿಗದ ಸ್ಪಂದನೆ:

    ಸದ್ಯ ಮಹಾನಗರದಲ್ಲಿ ಉಪನಗರ ರೈಲು ಯೋಜನೆಯ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ. ವಿವಿಧ ಮಾರ್ಗಗಳಲ್ಲಿ ಕಾಮಗಾರಿ ಉಸ್ತುವಾರಿ ವಹಿಸುವ ಜತೆಗೆ ಕೇಂದ್ರ ಸರ್ಕಾರದಿಂದ ಬರುವ ಸಲಹೆ-ಸೂಚನೆಗಳನ್ನು ಆಧರಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾದ ಹೊಣೆ ಎಂಡಿ ಮೇಲಿದೆ. ಜತೆಗೆ ಯೋಜನೆಗೆ ದೊಡ್ಡ ಮೊತ್ತದ ಹಣಕಾಸು ಹೊಂದಿಸುವ ಜವಾಬ್ದಾರಿಯೂ ಎಂಡಿ ಹೆಗಲೇರಿದೆ. ಹೀಗಾಗಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಕಾಯಂ ಅಧಿಕಾರಿ ಒಬ್ಬರನ್ನು ನೇಮಿಸುವಂತೆ ಕೆಲ ನಾಗರಿಕ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

    ಇತ್ತೀಚಿಗೆ ಸಂಸದ ತೇಜಸ್ವಿ ಸೂರ್ಯ ದಿಲ್ಲಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಉಪನಗರ ರೈಲು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕಾಯಂ ಆಗಿ ಎಂಡಿ ಹುದ್ದೆಗೆ ನಿಯೋಜಿಸುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ರಾಜ್ಯಕ್ಕೆ ಸೂಕ್ತ ನಿರ್ದೇಶನ ನೀಡುವುದಾಗಿ ಅಭಯ ನೀಡಿದ್ದರು. ಆದರೆ, ಕಾಯಂ ಎಂಡಿ ನಿಯೋಜನೆ ಆಗದ ಕಾರಣ ಕೆ -ರೈಡ್ ಕಾಮಗಾರಿ ನಿಧಾನದ ಹಾದಿ ಹಿಡಿದಿದೆ ಎಂಬ ಆಕ್ಷೇಪ ಸಾರ್ವಜನಿಕರಿಂದ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts