More

    ನೀರು ಹರಿಯಲು ಅಡ್ಡಿಪಡಿಸಬೇಡಿ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಅಂತರ್ಜಲ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಕೆಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಎಲ್ಲ 126 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಸಂಕಲ್ಪ ಮಾಡಿದ್ದು, ಜಿಲ್ಲೆಯ ರೈತರು ಯೋಜನೆ ಫಲಪ್ರದಗೊಳಿಸಲು ಸಹಕಾರ ನೀಡಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.
    ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಯಲು ಕೆಲವರು ಅಡ್ಡಿಪಡಿಸುತ್ತಿದ್ದಾರೆಂಬ ಜಿಲ್ಲೆಯ ಜನಪ್ರತಿನಿಧಿಗಳ ದೂರಿನ ಮೇರೆಗೆ ಬುಧವಾರ ಪರಿಶೀಲನೆಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್. ಅಗ್ರಹಾರ ಕೆರೆ ಅತಿ ದೊಡ್ಡಕೆರೆಯಾಗಿದ್ದು, ಈ ಕೆರೆ ಮೂಲಕ ಬೇರೆ ಕೆರೆಗಳಿಗೆ ನೀರು ಹಾದುಹೋಗಲು ಅಡ್ಡಿಪಡಿಸಿದರೆ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
    ಮಳೆ ನೀರು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಆದರೆ ಚೆಕ್ ಡ್ಯಾಂಗಳಲ್ಲಿ ಸಂಗ್ರಹಣೆಯಾಗುವ ನೀರು ಮುಂದೆ ಸಾಗಬಾರದೆಂಬ ಮನೋಭಾವನೆ ಸರಿಯಲ್ಲ, ಕೆಸಿ ವ್ಯಾಲಿ ನೀರನ್ನು ಎಲ್ಲ ಕೆರೆಗಳಿಗೆ ತುಂಬಿಸಿದ ನಂತರ ರೈತರು ಬೇಕಾದರೆ ಜಮೀನು ವ್ಯಾಪ್ತಿಯಲ್ಲಿ ನೀರು ಸಂಗ್ರಹಿಸಿಕೊಳ್ಳಲು ಅಭ್ಯಂತರವಿಲ್ಲ. ಆದರೆ ಕೆರೆ ತುಂಬುವ ಮುನ್ನವೇ ಅಕ್ರಮವಾಗಿ ನೀರು ಬಳಸಿದರೆ ನೋಡಿಕೊಂಡಿರಲು ಸಾಧ್ಯವಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿದಾಗ ಮಾತ್ರ ಎಲ್ಲ ತಾಲೂಕಿಗೂ ನ್ಯಾಯ ದೊರೆತಂತಾಗುತ್ತದೆ ಎಂದರು.
    ಸಣ್ಣ ನೀರಾವರಿ ಇಲಾಖೆಯಿಂದ ಚೆಕ್‌ಡ್ಯಾಂ ನಿರ್ಮಿಸಲು ಅನುಮೋದನೆ ನೀಡಿಲ್ಲ. ಈ ಹಿಂದೆ ನಿರ್ಮಿಸಿರುವ ಚೆಕ್‌ಡ್ಯಾಂಗಳು ಅವೈಜ್ಞಾನಿಕ ಎಂಬ ಪದ ಬಳಸುವುದಿಲ್ಲ ಅಥವಾ ಹೀಗೆ ಹೇಳಲು ನಾನು ದಡ್ಡನೂ ಅಲ್ಲ ಎಂದರು.
    ಕೆಸಿ ವ್ಯಾಲಿ ಮೂಲಕ ಜಿಲ್ಲೆಯ ಪಾಲಿನ 400 ಎಂಎಲ್‌ಡಿ ನೀರು ಬಳಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ 300 ಎಂಎಲ್‌ಡಿ ನೀರು ಅವಶ್ಯಕತೆಯಿದ್ದು, 260ರಿಂದ 280 ಎಂಎಲ್‌ಡಿ ನೀರು ಮಾತ್ರ ಸರಬರಾಜಾಗುತ್ತಿರುವುದರಿಂದ ಕೆರೆಗಳಿಗೆ ನೀರು ತುಂಬಿಸಲು ವಿಳಂಬವಾಗುತ್ತಿದೆ. ಯುಜಿಡಿ, ಕಾಲುವೆಗಳಲ್ಲಿ ನೀರು ಸೋರಿಕೆ ತಡೆದು ಯೋಜನೆಯಡಿ ಉದ್ದೇಶಿಸಿರುವ ಪೂರ್ಣ ಪ್ರಮಾಣದ ನೀರನ್ನು ಕೆರೆಗಳಿಗೆ ಹರಿಸಲು ಒತ್ತು ನೀಡಲಾಗುವುದು ಎಂದರು.
    ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಆರ್. ಚೌಡರೆಡ್ಡಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಡಿಸಿ ಸಿ. ಸತ್ಯಭಾಮ, ಜಿಪಂ ಸಿಇಒ ಎಚ್. ದರ್ಶನ್, ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸುರೇಶ್‌ಬಾಬು, ಎಇಇ ಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್, ನಗರಸಭೆ ಸದಸ್ಯ ಎಸ್.ಆರ್. ಮುರಳಿಗೌಡ, ಎಪಿಎಂಸಿ ಅಧ್ಯಕ್ಷ ಡಿ.ಎಲ್. ನಾಗರಾಜ್ ಹಾಜರಿದ್ದರು.

    ಬೆಂಗಳೂರು ಸುತ್ತಮುತ್ತ ನೀರು: ಬೆಂಗಳೂರಿನಲ್ಲಿ ಬಳಕೆಯಾಗಿ ಹರಿಯುವ ನೀರಿನ ಪ್ರಮಾಣ 18 ಟಿಎಂಸಿ. ಇದರಲ್ಲಿ 4 ಟಿಎಂಸಿ ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಉಳಿದ ನೀರು ವ್ಯರ್ಥವಾಗುತ್ತಿದೆ. ಎಸ್‌ಟಿಪಿಗಳ ನಿರ್ಮಾಣದ ಮೂಲಕ ತ್ಯಾಜ್ಯ ನೀರು ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸುವ ಜತೆಗೆ ದೊಡ್ಡಬಳ್ಳಾಪುರ, ಮಾಗಡಿ, ನೆಲಮಂಗಲ ಇನ್ನಿತರ ಕಡೆಗೂ ಹರಿಸಲು ಉದ್ದೇಶಿಸಿದ್ದು, ಯೋಜನೆ ರೂಪಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

    ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಾಜ್: ಕೆರೆ ಒತ್ತುವರಿ ತೆರವಿಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಒತ್ತುವರಿ ಮಾಡಿಕೊಂಡವರಿಗೆ ಪಹಣಿ ನೀಡಲಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ರೈತ ಸಂಘದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿ ಅವರಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ‘ನಾನು ಬಹಳ ಕೆಟ್ಟ ಮನುಷ್ಯ, ಬಾಯಿ ಮುಚ್ಚಿಕೊಂಡು ಇಲ್ಲಿಂದ ಹೋಗು’ ಎಂದು ಸಿಟ್ಟಿನಿಂದ ಅಬ್ಬರಿಸಿದ ಪ್ರಸಂಗ ಬುಧವಾರ ತಾಲೂಕಿನ ಎಸ್.ಅಗ್ರಹಾರ ಕೆರೆ ಬಳಿ ನಡೆಯಿತು.
    ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಯುತ್ತಿರುವುದನ್ನು ವೀಕ್ಷಿಸಿಲು ಬಂದಿದ್ದ ಸಚಿವರಿಗೆ ಎಸ್.ಅಗ್ರಹಾರ ಕೆರೆಯ ಒಂದು ಭಾಗವನ್ನು ಒಡೆದು ಹಾಕಿದ್ದು ಮಳೆ ಬಂದಲ್ಲಿ ಕೆರೆಗೆ ಅಪಾಯ ಉಂಟಾಗುವುದರಿಂದ ಕೂಡಲೇ ದುರಸ್ತಿ ಮಾಡಿಸಬೇಕು ಎಂದು ನಳಿನಿ ಒತ್ತಾಯಿಸಿದರು. ಕೆರೆ ವೀಕ್ಷಣೆ ನಂತರ ಸಮಸ್ಯೆ ಆಲಿಸುವೆ ಎಂದು ಸಚಿವರು ಮುಂದೆ ಸಾಗುತ್ತಿದ್ದಂತೆ ಸಚಿವರ ಎದುರಿಗೇ ಬಂದು ನಿಂತ ನಳಿನಿ, ನೂರಾರು ಎಕರೆ ಒತ್ತುವರಿಯಾಗಿದೆ. ಭೂಗಳ್ಳರಿಗೆ ಪಹಣಿ ಮಾಡಿಕೊಡಲಾಗಿದ್ದು ಇದಕ್ಕೆ ಹೊಣೆ ಯಾರು ಎಂದು ಗರ್ಜಿಸಿದರು. ಆಗ ಸಚಿವರು ಈ ಪ್ರತಿಕ್ರಿಯೆ ನೀಡಿ ಮುಂದೆ ಸಾಗಿದರು.
    ನಳಿನಿ ಮತ್ತು ಮತ್ತೊಬ್ಬ ಕಾರ್ಯಕರ್ತೆ ಉಮಾ ಅವರನ್ನು ಪೊಲೀಸರು ಕೆರೆ ದಡದಿಂದ ಎಳೆದೊಯ್ದರು. ರೈತರ ಸಮಸ್ಯೆ ಹೇಳಿಕೊಳ್ಳಲು ಹಾಗೂ ಮನವಿ ನೀಡಲು ಅವಕಾಶ ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಮನವಿ ಹರಿದು ಹಾಕಿ ಮಹಿಳೆಯರು ನಿರ್ಗಮಿಸಿದರು.

    ಕೆಸಿ ವ್ಯಾಲಿ ನೀರು ಕೆರೆಗಳಿಗೆ ಸಮರ್ಪಕವಾಗಿ ಹರಿಯುತ್ತಿಲ್ಲ. ನೀರನ್ನು ಅಕ್ರಮವಾಗಿ ಬಳಸಲಾಗುತ್ತಿದೆ. ಚೆಕ್‌ಡ್ಯಾಂ ಎತ್ತರ ಕತ್ತರಿಸಿ ಗೇಟ್ ಅಳವಡಿಸಿದರೆ ಪ್ರಯೋಜನವಾಗುತ್ತದೆ ಎಂದು ಜಿಲ್ಲೆಯ ಎಲ್ಲ ಶಾಸಕರು ಒತ್ತಾಯಿಸಿದ ಮೇರೆಗೆ ಚೆಕ್‌ಡ್ಯಾಂಗಳ ಎತ್ತರ ಕತ್ತರಿಸಲಾಗಿದೆಯೇ ಹೊರತು ಬೇರಾವುದೇ ದುರುದ್ದೇಶವಿಲ್ಲ.
    ಜೆ.ಸಿ.ಮಾಧುಸ್ವಾಮಿ, ಸಣ್ಣ ನೀರಾವರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts