More

    ಶರಾವತಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಬದ್ಧ; ಈಶ್ವರ ಖಂಡ್ರೆ ಭರವಸೆ

    ಬೆಂಗಳೂರು: ಲಿಂಗನಮಕ್ಕಿ ಜಲಾಶಯಕ್ಕಾಗಿ ತಮ್ಮ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

    ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಸಂರಕ್ಷಣೆ, ಅರಣ್ಯ ಹಕ್ಕು ಕಾಯಿದೆಯಡಿ ಅರಣ್ಯವಾಸಿಗಳ ಹಕ್ಕು ರಕ್ಷಿಸುವ ಹಾಗೂ ಹುಲಿ ಉಗುರು ಸೇರಿದಂತೆ ವನ್ಯ ಜೀವಿಗಳ ಅಂಗಾಂಗದ ಫಲಕ, ಆಭರಣಗಳೇ ಮೊದಲಾದ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಒಂದು ಬಾರಿ ಅವಕಾಶ ನೀಡುವ ನಿಟ್ಟಿನಲ್ಲಿ ಕಾನೂನಾತ್ಮಕ ವಿಷಯಗಳ ಕುರಿತಂತೆ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಮತ್ತು ಕಾನೂನು ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಶರಾವತಿ ಸಂತ್ರಸ್ಥರು ತಾವು ಉಳಿಮೆ ಮಾಡುತ್ತಿರುವ ಜಾಗದ ಭೂ ಹಕ್ಕು ನೀಡುವಂತೆ 6 ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
    1958ರಿಂದ 1969ರ ನಡುವೆ ಲಿಂಗನಮಕ್ಕಿ ಜಲಾಶಯ ಮತ್ತು ಜಲ ವಿದ್ಯುತ್ ಯೋಜನೆಯ ನಿರ್ಮಾಣದ ವೇಳೆ ರೈತರು ಗಣನೀಯ ಪ್ರಮಾಣದಲ್ಲಿ ತಮ್ಮ ಭೂಮಿ ಕಳೆದುಕೊಂಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಸುಮಾರು 9136 ಎಕರೆ ಅರಣ್ಯ ಭೂಮಿಯನ್ನು ನೀಡಲಾಗಿತ್ತು. ಇದನ್ನು ಅಂದಿನ ಮೈಸೂರು ಅರಣ್ಯ ನಿಯಂತ್ರಣ -1900 ಸೆಕ್ಷನ್ 30ರಡಿ ಡಿ ರಿಸರ್ವ್ ಮಾಡಲಾಗಿತ್ತು. ಆದರೆ ಅದು ಅಧಿಸೂಚನೆ ಆಗಿರಲಿಲ್ಲ. ಬಿಡುಗಡೆಯಾದ ಈ ಜಾಗದಲ್ಲಿ ಸಂತ್ರಸ್ತ ಕುಟುಂಬಗಳು ವಾಸಿಸುತ್ತಿದ್ದು ಅವರಿಗೆ ಸರ್ಕಾರದ ಸೌಲಭ್ಯ ಲಭಿಸುತ್ತಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ.

    ಇದನ್ನು ಮನಗಂಡು ಸರ್ಕಾರ 2015-2017ರ ನಡುವೆ ಅರಣ್ಯ ಭೂಮಿಯನ್ನು ಡಿ ರಿಸರ್ವ್ ಮಾಡಿತು. ಆದರೆ ಈ ಆದೇಶಕ್ಕೆ ಮುನ್ನ ಭಾರತ ಸರ್ಕಾರದಿಂದ ಪೂರ್ವಾನುಮತಿ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯದ ಆದೇಶದನ್ವಯ ಸರ್ಕಾರ ತನ್ನ ಆದೇಶ ಹಿಂಪಡೆಯಿತು.ಮಾ.23, 2023ರಂದು 9129 ಎಕರೆ ಭೂಮಿ ಡಿ ರಿಸರ್ವ್ ಮಾಡವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

    ಈ ಎಲ್ಲದರ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಉನ್ನತಾಧಿಕಾರಿಗಳು, ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಲಾಗಿದ್ದು, ಎಲ್ಲ ಸಂತ್ರಸ್ತರಿಗೂ ನ್ಯಾಯ ದೊರಕಬಹುದು ಎಂಬ ಭರವಸೆಯನ್ನು ಸಚಿವ ಖಂಡ್ರೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts