More

    ಐಪಿಎಲ್ ಹರಾಜುಗಾರ ಕುಸಿದುಬಿದ್ದಾಗ ಚಾರು ಶರ್ಮಗೆ ಅವಕಾಶ ಒಲಿದುಬಂದಿದ್ದು ಹೇಗೆ?

    ಬೆಂಗಳೂರು: ಕಳೆದ ಶನಿವಾರ ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಹರಾಜುಗಾರ ಹ್ಯೂ ಎಡ್‌ಮೀಡ್ಸ್, ಲೋ ಬಿಪಿಯಿಂದಾಗಿ ದಿಢೀರ್ ಕುಸಿದುಬಿದ್ದಿದ್ದರು. ಆ ಕ್ಷಣ ಒಮ್ಮೆಗೆ ಎಲ್ಲರೂ ದಂಗಾಗಿದ್ದರು ಮತ್ತು ಹರಾಜು ಪ್ರಕ್ರಿಯೆಯನ್ನು ಇನ್ನು ಯಾರು ಮುಂದುವರಿಸುವುದು ಎಂದು ಬಿಸಿಸಿಐ ಅಧಿಕಾರಿಗಳು ತಲೆ ಮೇಲೆ ಕೈಯಿಟ್ಟಿದ್ದರು. ಆಗ ಆಪದ್ಬಾಂಧವರಾಗಿ ಬಂದವರೇ ಚಾರು ಶರ್ಮ. ಈ ಸಲದ ಹರಾಜು ಪ್ರಕ್ರಿಯೆಯ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದಿದ್ದರೂ, ಕೊನೇಕ್ಷಣದಲ್ಲಿ ಬಂದು ಯಶಸ್ವಿಯಾಗಿಯೇ 2 ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿಕೊಟ್ಟು ಬಿಸಿಸಿಐ ಮಾನ ಕಾಪಾಡಿದ್ದರು.

    ಎಡ್‌ಮೀಡ್ಸ್ ಕುಸಿದುಬಿದ್ದಾಗ ಬೆಂಗಳೂರಿನ ಮನೆಯಲ್ಲಿ ಕುಟುಂಬದೊಂದಿಗೆ ಆರಾಮವಾಗಿ ಊಟ ಮಾಡುತ್ತಿದ್ದ ಚಾರು ಶರ್ಮ, ನಂತರ ಗಡಿಬಿಡಿಯಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ಹೋಟೆಲ್‌ಗೆ ಆಗಮಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ಎಡ್‌ಮೀಡ್ಸ್ ಕುಸಿದುಬಿದ್ದಾಗ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರಿಗೆ ತಕ್ಷಣಕ್ಕೆ ನೆನಪಾದವರೇ ಚಾರು ಶರ್ಮ. ವೀಕ್ಷಕವಿವರಣೆಕಾರ ಮತ್ತು ಕ್ರೀಡಾಕೂಟಗಳ-ಕ್ರೀಡಾ ತಂಡಗಳ ನಿರ್ವಹಣೆಕಾರರಾಗಿರುವ ಚಾರು ಶರ್ಮ, ಕಳೆದ ಕೆಲ ವರ್ಷಗಳಿಂದ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ. ಹೀಗಾಗಿ ತಕ್ಷಣಕ್ಕೆ ಎಡ್‌ಮೀಡ್ಸ್ ಸ್ಥಾನ ತುಂಬಲು ಚಾರು ಸೂಕ್ತ ವ್ಯಕ್ತಿಯಾಗಿದ್ದರು.

    ಬಿಸಿಸಿಐನ ಅದೃಷ್ಟಕ್ಕೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ಹೋಟೆಲ್‌ನಿಂದ ಹತ್ತೇ ನಿಮಿಷಗಳಷ್ಟು ದೂರದಲ್ಲಿ ಅವರ ಮನೆ ಇತ್ತು. ಹೀಗಾಗಿ ಬ್ರಿಜೇಶ್ ಕರೆ ಬಂದ ಬೆನ್ನಲ್ಲೇ ಊಟ ಮುಗಿಸಿ ಗಡಿಬಿಡಿಯಲ್ಲಿಯೇ ಸೂಟು ಧರಿಸಿ ಚಾರು ಶರ್ಮ 10 ನಿಮಿಷಗಳಲ್ಲೇ ಹೋಟೆಲ್ ತಲುಪಿದ್ದರು ಮತ್ತು 20 ನಿಮಿಷಗಳಲ್ಲಿ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ್ದರು.

    ಈ ಸಲದ ಹರಾಜು ಪ್ರಕ್ರಿಯೆಯ ಬಗ್ಗೆ ಚಾರು ತಲೆಕೆಡಿಸಿಕೊಂಡಿರಲಿಲ್ಲ. ಮನೆಯಲ್ಲಿದ್ದರೂ ಹರಾಜು ಪ್ರಕ್ರಿಯೆಯನ್ನು ಟಿವಿಯಲ್ಲೂ ವೀಕ್ಷಿಸುತ್ತಿರಲಿಲ್ಲ. ಹೀಗಾಗಿ ಬ್ರಿಜೇಶ್ ಕರೆ ಬರುವವರೆಗೆ ಅವರಿಗೆ, ಬ್ರಿಟನ್‌ನ ಖ್ಯಾತ ಹರಾಜುಗಾರ ಕುಸಿದುಬಿದ್ದ ಬಗ್ಗೆ ಗೊತ್ತೇ ಇರಲಿಲ್ಲ. ಎರಡನೇ ದಿನವೂ ಹೆಚ್ಚಿನ ಭಾಗ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಚಾರು, ಕೊನೇ ಭಾಗವನ್ನು ಎಡ್‌ಮೀಡ್ಸ್‌ಗೆ ಬಿಟ್ಟುಕೊಟ್ಟರು. ಚೇತರಿಕೆ ಕಂಡು ಎಡ್‌ಮೀಡ್ಸ್ ಹರಾಜಿನ ಹಾಲ್‌ಗೆ ಆಗಮಿಸಿದಾಗ ಅಲ್ಲಿದ್ದ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ಹೃದಯಸ್ಪರ್ಶಿ ಕ್ಷಣವಾಗಿತ್ತು.

    ಬಯೋಬಬಲ್ ಉಲ್ಲಂಘಿಸಿ ಪ್ರವೇಶ!
    ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವವರನ್ನು ಬಿಸಿಸಿಐ ಬಯೋಬಬಲ್‌ನಲ್ಲಿ ಇರಿಸಿತ್ತು. ಅಲ್ಲಿದ್ದ ಎಲ್ಲರೂ ಒಂದು ವಾರದಿಂದ ಕ್ವಾರಂಟೈನ್‌ನಲ್ಲಿದ್ದರು. ಅಲ್ಲಿಗೆ ಚಾರು ಶರ್ಮ ಹೊರಗಿನವರಾಗಿದ್ದರು. ಆದರೆ ಆ ತುರ್ತು ಪರಿಸ್ಥಿತಿಯಲ್ಲಿ ಬಿಸಿಸಿಐ ತನ್ನದೇ ನಿಯಮ ಉಲ್ಲಂಘನೆ ಮಾಡಲೇಬೇಕಾಗಿತ್ತು ಮತ್ತು ಬಯೋಬಬಲ್‌ಗೆ ಚಾರು ಶರ್ಮರನ್ನು ಸೇರಿಸಿಕೊಂಡಿತ್ತು. ಕಳೆದ ವಾರದ ಪುಣೆ ಓಪನ್ ಟೆನಿಸ್ ಟೂರ್ನಿಯ ವಿಶ್ಲೇಷಣೆ ಮುಗಿಸಿ ಮರಳಿದ್ದ ಚಾರು, ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಚಾರು ಶರ್ಮ ಹೋಟೆಲ್‌ಗೆ ಬಂದಾಗ ಅವರ ಬಳಿ ಪ್ರವೇಶ ಪತ್ರವೂ ಇರಲಿಲ್ಲ. ಆದರೂ ವಿಶೇಷ ಅನುಮತಿ ಮೇರೆಗೆ ಹೋಟೆಲ್ ಪ್ರವೇಶಿಸಿದ ಅವರು, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾದರೂ, ಅದರ ವರದಿ ಬರುವ ಮೊದಲೇ ಬಯೋಬಬಲ್ ಪ್ರವೇಶಿಸಿದ್ದರು. ಯಾಕೆಂದರೆ ಬಿಸಿಸಿಐ ಬಳಿ ಆಗ ಹೆಚ್ಚು ಸಮಯ ಇರಲಿಲ್ಲ. ಬೂಸ್ಟರ್ ಡೋಸ್ ಕೂಡ ತೆಗೆದುಕೊಂಡಿರುವ ಚಾರುಗೆ ಪ್ರವೇಶ ಕಲ್ಪಿಸಿ ಬಿಸಿಸಿಐ ರಿಸ್ಕ್ ತೆಗೆದುಕೊಳ್ಳಲೇಬೇಕಾದ ಸಮಯ ಅದಾಗಿತ್ತು.

    ಸುರೇಶ್ ರೈನಾರನ್ನು ಕೈಬಿಟ್ಟಿದ್ದಕ್ಕೆ ಕಾರಣ ವಿವರಿಸಿದ ಚೆನ್ನೈ ಸೂಪರ್‌ಕಿಂಗ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts