More

    ಸಿನಿಮಾ ವಿಮರ್ಶೆ: ಜೋಸೆಫ್ ಆತ್ಮ; ರವಿಚಂದ್ರನ್​ ಪರಮಾತ್ಮ

    | ಚೇತನ್​ ನಾಡಿಗೇರ್​

    ಚಿತ್ರ: ರವಿ ಬೋಪಣ್ಣ
    ನಿರ್ದೇಶನ: ರವಿಚಂದ್ರನ್​
    ನಿರ್ಮಾಣ: ರವಿಚಂದ್ರನ್​
    ತಾರಾಗಣ: ರವಿಚಂದ್ರನ್​, ಸುದೀಪ್​, ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಮೋಹನ್​, ಜೈಜಗದೀಶ್​ ಮುಂತಾದವರು
    ಸ್ಟಾರ್​: 3

    “ನೆನಪುಗಳು ನನ್ನ ಬೇಟೆ ಆಡುತ್ತೆ. ಅದನ್ನು ಸಹಿಸಿಕೊಳ್ಳೋ ಶಕ್ತಿ ನನಗಿಲ್ಲ …’
    ಅದೇ ಕಾರಣಕ್ಕೆ ರವಿ ಬೋಪಣ್ಣ ಕುಡಿಯುತ್ತಿರುತ್ತಾನೆ. ಅವನಿಗೆ ತನ್ನ ಹಳೆಯದನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟ ಇಲ್ಲ. ಆದರೆ, ಆ ನೆನಪುಗಳು ಬಿಡಬೇಕಲ್ಲ. ಆ ನೆನಪುಗಳು, ಅವನು ಮಾಡಿದ ಕರ್ಮ … ಅವನದೇ ರೂಪದಲ್ಲಿ ಬಂದು ನೆನಪಿಸುತ್ತಿರುತ್ತದೆ. ಹಳೆಯದನ್ನೆಲ್ಲ ಚುಚ್ಚಿಚುಚ್ಚಿ ಕೆದಕುತ್ತಿರುತ್ತದೆ. ಹಾಗಾದರೆ, ಅವನಿಗೆ ನೆನಪುಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವಾ?
    “ರವಿ ಬೋಪಣ್ಣ’, ಮಲಯಾಳಂನ “ಜೋಸೆಫ್ ‘ ಚಿತ್ರದ ರೀಮೇಕ್​. ಹಾಗಂತ ಫ್ರೇಮ್​ ಟು ಫ್ರೇಮ್​ ಕಾಪಿ ಅಲ್ಲ. ಆ ಚಿತ್ರದ ಆತ್ಮವನ್ನು ತೆಗೆದುಕೊಂಡು, ಅದಕ್ಕೆ ತಮ್ಮದೇ ರೂಪ ಕೊಟ್ಟಿದ್ದಾರೆ ರವಿಚಂದ್ರನ್​. ಅದಂದು ಪಕ್ಕ ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರ. ಆದರೆ, ರವಿಚಂದ್ರನ್​ ಆ ಕಥೆಗೆ ಹಾಡು, ನೃತ್ಯ, ಗ್ಲಾಮರ್​ ಎಲ್ಲವನ್ನೂ ಸೇರಿಸಿ, ತಮ್ಮದೇ ಶೈಲಿಯಲ್ಲಿ ಮಾಡಿದ್ದಾರೆ. ಹಾಗಾಗಿ, “ಜೋಸೆಫ್ ‘ ಚಿತ್ರವನ್ನು ನೋಡಿದವರಿಗೆ, ಈ ಚಿತ್ರ ನಿರಾಸೆಯಾಗಬಹುದು. ನೋಡದಿರುವವರಿಗೆ ಖುಷಿಕೊಡಬಹುದು.

    ರವಿಚಂದ್ರನ್​ ಎಷ್ಟೇ ಬದಲಾಗಿದ್ದರೂ, ತಮ್ಮ ಶೈಲಿಯನ್ನು ಬದಲಾಯಿಸಿಲ್ಲ. ಅದಕ್ಕೆ ಚಿತ್ರದುದ್ದಕ್ಕೂ ಹಲವು ಕುರುಹುಗಳು ಸಿಗುತ್ತದೆ. ಇಲ್ಲಿ ರವಿಚಂದ್ರನ್​ ತಮ್ಮದೇ ಚಿತ್ರದ ಹಲವು ಜನಪ್ರಿಯ ಟ್ಯೂನ್​ಗಳನ್ನು ಹಿನ್ನೆಲೆಧ್ವನಿಯಾಗಿ ಬಳಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಹಾಡುಗಳನ್ನು ಬಳಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಬಳಸುವ ಸಣ್ಣಸುತ್ತಿಗೆಯಿಂದ ವೈನ್​ ಗ್ಲಾಸ್​ಗಳನ್ನು ಪೀಸ್​ಪೀಸ್​ ಮಾಡಿದ್ದಾರೆ. ಇಬ್ಬರು ನಾಯಕಿಯರನ್ನು ಅತ್ಯಂತ ಗ್ಲಾಮರಸ್​ ಆಗಿ ತೋರಿಸಿದ್ದಾರೆ. ಉಯ್ಯಾಲೆ, ಗಿಟಾರ್​, ಗೆೆಜ್ಜೆ, ಹಣ್ಣ, ಬೆಂಕಿ, ಅಕ್ಷರಗಳನ್ನು ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ.

    ಈ ಅಂಶಗಳು ಚಿತ್ರವನ್ನು ಅದ್ಧೂರಿಯಾಗಿಸಬಹುದು, ಪ್ರತಿ ಫ್ರೇಮನ್ನೂ ಸುಂದರ ಕಾಣಿಸಬಹುದು. ಆದರೆ, ಈ ಅಂಶಗಳೇ ಚಿತ್ರದ ಓಟಕ್ಕೆ ಬ್ರೇಕ್​ ಹಾಕುವುದು ಎಂದರೆ ತಪ್ಪಲ್ಲ. ಇವೆಲ್ಲ ಮಾಡುವ ಭರದಲ್ಲಿ ಮೂಲಕ ಕಥೆಯೇ ಮಂಕಾಗಿ ಹೋಗುತ್ತದೆ. “ಜೋಸೆಫ್ ‘ ಚಿತ್ರ ಇಷ್ಟವಾಗುವುದು, ಜನರ ಮನಸ್ಸಿಗೆ ಹತ್ತಿರವಾಗುವುದು ಅದರ ಆಶಯದಿಂದ. ಆದರೆ, ಇಲ್ಲಿ ಬೇರೆಲ್ಲದರ ಮಧ್ಯೆ ಆ ಆಶಯವೇ ಹಿಂದೆ ಸರಿದಂತೆ ಕಾಣುತ್ತದೆ. ಗಂಭೀರವಾದ ಚಿತ್ರವೊಂದು ಈ ಅಂಶಗಳಿಂದ ದುರ್ಬಲಗೊಳ್ಳುತ್ತಾ ಹೋಗುತ್ತದೆ.

    ರವಿಚಂದ್ರನ್​ ಇಲ್ಲಿ ಮೂರು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಹೆಚ್ಚು ಗಮನ ಸೆಳೆಯುವುದು ಒಬ್ಬನಲ್ಲಿರುವ ಇನ್ನೊಬ್ಬನಾಗಿ. ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ಇಬ್ಬರೂ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಹಲವು ಪಾತ್ರಗಳಿದ್ದರೂ ಅವು ಗಮನ ಸೆಳೆಯುವುದಿಲ್ಲ. ನಟ ಮೋಹನ್​ಗೆ ಹೆಚ್ಚು ಕೆಲಸವಿಲ್ಲದಿದ್ದರೂ, ಸಂಭಾಷಣೆಕಾರ ಮೋಹನ್​ಗೆ ವಿಪರೀತ ಕೆಲಸವಿದೆ. ಅವರ ಹಲವು ಸಂಭಾಷಣೆಗಳು ಕಾಡುತ್ತವೆ, ಯೋಚನೆಗೀಡು ಮಾಡುತ್ತವೆ.

    “ರವಿ ಬೋಪಣ್ಣ’ ಚಿತ್ರದ ಹೀರೋ ಎಂದರೆ ಅದು ಛಾಯಾಗ್ರಾಹಕ ಜಿ.ಎಸ್​.ವಿ. ಸೀತಾರಾಂ. ಅವರು ರವಿಚಂದ್ರನ್​ ಅವರ ಕಣ್ಣಾಗಿ ಇಡೀ ಚಿತ್ರವನ್ನು ಸುಂದರವಾಗಿ ಮತ್ತು ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೆಲವು ಕಡೆ ಚೆನ್ನಾಗಿ ಮೇಳೈಸಿದೆ. ಗಂಭೀರವಾದ ದೃಶ್ಯಗಳಿಗೆ ಹಿನ್ನೆಲೆಯಾಗಿ “ದಡಕ್​ ದಡಕ್​ ಈ ಹೃದಯ ಖಡಕ್​, ಈ ಹೃದಯ ಚುರುಕ್​…’ ಎಂಬ ಹಾಡು ಬರುವುದು ಕಿರಿಕಿರಿಯಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts