More

    ಬೇರೆ ತಾಲೂಕಿನ ರೈತರಿಂದ ಸಮಸ್ಯೆ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೂರ್ನಾಲ್ಕು ದಿನಗಳಿಂದ ಡಿಎಪಿ ಗೊಬ್ಬರದ ಅಭಾವ ಉಂಟಾಗಿರುವುದು ಮತ್ತು ಗೊಬ್ಬರಕ್ಕಾಗಿ ರೈತರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣಕ್ಕೆ ಭೇಟಿ ನೀಡಿದ ಕೃಷಿ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ಎಲ್ಲ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಲ್ಲಿನ ದಾಸ್ತಾನು ಪರಿಶೀಲಿಸಿದರು.
    ಇದೇ ವೇಳೆ ವ್ಯಾಪಾರಸ್ಥರ ಸಭೆ ನಡೆಸಿ ರ್ಚಚಿಸಿದ ಅವರು, ‘ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರತಿವರ್ಷ ಡಿಎಪಿ ಗೊಬ್ಬರ ಕೊರತೆಯಾಗಲು ಕಾರಣವೇನು’ ಎಂದು ಪ್ರಶ್ನಿಸಿದರು. ವ್ಯಾಪಾರಸ್ಥರಾದ ಅಶೋಕ ಬಟಗುರ್ಕಿ, ಶರಣಪ್ಪ ಗುಳಗಣ್ಣವರ ಮಾತನಾಡಿ, ನೆರೆಯ ಕುಂದಗೋಳ, ಶಿರಹಟ್ಟಿ, ಸವಣೂರ, ಶಿಗ್ಗಾಂವಿ, ಹಾವೇರಿ ತಾಲೂಕುಗಳ ರೈತರು ಅನೇಕ ವರ್ಷಗಳಿಂದ ಗೊಬ್ಬರ-ಬೀಜ ಮತ್ತಿತರ ವ್ಯವಹಾರಕ್ಕಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಾರೆ. ಬೇರೆ ತಾಲೂಕಿನ ರೈತರಿಗೆ ಗೊಬ್ಬರ ಕೊಡುವುದಿಲ್ಲ ಎಂದು ಹೇಳಿದರೂ ಕೇಳುವುದಿಲ್ಲ. ಹೀಗಾಗಿ, ತಾಲೂಕಿಗೆ ಬರುವ ಡಿಎಪಿ, ಯೂರಿಯಾ ಗೊಬ್ಬರ ಸಾಕಾಗುತ್ತಿಲ್ಲ. ಲಕ್ಷ್ಮೇಶ್ವರ-ಹುಬ್ಬಳ್ಳಿ ಮಾರ್ಗದ ರೇಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿಯಿಂದ ರಸ್ತೆ ಬಂದ್ ಆಗಿದ್ದರಿಂದ ಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ರೈತರಿಂದ ದಾಖಲೆ ಸಂಗ್ರಹಿಸಿ, ಹೆಬ್ಬೆಟ್ಟು ಗುರುತು ಪಡೆದು ಕಂಪ್ಯೂಟರ್​ನಲ್ಲಿ ದಾಖಲಿಸಿ ನಂತರ ಗೊಬ್ಬರ ವಿತರಿಸಲು ಹೆಚ್ಚು ಸಮಯವಾಗುತ್ತದೆ. ಸದ್ಯ ಲಾಕ್​ಡೌನ್ ಅವಧಿಯಲ್ಲಿ ಬೆಳಗ್ಗೆ 6ರಿಂದ 12ರವರೆಗೆ ವಿತರಣೆಗೆ ಅವಕಾಶ ನೀಡಿರುವುದು ಗದ್ದಲಕ್ಕೆ ಕಾರಣವಾಗಿದೆ. ಸಾರಿಗೆ ವೆಚ್ಚವೂ ಹೆಚ್ಚಾಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ತಾಲೂಕಿಗೆ ಹೆಚ್ಚುವರಿ ಡಿಎಪಿ, ಯೂರಿಯಾ ಪೂರೈಸಬೇಕು ಎಂದು ಆಗ್ರಹಿಸಿದರು.
    ಪ್ರತಿಕ್ರಿಯಿಸಿದ ಕೃಷಿ ಜಂಟಿ ನಿರ್ದೇಶಕರು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಆಯಾ ತಾಲೂಕಿನ ಕೃಷಿ, ಸಾಮಾನ್ಯ ಜನರ ಬೇಡಿಕೆಗೆ ತಕ್ಕಂತೆ ಸಬ್ಸಿಡಿ ಗೊಬ್ಬರ ಪೂರೈಕೆಯಾಗುತ್ತದೆ. ಎಲ್ಲ ರೈತರಿಗೆ ಅವರ ತಾಲೂಕಿನಲ್ಲಿಯೇ ಗೊಬ್ಬರ ಖರೀದಿಸುವಂತೆ ತಿಳಿಹೇಳಿ. ಗೊಬ್ಬರ ಪಡೆದ ರೈತರ ಮಾಹಿತಿ ದಾಖಲೀಕರಣದಿಂದ ಸಮಸ್ಯೆಯಾಗುತ್ತದೆ. ಡಿಎಪಿ ಅಭಾವಕ್ಕೆ ಕಾರಣಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಲಕ್ಷ್ಮೇಶ್ವರ ತಾಲೂಕಿನಲ್ಲಿ 2500 ಟನ್ ಡಿಎಪಿ, 800 ಟನ್ ಯೂರಿಯಾ ರಸಗೊಬ್ಬರ ಮಾರಾಟವಾಗಿದೆ. 2 ದಿನಗಳಲ್ಲಿ 100 ಟನ್ ಡಿಎಪಿ ಬರಲಿದೆ. ಹೆಚ್ಚಿನ ಬೇಡಿಕೆ ಕುರಿತು ವರದಿ ಸಲ್ಲಿಸಲಾಗುವುದು. ರೈತರಿಗೆ ಕಾಂಪ್ಲೆಕ್ಸ್ ಗೊಬ್ಬರ ಬಗ್ಗೆ ತಿಳಿಸಿ ಮನವೊಲಿಸಬೇಕು ಎಂದು ಹೇಳಿದರು.
    ಬಸವರಾಜ ಹೊಳಲಾಪುರ, ದೀಪು ಬಟಗುರ್ಕಿ, ಶಕ್ತಿ ಕತ್ತಿ, ಶಿವಕುಮಾರ ಮೆಕ್ಕಿ, ನಾಗರಾಜ ಬಟಗುರ್ಕಿ, ಬಸವರಾಜ ಕುಂಬಿ, ಮಂಜುನಾಥ ಸವಣೂರ, ಪಿಎಸ್​ಐ ಶಿವಯೋಗಿ ಲೋಹಾರ, ಕೃಷಿ ಸಹಾಯಕ ನಿರ್ದೇಶಕ ಮಹೇಶಬಾಬು ಎಚ್.ಎಂ., ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಎಂ.ಎಚ್. ಹಣಗಿ ಇತರರು ಇದ್ದರು.
    ಬೇಡಿಕೆಗೆ ತಕ್ಕಷ್ಟು ಪೂರೈಸಲು ಆಗ್ರಹ: ನೆರೆ ತಾಲೂಕಿನ ರೈತರು ಲಕ್ಷ್ಮೇಶ್ವರಕ್ಕೆ ಬರುವುದರಿಂದ ನಮ್ಮ ತಾಲೂಕಿನ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಅಂಗಡಿಗಳ ಮುಂದೆ ನಿತ್ಯ ನೂಕುನುಗ್ಗಲು ಉಂಟಾಗುತ್ತಿದೆ. ಸರ್ಕಾರದ ಆದೇಶದಂತೆ ನಮ್ಮ ತಾಲೂಕಿನ ರೈತರಿಗೆ ಮೊದಲ ಆದ್ಯತೆಯಲ್ಲಿ ಗೊಬ್ಬರ ಕೊಡಬೇಕು. ಇಲ್ಲವೇ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಸಬೇಕು. ನೆರೆಯ ಕುಂದಗೋಳ, ಸವಣೂರ ತಾಲೂಕಿಗೆ ಪೂರೈಕೆಯಾಗುವ ಗೊಬ್ಬರ ಎಲ್ಲಿ ಹೋಗುತ್ತದೆ? ಈ ಸಮಸ್ಯೆ ಬಗೆಹರಿಸಬೇಕು ಎಂದು ರೈತ ಮುಖಂಡರಾದ ಬಸವರಾಜ ಕಲ್ಲೂರ, ಕ್ಷೇತ್ರಪಾಲ ಬರಿಗಾಲಿ ಅವರು ಕೃಷಿ ಸಚಿವರಿಗೆ ಬರೆದ ಮನವಿ ಪತ್ರವನ್ನು ಕೃಷಿ ಜಂಟಿ ನಿರ್ದೇಶಕರಿಗೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts