More

    ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಯೇ ಬಿಜೆಪಿ ಸೇರ್ಪಡೆ; ಸುಂದರೇಶ್ ನಡೆ ಹಾಸ್ಯಾಸ್ಪದ: ಡಾ. ರಾಜನಂದಿನಿ ಕಾಗೋಡು ತಿರುಗೇಟು

    ಸಾಗರ: ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಯೇ ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ನನ್ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದಾಗಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಡಾ. ರಾಜನಂದಿನಿ ಕಾಗೋಡು ಹೇಳಿದರು.

    ಕಾಂಗ್ರೆಸ್‌ನಲ್ಲಿದ್ದು ಬಿಜೆಪಿ ಪರ ಕೆಲಸ ಮಾಡಿದ್ದರೆ ಉಚ್ಚಾಟನೆಗೆ ಒಂದು ಅರ್ಥ ಬರುತಿತ್ತು. ಆದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಎರಡು ತಿಂಗಳ ನಂತರ ಉಚ್ಚಾಟನೆ ಮಾಡಿದ್ದಾಗಿ ಹೇಳುತ್ತಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನಡೆ ಹಿಂದೆ ಯಾವ ಉದ್ದೇಶವಿದೆ ಎನ್ನುವುದನ್ನು ಅವರು ಬಹಿರಂಗವಾಗಿ ಸ್ಪಷ್ಟಪಡಿಸಬೇಕು. ಈಗಿನ ಕಾಂಗ್ರೆಸ್ ಶಾಸಕರ ದ್ವೇಷದ ರಾಜಕಾರಣಕ್ಕೆ ಇದು ಸಾಕ್ಷಿಯಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
    ನಮ್ಮ ಬೇಡಿಕೆಗೆ ವಿರುದ್ಧವಾಗಿದ್ದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ನಾವು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇವೆ. ಎರಡು ತಿಂಗಳ ನಂತರ ನಮ್ಮನ್ನು ಉಚ್ಚಾಟನೆ ಮಾಡಿರುವುದು ಕಾನೂನುಬಾಹಿರ. ಕಾಂಗ್ರೆಸ್‌ನಿಂದ ಇಂತಹ ನಡೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದರು.
    ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಪಕ್ಷಕ್ಕೆ ರಾಜೀನಾಮೆ ನೀಡಿದವರನ್ನು ಉಚ್ಚಾಟನೆ ಮಾಡಿದ್ದೇವೆ ಎಂದು ನೀಡಿರುವ ಹೇಳಿಕೆಯೆ ಆಶ್ಚರ್ಯಕರ ಸಂಗತಿ. ಗೋಪಾಲಕೃಷ್ಣ ಬೇಳೂರನ್ನು ಮೆಚ್ಚಿಸಲು ಜಿಲ್ಲಾಧ್ಯಕ್ಷ ಸುಂದರೇಶ್ ಈ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗುತ್ತಿದೆ. ನಾವು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇವೆ ಎಂದು ಬೇಳೂರು ಆತುರದಲ್ಲಿ ಉಚ್ಚಾಟನೆಗೆ ಒತ್ತಡ ಹೇರಿದ್ದು ಕಂಡು ಬರುತ್ತಿದೆ. ಈಗಾಗಲೇ ಕ್ಷೇತ್ರವ್ಯಾಪ್ತಿಯಲ್ಲಿ ದುರಾಡಳಿತ, ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಮುಂದಿನ ದಿನಗಳಲ್ಲಿ ಅಂಕಿ-ಅಂಶದ ಸಹಿತ ಬಹಿರಂಗಪಡಿಸುತ್ತೇನೆ ಎಂದರು.
    ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ನಾವೆಲ್ಲಾ ಮೂಲ ಕಾಂಗ್ರೆಸ್ಸಿಗರು. ಗೋಪಾಲಕೃಷ್ಣ ಬೇಳೂರು ಬಿಜೆಪಿ, ಜೆಡಿಎಸ್ ಅಲೆದು ಅಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್‌ಗೆ ಬಂದವರು. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೇನೆ. ಹಿಂದೆ ಬೇಳೂರು ಶಾಸಕರಾಗಿದ್ದ ಸಂದರ್ಭದಲ್ಲೇ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಹುಟ್ಟಿದ್ದು. ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್‌ಗೆ ನೀತಿ, ನಿಯಮ ಇದ್ದರೆ ಮೊದಲು ಜಿಲ್ಲಾಧ್ಯಕ್ಷ ಸುಂದರೇಶ್ ಅವರನ್ನು ಉಚ್ಚಾಟನೆ ಮಾಡಲಿ ಎಂದು ಆಗ್ರಹಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಇಂತಹ ದ್ವೇಷದ ರಾಜಕಾರಣವನ್ನು ಮುಂದುವರಿಸುವುದನ್ನು ನಿಲ್ಲಿಸಲಿ. ಸಮನ್ವಯತೆ ಸಾಧಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts