More

    ಕನ್ನಡದ ಉಳಿವಿಗಾಗಿ ಕಸಾಪ ಜತೆ ಕೈಜೋಡಿಸಿ

    ಸವಣೂರ: ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ಭುವನೇಶ್ವರಿ ತಾಯಿಯನ್ನು ನಿತ್ಯ ನೆನೆಯುವುದು ಅವಶ್ಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ ಹೇಳಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಸಭಾಭವನದಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಪ್ರತಿಯೊಬ್ಬರು ಸಹಕಾರ ನೀಡುವುದು ಅವಶ್ಯವಾಗಿದೆ ಎಂದರು.

    ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೊಳ ಮಾತನಾಡಿ, 12ನೇ ಶತಮಾನದ ಶರಣರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತ ಕೆಲಸವನ್ನು ವಚನ ಸಾಹಿತ್ಯದ ಮೂಲಕ ಮಾಡಿದರು. ಆಧುನಿಕ ಯುಗದಲ್ಲಿ ಎಲ್ಲ ರಂಗಗಳ ವಿಷಯವನ್ನು ಸಮಗ್ರವಾಗಿ ಒದಗಿಸುವ ಪತ್ರಿಕೆಗಳ ಓದುವ ಹವ್ಯಾಸ ಇಂದಿನ ದಿನಗಳಲ್ಲಿ ಕಡಿಮೆ ಆಗುತ್ತಿದೆ. ಅವುಗಳನ್ನು ಹೆಚ್ಚಿನ ರೀತಿಯಲ್ಲಿ ಓದುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಸಿ.ಎನ್. ಪಾಟೀಲ ಮಾತನಾಡಿ, ಕಸಾಪ ತಾಲೂಕು ಘಟಕದಲ್ಲಿ 11 ದತ್ತಿ ಕಾರ್ಯಕ್ರಮ ಇವೆ. ಉತ್ತಮ ಸಮಾಜ ನಿರ್ಮಾಣ ಮಾಡಿ, ಸನ್ಮಾರ್ಗದಲ್ಲಿ ನಡೆಸುವುದೇ ಶರಣ ಸಾಹಿತ್ಯ ಎಂಬುದು ಹೆಮ್ಮೆಯ ಸಂಗತಿಯಾಗಿದೆ. 12ನೇ ಶತಮಾನ ಚಳವಳಿಯ ಶತಮಾನ. ವಚನ ಸಾಹಿತ್ಯದ ಮೂಲಕ ಹೋರಾಟ ಮಾಡಿದ ಶರಣರ ಜೀವನ ಶೈಲಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜಕ್ಕೆ ತಿಳಿಸುವಂತ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.

    ಅಡಹಳ್ಳಿ ಚನ್ನಬಸವ ಸ್ವಾಮೀಜಿ ಸ್ಮರಣಾರ್ಥ ವಚನ ಸಾಹಿತ್ಯ ಹಾಗೂ ಮಹಾಲಿಂಗಪ್ಪ ಹಾವಣಗಿ ಸ್ಮರಣಾರ್ಥ ಭಾವಗೀತೆ ಸ್ಪರ್ಧೆ ದತ್ತಿ ಹಿನ್ನಲೆಯಲ್ಲಿ ಉಪನ್ಯಾಸಕ ಎಸ್.ಎಸ್. ಪಾಣಿಗಟ್ಟಿ ಉಪನ್ಯಾಸ ನೀಡಿದರು.

    ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಾದ ಆನಂದ ಮತ್ತಿಗಟ್ಟಿ, ಶಂಕ್ರಯ್ಯ ಹಿರೇಮಠ, ರಾಜಶೇಖರಯ್ಯ ಗುರುಸ್ವಾಮಿಮಠ, ಗಣೇಶಗೌಡ ಪಾಟೀಲ, ಅಶೋಕ ಕಳಲಕೊಂಡ ಹಾಗೂ ಯೋಗೇಂದ್ರ ಜಂಬಗಿ ಅವರನ್ನು ಸನ್ಮಾನಿಸಲಾಯಿತು.
    ಭಾವಗೀತೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಯಶೋಧಾ ಹರಿಜನ, ಅಂಜಲು ಗೌಳಿ ಹಾಗೂ ರಂಜಿತಾ ಲಠಣ್ಣವರ ಅವರಿಗೆ ಬಹುಮಾನ ವಿತರಿಸಲಾಯಿತು.

    ಪ್ರಭಾರ ಪ್ರಾಚಾರ್ಯ ಎನ್.ಎನ್. ದ್ಯಾಮನಗೌಡ್ರ, ಕಸಾಪ ಪದಾಧಿಕಾರಿಗಳಾದ ಎಸ್.ವಿ. ಕೋಳಿವಾಡ, ಸಿ.ವಿ. ಗುತ್ತಲ, ಬಸನಗೌಡ ಪಾಟೀಲ, ವಿಶ್ವನಾಥ ಹಾವಣಗಿ, ಉಪನ್ಯಾಸಕರಾದ ಎನ್.ಎಸ್. ಹಿರೇಮಠ, ಎಸ್.ಎಫ್. ಹೊನ್ನಣ್ಣವರ, ಪಿ.ಎಸ್. ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು. ಉಪನ್ಯಾಸಕ ವಿನೋದ ಪತ್ತಾರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts