More

    ಚುನಾವಣೆ ಬಳಿಕ ಕಸಾಪ ಕೋಟಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೋಟಿ ಸದಸ್ಯತ್ವ ಅಭಿಯಾನದ ಗುರಿಯನ್ನು ಸಾಕಾರಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಲೋಕಸಭಾ ಚುನಾವಣೆ ನಂತರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

    1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು, 2021ರ ಅಂತ್ಯದ ವೇಳಗೆ 3.4 ಲಕ್ಷ ಅಜೀವ ಸದಸ್ಯರನ್ನು ಹೊಂದಿತ್ತು. ಇದೀಗ ಪರಿಷತ್ತು 5 ವರ್ಷಗಳಲ್ಲಿ ಕೋಟಿ ಸದಸ್ಯತ್ವ ಹೊಂದುವ ಅಭಿಯಾನ ಹಮ್ಮಿಕೊಂಡಿದೆ. ಇದಕ್ಕಾಗಿ ಮೊಬೈಲ್ ಆ್ಯಪ್ ಹಾಗೂ ಪರಿಷತ್ತಿನ ಪೋರ್ಟಲ್ ಮೂಲಕ ಸದಸ್ಯತ್ವ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

    ಕೆಲ ತಾಂತ್ರಿಕ ದೋಷಗಳಿಂದ ಆ್ಯಪ್ ಮೂಲಕ ಸದಸ್ಯತ್ವ ಹೊಂದಲು ಸಮಸ್ಯೆಯಾಗಿತ್ತು. ಹಾಗಾಗಿ ಕಚೇರಿಯಲ್ಲಿಯೇ ನೇರವಾಗಿ ಸದಸ್ಯತ್ವ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಒಂದು ಸಾವಿರ ರೂ. ಇದ್ದ ಸದಸ್ಯತ್ವ ಶುಲ್ಕವನ್ನು 250 ರೂ.ಗೆ ಇಳಿಕೆ ಮಾಡಲಾಗಿದ್ದು, ಎರಡೂವರೆ ವರ್ಷದಲ್ಲಿ ಸದಸ್ಯರ ಸಂಖ್ಯೆ 5ಲಕ್ಷ ತಲುಪಿದೆ. ಮೊಬೈಲ್ ಆ್ಯಪ್‌ನಲ್ಲಿದ್ದ ಲೋಪ ದೋಷಗಳನ್ನು ಸರಿಪಡಿಸಲಾಗಿದ್ದು, ಚುನಾವಣೆ ಬಳಿಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಇದರಿಂದ ಹೊರನಾಡು ಹಾಗೂ ಹೊರದೇಶದ ಕನ್ನಡಿಗರಿಗೆ ಸದಸ್ಯತ್ವ ಪಡೆಯುವುದು ಸುಲಭವಾಗಲಿದೆ ಎಂದಿದ್ದಾರೆ.

    ಭುವನೇಶ್ವರಿ ರಥಯಾತ್ರೆ
    ಕಳೆದ ವರ್ಷ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭುವನಗಿರಿಯ ಭುವನೇಶ್ವರಿ ದೇವಾಲಯದಿಂದ ಭುವನೇಶ್ವರಿ ರಥಯಾತ್ರೆ ಕೈಗೊಳ್ಳಲಾಗಿತ್ತು. ಆರಂಭದಿಂದ ಯಾತ್ರೆಯೊಂದಿಗೆ ಬಂದ ಕನ್ನಡದ ಜ್ಯೋತಿಯಿಂದ ಸಮ್ಮೇಳನಕ್ಕೆ ಚಾಲನೆ ನೀಡಲಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts