More

    ಜಿಮ್‌ಗೆ ಜೈ ಭೀಮ್ ಹೆಸರು

    ಚಿಕ್ಕಮಗಳೂರು: ನಗರಸಭೆಯಿಂದ ಆಜಾದ್ ಪಾರ್ಕ್ ವೃತ್ತದ ಬಳಿ ನಿರ್ಮಿಸಿರುವ ವಾಣಿಜ್ಯ ಮಳಿಗೆಯಲ್ಲಿನ ವ್ಯಾಯಾಮ ಶಾಲೆಗೆ ಜೈ ಭೀಮ್ ಎಂದು ನಾಮಕರಣ ಮಾಡಲು ನಡೆದ ನಗರಸಭೆಯ ವಿಶೇಷ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ವ್ಯಾಯಾಮ ಶಾಲೆಗೆ ಹೆಸರಿಡುವ ವಿಷಯ ಚರ್ಚೆಗೆ ಬಂದಾಗ ಆಡಳಿತ ಪಕ್ಷದ ನಾಯಕ ಟಿ.ರಾಜಶೇಖರ್ ಜೈ ಭೀಮ್ ಎಂದು ಹೆಸರಿಡುವುದು ಸೂಕ್ತ ಎಂದರು. ಇದಕ್ಕೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದರು.
    ವ್ಯಾಯಾಮ ಶಾಲೆಗೆ ಬೇರೆ ಹೆಸರಿಡುವ ಬಗ್ಗೆ ಈ ಹಿಂದೆ ಚರ್ಚೆ ಆರಂಭವಾದಾಗ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಜೈ ಭೀಮ್ ಹೆಸರನ್ನೇ ಇಡಬೇಕು ಎಂದು ಒತ್ತಾಯಿಸಿದ್ದವು. ಹೀಗಾಗಿ ವಿಶೇಷ ಸಭೆ ಕರೆದು ಚರ್ಚೆ ನಡೆಸಲು ತೀರ್ಮಾನಿಸಿತ್ತು.
    ಜಿಮ್‌ಗೆ ಜೈ ಭೀಮ್ ಹೆಸರು ಇಡುವಂತೆ ಜೆಜೆಸಿ ಜಿಮ್ನಾಶಿಯಂ, ವಿಶ್ವರತ್ನ ಯುವಕರ ಸಂಘ, ಪ್ರಗತಿಪರ ಮತ್ತು ದಲಿತ ಸಂಘಟನೆಗಳು ನಗರಸಭೆಗೆ ಮನವಿ ಸಲ್ಲಿಸಿದ್ದವು. ಕೋಟೆ ವಂದೇಮಾತರಂ ಟ್ರಸ್ಟ್ ಚಂದ್ರಶೇಖರ್ ಆಜಾದ್ ಹೆಸರಿಡುವಂತೆ, ಶಾಂತಿನಗರದ ವಿವೇಕಾನಂದ ಯುವಕ ಸಂಘ ವಿವೇಕಾನಂದರ ಹೆಸರಿಡಬೇಕೆಂದು ಮನವಿ ಮಾಡಿದ್ದವು. ಆದರೆ ಹೆಚ್ಚಿನ ಸಂಘಟನೆಗಳು ಜೈ ಭೀಮ್ ಹೆಸರನ್ನೇ ಪ್ರಸ್ತಾಪಿಸಿದ್ದರಿಂದ ನಗರಸಭೆ ಒಕ್ಕೊರಲ ತೀರ್ಮಾನ ಕೈಗೊಂಡಿದೆ.
    ರಾಜಶೇಖರ್ ಮಾತನಾಡಿ, ಮಳಿಗೆ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟಿರುವ ಹಣ ಬಳಸಿಲ್ಲ. ನಗರಸಭೆ ಹಣದಲ್ಲಿ 40 ಲಕ್ಷ ರೂ. ಖರ್ಚುಮಾಡಿ ನಿರ್ಮಿಸಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಉಪಕರಣ ಅಳವಡಿಸಲಾಗಿದೆ. ಸಂವಿಧಾನದಲ್ಲಿ ಮೀಸಲಾತಿ ನಿಗದಿಪಡಿಸಿದ್ದರಿಂದ ಮಹಿಳೆಯರು ಸೇರಿ ನಾವಿಂದು ನಗರಸಭೆ ಸದಸ್ಯರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಸಂವಿಧಾನದಿಂದ ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ. ಇಲ್ಲಿ ನಿಂತು ಮಾತನಾಡಲು ಅವಕಾಶ ನೀಡಿರುವುದು ಸಂವಿಧಾನ. ಹೀಗಾಗಿ ಜೈ ಭೀಮ್ ಹೆಸರಿಡುವುದೇ ಸೂಕ್ತ. ಎಲ್ಲ ಸದಸ್ಯರು ಬೇರೆ ವಿಷಯ ಪ್ರಸ್ತಾಪಿಸುವ ಮೂಲಕ ಅಂಬೇಡ್ಕರ್ ಹೆಸರಿಗೆ ಅಗೌರವ ತೋರಬೇಡಿ ಎಂದು ಮನವಿ ಮಾಡಿದರು. ಜಿಮ್‌ಗೆ ಜೈ ಭೀಮ್ ಎಂದು ಹೆಸರಿಡುವ ಜತೆಗೆ ಶಾಸಕರನ್ನು ಕರೆದು ಉದ್ಘಾಟನೆ ಮಾಡಿಸಲು ನಿರ್ಧರಿಸಲಾಯಿತು.
    ಕುಮಾರ ಗೌಡ ಮಾತನಾಡಿ, ಕಳೆದ ಸಭೆಯಲ್ಲೇ ಜೈ ಭೀಮ್ ಹೆಸರು ಅಂತಿಮವಾಗಬೇಕಾಗಿತ್ತು. ಈ ಸಭೆಯಲ್ಲಾದರೂ ಅಂಬೇಡ್ಕರ್ ಹೆಸರು ಅಂತಿಮವಾಗಿದೆ ಎಂದರು.
    ಮಳಿಗೆ ಸಂಕೀರ್ಣಕ್ಕೆ ಯಾರ ಹೆಸರು?: ಕೆ.ಎಂ.ರಸ್ತೆಯ ಕತ್ರಿಮಾರಮ್ಮ ದೇವಾಲಯದ ಎದುರು ನಿರ್ಮಿಸಿರು ನಗರಸಭೆ ಮಳಿಗೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಿಡುವ ವಿಷಯ ಪ್ರಸ್ತಾಪವಾಯಿತು. ರಾಷ್ಟ್ರಪತಿ ಹೆಸರು ಇಡುವುದಕ್ಕೆ ವಿಶೇಷ ಸಭೆಯಲ್ಲಿ ಪರ-ವಿರೋಧ ವ್ಯಕ್ತವಾಯಿತು. ವಿಪಕ್ಷ ಸದಸ್ಯ ಕುಮಾರ ಗೌಡ ಮಾತನಾಡಿ, ಎಂ.ಜಿ.ರಸ್ತೆ ಮಳಿಗೆಗೆ ವಾಜಪೇಯಿ ವಾಣಿಜ್ಯ ಸಂಕೀರ್ಣವೆಂದು ಹೆಸರಿಡಲಾಗಿದೆ. ಇಂದಿರಾ ಗಾಂಧಿ ಬಡಾವಣೆ ಸಮೀಪ ನಿರ್ಮಿಸಿರುವ ಲೇಔಟ್‌ಗೆ ವಾಜಪೇಯಿ ಹೆಸರಿಡಲಾಗಿದೆ. ಇದಕ್ಕೆ ನಾವ್ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಈ ಮಳಿಗೆಗೆ ಅಂಬೇಡ್ಕರ್ ಹೆಸರಿಡಬೇಕೆಂದು ಒತ್ತಾಯಿಸಿದರು. ಟಿ.ರಾಜಶೇಖರ್ ಮಾತನಾಡಿ, ರಾಷ್ಟ್ರಪತಿ ಅವರು ದಲಿತ ಸಮುದಾಯದವರು. ಮಳಿಗೆಗೆ ಅವರ ಹೆಸರಿಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಮುಂದಿನ ಸಭೆಯಲ್ಲಿ ಇನ್ನೂ ನಾಲ್ಕೈದು ಹೆಸರುಗಳನ್ನು ತಂದು ಈ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಎಂದರು. ಹೀಗಾಗಿ ಕತ್ರಿ ಮಾರಮ್ಮ ದೇವಾಲಯದ ಸಮೀಪದ ಮಳಿಗೆಗೆ ನಾಮಕರಣ ವಿಷಯ ಮುಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.
    ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts