More

    ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ಕೊಡಿ

    ಜೇವರ್ಗಿ: ಭಾರತ ಮಾಲಾ ಯೋಜನೆಯ ರಸ್ತೆ ಕಾಮಗಾರಿಗೆ ಜಮೀನು ನೀಡಿದ ರೈತರಿಗೆ ಸರಿಯಾದ ಪರಿಹಾರ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಅಪಾರ ರೈತರು ಪಿಎನ್‌ಸಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿ-೧೫೦(ಸಿ) ಚನ್ನೈ- ಸೂರತ್‌ಗೆ ಸಂಪರ್ಕ ಕಲ್ಪಿಸಲಿದೆ. ಆದರೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ರೈತರ ಜಮೀನಿಗೆ ೨೦-೨೫ ಲಕ್ಷ ರೂ. ನೀಡಿದೆ. ಆದರೆ ಜೇವರ್ಗಿ ತಾಲೂಕಿನ ರೈತರ ಜಮೀನಿಗೆ ಕೇವಲ ೧೦-೧೫ ಲಕ್ಷ ರೂ. ಪರಿಹಾರ ಕೊಡಲಾಗುತ್ತಿದೆ ಎಂದು ದೂರಿದರು.

    ರಸ್ತೆ ಕಾಮಗಾರಿಯೂ ಕಳಪೆಯಿಂದ ನಡೆಯುತ್ತಿದ್ದು, ಮುರುಮ್ ಸಂಪೂರ್ಣ ಮಣ್ಣು ಮಿಶ್ರಿತವಾಗಿದೆ. ಆರಂಭದ ಹಂತದಲ್ಲಿಯೇ ಗುಣಮಟ್ಟ ಗಾಳಿಗೆ ತೂರಲಾಗಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ಇಂತಹ ಗುತ್ತಿಗೆದಾರರಿಂದ ದೊಡ್ಡ ಕಾಮಗಾರಿ ನಿರ್ವಹಣೆ ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಪ್ರಮುಖರಾದ ವಿರೇಶ ದೊಡ್ಡಮನಿ, ನಾಗಣ್ಣ ಬುಟ್ನಾಳ, ಸಂಗೀತಾ ಕಲ್ಲೂರ, ಭಾಗಣ್ಣ ಗೌನಳ್ಳಿ, ಶಿಖರೇಶ, ಶಶಿಕಲಾ ಮಾಲಗತ್ತಿ, ಗುರಮ್ಮ ಗೌಡ್ತಿ, ಪರಶುರಾಮ ಕೆಲ್ಲೂರ, ಪರಮೇಶ್ವರ ಬಿರಾಳ, ಭೀಮಾಶಂಕರ ಜನಿವಾರ, ಕೃಷ್ಣಾ ರಾಠೋಡ್, ಸಿದ್ದಣ್ಣ ಕೊಡಚಿ, ಮಲ್ಲು ಬಿರಾಳ ಇತರರಿದ್ದರು.

    ಬೆಳಗ್ಗೆ ೧೧ಕ್ಕೆ ವಿವಿಧ ಹಳ್ಳಿಗಳ ರೈತರು ಎತ್ತಿನ ಬಂಡಿಗಳೊಂದಿಗೆ ಬಸವೇಶ್ವರ ವೃತ್ತದಿಂದ ವಿಜಯಪುರ ರಸ್ತೆಯಲ್ಲಿರುವ ಪಿಎನ್‌ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾ ವಿಶೇಷ ಭೂ ಸ್ವಾಧೀನಾಧಿಕಾರಿ ರಾಮಚಂದ್ರ ಗಡೇದ್, ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಿದರು.

    ಯಾದಗಿರಿ ಜಿಲ್ಲೆ ಮಾದರಿಯಲ್ಲೇ ಜೇವರ್ಗಿ ತಾಲೂಕಿನ ರೈತರಿಗೆ ಭೂ ಪರಿಹಾರ ನೀಡಬೇಕು. ಕೈಬಿಟ್ಟು ಹೋಗಿರುವ ರಸ್ತೆ, ಬೋರ್‌ವೆಲ್ ಹಾಗೂ ಬಾವಿ, ಕಟ್ಟಡಗಳ ಮೌಲ್ಯಮಾಪನ ಮಾಡಿಸಿ ಸಮರ್ಪಕ ಪರಿಹಾರ ಕೊಡಬೇಕು. ಈಗಾಗಲೇ ಮೌಲ್ಯಮಾಪನ ಮಾಡಿದ ಜಮೀನುಗಳ ಪರಿಹಾರ ಧನ ಶೀಘ್ರ ಕಲ್ಪಿಸಬೇಕು. ತಾಲೂಕಿನ ರೈತರ ಸಮಸ್ಯೆಗಳಿಗೆ ಜಿಲ್ಲಾ ವಿಶೇಷ ಭೂ ಸ್ವಾಧೀನ ಅಧಿಕಾರಿ ಹಾಗೂ ಯೋಜನಾ ನಿರ್ದೇಶಕರು ಸ್ಪಂದಿಸಬೇಕು.
    | ಡಾ.ಅಜಯಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts