More

    ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಆಚರಣೆ

    ಅಕ್ಕಿಆಲೂರ: ಲಂಬಾಣಿ ಸಮುದಾಯದ ಸಂಸ್ಥಾಪಕ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತ್ಯುತ್ಸವ ಬಂಜಾರ ಜನಪದ ಸಂಸ್ಕೃತಿಯೊಂದಿಗೆ ಪಟ್ಟಣದಲ್ಲಿ ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.

    ಗುರುರಾಯಪಟ್ಟಣ ತಾಂಡಾದಲ್ಲಿರುವ ಸೇವಾಲಾಲ್ ಮಂದಿರದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ಸಲ್ಲಿಸಿದ ಬಂಜಾರ ಸಮುದಾಯದ ಮುಖಂಡರು, ಸಾಮೂಹಿಕ ಪ್ರಾರ್ಥನೆ ನಡೆಸಿದರು. ವಿಶೇಷವಾಗಿ ಶೃಂಗರಿಸಿದ್ದ ಕುದುರೆಯ ರಥದಲ್ಲಿ ಪ್ರತಿಷ್ಠಾಪನೆಗೊಂಡ ಸೇವಾಲಾಲ್ ಮಹಾರಾಜರ ಮೂರ್ತಿಯ ಭವ್ಯ ಮೆರವಣಿಗೆ, ಗುರುರಾಯಪಟ್ಟಣದಲ್ಲಿ ಸಾಗಿತು.

    ನಂತರ ಅಕ್ಕಿಆಲೂರಿಗೆ ಪ್ರವೇಶಿಸಿದ ಮೆರವಣಿಗೆಯನ್ನು ಸ್ಥಳೀಯ ಪಟ್ಟಣದ ಮುಖಂಡರು ಸ್ವಾಗತಿಸಿದರು. ಶಿರಸಿ- ಹಾವೇರಿ ಹೆದ್ದಾರಿ ಮೂಲಕ ಸಾಗಿದ ಮೆರವಣಿಗೆಯಲ್ಲಿ ಮಹಿಳೆಯರು ಬಂಜಾರ ಜನಪದ ಸಂಸ್ಕೃತಿ ನೃತ್ಯಕ್ಕೆ ಹೆಜ್ಜೆ ಹಾಕಿದರು. ಸೇವಾಲಾಲ್ ಮಹಾರಾಜರ ಧಾರ್ಮಿಕ ಸಂದೇಶಗಳು ಮೆರವಣಿಗೆಯಲ್ಲಿ ಮೊಳಗಿವು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂಪೂರ್ಣ ಬಂಜಾರ ಪರಂಪರೆ ವ್ಯಕ್ತಗೊಳಿಸಿದ ಮಹಿಳೆಯರ ನೃತ್ಯ ಎಲ್ಲ ಗಮನ ಸೆಳೆಯಿತು. ನಂತರ ಬಾಳೂರ ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ ಅವರು ಸೇವಾಲಾಲ್ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

    ನಂತರ ಮಾತನಾಡಿದ ವಿರಕ್ತಮಠದ ಶಿವಬಸವ ಸ್ವಾಮೀಜಿ, ನಮ್ಮ ಹೆಮ್ಮೆಯ ಬಂಜಾರ ಸಮುದಾಯ ಶ್ರಮ ಸಂಸ್ಕೃತಿಯ ಪ್ರತೀಕ. ನಡೆದು ಬಂದ ಹಾದಿಯನ್ನು ಎಂದಿಗೂ ಮರೆಯದೆ, ದೇಶಭಕ್ತಿ, ನಾಡಾಭಿಮಾನ ಮೈಗೊಡಿಸಿಕೊಂಡು ಇಂದಿನ ಆಧುನಿಕ ಯುಗದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

    ಬಾಬು ಜಗಜೀವನರಾಮ್ ಚರ್ಮಗಾರಿಕೆ ಕುಂದುಕೊರತೆಯ ಜಿಲ್ಲಾ ಸಮಿತಿ ಸದಸ್ಯ ಮಾರುತಿ ಹಂಜಿಗಿ ಮಾತನಾಡಿ, ಸೇವಾಲಾಲ್ ಮಹಾರಾಜರ ಸಂದೇಶವನ್ನು ಇಂದಿಗೂ ಅನುಸರಿಸಿ, ದಯೆ ಮತ್ತು ಮಾನವೀಯತೆಗೆ ಮಹತ್ವಕೊಟ್ಟು ಸರ್ವರ ಕಲ್ಯಾಣ ಬಯಸುವ ಲಂಬಾಣಿ ಜನಾಂಗ ಸಮಾಜದ ಎಲ್ಲ ರಂಗಗಳಲ್ಲಿ ಮುಖ್ಯವಾಹಿನಿಗೆ ಬರುತ್ತಿದೆ ಎಂದರು.

    ಗೆಜ್ಜಿಹಳ್ಳಿ ಗ್ರಾಮುಖಂಡರಾದ ಗೆಮಣ್ಣ ಲಮಾಣಿ, ಬಾಬಣ್ಣ ಲಮಾಣಿ, ಚಂದ್ರು ಲಮಾಣಿ, ವೀರೇಶ ಲಮಾಣಿ, ಪ್ರದೀಪ ಮಹೇಂದ್ರಕರ, ಹರೀಶ ಹಾನಗಲ್ಲ, ಮಂಜುನಾಥ ಕರ್ಜಿಗಿ, ಲಕ್ಷ್ಮಣ ಹುಳ್ಳಿಕಾಶಿ, ಗಿರೀಶ ಕರಿದ್ಯಾವಣ್ಣನವರ, ಬಡವೆಪ್ಪ ಆನವಟ್ಟಿ, ಸಿದ್ದಲಿಂಗೇಶ ಬೇಲೂರ, ಪ್ರಸಾದ ಪಾವಲಿ, ಚಿನ್ನಪ್ಪ ಲಮಾಣಿ, ತುಕ್ಕಪ್ಪ ಕಾರಬಾರಿ, ಚಿನ್ನಪ್ಪ ನಾಯಕ, ಹುಳಿಯಪ್ಪ ಲಮಾಣಿ, ಪ್ರವೀಣ ಕಲಾಲ, ಗಂಗಾಧರ ಸತಪತಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts