More

    ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ 8,9ಕ್ಕೆ ಜಾತ್ರಾ ಮಹೋತ್ಸವ

    ಹರಿಹರ: ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆ.8, 9ರಂದು 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಮಠದ 25ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ.
    ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಬುಧವಾರ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ವಿ.ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿ, ಲಿಂ.ಪುಣ್ಯಾನಂದಪುರಿ ಶ್ರೀಗಳ 15ನೇ ಪುಣ್ಯಾರಾಧನೆ ಹಾಗೂ ಪ್ರಸನ್ನಾನಂದ ಶ್ರೀಗಳ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಮತ್ತು ನೂತನ ವಾಲ್ಮೀಕಿ ರಥ ಲೋಕಾರ್ಪಣೆ ಜರುಗಲಿದೆ ಎಂದು ತಿಳಿಸಿದರು.
    ಕಳೆದ ವರ್ಷ 4ನೇ ವಾಲ್ಮೀಕಿ ಜಾತ್ರಾ ಮಹೋತ್ಸವ ಕೋವಿಡ್ ಕಾರಣದಿಂದ ಸರಳ ಆಚರಣೆ ಕಂಡಿತ್ತು. ಈ ವರ್ಷ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪ್ರಸನ್ನಾನಂದ ಶ್ರೀಗಳು 161 ತಾಲೂಕುಗಳಿಗೆ ಭೇಟಿ ನೀಡಿ ಭಕ್ತರಿಗೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 4ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
    ಈ ವರ್ಷ ವಾಲ್ಮೀಕಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಿದ್ದು, 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ 63 ಅಡಿ ಎತ್ತರದ ವಾಲ್ಮೀಕಿ ರಥವನ್ನು ಲೋಕಾರ್ಪಣೆ ಮಾಡುತ್ತಿರುವುದು ಈ ಬಾರಿ ಜಾತ್ರೆಗೆ ಮತ್ತಷ್ಟು ಮೆರುಗು ತರಲಿದೆ ಎಂದರು.
    *ಕಾರ್ಯಕ್ರಮ ವಿವರ:
    ಫೆ.8ರಂದು ಬೆಳಗ್ಗೆ 7 ಗಂಟೆಗೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರಗೆ ಮಹರ್ಪಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ ಹಾಗೂ ಮಹರ್ಷಿ ವಾಲ್ಮೀಕಿ ಧ್ವಜಾರೋಹಣ ಜರುಗಲಿದೆ. ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಲಿದ್ದು, ರಾಜನಹಳ್ಳಿ ಗ್ರಾಪಂ ಅಧ್ಯಕ್ಷೆ ಚೈತ್ರ ಲಂಕೇಶ್ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ, ಮಹಿಳಾ ಗೋಷ್ಠಿ, ಉದ್ಯೋಗ ಮೇಳ, ರೈತ ಗೋಷ್ಠಿ, ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    ಫೆ.9ರಂದು ಬೆಳಗ್ಗೆ 9 ಗಂಟೆಗೆ ಮಹರ್ಷಿ ವಾಲ್ಮೀಕಿ ನೂತನ ರಥಕ್ಕೆ ಶ್ರೀಗಳು ಪುಷ್ಪಾರ್ಚನೆ ನೆರವೇರಿಸುವುದರೊಂದಿಗೆ ನೂತನ ರಥಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 11ಕ್ಕೆ ಜನಜಾಗೃತಿ ಜಾತ್ರಾ ಮಹೋತ್ಸವವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಲ್ಮೀಕಿ ವಿಜಯ ಸ್ಮರಣ ಸಂಪುಟ ಬಿಡುಗಡೆ ಮಾಡಲಿದ್ದಾರೆ.
    ಸಂಜೆ 4.30ಕ್ಕೆ ವಿಶೇಷ ಚಲನಚಿತ್ರ ನಟರಾದ ಕಿಚ್ಚ ಸುದೀಪ್, ಅಕ್ಷಿತ್ ಶಶಿಕುಮಾರ್, ರೂರಲ್ ಸ್ಟಾರ್ ಅಂಜನ್, ಅಗಸ್ತ್ಯರಾಜು, ಪಾವಗಡ ಮಂಜುನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಪಾಲಯ್ಯ, ಧರ್ಮದರ್ಶಿ ಶಾಂತಲಾ ರಾಜಣ್ಣ, ವೆಂಕಟರಮಣ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಚಂದ್ರಶೇಖರಪ್ಪ ಜಿ.ಟಿ, ರಾಜನಹಳ್ಳಿ ಗ್ರಾಪಂ ಅಧ್ಯಕ್ಷೆ ಚೈತ್ರಾ ಲಂಕೇಶ್, ಮುಖಂಡರಾದ ತುಳಸಿರಾಮ್, ಮಂಜುನಾಥ್, ಜಗಳಿ ಪ್ರಕಾಶ್, ದಿನೇಶ್ ಬಾಬು, ಕೆ.ಬಿ.ಮಂಜುನಾಥ್, ನಾಗರಾಜ್ ಇದ್ದರು.

    *ಪ್ರೊ.ರಂಗರಾಜುಗೆ ವಾಲ್ಮೀಕಿ ರತ್ನ ಪ್ರಶಸ್ತಿ: ಈ ಬಾರಿ ಹಮ್ಮಿಕೊಂಡಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪ್ರೊ.ರಂಗರಾಜು ವನದುರ್ಗ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಹಾಗು ಸಚಿವ ಆನಂದ್ ಸಿಂಗ್ ಅವರಿಗೆ ಮದಕರಿ ನಾಯಕ ಪ್ರಶಸ್ತಿ ನೀಡಲಾಗುವುದು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಎಸ್.ವಿ.ರಾಮಚಂದ್ರಪ್ಪ ತಿಳಿಸಿದರು.

    *  ಮಹರ್ಷಿ ವಾಲ್ಮೀಕಿ ಜಾತ್ರೆ ವೈಚಾರಿಕತೆಯಿಂದ ಕೂಡಿರಲಿದೆ. ನಾಡಿನಲ್ಲಿ ಐತಿಹಾಸಿಕ ಹಬ್ಬವಾಗಿ ಹೊರಹೊಮ್ಮುತ್ತಿದೆ. ನಮ್ಮ ಸಮುದಾಯದ ಹಲವು ವರ್ಷಗಳ ಮೀಸಲಾತಿ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದು ಜಾತ್ರೆಗೆ ಹಬ್ಬದ ಮೆರುಗು ನೀಡಿದೆ. ಫೆ.30ರವರೆಗೆ ಕೇಂದ್ರ ಅಧಿವೇಶನ ನಡೆಯುತ್ತಿದ್ದು, ಇದರಲ್ಲಿ ಅಂತಿಮ ಬಿಲ್ ಪಾಸಾಗಲಿದೆ ಎಂಬ ವಿಶ್ವಾಸವಿದೆ.
    -ಪ್ರಸನ್ನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts