More

    ಹೆಣ್ಣಿಗಾಗಿ ದೇವರ ಮೊರೆ ಹೋದ ಯುವಕರು

    ಬಾಳೆಹೊನ್ನೂರು : ಮದುವೆಯಾಗಲು ಹೆಣ್ಣು ಸಿಗದಿದ್ದರಿಂದ ಬೇಸತ್ತ ಯುವಕರು ದೇವರ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
    ಇದು ವಿಚಿತ್ರವಾದರೂ ಸತ್ಯ. ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿಯ ಬಿದರೆ ಬ್ಯಾಡಿಗೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಿದ್ದೇಶ್ವರ ಸ್ವಾಮಿ, ಅಜ್ಜಯ್ಯಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ನಡೆದಿದೆ.
    ಬ್ಯಾಡಿಗೆರೆ ಗ್ರಾಮದಲ್ಲಿ ಪ್ರತಿವರ್ಷ ನಾಲ್ಕು ದಿನಗಳ ಗ್ರಾಮ ದೇವತೆಗಳ ಸುಗ್ಗಿಹಬ್ಬ, ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಕೆಂಡಾರ್ಚನೆ, ದೇವರ ಉತ್ಸವ, ಸುಗ್ಗಿ ಕುಣಿತ, ಕೆಂಡದ ಗದ್ದೆಯಲ್ಲಿ ಕೆಂಡಾರ್ಚನೆ, ಸ್ವಾಮಿಯ ಉತ್ಸವ ನಡೆಯಿತು.
    ಜಾತ್ರೆಯ ನಾಲ್ಕನೆಯ ದಿನ ಗ್ರಾಮದ ಹಿರಿಯರು, ಮುಖ್ಯಸ್ಥರು ಹಾಗೂ ಗುರು ಪರದೇಶಪ್ಪನವರ ಮಠದ ಗುರುಗಳಾದ ಮಧುಕುಮಾರ್ ಶಾಸಿ ಸೇರಿದಂತೆ ಅನೇಕ ಯುವಕರು, ಗ್ರಾಮಸ್ಥರು ಸೇರಿ ಗ್ರಾಮದ 101 ಕೋಟಿ ದೇವ ಗಣಗಳಿಗೆ ಹಾಗೂ ಕಳಸ ಇರುವ ಗಿರಿ ಹತ್ತಿ ಮಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.
    ಗಿರಿಯಿಂದ ಕೆಳಗೆ ಇಳಿಯುವಾಗ ಗುಡುಗಿನ ಸದ್ದು ಮಾಡಿ ಮಳೆಯ ಮುನ್ಸೂಚನೆ ನೀಡಿದ್ದು ಗ್ರಾಮಸ್ಥರಿಗೆ ದೇವರ ಪವಾಡ ಹಾಗೂ ಸಂತಸ ತಂದಿತ್ತು.
    ಇದೇ ಸಂದರ್ಭದಲ್ಲಿ ಗ್ರಾಮದ 25ರಿಂದ 38 ವಷರ್ದ ಯುವಕರಿಗೆ ಇನ್ನೂ ಮದುವೆ ಆಗದ್ದನ್ನು ಮನಗಂಡ ಊರಿನ ಮುಖ್ಯಸ್ಥರು ಗುರುಪರದೇಶಪ್ಪನವರ ಮಠದ ಗುರುಗಳಾದ ಮಧುಕುಮಾರ್ ಶಾಸಿ ಅವರಲ್ಲಿ ಮನವಿ ಮಾಡಿ ಯುವಕರಿಗೆ ಆದಷ್ಟು ಬೇಗ ಮದುವೆ ಆಗುವಂತೆ ದೇವರಲ್ಲಿ ಕೋರುವಂತೆ ಮನವಿ ಮಾಡಿದರು.
    ಮನವಿಗೆ ಒಪ್ಪಿದ ಗುರುಗಳು ಯುವಕರೆಲ್ಲರನ್ನು ಸೇರಿಸಿ ಮದುವೆಯಾಗದ ಯುವಕರ ಪಟ್ಟಿ ಮಾಡಿ ಶ್ರೀ ಸಿದ್ದೇಶ್ವರ ಸ್ವಾಮಿ, ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಪ್ರಾರ್ಥನೆ ಸಲ್ಲಿಸಿ ಗ್ರಾಮದ ಎಲ್ಲ ಯುವಕರಿಗೆ ಬೇಗ ಮದುವೆಯಾಗಲು ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿದರು.
    ಅದರಂತೆ ಯುವಕರ ಹೆಸರಿರುವ ಇನ್ನೊಂದು ಪಟ್ಟಿಯನ್ನು ಗುರುಪರದೇಶಪ್ಪ ಅವರ ಮಠಕ್ಕೂ ಸಹ ಯುವಕರು ಕಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಯುವಕರು ಹಾಸ್ಯಚಟಾಕಿ ಹಾರಿಸಿ, ಹುಡುಗಿ ಸಿಗದಿದ್ದರೆ ನಾವೆಲ್ಲ ಮಠಕ್ಕೆ ಸೇರಿಕೊಳ್ಳುವುದಾಗಿ ಮಧುಕುಮಾರ್ ಶಾಸಿ ಅವರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts