More

    ಅಬ್ಬಾ! ಭಾರತವನ್ನು ಪ್ರೀತಿಸಲು ಅದೆಷ್ಟು ಕಾರಣಗಳು…

    ಜೀವನಪ್ರೀತಿ, ದೇಶಪ್ರೇಮ, ಹುಡುಕಾಟದ ರೋಮಾಂಚನ, ಹೊಸದನ್ನು ಮಾಡುವ ಹುಮ್ಮಸ್ಸು, ಸೃಜನಶೀಲ ಮನಸ್ಸು, ಸಕಾರಾತ್ಮಕ ಸಂಗತಿಗಳನ್ನು ಗಟ್ಟಿದನಿಯಲ್ಲಿ ಹೇಳುವ ತವಕ, ಆತ್ಮತೃಪ್ತಿ, ಲೈಫಲ್ಲಿ ಇಷ್ಟು ಸಾಕಪ್ಪ ಎಂಬ ಧನ್ಯತೆಯ ಕ್ಷಣಗಳು…

    ಅಬ್ಬಾ! ಭಾರತವನ್ನು ಪ್ರೀತಿಸಲು ಅದೆಷ್ಟು ಕಾರಣಗಳು... ಅಬ್ಬಾ! ಎಂಥ ಅದ್ಭುತ ಪಯಣ ಅಲ್ಲವೇ?
    ನಮ್ದೂ ಬದುಕು ಹೀಗೇ ಇರಬೇಕು ಅಂತ ಅದೆಷ್ಟೋ ಮಂದಿ ಅಂದುಕೊಳ್ಳುತ್ತಾರೆ. ಆದರೆ, ಅನಿವಾರ್ಯತೆಗಳು, ಕಷ್ಟಗಳ ವಿರುದ್ಧ ನಿರಂತರ ಹೋರಾಟ, ಆಸಕ್ತಿಯೊಂದು, ಮಾಡಬೇಕಾಗಿರುವುದು ಇನ್ನೊಂದು ಎಂಬ ಇಕ್ಕಟ್ಟು-ಸಂದಿಗ್ಧತೆಯ ನಡುವೆ ಕಳೆದುಹೋಗುವ ಜನ ಹೆಚ್ಚು. ಅದು ಅವರ ಅಪರಾಧವೇನಲ್ಲ, ಪರಿಸ್ಥಿತಿಗಳು ಹಾಗೆ ಮಾಡಿಸುತ್ತವೆಯಷ್ಟೆ. ಆದರೂ, ಕೆಲವೊಬ್ಬರು ಧೈರ್ಯ ಮಾಡಿ ಟ್ಠಠಿ ಟ್ಛ ಚಿಟ್ಡ ಠಿಜಜ್ಞಿkಜ್ಞಿಜನಿಂದ ಹೊಸದರತ್ತ ಹೊರಳುತ್ತಾರೆ, ಜೀವನದ ನೈಜ ವಿದ್ಯಾರ್ಥಿಯಾಗಿ, ಬದುಕನ್ನು ಅಭ್ಯಸಿಸುತ್ತಾರೆ, ಆಸ್ವಾದಿಸುತ್ತಾರೆ.

    ಫಾಲೋಯಿಂಗ್ ಲವ್ ಅಂತ ಹೇಳುತ್ತ ಹೀಗೆ ಬದುಕಿನ ಅಷ್ಟೇ ಅಲ್ಲ ಭಾರತದ ಆಸಕ್ತಿಕರ ಮುಖಗಳನ್ನು ಜಗದ ಮುಂದೆ ಅನಾವರಣಗೊಳಿಸುತ್ತಿದ್ದಾರೆ ಯುವದಂಪತಿ ಅಭಿರಾಜ್ ರಾಜ್ಯಾಧ್ಯಕ್ಷ ಮತ್ತು ನಿಯತಿ (ನೀತು) ಮಾವಿನಕುರ್ವೆ. ಸಿಕ್ಕಿಂನಿಂದ ಹಿಡಿದು ಸಂಭಾಜಿನಗರ (ಔರಾಂಗಾಬಾದ್)ವರೆಗೆ, ಮುಂಬೈನಿಂದ ಹಿಡಿದು ನಮ್ಮ ಬೆಂಗಳೂರು, ಧಾರವಾಡ, ಉತ್ತರ ಕನ್ನಡದವರೆಗೆ ಹೀಗೆ ದೇಶದ ಮೂಲೆಮೂಲೆಗೂ ಸಂಚರಿಸಿ ‘ಐ ಲವ್ ಮೈ ಇಂಡಿಯಾ’ ಅಂತ ಇವರೂ ಹೇಳುತ್ತಿದ್ದಾರೆ, ಅಲ್ಲಿನ ಜನರಿಂದಲೂ ಹೇಳಿಸುತ್ತಿದ್ದಾರೆ. ಹಾಗಂತ, ಇದು ಭಾವೋದ್ವೇಗ ಅಥವಾ ಒಣಅಭಿಮಾನ ಅಲ್ಲ. ‘ಭಾರತವನ್ನು ಪ್ರೀತಿಸಲು ನೂರು ಕಾರಣಗಳು’ (100 reasons to love india) ಶೋಧಿಸಿ, ದೇಶದ ಅನ್​ಸಂಗ್ ಹೀರೋಗಳನ್ನು, ಪ್ರೇರಣೆ ನೀಡುವಂಥ ಸಂಗತಿಗಳನ್ನು ಪುಟ್ಟ ಪುಟ್ಟ ವಿಡಿಯೋಗಳ ಮೂಲಕ ತೆರೆದಿಡುತ್ತ, ಅಸಂಖ್ಯ ಮನಸ್ಸುಗಳನ್ನು ಚೇತೋಹಾರಿಗೊಳಿಸುತ್ತಿದ್ದಾರೆ, ‘ನಮ್ಮಲ್ಲಿ ಒಳ್ಳೆಯತನಕ್ಕೆ, ಒಳ್ಳೆಯ ಮೌಲ್ಯಗಳಿಗೆ ಕೊರತೆಯೇ ಇಲ್ಲ’ ಎಂಬುದನ್ನು ಭಾರತದ ಸತ್ವದ ಮೂಲಕವೇ ರುಜುವಾತು ಮಾಡುತ್ತಿದ್ದಾರೆ.

    ಒಳ್ಳೆ ಸಂಗತಿಗಳನ್ನು ಹೃದಯದಿಂದ ಪ್ರೀತಿಸಿದಾಗ ಅವು ಆಪ್ತವಾಗುವುದಷ್ಟೇ ಅಲ್ಲ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಡುತ್ತವೆ. ಆಗ, ಸಕಾರಾತ್ಮಕ ಮುಖಗಳನ್ನು ಎಲ್ಲರಿಗೂ ಪರಿಚಯಿಸಬೇಕು ಎಂಬ ತುಡಿತ ಇಂಥ ವಿಶಿಷ್ಟ ಪ್ರಯೋಗಗಳ ಸಾಕಾರಕ್ಕೆ ಕಾರಣವಾಗುತ್ತದೆ. ಮುಂಬೈನಲ್ಲೇ ಹುಟ್ಟಿ ಬೆಳೆದಿರುವ 27 ವರ್ಷದ ಅಭಿರಾಜ್ ಓದಿದ್ದು Advertising and mass media. ವೃತ್ತಿಪರ ಫೀಲ್ಮ್​ಮೇಕರ್ ಆಗಿ 2014ರಿಂದ ವಿವಿಧ ಪ್ರತಿಷ್ಠಿತ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸಿದ ಅವರಿಗೆ ಈ ವಿಡಿಯೋ/ಚಿತ್ರಗಳೆಲ್ಲ ಸೃಜನಾತ್ಮಕವಾಗಿ ಮೂಡಿಬಂದರೂ ‘ಅವು ‘ಪ್ರಾಡೆಕ್ಟ್’ ಮಾತ್ರ ಅಲ್ಲವೇ, ನನಗೆ ತೃಪ್ತಿ ನೀಡುವಂಥ ಕೆಲಸ ಮಾಡಬೇಕು’ ಎಂಬ ತುಡಿತ ಕಾಡತೊಡಗಿತು. ಕೆಲಸದ ನಡುವೆಯೇ ವಾರಕ್ಕೊಂದು ಸ್ವಾರಸ್ಯಕರ ವಿಡಿಯೋ ಮಾಡಿ, ಫೇಸ್​ಬುಕ್​ನಲ್ಲಿ ಹಾಕತೊಡಗಿದಾಗ, ಉತ್ತಮ ಪ್ರತಿಕ್ರಿಯೆ ಬಂತು. 2018ರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಅಭಿಗೆ ಬಾಳಸಂಗಾತಿಯಾಗಿದ್ದು ಉತ್ತರ ಕನ್ನಡದ ಹುಡುಗಿ ನಿಯತಿ ಮಾವಿನಕುರ್ವೆ.

    ವೃತ್ತಿಯಲ್ಲಿ ಸಿಎ ಆಗಿರುವ ನಿಯತಿಗೆ ಬರವಣಿಗೆ ಅಂದ್ರೆ ಪಂಚಪ್ರಾಣ. ಹಾಗಾಗಿ, ಇಬ್ಬರೂ ಮುಂದಿನ ಬಾಳಪಯಣದ ಬಗ್ಗೆ ರ್ಚಚಿಸಿದರು. ‘ಗಳಿಕೆ, ಲಾಭವನ್ನು ಬದಿಗಿಟ್ಟು ಒಂದು ವರ್ಷ ನಮ್ಮ ಆಸಕ್ತಿಯಂತೆ ಬಾಳೋಣ, ಅದು ಕೈಹಿಡಿದರೆ ಮುಂದೆ ಹಾಗೇ ಸಾಗೋಣ, ಇಲ್ಲವಾದರೆ ಜೀವನ ಕಲಿಸಿದ ಪಾಠ ಅಂದುಕೊಂಡು ಹೊಸ ಅನುಭವದೊಂದಿಗೆ ಮುಂದೆ ನಡೆಯೋಣ’ ಅಂತ ನಿರ್ಧರಿಸಿದರು.

    ಆಗಲೇ ಶುರುವಾಗಿದ್ದು ಹೊಸ ಪಯಣ (2019 ಮೇ). ‘ಭಾರತವನ್ನು ಪ್ರೀತಿಸಲು ನೂರು ಕಾರಣಗಳು’ ಎಂಬ ಸರಣಿ ಆರಂಭಿಸಿದರು. ದೇಶದ ಬೇರೆ-ಬೇರೆ ಭಾಗಗಳಿಗೆ ಹೋಗಿ, ಅಲ್ಲಿಯ ಸಂಸ್ಕೃತಿ, ಜೀವನಪದ್ಧತಿ ಅಧ್ಯಯನ ಮಾಡುವುದು, ಸ್ಥಳೀಯರೊಂದಿಗೆ ಬೆರೆತು ಅಲ್ಲಿನ ವೈಶಿಷ್ಟ್ಯಗಳನ್ನು ಅರಿಯುವುದು, ತೆರೆಮರೆಯ ಸಾಧಕರನ್ನು ಪರಿಚಯಿಸುವುದು, ಹೆಮ್ಮೆಯ ಸಂಗತಿಗಳನ್ನು ಪಟ್ಟಿ ಮಾಡುವುದು… ಇದನ್ನೆಲ್ಲ ಸಂಕಲಿಸಿ 4-5 ನಿಮಿಷಗಳ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳ ಮೂಲಕ (https://following-love.com/) ಬಿಡುಗಡೆ ಮಾಡಿದಾಗ ಆರಂಭದಲ್ಲಿ ಸಾಧಾರಣ ಪ್ರತಿಕ್ರಿಯೆ ದೊರೆಯಿತು. ಆದರೆ, ಕೆಲ ದಿನಗಳಲ್ಲೇ ಈ ವಿಡಿಯೋಗಳನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು ಮಾತ್ರವಲ್ಲ, ಮೆಚ್ಚಿಕೊಂಡು, ಖುಷಿಪಟ್ಟರು. ಅದು ಇವರ ಉತ್ಸಾಹವನ್ನೂ ಹೆಚ್ಚಿಸಿತು.

    ಭಾರತ ಎಷ್ಟೆಲ್ಲ ಅಚ್ಚರಿಗಳನ್ನು ಹೊಂದಿದೆ ನೋಡಿ! ಒಂದೆಡೆ, ಈಗಲೂ ಮಹಿಳಾ ಸಮಾನತೆ ಬಗ್ಗೆ ಚರ್ಚೆ ನಡೆಯುತ್ತೆ. ಆದರೆ, ಮೇಘಾಲಯ, ಸಿಕ್ಕಿಂನ ಬಹುತೇಕ ಪ್ರದೇಶದ ವಿವಾಹ ಪದ್ಧತಿ ವಿಶಿಷ್ಟ. ಎಲ್ಲ ಕಡೆ ಮದುವೆಯಾದ ಮೇಲೆ ಹೆಣ್ಣು ಗಂಡನ ಮನೆಗೆ ಹೋದರೆ ಈ ಪ್ರದೇಶಗಳಲ್ಲಿ ಗಂಡು ಹೆಣ್ಣಿನ ಮನೆಗೆ ಹೋಗುತ್ತಾನೆ. ಅಷ್ಟೇ ಅಲ್ಲ, ಆಸ್ತಿ ನಿರ್ವಹಣೆಯ ಅಧಿಕಾರ ಮನೆಯ ಕಿರಿಮಗಳ ಕೈಗೆ. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಈಶಾನ್ಯ ಭಾರತದ ಜನರು ಇತರರೊಡನೆ ಸಹಜವಾಗಿ ಬೆರೆತು, ತಮ್ಮ ಕಲೆ, ಪರಂಪರೆಯನ್ನು ತಿಳಿಸಿಕೊಡುತ್ತಾರೆ. ಪ್ರಾಕೃತಿಕ ಸಿರಿ ಹೊಂದಿರುವ ಲಡಾಖ್​ಗೆ ನೀರಿನ ಸಮಸ್ಯೆ ತೀವ್ರ! ಏಕೆಂದರೆ, ನದಿಗಳೂ ಮಂಜುಗಡ್ಡೆಯಾಗಿ ಬಿಡುತ್ತವೆ. 15 artificial glaciers ನಿರ್ವಿುಸುವ ಮೂಲಕ, ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಕಲ್ಪಿಸಿದ್ದಾರೆ ಚಿವಾಂಗ್ ನಾರ್ಫೆಲ್ ಎಂಬ ಸಜ್ಜನ. ಈ ಸಾಧನೆಗೆ ಪದ್ಮಶ್ರೀ ಗೌರವದ ಗರಿ ಮೂಡಿದರೂ, ಅದ್ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದಾರೆ. ಇವರನ್ನು ಈ ದಂಪತಿ ಮಾತನಾಡಿಸಿದಾಗ, ಭಾರತದ ಜ್ವಲಂತ ಸಮಸ್ಯೆಗಳು ಬಗೆಹರಿಯುವ ಪರಿಯ ನೈಜ ಸಾಕ್ಷಾತ್ಕಾರವಾಯಿತು. ಸಿಕ್ಕಿಂ ಶೇಕಡ 100ರಷ್ಟು ಸಾವಯವ ರಾಜ್ಯವಾದ ಬಳಿಕ, ಅದನ್ನು ಇತರ ರಾಜ್ಯಗಳು ಪ್ರೇರಣೆಯಾಗಿ ಪಡೆದಿರುವುದನ್ನು ಅಭಿ-ನೀತು ಪ್ರತ್ಯಕ್ಷವಾಗಿ ಕಂಡಿದ್ದಾರೆ.

    ‘ವಡಾಪಾವ್’ ಹೆಸರು ಕೇಳಿದೊಡನೆ ಬಾಯಲ್ಲಿ ನೀರೂರುತ್ತದೆ. ಈ ವಡಾಪಾವ್ ಆರ್ಥಿಕತೆಗೂ ಟಾನಿಕ್ ಆಗಿದೆ. ಮುಂಬೈಯೊಂದರಲ್ಲೇ ದಿನಕ್ಕೆ 20 ಲಕ್ಷಕ್ಕಿಂತ ಅಧಿಕ ವಡಾಪಾವ್ ಮಾರಾಟದಿಂದ, ಸರಾಸರಿ 3 ಕೋಟಿ ರೂ. ವಹಿವಾಟು ನಡೆಯುತ್ತದೆ. ವಡಾಪಾವ್​ನಿಂದಲೇ ಬದುಕು ಕಟ್ಟಿಕೊಂಡ ಅದೆಷ್ಟೋ ಜನರನ್ನು ಮಾತನಾಡಿಸಿ, ಭಾರತವನ್ನು ಪ್ರೀತಿಸಲು ಇನ್ನೆಷ್ಟು ಕಾರಣಗಳು ಬೇಕು ಎಂದು ಹೆಮ್ಮೆಯ ಭಾವದಿಂದ ಪ್ರಶ್ನಿಸುತ್ತಾರೆ ಈ ದಂಪತಿ. ಭಾರಿ ಅಬ್ಬರ ಸೃಷ್ಟಿಸುವ ಐಪಿಎಲ್​ನ ಆರ್ಥಿಕ ಚಟುವಟಿಕೆ 1300-1500 ಕೋಟಿ ರೂಪಾಯಿಯ ಆಸುಪಾಸು. ಆದರೆ, ಹತ್ತು ದಿನ ನಡೆಯುವ ಮುಂಬೈ ಗಣೇಶೋತ್ಸವದ ಆರ್ಥಿಕ ವಹಿವಾಟು 20 ಸಾವಿರ ಕೋಟಿ ರೂಪಾಯಿ! 7 ಲಕ್ಷ ಮೂರ್ತಿಗಳು ಪ್ರತಿಷ್ಠಾಪನೆಯಾಗುವ ಮೂಲಕ, ಮೂರ್ತಿ ತಯಾರಿಕರಿಗೆ, ಅಲಂಕಾರೋದ್ಯಮ, ಕೇಟರಿಂಗ್, ಹೂವು ವ್ಯಾಪಾರಿಗಳಿಗೆ ಭರ್ಜರಿ ಆದಾಯ. ನಮ್ಮ ಹಬ್ಬ-ಉತ್ಸವಗಳು ಭಾವನೆಗಳ ಜೊತೆ ಬೆಸೆದುಕೊಂಡಿರುವಷ್ಟೇ ಆರ್ಥಿಕವಾಗಿಯೂ ಶಕ್ತಿಯುತವಾಗಿವೆ. ಇಂಥ ಶಕ್ತಿಯನ್ನು, ಸೊಗಸನ್ನು ಗಟ್ಟಿದನಿಯಲ್ಲಿ ಹೇಳಬೇಕಾಗಿದೆ ಎನ್ನುವ ಅಭಿ-‘ಇದಕ್ಕಾಗಿಯೇ ದೇಶಾದ್ಯಂತ ಸುತ್ತಿದ್ದೇವೆ’ ಎನ್ನುತ್ತಾರೆ.

    ಚಿಕ್ಕಮಗಳೂರಿನ ಮೂಲಕ ಕಾಫಿಯ ರುಚಿ ಭಾರತದಾದ್ಯಂತ ಹರಡಿರುವ ಬಗೆ, ಪ್ರವಾಸೋದ್ಯಮದ ನಕ್ಷೆಯಲ್ಲಿ ಮೈಸೂರು ಪಡೆದಿರುವ ಸ್ಥಾನ, ಬೆಂಗಳೂರಿನ ಚುರುಕುತನ, ಇಲ್ಲಿನ ಯುವಕರ ಹೊಸ ಐಡಿಯಾಗಳು, ಯಕ್ಷಗಾನ ಕಲೆ ಸಾರುವ ಮೌಲ್ಯಗಳ ಶ್ರೀಮಂತಿಕೆ ಇದನ್ನೆಲ್ಲ ಆಯಾ ಸಾಧಕರೊಡನೆ ಮಾತನಾಡಿಸಿಯೇ ವಿವರಿಸಿರುವುದರಿಂದ, ಇವರ ಪ್ರಯತ್ನಗಳು ಹೆಚ್ಚು ಸಾರ್ಥಕತೆ ಪಡೆದಿವೆ. ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆಯವರು ಯಕ್ಷಗಾನದ ಸಾಂಸ್ಕೃತಿಕ ಸತ್ವವನ್ನು ತಿಳಿಸಿಕೊಟ್ಟಿರುವ ಬಗೆ, ಹಲವು ರಾಜ್ಯಗಳಲ್ಲಿನ ಯುವಕೃಷಿಕರು ಕೃಷಿಯ ನೆಮ್ಮದಿಯನ್ನು ಕಟ್ಟಿಕೊಟ್ಟಿರುವ ಪರಿ-ಇವೆಲ್ಲ ಎಂಥವರಲ್ಲೂ ಒಂದಷ್ಟು ವಿಶ್ವಾಸ ಮೂಡಿಸುತ್ತವೆ. ಕೊಲ್ಕತ್ತದ ಕಾಳಿ ದೇವಸ್ಥಾನದಲ್ಲಿ ದೇವಿಗೆ ನೂಡಲ್ಸ್, ಫೈ ್ರ್ರೈಸ್​ನ ನೈವೇದ್ಯ, ಭಕ್ತರಿಗೆ ಅದುವೇ ಪ್ರಸಾದ, ಶಿಲ್ಲಾಂಗ್ ಸುತ್ತಮುತ್ತ ಕಾಡುಪ್ರದೇಶದಿಂದ ಅಲ್ಲಿಯ ಜನರು ಒಂದು ಎಲೆಯನ್ನೂ ಪಡೆಯದೆ, ಅದಕ್ಕೆ ದೈವತ್ವದ ಸ್ಥಾನ ನೀಡಿ, ಕಾಡನ್ನು ಸಂರಕ್ಷಿಸುತ್ತಿರುವ ಅರಿವು-ಹೀಗೆ ಎಲ್ಲಿ ಹೋದರೂ ಭಾರತದ ತುಂಬ ಪ್ರೇರಣೆ ನೀಡುವಂಥ ಸಂಗತಿಗಳೇ.

    ಇದನ್ನೆಲ್ಲ ಕ್ರಮವಾಗಿ ನಮೂದಿಸಿ, ಅದನ್ನು ‘100 ಕಾರಣ’ಗಳ ಮೂಲಕ ಜನರೆದುರು ತೆರೆದಿಟ್ಟಿರುವ ಅಭಿ-ನೀತು ಯುವಮನಸ್ಸುಗಳ ತಾಜಾ ಚಿಂತನೆ ಮತ್ತು ಸಕಾರಾತ್ಮಕ ಮನೋಭಾವಕ್ಕೆ ಸಾಕ್ಷಿಯಾಗಿದ್ದಾರೆ. ಇವರ ಈ ವಿಶೇಷ ಉದ್ದೇಶದ ಪ್ರವಾಸ ನೋಡಿ ಹಲವು ಕಾಪೋರೇಟ್ ಕಂಪನಿಗಳು ಪ್ರವಾಸವನ್ನು ಪ್ರಾಯೋಜಿಸಿದ್ದೂ ಇದೆ. ನೀತು ಹವ್ಯಾಸಿ ಬರಹಗಾರರಾಗಿ ಆರ್ಥಿಕ ಮತ್ತು ಪ್ರವಾಸ ವಿಷಯದ ಬಗ್ಗೆ ಲೇಖನ ಬರೆಯುತ್ತ, ಅದರಿಂದ ಬರುವ ಸಂಭಾವನೆಯನ್ನೇ ದಾರಿಖರ್ಚಿಗೆಂದು ಮಾಡಿಕೊಂಡಿದ್ದಾರೆ.

    ‘ಮನಸ್ಸಿಗೆ ಹತ್ತಿರವಾದದನ್ನು ಮಾಡಬೇಕು ಎಂಬುದು ತುಂಬ ಜನರ ಇಚ್ಛೆ. ಇದನ್ನೇ ವೃತ್ತಿಯಾಗಿಸಿಕೊಳ್ಳುವ ಅವಕಾಶಗಳೂ ಇವೆ. ಆಕಸ್ಮಾತ್, ಈಗಾಗಲೇ ಬೇರೆ ವೃತ್ತಿ ಆರಿಸಿಕೊಂಡಿದ್ದರೆ ನಿರಾಸೆ ಬೇಡ. ನಮ್ಮ ಆಸಕ್ತಿಗೆ ಒಂದಿಷ್ಟು ಸಮಯ ಹೊಂದಿಸಿಕೊಳ್ಳಬೇಕು. ನಿದ್ದೆಯನ್ನು ಒಂದು ಗಂಟೆ ಕಡಿಮೆ ಮಾಡಿ ಫೋಟೋಗ್ರಫಿ, ಬರವಣಿಗೆ, ಚಿತ್ರಕಲೆ, ಹಾಡು-ಹೀಗೆ ನಮಗಿಷ್ಟವಾದ ಯಾವುದೇ ಚಟುವಟಿಕೆಯಲ್ಲಿ ತೊಡಗಿದರೆ, ಅದರಲ್ಲಿ ಮುಂದೆ ಸಾಗುವ ಇನ್ನಷ್ಟು ದಾರಿಗಳು ಗೋಚರಿಸುತ್ತವೆ’ ಎನ್ನುವ ಅಭಿ-ನೀತು (https://www.facebook.com/followinglovefilms) ಕರೊನಾ ಆರ್ಭಟ ಕೊಂಚ ತಗ್ಗಿದ ಮೇಲೆ ಮತ್ತೆ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ. ಈ ಬಾರಿಯ ಸುತ್ತಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮಾತನಾಡಿಸಿ, ಅವರ ಅನುಭವಗಳನ್ನು ದಾಖಲಿಸುವ ಉದ್ದೇಶ ಹೊಂದಿದ್ದಾರೆ.

    ‘ಒಂದೆಡೆ ದಟ್ಟವಾದ ಕಾಡು. ಇನ್ನೊಂದೆಡೆ ವಿಶಾಲ ನದೀ ಬಯಲು. ಒಂದೆಡೆ ಭಣಗುಡುವ ಮರಭೂಮಿ. ಮತ್ತೊಂದು ಕಡೆ ಉಕ್ಕೇರಿ ಹರಿವ ಆಳ, ಅಗಲವಾದ ನದಿಗಳ ಮಂಜುಳನಾದ. ಆ ತುಂಬಿದ ತಟಾಕ, ಗೊಂಚಲು ಗೊಂಚಲಾಗಿ ಇಳಿಬಿದ್ದು ಕಣ್ತುಂಬುವ ಹಣ್ಣಿನ ನಾಕ, ದೃಷ್ಟಿ ಸೋಲಿಸುವ ಆ ದಟ್ಟ ಹಸುರು ಲೋಕ. ಸುತ್ತಮುತ್ತ ಹೊಳೆ-ಕೆರೆ, ಬೆಟ್ಟಗಳು, ಪೂರ್ವ ಪಶ್ಚಿಮದಲ್ಲಿ ಅಭೇದ್ಯ ಘಟ್ಟಗಳು. ಮೇಲೆ ಹಿಮಪ್ರಪಾತ, ಸುತ್ತ ಸಮುದ್ರದ ಭೋರ್ಗರೆತ. ಇದು ನಮ್ಮ ಭಾರತ’-(ಭಾರತ ದರ್ಶನ ಕೃತಿ-ಬಿ.ವಿ.ವಿದ್ಯಾನಂದ ಶೆಣೈ).

    ಹೌದಲ್ಲವೇ, ತನ್ನ ಧೂಳಿನ ಕಣ-ಕಣದಲ್ಲಿಯೂ ದೇವಾಂಶವನ್ನು ಹೊಂದಿರುವ ಭಾರತದ ಶ್ರೇಷ್ಠತೆಯನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ. ಇದೆಲ್ಲವನ್ನೂ ಕಾಣಬೇಕಾದರೆ, ಮೊದಲು, ನಮ್ಮನ್ನು ನಾವು ಪ್ರೀತಿಸಬೇಕು, ಜೀವನವನ್ನು ಮುದ್ದಿಸಬೇಕು, ದೇಶವನ್ನು ಆರಾಧಿಸಬೇಕು… ಆಗಲೇ ಜೀವನದ ಪಯಣ ಸುಗಮ, ಸುಮಧುರ. ಪ್ರೀತಿಯ ಭಾವದಿಂದ ಜಗತ್ತನ್ನು ನೋಡಿದರೆ ಎಲ್ಲವೂ ಸುಂದರ. ನಮ್ಮ ಬದುಕು, ನಮ್ಮ ದೇಶ ಕೂಡ.

    ಚುನಾವಣಾ ಪ್ರಚಾರದ ಮೇಲೂ ಕರೋನಾ ಕರಿಛಾಯೆ: ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts