More

    ಕರೆದರೆ ಭಗವಂತ ಬಂದೇ ಬರ್ತಾನೆ, ಹೇಗೆ ಕರೆಯಬೇಕು?

    ಈ ಹೊತ್ತಲ್ಲಿ ಪ್ರತಿವರ್ಷ ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ ಸಾಗುವ ವಾರಕರಿಗಳ ಕಲರವ! ಅದು ಭಕ್ತಿಯ ಮಹೋನ್ನತ ಪರ್ವ. ಕರೊನಾದ ಹಾವಳಿ ಹಲವು ಶತಮಾನಗಳ ಪರಂಪರೆಗೆ ತಡೆ ಹಾಕಿದೆ. ಈ ಬಾರಿ ವಾರಿ ನಡೆಯುತ್ತಿಲ್ಲ ಎಂಬ ಸಂಗತಿಯೇ ಲಕ್ಷಾಂತರ ಹೃದಯಗಳ ನೋವನ್ನು ಹೆಚ್ಚಿಸಿದೆ. ಕೆಲವೇ ಯಾತ್ರಿಕರು ಸಂತ ಜ್ಞಾನೇಶ್ವರ ಮತ್ತು ಸಂತ ತುಕಾರಾಮರ ಪಾದುಕೆಗಳನ್ನು ಹೆಲಿಕಾಪ್ಟರ್ ಮುಖಾಂತರ ಪಂಢರಪುರಕ್ಕೆ ಆಷಾಢ ಏಕಾದಶಿಯಂದು (ಜುಲೈ 1) ಕೊಂಡೊಯ್ಯಲಿದ್ದಾರೆ. ಆದರೆ, ಹೃದಯಸಿಂಹಾಸನದಲ್ಲೇ ಪಾಂಡುರಂಗನನ್ನು ಪ್ರತಿಷ್ಠಾಪಿಸಿಕೊಂಡು, ಆಂತರ್ಯದಲ್ಲೇ ವೈಕುಂಠ ಸೃಷ್ಟಿಸಿಕೊಂಡಿರುವ ಭಕ್ತರ ಸಂಖ್ಯೆ ಕಡಿಮೆಯೇನಲ್ಲ. ಕೆಲವರು ಅಜ್ಞಾನದಿಂದ ‘ಭಗವಂತನನ್ನು ಕರೆದರೆ ಬಂದು ಬಿಡುತ್ತಾನೆಯೇ?’ ಎಂದು ಪ್ರಶ್ನಿಸುತ್ತಾರೆ. ಖಂಡಿತ ಬರುತ್ತಾನೆ! ಹೇಗೆ ಕರೆಯಬೇಕು ಎಂಬುದು ಗೊತ್ತಿರಬೇಕಷ್ಟೇ. ಮಾತೃಹೃದಯದಿಂದ ಭಗವಂತನನ್ನೂ ಮಗುವಿನಂತೆ ಕರೆದರೆ, ಆತ ಧಾವಿಸಿ ಬಂದು ಅಪು್ಪಗೆ ನೀಡುತ್ತಾನೆ. ಭಕ್ತರು ಭಗವಂತನನ್ನು ಅರಸಿ ಹೋಗುವುದು ಸಾಮಾನ್ಯ. ಭಕ್ತರ ಕರೆಗೆ ಓಗೊಟ್ಟು ಅವರು ಇದ್ದಲ್ಲಿಗೆ ಬಂದು ಜನ್ಮಸಾರ್ಥಕ ಮಾಡುವವನು ನಮ್ಮ ಪಾಂಡುರಂಗ ವಿಠ್ಠಲ. ಅದಕ್ಕಾಗಿಯೇ, ಭಕ್ತಿಪಂಥದ ಸಾಧಕರ ಬದುಕು ಬೆರಗುಗೊಳಿಸುತ್ತದೆ, ಅದರಲ್ಲೂ ಮಹಿಳೆಯರು ಭಕ್ತಿ ಪರಂಪರೆಗೆ ಹೊಸ ಶಕ್ತಿ ತುಂಬಿದ ಪರಿ ಅನನ್ಯ.

    ಧಾರ್ವಿುಕ, ಆಧ್ಯಾತ್ಮಿಕ ಲೋಕದಲ್ಲಿ ಪುರುಷನಿಗೇ ಮನ್ನಣೆ, ಮಾನ್ಯತೆ ಇರುವ ಸಂದರ್ಭದಲ್ಲೂ ಕ್ರಾಂತಿಕಾರಿಕ ಸುಧಾರಣೆಗಳ ಮೂಲಕ ಮಿಂಚಿನ ಸಂಚಲನ ಮೂಡಿಸಿದ ಮಹಿಳಾ ಸಂತರು ಭಕ್ತಿಯ ಶಕ್ತಿಯನ್ನು ದರ್ಶಿಸಿಕೊಟ್ಟಿದ್ದಾರೆ. ಭಕ್ತಿ ಪರಂಪರೆಯನ್ನು ತೀರಾ ಜನಸಾಮಾನ್ಯರವರೆಗೂ ತಲುಪಿಸಲು ಇನ್ನಿಲ್ಲದಂತೆ ಶ್ರಮಿಸಿದ್ದಾರೆ. ಮಹಾರಾಷ್ಟ್ರದ ವಿಠ್ಠಲ ಭಕ್ತಿ ಪರಂಪರೆಯಲ್ಲಿ ಮಹಿಳಾ ಸಂತರ ಕಾರ್ಯ ಮತ್ತು ಅವರ ಕಷ್ಟಸಹಿಷ್ಣುತೆ ಬೆರಗುಗೊಳಿಸುತ್ತವೆ, ಪ್ರೇರಣೆ ನೀಡುತ್ತವೆ. ಆ ಭಗವಂತ ಎಷ್ಟೇ ಎತ್ತರದಲ್ಲಿದ್ದರೂ ಆತ ಕರುಣೆ, ದಯೆಯ ವಿಷಯದಲ್ಲಿ ಹೆಂಗರುಳೇ ಅಂತೆ. ಹಾಗಾಗಿ, ಈ ಸಂತರ ಭಕ್ತಿಗೆ ವಿಠ್ಠಲ ಅದೆಷ್ಟು ಮೋಡಿಯಾದನೆಂದರೆ ತಾನೇ ಭಕ್ತನಾಗಿಯೂ ಸೇವೆಗೈದ, ಪವಾಡಗಳನ್ನು ಸೃಷ್ಟಿಸಿದ. ಆ ಮೂಲಕ ಮಹಿಳಾ ಸಂತರ ಕಾರ್ಯಗಳು ಅಮರವಾಗಿ, ದಿಕ್ಸೂಚಿಯಾಗಿ ಉಳಿಯಲು ಸಾಧ್ಯವಾಗಿದೆ.

    ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    1400 ವರ್ಷದ ಚಾಂಗದೇವನಿಗೆ ಗುರುವಾಗಿದ್ದು 8 ವರ್ಷದ ಬಾಲಕಿ!: ಭಗವಂತನನ್ನು ಕಾಣುವುದೆಂದರೆ ಎಲ್ಲೋ ಹೊರಗಡೆ ಹುಡುಕುವುದಲ್ಲ, ದೀರ್ಘ ತಪಸ್ಸು ಮಾಡುವುದಲ್ಲ. ನಮ್ಮೊಳಗೇ ಇರುವ ಭಗವತ್ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವುದೇ ಸಾಕ್ಷಾತ್ಕಾರ. ಅದಕ್ಕಾಗಿ ಎಲ್ಲ ವಿಕಾರಗಳನ್ನು ತ್ಯಜಿಸಿ ನೈತಿಕ, ಸಾತ್ವಿಕ ಬದುಕಿನತ್ತ ಸಾಗಬೇಕು-ಹೀಗೆ ಅಧ್ಯಾತ್ಮ ಎಂಬ ಕಬ್ಬಿಣದ ಕಡಲೆಯನ್ನು ಸರಳವಾಗಿ ಬೋಧಿಸಿದ, ತನ್ಮೂಲಕ ಸಮಾಜ ಶುದ್ಧೀಕರಣಕ್ಕೆ ನಾಂದಿ ಹಾಡಿದ ಸಾಧಕಿ ಸಂತ ಮುಕ್ತಾಬಾಯಿ (ಮುಕ್ತಾಯಿ ಎಂದೂ ಸಂಬೋಧಿಸುತ್ತಾರೆ). 14ನೇ ವರ್ಷಕ್ಕೆ ‘ಜ್ಞಾನೇಶ್ವರಿ’ ರಚಿಸಿ ಆಧ್ಯಾತ್ಮಿಕ ಲೋಕವನ್ನು ವಿಸ್ಮಯಗೊಳಿಸಿದ ಸಂತ ಜ್ಞಾನೇಶ್ವರರ ಸಹೋದರಿಯೇ ಮುಕ್ತಾಬಾಯಿ.

    ಮಹಾರಾಷ್ಟ್ರದ ಆಳಂದಿಯಲ್ಲಿ 1279ರಲ್ಲಿ ಜನಿಸಿದ ಮುಕ್ತಾಬಾಯಿಗೆ ಮೂವರು ಅಣ್ಣಂದಿರು(ಸಂತ ನಿವೃತ್ತಿನಾಥ, ಸಂತ ಜ್ಞಾನೇಶ್ವರ, ಸಂತ ಸೋಪಾನ್​ದೇವ್). ತಂದೆ ವಿಠ್ಠಲ, ತಾಯಿ ರುಕ್ಮಿಣಿ. ಪೈಠಣ್ ಬಳಿಯ ಆಪೆಗಾವ್ ಇವರ ಮೂಲಗ್ರಾಮ. ಮುಕ್ತಾಯಿಯ ತಂದೆ ವಿಠ್ಠಲ ಸಂನ್ಯಾಸ ತೆಗೆದುಕೊಂಡು ಗುರುಗಳ ಆದೇಶದಂತೆ ಮತ್ತೆ ಗೃಹಸ್ಥಾಶ್ರಮಕ್ಕೆ ಬಂದಿದ್ದರು. ಆದರೆ, ಇದನ್ನು ಸಹಿಸದ ಆಗಿನ ಸಂಪ್ರದಾಯವಾದಿಗಳು ವಿಠ್ಠಲ-ರುಕ್ಮಿಣಿಯನ್ನು ಹೀನಾಯವಾಗಿ ಅವಮಾನಿಸಿದರಲ್ಲದೆ, ಈ ನಾಲ್ವರನ್ನು ‘ಸಂನ್ಯಾಸಿಯ ಮಕ್ಕಳು’ ಎಂದು ಜರಿಯತೊಡಗಿದರು. ಮಾತ್ರವಲ್ಲದೆ, ಕುಟುಂಬವನ್ನೇ ಬಹಿಷ್ಕಾರ ಮಾಡಿ ಗ್ರಾಮದಿಂದ ಆಚೆ ನೂಕಿದರು. ಇದಕ್ಕೆಲ್ಲ ಪ್ರಾಯಶ್ಚಿತವೇನು ಎಂದು ಗ್ರಾಮಸ್ಥರಲ್ಲಿ ವಿಠ್ಠಲ ಕೇಳಿದಾಗ ಸಂಪ್ರದಾಯವಾದಿಗಳು ‘ನೀವು ಸತಿ-ಪತಿ ಗಂಗೆಗೆ ಪ್ರಾಣಾರ್ಪಣೆ ಮಾಡುವುದೇ ಪ್ರಾಯಶ್ಚಿತ’ ಎಂದರು! ಮಕ್ಕಳಾದರೂ ಸುಖವಾಗಿರಲಿ ಎಂದು ವಿಠ್ಠಲ-ರುಕ್ಮಿಣಿ ಗಂಗೆಗೆ ಹಾರಿ ಪ್ರಾಣ ಅರ್ಪಿಸಿದರು. ಈ ಘಟನೆ ನಡೆದಾಗ ಮುಕ್ತಾಬಾಯಿಗೆ ಕೇವಲ 5 ವರ್ಷ! ಹುಟ್ಟು-ಸಾವುಗಳ ಕಲ್ಪನೆಯೂ ಬಾರದ ವಯಸ್ಸದು. ಆದರೆ, ದೈವೀಶಕ್ತಿಯ ಪರಿಣಾಮ ಮುಕ್ತಾಯಿಗೆ ನಡೆದಿದ್ದೆಲ್ಲವೂ ತಿಳಿಯಿತು. ಮನಸ್ಸಿಗೆ ತೀವ್ರ ವ್ಯಥೆಯಾಯಿತಾದರೂ ಹೊಸದಾಗಿ ಜೀವನ ಆರಂಭಿಸಲು ನಿರ್ಧರಿಸಿದ್ದಲ್ಲದೆ ಮನೆಯ ತಂಗಿಯಾಗಿದ್ದ ಅವಳು ತಾಯಿಯ ಸ್ಥಾನವನ್ನು ತೆಗೆದುಕೊಂಡು, ಅಣ್ಣಂದಿರನ್ನೂ ಸಲಹತೊಡಗಿದಳು. ಅವರ ಜತೆ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದಳು.

    ಇದನ್ನೂ ಓದಿ: VIDEO: ಮಿಸ್ಟರ್ ಬೀನ್ ನೆರವು ಕೋರಿತು ಡಬ್ಲ್ಯುಎಚ್​ಒ

    ಅದೊಮ್ಮೆ ಸಂತ ಜ್ಞಾನೇಶ್ವರರು ಜನರ ತುಚ್ಛಮಾತುಗಳಿಂದ ಅವಮಾನಿತರಾದಾಗ ದುಃಖದಿಂದ ಗುಡಿಸಲಿಗೆ ಬಂದು ಯಾರೊಡನೆಯೂ ಮಾತಾಡದೆ ಕುಳಿತಿದ್ದರು. ಆಗ ಮುಕ್ತಾಬಾಯಿ ಅಣ್ಣನನ್ನು ಉದ್ದೇಶಿಸಿ ‘ಸಂತರಾದವರು ಅವಮಾನ ಸಹಿಸಲೂ ಸಿದ್ಧರಾಗಿರಬೇಕು’ ಎಂದಳು. ಜ್ಞಾನೇಶ್ವರರ ಕೋಪ, ದುಃಖ ಕಡಿಮೆಯಾಗಿ, ವಾಸ್ತವದ ಅರಿವಾಯಿತು. ಹೀಗೆ ಜ್ಞಾನಬೋಧ ಮಾಡಿದಾಗ ಮುಕ್ತಾಬಾಯಿಯ ವಯಸ್ಸು ಬರೀ 7.

    ಸಂತ ಚಾಂಗದೇವ ತನ್ನ ಯೋಗಶಕ್ತಿಯಿಂದ ಕಾಲಕ್ಕೇ ಸೆಡ್ಡು ಹೊಡೆದಿದ್ದ. ಹಲವು ಬಾರಿ ಮೃತ್ಯು ಸಮೀಪಿಸಿದ್ದರೂ ತಪ್ಪಿಸಿಕೊಂಡಿದ್ದ. ಹಾಗಾಗಿ, 1400 ವರ್ಷ ಬದುಕಿದ್ದ ಆತ ಯೋಗಶಕ್ತಿ ಪಡೆದಿದ್ದನಾದರೂ ಜೀವನವನ್ನು ಅಧ್ಯಾತ್ಮದೆಡೆಗೆ ಹೊರಳಿಸಿರಲಿಲ್ಲ. ಅಂಥ ಸಂದರ್ಭದಲ್ಲಿ ಚಾಂಗದೇವನಿಗೇ ಅಧ್ಯಾತ್ಮವನ್ನು ಬೋಧಿಸಿದ ಮುಕ್ತಾಬಾಯಿ, ಜೀವನ ಸಾರ್ಥಕಗೊಳಿಸಿಕೊಳ್ಳುವ ಪರಿಯನ್ನೂ ಅನಾವರಣಗೊಳಿಸಿದಳು. ಇದನ್ನು ಕೇಳಿ ಜ್ಞಾನೋದಯವಾದಂತೆ ಚಾಂಗದೇವ ‘ಮುಕ್ತಾಬಾಯಿ ನೀನೇ ನನ್ನ ಗುರು’ ಎಂದ. ಈ ಘಟನೆ ನಡೆದಾಗ ಮುಕ್ತಾಬಾಯಿಯ ವಯಸ್ಸು ಬರೀ 8. ಹಾಗೇ, ಸಂತ ನಾಮದೇವ್ ಈ ನಾಲ್ವರು ಸೋದರ-ಸೋದರಿಯರನ್ನು ಕಾಣಲು ಆಳಂದಿಗೆ ಬಂದಿದ್ದರು. ಪಾಂಡುರಂಗನ ನಾಮಸ್ಮರಣೆಯಲ್ಲಿ ಮುಳುಗಿದ್ದ ನಾಮದೇವರಿಗೆ ಈ ನಾಲ್ವರೂ ನಮಸ್ಕರಿಸಿದರೂ ಅದಕ್ಕೆ ಅವರು ಪ್ರತಿ ನಮಸ್ಕಾರ ನೀಡದೆ ನಿರ್ಲಕ್ಷಿಸಿದರು. ಸಂತ ನಾಮದೇವ ವಿಠ್ಠಲ ಭಕ್ತಿಯಲ್ಲಿ ದೊಡ್ಡ ಸಾಧನೆ ಮಾಡಿದ್ದರಾದರೂ ಈ ಅಹಂಕಾರದ ಎಳೆ ಅವರಲ್ಲೇಕೆ ಜಾಗೃತವಾಗಿದೆ ಎಂದು ಪ್ರಶ್ನಿಸಿಕೊಂಡ ಮುಕ್ತಾಬಾಯಿ ಅವರಿಗೂ ಸೌಜನ್ಯದ ಪಾಠ ಕಲಿಸಿದಾಗ ನಾಮದೇವರು ಈ ಬಾಲಕಿಯ ಮುಂದೆ ನತಮಸ್ತಕರಾದರು.

    40 ಅಭಂಗಗಳ ರಚನೆ

    ಸದಾ ವಿಠ್ಠಲನ ಆರಾಧನೆಯಲ್ಲಿ ಇರುತ್ತಿದ್ದ ಮುಕ್ತಾಬಾಯಿ 40 ಅಭಂಗಗಳನ್ನು ರಚಿಸಿದರು. ಮಹಾರಾಷ್ಟ್ರದ ಮೊದಲ ಕವಯಿತ್ರಿ ಎಂಬ ಹೆಗ್ಗಳಿಕೆಯೂ ಮುಕ್ತಾಬಾಯಿಗಿದೆ. ಆ ಕಾಲದ ಹಾಗೂ ನಂತರ ಬಂದ ಸಂತರು ಮುಕ್ತಾಬಾಯಿಯ ಜ್ಞಾನಾಧಿಕಾರ, ಭಾಷಾಪ್ರೌಢಿಮೆ, ಸಂದೇಶಗಳಲ್ಲಿ ಅಡಗಿರುವ ಅಂತಃಕರಣವನ್ನು ಬಹುವಾಗಿ ಕೊಂಡಾಡಿದ್ದಾರೆ. ಹಲವೆಡೆ ಪ್ರವಚನ, ಉಪನ್ಯಾಸ ನೀಡಿ ಸಮಾಜದಲ್ಲಿನ ದೋಷಗಳನ್ನು ಕಟುಶಬ್ದಗಳಲ್ಲಿ ಖಂಡಿಸಿ, ಅದರಿಂದ ಹೊರಬರುವ ದಾರಿಯನ್ನೂ ತೋರಿದ್ದಾಳೆ. ಜನಾನುರಾಗಿಯಾದ ಮುಕ್ತಾಬಾಯಿಯು ಜ್ಞಾನೇಶ್ವರರು ಸಮಾಧಿ ಪಡೆದ ಕೆಲ ದಿನಗಳಲ್ಲೇ ತಾನೂ ಜೀವಂತ ಸಮಾಧಿಯಾದಳು. ಆಗ ಅವಳ ವಯಸ್ಸು 18 ಆಗಿತ್ತು. ಇಷ್ಟು ಅವಧಿಯಲ್ಲೇ ಜೀವನವನ್ನು ಅಲೌಕಿಕ, ಪಾರಮಾರ್ಥಿಕ ವರ್ಣದಲ್ಲಿ ಮಿಂದು, ಅದಕ್ಕೆ ಸಾರ್ಥಕತೆ ಒದಗಿಸಿ, ಸಮಷ್ಟಿಗೂ ಪ್ರೇರಣೆಯಾದಳು. ಅದಕ್ಕೆಂದೆ 8 ಶತಮಾನಗಳ ಬಳಿಕವೂ ಮುಕ್ತಾಬಾಯಿಯ ಮಹಿಮೆ ಹಾಗೂ ಅವಳ ಸಂದೇಶದ ಮಹತ್ವ ಕಿಂಚಿತ್ತೂ ಕುಂದಿಲ್ಲ.

    ಪಾಂಡುರಂಗ ಮನೆಗೇ ಬಂದ!:ಸಣ್ಣ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಪಂಢರಪುರದ ದಾಮಾಶೇಟ್ ಶಿಂಪಿ (ಸಂತ ನಾಮದೇವರ ತಂದೆ)ಯವರ ಆಶ್ರಯದಲ್ಲಿ ಬೆಳೆದ ಸಂತ ಜನಾಬಾಯಿ ಸಾಕ್ಷಾತ್ ಪಾಂಡುರಂಗ-ರುಕ್ಮಿಣಿಯನ್ನೇ ತಂದೆ-ತಾಯಿ ಅಂಥ ಭಾವಿಸಿ, ಭಕ್ತಿಯ ಔನ್ನತ್ಯಕ್ಕೆ ತಲುಪಿದವಳು. 350ಕ್ಕೂ ಅಧಿಕ ಅಭಂಗಗಳನ್ನು ರಚಿಸುವ ಮೂಲಕ ಭಕ್ತಿಸಾಹಿತ್ಯವನ್ನು ಶ್ರೀಮಂತಗೊಳಿಸಿದ ಜನಾಬಾಯಿ ಜೀವನದ ಪ್ರತೀ ಘಟ್ಟದಲ್ಲೂ ಪವಾಡಗಳನ್ನು, ಪಾಂಡುರಂಗನ ಲೀಲೆಗಳನ್ನು ಕಾಣಬಹುದು. ಜನಾಬಾಯಿಯ ಎಲ್ಲ ಅಭಂಗಗಳನ್ನು ‘ಸಂತಗಾಥಾ’ ಹೆಸರಲ್ಲಿ ಸಂಕಲನ ಮಾಡಿ, ಮುದ್ರಿಸಲಾಗಿದೆ.

    ನಾಮಸ್ಮರಣೆ ಹಾಗೂ ಶುದ್ಧ ಅಂತಃಕರಣದ ಶಕ್ತಿಯನ್ನು ಜಗತ್ತಿಗೆ ದರ್ಶಿಸಿದ ಜನಾಬಾಯಿ ಮಹಿಳಾ ಸಮುದಾಯದ ಅಂತಃಶಕ್ತಿಯನ್ನು ಜಾಗೃತಗೊಳಿಸಿದಳು. ದೇವರ ಕೃಪೆಗೆ ಪಾತ್ರರಾಗಲು, ಆಧ್ಯಾತ್ಮಿಕ ಸಾಧನೆಗೆ ಗಂಡು-ಹೆಣ್ಣೆಂಬ ಭೇದವಿಲ್ಲ. ಆ ಸೃಷ್ಟಿಕರ್ತ ಎಲ್ಲರಲ್ಲೂ ಪವಿತ್ರ ಆತ್ಮವನ್ನು ಇರಿಸಿದ್ದು, ಅದರ ಉತ್ಕರ್ಷ ನಮ್ಮ ಕೈಯಲ್ಲೇ ಇದೆ ಎಂದು ಸಾರಿದಳು. ಸಂತ ನಾಮದೇವ್ ಅವರೊಂದಿಗೆ ದೇಶದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ, ಅಲ್ಲೂ ನೈತಿಕ ಮೌಲ್ಯಗಳನ್ನು ಸ್ಥಾಪಿಸಿದಳು.

    ಇದನ್ನೂ ಓದಿ: ಜರೂರ್​ ಮಾತು: ಜಗತ್ತು ಸಂತೋಷವಾಗಿ ಇರೋದು ಹೃದಯಸಂಪನ್ನರಿಂದಲೇ…

    ಜನಾಬಾಯಿಯ ಭಕ್ತಿ ಅದೆಷ್ಟು ಗಾಢವಾಗಿತ್ತೆಂದರೆ ಇವಳ ಕಷ್ಟ, ಕೆಲಸದ ಹೊರೆ ನೋಡಲಾರದೆ ಪಾಂಡುರಂಗನೇ ನೆರವಿಗೆ ಧಾವಿಸಿ ಬರುತ್ತಿದ್ದ. ನದಿಯಿಂದ ನೀರು ತರುವುದು, ಬಟ್ಟೆ ತೊಳೆಯುವುದು, ಧಾನ್ಯಗಳನ್ನು ಬೀಸುವುದು, ಅಡುಗೆ ಮಾಡುವುದು… ಹೀಗೆ ಹಲವು ಕೆಲಸಗಳಲ್ಲಿ ಭಗವಂತನೇ ನೆರವಾಗುತ್ತಿದ್ದ. ಇದು ಆಗಿನ ಜನರಿಗೆ ನಂಬಲು ಅಸಾಧ್ಯ ಎನಿಸಿ, ಅನುಮಾನ ಪಟ್ಟಿದ್ದೂ ಉಂಟು. ಆಗಲೂ, ಭಕ್ತೆಯ ನೆರವಿಗೆ ಧಾವಿಸಿ ಪ್ರಕಟವಾಗುತ್ತಿದ್ದ ಪಾಂಡುರಂಗ ಎಲ್ಲರಿಗೂ ದರ್ಶನ ನೀಡಿ ಅವರ ಆತ್ಮೋದ್ಧಾರಗೈಯುತ್ತಿದ್ದ. ವಾತ್ಸಲ್ಯ, ಮಮತೆ, ಮೃದುಭಾವ, ಸಮರ್ಪಣೆಯ ಸಂಗಮವಾಗಿದ್ದ ಜನಾಬಾಯಿ ಆ ಕಾಲದಲ್ಲೇ ಮಹಿಳೆಯರಿಗೆ ಅವರ ಹಕ್ಕುಗಳನ್ನು ಕೊಡಿಸಿದಳು. 1272ರಲ್ಲಿ ಪಂಢರಪುರದಲ್ಲೇ ಸಮಾಧಿಸ್ಥಳಾದ ಜನಾಬಾಯಿ ಈಗಲೂ ಪ್ರೇರಣೆಯ ಬೆಳಕನ್ನು ಚೆಲ್ಲುತ್ತಿದ್ದಾಳೆ.

    ಬಹಿಣಾಬಾಯಿ ಎಂಬ ವಾತ್ಸಲ್ಯದ ಗಣಿ: ಅಭಂಗಗಳು ಎಂದಾಕ್ಷಣ ಸಂತ ಬಹಿಣಾಬಾಯಿಯ ಹೆಸರು ತನ್ನಿಂತಾನೇ ಕಣ್ಣೆದುರು ಬಂದುಬಿಡುತ್ತದೆ. ಹಿಂದಿನ 13 ಜನ್ಮಗಳ ಸ್ಮರಣೆ ಹೊಂದಿದ್ದ ಆಕೆ ಈ ಜನ್ಮವನ್ನೂ ಭಗವತ್ ಭಕ್ತಿಗೆ ಅರ್ಪಿಸುವ ಮೂಲಕ ಸಾರ್ಥಕ್ಯ ಪಡೆದಳು. ಬಹಿಣಾಬಾಯಿ ರಚಿಸಿರುವ 473 ಅಭಂಗಗಳೂ ಜೀವನದರ್ಶನ ಮಾಡಿಸುತ್ತವೆ. ವಾತ್ಸಲ್ಯಮಯಿಯಾಗಿ ಸಮಾಜವನ್ನು ಪೊರೆದ ವಿಶೇಷವಾಗಿ ಸ್ತ್ರೀಯರ ಆತ್ಮಬಲ ಹೆಚ್ಚಿಸಿದ ಬಹಿಣಾಬಾಯಿ 1551ರಲ್ಲಿ ವೈಜಾಪುರ ತಾಲೂಕಿನ ದೇವಗಾವ್​ನಲ್ಲಿ ಜನಿಸಿದರು. ತಂದೆ ಆವುಜಿ, ತಾಯಿ ಜಾನಕಿ. 5ನೇ ವರ್ಷದಲ್ಲೇ ವಿವಾಹ ಬಂಧನಕ್ಕೊಳಗಾದರೂ ಅದ್ಯಾವುದೂ ಪಾರಮಾರ್ಥಿಕ ಸಾಧನೆಗೆ ಅಡ್ಡಿಯಾಗಲಿಲ್ಲ. ಮನೆಯ ಬಡತನ, ಸಾಂಸಾರಿಕ ತಾಪತ್ರಯಗಳೆಲ್ಲವನ್ನೂ ಎದುರಿಸಿ ಸಮಷ್ಟಿಯನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಕೊಂಡೊಯ್ದರು. ಸಂತ ತುಕಾರಾಮರ ಅಭಂಗಗಳನ್ನು ಹಾಡುತ್ತ ಹಾಡುತ್ತ ಅವರನ್ನು ಸಾಕ್ಷಾತ್ಕರಿಸಿಕೊಂಡರು. ಅವರ ಅನುಗ್ರಹದಿಂದ ಬಹಿಣಾಬಾಯಿ ಅಭಂಗಗಳನ್ನು ರಚಿಸಿ, ಭಕ್ತಿಪಂಥದಲ್ಲಿ ಹೊಸ ಮಾರ್ಗ ಹುಟ್ಟು ಹಾಕಿದರು. ಪ್ರತಿ ವರ್ಷ ಪಂಢರಪುರಕ್ಕೆ ವಾರಿ ಕೈಗೊಂಡಿದ್ದಲ್ಲದೆ ಈ ಯಾತ್ರೆಯಲ್ಲಿ ಅಸಂಖ್ಯ ಮಹಿಳೆಯರನ್ನು ಜೋಡಿಸಿದ್ದು ವಿಶೇಷ.
    ಈ ದೇಶದ ಕಣಕಣದಲ್ಲೂ ಭಗವಂತನ ಶಕ್ತಿ ಇದೆ ಎಂಬುದಕ್ಕೆ ಇಂಥ ನಿದರ್ಶನಗಳು ಸಾಕ್ಷಿ. ಇವು ನಮ್ಮ ಒಳಗಣ್ಣು ತೆರೆಸಿದರೆ ಸಾಕು, ಆ ಭಗವಂತನಿಗೆ ನಮ್ಮ ಕರೆ ಕೇಳದೆ ಇರಲು ಸಾಧ್ಯವಿಲ್ಲ!
    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಗ್ರಾಮಕ್ಕೆ ಸಿಕ್ಕರೆ ಸಂಸ್ಕಾರ ಗುಡಿಸಲಿನಲ್ಲಿಯೂ ಅರಳುವುದು ಭಾರತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts