More

    ಎಷ್ಟು ಬೇಗ ಮರೆತು ಬಿಡುತ್ತೇವೆ ಮಹಾನುಭಾವರನ್ನು..!; ಜರೂರ್ ಮಾತು

    ಎಷ್ಟು ಬೇಗ ಮರೆತು ಬಿಡುತ್ತೇವೆ ಮಹಾನುಭಾವರನ್ನು..!; ಜರೂರ್ ಮಾತು‘ಅಬ್ಬಾ… ಈಗಲಾದರೂ ನೆನಪಾಯಿತಾ! ಬದುಕಿದ್ದೀನಿ ಅಂತಾದ್ರೂ ಗೊತ್ತಿತ್ತಾ? ಎಲ್ಲರೂ ಮರೆತುಬಿಟ್ಟಿದ್ದಾರೆ, ಈಗ ಏನಿದೆ ನನ್ನಲ್ಲಿ ನೆನಪುಗಳನ್ನು ಬಿಟ್ಟು. ಹಾಗಾಗಿ, ಬಹುತೇಕರಿಗೆ ನನ್ನ ಬಗ್ಗೆ ಜಾಣಕುರುಡು, ಜಾಣಮರೆವು. ಕಾಲದ ಓಟ ನಿರಂತರ. ಇವತ್ತು ನನಗೆ ವಯಸ್ಸಾಗಿದೆ, ನಾಳೆ ನಿಮಗೆ…’

    ಬದುಕಿನ ಸಂಧ್ಯಾಕಾಲದಲ್ಲಿ ಸಾಂತ್ವನದ ಸಣ್ಣ ಕಿರಣವನ್ನು ಆಶಿಸುತ್ತ ದಿನದೂಡುವ ಅದೆಷ್ಟೋ ಹಿರಿಯ ಜೀವಿಗಳ ವ್ಯಥೆಯ ಕಥೆ ಇದು. ಅವರಲ್ಲಿ ಅದ್ಭುತವಾದ ಜೀವನಾನುಭವದ ಅಮೃತವೇ ಇದೆ. ಆದರೆ, ಕೇಳಲು ಯಾರಿಗಿದೆ ವ್ಯವಧಾನ? ಅದೆಷ್ಟೋ ಜನರ ಬದುಕು ಕಟ್ಟಿದ, ಹತ್ತಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಆ ಹಿರಿಯರ ಬದುಕಿನಲ್ಲಿ ಎಷ್ಟೆಲ್ಲ ಕೋಲಾಹಲಗಳಿವೆ, ಕಹಿ ನೆನಪುಗಳಿವೆ, ಸ್ವಾರ್ಥಿ ಮನಸ್ಸುಗಳ ಬಗ್ಗೆ ಸಾತ್ವಿಕ ಆಕ್ರೋಶವಿದೆ ಎಂಬುದನ್ನು ಅವಲೋಕಿಸಿದರೆ ಬದುಕಿನ ಅಧ್ಯಾಯದಲ್ಲಿ ಸಮಾಜ ಮಾನವೀಯತೆಯ ಪುಟವನ್ನೇ ಮರೆತುಬಿಟ್ಟಿದೆಯೇನೋ ಅನಿಸುತ್ತದೆ. ಅಷ್ಟಕ್ಕೂ, ಇಲ್ಲಿ ಯಾರೂ ಚಿರಂಜೀವಿಗಳಲ್ಲ, ಲಕ್ಷ ಜನರಲ್ಲಿ ಒಬ್ಬರೋ-ಇಬ್ಬರೋ ನೂರು ವರ್ಷ ಬದುಕುತ್ತಿದ್ದಾರೆ. ಉಳಿದವರಿಗೆಲ್ಲ ಜೀವನಪ್ರಯಾಣ ‘ಟೂರ್’ ಅಲ್ಲ ‘ಪಿಕ್​ನಿಕ್’ ನಷ್ಟು ಸಂಕ್ಷಿಪ್ತ. ಆದರೂ, ಅದೆಷ್ಟು ಬೇಗ ‘ಮರೆಯುವ’ ನಾಟಕ ಮಾಡುತ್ತೇವೆ ಎಂದರೆ, ನಿಜವಾದ ಭಾವನೆಗಳನ್ನೇ ಬದಿಗೆ ಸರಿಸಿ ಬಿಡುತ್ತೇವೆ.

    ಹಾಗೆ ನೋಡಿದರೆ ನಮ್ಮಲ್ಲಿ ಪಾಶ್ಚಾತ್ಯರ ಹಾಗೆ ಹೇಗೆ ಬೇಕೋ ಹಾಗೇ ಬದುಕುವ ಸ್ವೇಚ್ಛಾಚಾರ ಇಲ್ಲ. ನಮ್ಮದೇ ಆದ ಜೀವನಧರ್ಮವಿದೆ, ಜೀವನಮೌಲ್ಯವಿದೆ. ಅದನ್ನು ಮೀರುವುದು ಅಥವಾ ಅದರ ಹೊರತಾಗಿ ಸಾಗುವುದು ನೈತಿಕ ಅಪರಾಧ ಎಂಬ ಪಾಪಪ್ರಜ್ಞೆಯೂ ಇದೆ. ಹಿಂದೆಲ್ಲ ಯಾರೇ ಸಣ್ಣ ಸಹಾಯ ಮಾಡಿದರೂ ಜನರು ಅದನ್ನು ಮರೆಯುತ್ತಿರಲಿಲ್ಲ. ಓದಲು ನೆರವಾಗಿದ್ದು, ತೀವ್ರ ಬಡತನವಿದ್ದಾಗ ಊಟ ನೀಡಿದ್ದು, ಇರಲು ಆಶ್ರಯ ಒದಗಿಸಿದ್ದು, ಮದುವೆ-ಮುಂಜಿಗೆ ಸಹಕರಿಸಿದ್ದು, ಅನಾರೋಗ್ಯವಾದಾಗ ಸಹಾಯ ಮಾಡಿದ್ದು-ಇದೆಲ್ಲವನ್ನೂ ಜೀವನದ ಕೊನೆಯ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು ಮತ್ತು ಹೃದಯದಾಳದಿಂದ ಅಂಥವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದರು. ಧನ್ಯತೆಯಿಂದ ನೆನಪು ಮಾಡಿಕೊಳ್ಳುತ್ತ ಕೊಡಲು ಏನಿರದಿದ್ದರೂ ಒಂದು ಬೊಗಸೆಯಷ್ಟು ಪ್ರೀತಿ ಸುರಿಸುತ್ತಿದ್ದರು. ಅಂತಃಕರಣ ತುಂಬಿಕೊಳ್ಳಲು ಅಷ್ಟೇ ಸಾಕು ಅಲ್ಲವೇ?

    ಪ್ರೀತಿ, ಕಾಳಜಿ, ಅನುಕಂಪ, ಸಹಾನುಭೂತಿ, ಸ್ಪಂದನೆ- ಇವೆಲ್ಲ ಗ್ರಾಂಥಿಕ ಪದಗಳಲ್ಲ. ಮನಸ್ಸಿನ ಗಾಯವನ್ನು ವಾಸಿ ಮಾಡುವ ದಿವ್ಯ ಔಷಧಗಳು. ಇವುಗಳ ಬಲದಿಂದ ಎಂಥ ನೋವನ್ನೂ ನಿವಾರಿಸಬಹುದು, ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸಣ್ಣದೊಂದು ಆಹ್ಲಾದವನ್ನು ಮೂಡಿಸಬಹುದು. ದುಃಖದಿಂದ ಮನಸ್ಸು ಶೋಕಭರಿತವಾದಾಗ ಸಿಗುವ ಸಾಂತ್ವನದ ಹೆಗಲು, ಎಲ್ಲ ಕಡೆಯಿಂದಲೂ ಸೋಲೇ ಆಕ್ರಮಿಸಿಕೊಂಡು ಬದುಕಿನ ಮಾರ್ಗಗಳು ಬಂದ್ ಆದಾಗ ‘ಹೊಸ ಹಾದಿ ಸಿಕ್ಕೇ ಸಿಗುತ್ತೆ, ಜತೆಯಾಗಿ ಹುಡುಕೋಣ’ ಎಂದು ಸಮಾಧಾನಿಸುವ ಮಾತು, ಪ್ರಯತ್ನಗಳೆಲ್ಲ ಸೋತಾಗ, ‘ಸದ್ಯಕ್ಕೆ ತಾಳ್ಮೆಯೇ ಸಿಹಿ ಎಂದು ಭಾವಿಸೋಣ’ ಎನ್ನುವ ಸಣ್ಣ ಸಾಂತ್ವನ, ಸಹಾಯಕ್ಕೆ ಪ್ರತಿಯಾಗಿ ದೊರೆಯುವ ಸ್ನೇಹಅಪ್ಪುಗೆಯ ಧನ್ಯವಾದ… ಇವೆಲ್ಲ ಉಲ್ಲಾಸ ಮೂಡಿಸುವ ವ್ಯಾಕ್ಸಿನ್​ಗಳಂತೆ! ಆದರೆ, ಇವತ್ತಿನ ಸ್ಥಿತಿ ಹೇಗಿದೆ ಎಂದರೆ ಸಂಬಂಧಗಳೆಲ್ಲ ‘ವ್ಯಾವಹಾರಿಕ’ವಾಗಿವೆ. ಯಾವಾಗ ಸಂಬಂಧಗಳು ಭಾವಲೋಕದಿಂದ ವ್ಯಾವಹಾರಿಕ ಕಣಕ್ಕೆ ಜಿಗಿದವೋ ಆಗಲೇ ಸಂಬಂಧಗಳ ಅವಸಾನ ಆರಂಭವಾಯ್ತು. ‘ಅವರಿಂದ ನನಗೇನು ಆಗಬೇಕಿದೆ?’ ‘ಅವರ ಹತ್ರ ಮಾತಾಡೋ ಕರ್ಮ ನನಗೇನು?’ ಎಂಬೆಲ್ಲ ಠೇಂಕಾರದ ಮಾತುಗಳು. ಸಂಬಂಧಗಳಲ್ಲಿ ಸೋಲಬೇಕಿಲ್ಲ, ಸೌಹಾರ್ದದಿಂದ ಸ್ವಲ್ಪ ಮಣಿದರೆ ಸಾಕು. ಆದರೆ, ಯಾರಿಂದಲೋ ‘ಲಾಭ’ ಆಗುತ್ತದೆ ಎಂದರೆ ಮಾತ್ರ ಸ್ನೇಹ ಸಂಪಾದಿಸುವ (ಅದೂ ಕೃತಕ), ಒಡನಾಟ ಇಟ್ಟುಕೊಳ್ಳುವ ಮನೋವೃತ್ತಿ ಸ್ವಾರ್ಥವನ್ನು ದರ್ಶಿಸುತ್ತದೆ.

    ಗಾಬರಿಗೊಳಿಸುವ ಇನ್ನೊಂದು ಸಂಗತಿ ಏನು ಗೊತ್ತೇನು? ‘ಯೂಸ್ ಆಂಡ್ ಥ್ರೋ’ ಎಂಬುದು ಪೇಪರಿನ ಲೋಟ, ಪ್ಲೇಟುಗಳಿಗೆ ಸೀಮಿತವಾಗದೆ ಮನುಷ್ಯ ಸಂಬಂಧಗಳಿಗೂ ಅನ್ವಯವಾಗುತ್ತಿದೆ. ಕೆಲಸವಿದ್ದಾಗ ಹತ್ತಿರವಾಗುವವರು ಆ ಬಳಿಕ ಎಲ್ಲ ನೆನಪುಗಳನ್ನು ಅಳಿಸಿ ಹಾಕಿ ದೂರ ಸಾಗಿ ಬಿಡುತ್ತಾರೆ. ಇದು ಕುಟುಂಬಗಳಲ್ಲಿ, ಸಮಾಜದಲ್ಲಿ ಎಲ್ಲೆಲ್ಲೂ ಕಂಡುಬರುತ್ತಿರುವ ದೊಡ್ಡ ಸಮಸ್ಯೆ. ಕರೊನಾದ ಸೋಂಕನ್ನೂ ಸೋಲಿಸಬಹುದು, ಆದರೆ, ಕೃತಘ್ನ ಎಂಬ ಮನುಷ್ಯ ಮನಸ್ಸಿನ ಸೋಂಕನ್ನು ಹೇಗೆ ನಿವಾರಿಸುವುದು? ನಮ್ಮ ಬದುಕನ್ನು ಕಟ್ಟಿದ, ಸಮಾಜವನ್ನು ನಿರ್ವಿುಸಿದ, ರಾಷ್ಟ್ರೆೊತ್ಥಾನಕ್ಕೆ ಸರ್ವವನ್ನೂ ಸಮರ್ಪಿಸಿದ ಮಹನೀಯರು ಮನದ ಮೂಲೆಗೆ ಸರಿಯುತ್ತಿರುವುದು ಇದೇ ಸ್ವಾರ್ಥಭಾವದಿಂದ. ಅಧಿಕಾರ, ಯಶಸ್ಸು, ಶಕ್ತಿ, ದುಡ್ಡು ಇದ್ದಾಗ ಎಲ್ಲರೂ ‘ನಮ್ಮವರೇ’. ಆ ನಾಲ್ಕು ಶಕ್ತಿಗಳಲ್ಲಿ ಒಂದೊಂದು ದೂರವಾದಂತೆಯೂ ‘ಇವ ನಮ್ಮವನಲ್ಲ’ ಎಂಬ ಧೋರಣೆ. ಎಷ್ಟೆಲ್ಲ ಕೆಲಸ ಮಾಡಿರುತ್ತಾರೆ, ಯಾವೆಲ್ಲ ಹೊಸ ಮೈಲಿಗಲ್ಲು ಸೃಷ್ಟಿಸಿರುತ್ತಾರೆ. ಆದರೇನಂತೆ, ಈಗ ‘ಚಾಲ್ತಿಯಲ್ಲಿಲ್ಲ’ ಎಂಬ ಕುಹಕ. ಕೊನೆಯ ಪಕ್ಷ ಅಂಥ ಮಹಾನುಭಾವರ ಕೊಡುಗೆ, ಸಾಧನೆಯನ್ನಾದರೂ ಒಂದು ಕ್ಷಣ ಅವಲೋಕಿಸಿದರೆ ಅಥವಾ ಮನೆಹಿರಿಯರ ತ್ಯಾಗ, ಶ್ರಮವನ್ನು ನೆನಪಿಸಿಕೊಂಡರೆ ಈಗಿನವರ ಬುದ್ಧಿಗೆ ಹಿಡಿದಿರುವ ಸ್ವಾರ್ಥದ ಗ್ರಹಣ ಸ್ವಲ್ಪವಾದರೂ ಕಡಿಮೆಯಾಗಬಹುದೇನೋ. ನಮಗೆಲ್ಲ ಸಣ್ಣ ಸಹಾಯ ಮಾಡಿದ, ಜೀವನದ ಯಾವುದೋ ಘಟ್ಟದಲ್ಲಿ ನೆರವಾದ ವ್ಯಕ್ತಿ/ಶಕ್ತಿಗಳನ್ನು ನೆನಪಿಸಿಕೊಳ್ಳಬೇಕಾದ, ಅವರ ಬಳಿ ಸಾಗಿ ಕೃತಜ್ಞತೆ ಅರ್ಪಿಸಬೇಕಾದ ಕರ್ತವ್ಯವನ್ನು ಮರೆತುಬಿಟ್ಟರೆ ಭಗವಂತ ಕ್ಷಮಿಸಿದರೂ ಆತ್ಮಸಾಕ್ಷಿ ಕ್ಷಮಿಸುವುದಿಲ್ಲ.

    ***

    ಯೌವನದಲ್ಲಿ ಭಾರಿ ಯಶಸ್ಸು, ಜನಪ್ರಿಯತೆ ಪಡೆದವರ ಬದುಕು ಇಳಿ ವಯಸ್ಸಿನಲ್ಲಿ ಅಸಹಾಯಕ, ಅವಲಂಬಿತವಾಗುವುದಿದೆಯಲ್ಲ; ನಿಜಕ್ಕೂ ಅದು ಘೋರ ಕ್ಷಣ. ಸಾಮಾಜಿಕ ಮಾಧ್ಯಮದಲ್ಲಿ ಸಂತೋಷ್ ಆನಂದ್ ಅವರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಯಾರು ಈ ಸಂತೋಷ್ ಆನಂದ್ ಎಂಬ ಪ್ರಶ್ನೆ ಮೂಡಿದರೆ ನಾವು ಒಳ್ಳೆಯ ಸಾಧಕರನ್ನು ಮರೆಯುತ್ತಿದ್ದೇವೆ ಎಂದರ್ಥ. ಬಾಲಿವುಡ್​ನಲ್ಲಿ ಖ್ಯಾತ ಗೀತ ರಚನೆಕಾರರಾಗಿ, ಹಲವು ಸೂಪರ್​ಹಿಟ್ ಹಾಡುಗಳನ್ನು ನೀಡಿದ, ಎರಡೆರಡು ಬಾರಿ ಫಿಲ್ಮ್​ಫೇರ್ ಪ್ರಶಸ್ತಿಗೆ ಭಾಜನರಾದ ಸಂತೋಷ್ ಆನಂದ್ ಜೀವನದ ವಿಚಿತ್ರ ತಿರುವು, ಭಾರಿ ಸವಾಲುಗಳನ್ನು ಧೃತಿಗೆಡದೆಯೇ ಎದುರಿಸಿದರು. ‘ಏಕ್ ಪ್ಯಾರ್ ಕಾ ನಗ್ಮಾ ಹೈ, ಮೌಜೋ ಕೀ ರವಾನಿ ಹೈ…. ಜಿಂದಗಿ ಔರ್ ಕುಛ್ ಭೀ ನಹೀ ತೇರಿ ಮೇರಿ ಕಹಾನಿ ಹೈ..’ -ಈ ಹಾಡಂತೂ ಯುವಮನಸ್ಸುಗಳ ಪ್ರಣಯಗೀತೆಯಾಗಿ ಇಂದಿಗೂ ಅದೆಷ್ಟೋ ನಾಲಿಗೆಗಳಲ್ಲಿ ನಲಿದಾಡುತ್ತಿದೆ. ‘ಮೊಹಬತ್ ಹೈ ಕ್ಯಾ ಚೀಜ್’, ‘ಒ ರಬ್ಬಾ ಕೋಯಿ ತೋ ಬತಾಯೆ’ಯಂಥ ಹಾಡುಗಳೆಲ್ಲ ಎಂಥ ಕಲ್ಲೆದೆಯಲ್ಲೂ ಭಾವಸಂಭ್ರಮವನ್ನು ಮೂಡಿಸುವಂಥವು. 1971ರಿಂದ 1998ರವರೆಗೆ (ಪೂರಬ್ ಔರ್ ಪಶ್ಚಿಮ, ಶೋರ್, ರೋಟಿ-ಕಪಡಾ ಔರ್ ಮಕಾನ್, ತಿರಂಗಾ ಸೇರಿ 24 ಸಿನಿಮಾಗಳಿಗೆ ಗೀತೆ ರಚಿಸಿದ್ದಾರೆ) ಬಾಲಿವುಡ್​ಗೆ ಹಾಡುಗಳನ್ನು ಬರೆದ ಸಂತೋಷ್ ಆನಂದ್​ರಿಗೆ ಈಗ 81ರ ಇಳಿವಯಸ್ಸು. ಪಾರ್ಶ್ವವಾಯು ಪರಿಣಾಮ ನಡೆದಾಡಲು ಆಗುತ್ತಿಲ್ಲ. ಕೈಯಲ್ಲಿ ಕೆಲಸ ಇಲ್ಲದೆ, ಮನೆಯ ಬಿಲ್​ಗಳನ್ನು ಕಟ್ಟಲು ಪರದಾಡುವ ಸ್ಥಿತಿ ಸರಸ್ವತಿಪುತ್ರನಿಗೆ.

    1939 ಮಾರ್ಚ್ 5ರಂದು ಉತ್ತರಪ್ರದೇಶದ ಬುಲಂದಶಹರ್ ಬಳಿಯ ಸಿಕಂದರಾಬಾದ್​ನಲ್ಲಿ ಜನನ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದು, ದೆಹಲಿಯಲ್ಲಿ ಕೆಲ ಕಾಲ ಗ್ರಂಥಪಾಲಕರಾಗಿ ಕೆಲಸ ಮಾಡಿದರು. ಮುಂಚೆಯಿಂದಲೂ ತುಂಬ ಮಧುರ ಕವಿತೆಗಳನ್ನು ಬರೆಯುತ್ತಿದ್ದ ಇವರು ದೆಹಲಿಯ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದರು. 1970ರಲ್ಲಿ ‘ಪೂರಬ್ ಔರ್ ಪಶ್ಚಿಮ’ ಸಿನಿಮಾದ ಮೂಲಕ ಬಾಲಿವುಡ್​ಗೆ ಹಾಡು ಬರೆಯಲು ಆರಂಭಿಸಿದ ಸಂತೋಷ್, ಮತ್ತೆ ಹಿಂದೆ ತಿರುಗಿ ನೋಡಲಿಲ್ಲ. ಮದುವೆಯಾಗಿ ಸುಖಸಂಸಾರ ಸಾಗಿದರೂ, ಮಕ್ಕಳಾಗದ ಕೊರಗು. ದೇವಿಯಾತ್ರೆಯಲ್ಲಿ ಹಲವು ಬಾರಿ ಪಾದಯಾತ್ರೆ ಮಾಡಿ, ಮಗುವಿಗಾಗಿ ಹರಕೆಹೊತ್ತರು. ಮದುವೆಯಾದ ಹತ್ತು ವರ್ಷಗಳ ಬಳಿಕ ಜನಿಸಿದ ಗಂಡು ಮಗುವಿಗೆ ಸಂಕಲ್ಪ್ ಎಂಬ ಚೆಂದದ ಹೆಸರು. ಆತನೂ ಮೇಧಾವಿಯಾದ. ಎಷ್ಟೆಂದರೆ, ಗೃಹ ಸಚಿವಾಲಯದ ಅಧಿಕಾರಿಗಳಿಗೇ ಸಮಾಜಶಾಸ್ತ್ರ ಬೋಧಿಸುತ್ತಿದ್ದ. ಆದರೆ, 2014ರಲ್ಲಿ ಸಂಕಲ್ಪ್ ತನ್ನ ಪತ್ನಿ ಜತೆ ರೈಲುಹಳಿಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡರು! ಇಲಾಖೆಯಲ್ಲಿನ ಅವ್ಯವಹಾರದಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವುದಾಗಿ 10 ಪುಟಗಳ ಡೆತ್​ನೋಟ್​ನಲ್ಲಿ ತಿಳಿಸಿದ್ದರು. ಪುಟ್ಟ ಮೊಮ್ಮೊಗಳು ಏಕಾಂಗಿಯಾದಳು. ಅವಳಿಗಾಗಿ ಸಂತೋಷ್ ಆನಂದ್ ನೋವನ್ನೆಲ್ಲ ನುಂಗಿ ಕೊಂಡರು. ಆ ಬಾಲಕಿಯೇ ಸಂತೋಷರಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದಾಳೆ. ಜೀವನವೆಲ್ಲ ಹೋರಾಡಿದ, ಭಾವನೆಗಳಿಗೆ ಅಕ್ಷರರೂಪ ನೀಡಿದ ಸಂತೋಷರ ಭಾವನೆಗಳಿಗೇ ಇವತ್ತು ಸ್ಪಂದಿಸುವವರು ಯಾರೂ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲ.

    ಮೊನ್ನೆ ಟಿವಿ ಕಾರ್ಯಕ್ರಮವೊಂದರಲ್ಲಿ ಖುದ್ದು ಸಂತೋಷ್ ಆನಂದರೇ ಈ ಸಂಗತಿಗಳನ್ನೆಲ್ಲ ಹೇಳಿದಾಗ ಸಂಗೀತ ಸಂಯೋಜಕ ಲಕ್ಷ್ಮಿಕಾಂತ-ಪ್ಯಾರೆಲಾಲ್ ಜೋಡಿಯ ಪ್ಯಾರೆಲಾಲ್ ಭಾವುಕರಾದರು. ಆದರೂ, ‘ರಾತ್ರಿಯ ಕಗ್ಗತ್ತಲಿನಲ್ಲೂ ಬೆಳಕು ಹುಡುಕುವುದನ್ನು ನಿಲ್ಲಿಸುವುದಿಲ್ಲ; ನಾಲ್ಕು ಬಾರಿ ಕಾಲು ಮುರಿದರೆ ಏನಂತೆ, ನನ್ನ ಧೈರ್ಯ ಇನ್ನು ಮುರಿದಿಲ್ಲ’ ಎಂಬ ಸಂತೋಷ್ ಆನಂದರ ಮಾತುಗಳು ಜೀವನಸಂಘರ್ಷಕ್ಕೆ ಸ್ಪೂರ್ತಿ ತುಂಬುವಂಥವು.

    ಸಂತೋಷ್ ಆನಂದರ ಬದುಕು ನಮಗೆಲ್ಲ ಸನ್ನಿವೇಶಗಳ ಕನ್ನಡಿಯೇ. ನಮ್ಮಲ್ಲಿ ಎಷ್ಟೋ ಹಿರಿಯರು ಹೀಗೆ ಅಸಹಾಯಕರಾಗಿದ್ದಾರೆ. ಅವರಲ್ಲಿ ಶಕ್ತಿ ಇದ್ದಾಗ ಸಹಾಯ ಪಡೆದವರು ಮಾಯವಾಗಿದ್ದಾರೆ. ಆದರೆ, ಇಲ್ಲಿ ಕೆಲವನ್ನು ಕಳೆದುಕೊಂಡು, ಕೆಲವನ್ನು ಪಡೆಯುತ್ತೇವೆ. ಮತ್ತೆ ಹಲವನ್ನು ಪಡೆದುಕೊಂಡು, ಕೆಲವನ್ನು ಕಳೆದುಕೊಳ್ಳುತ್ತೇವೆ. ಜೀವನದ ಈ ಬಂದು-ಹೋಗುವ ನಾಲ್ಕು ದಿನಗಳ ಪಯಣದಲ್ಲಿ ಭಾವಪ್ರಪಂಚ ವಿಶಾಲವಾಗಿ ಇರಿಸಿಕೊಂಡು, ಸ್ವಾರ್ಥವನ್ನು ಹೊರಗಟ್ಟಿದರೆ ಅದೆಷ್ಟೋ ಸಮಸ್ಯೆಗಳು ದೂರವಾಗುತ್ತವೆ. ಹಾಂ, ನಮ್ಮವರನ್ನು ನೆನಪು ಮಾಡಿಕೊಳ್ಳಲು, ನಮ್ಮ ಪ್ರೀತಿ ವ್ಯಕ್ತಪಡಿಸಲು ಈ ಕ್ಷಣಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಮತ್ತೇಕೆ ತಡ…?

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts