More

    ಸಮಗ್ರ ನೀರಾವರಿಗೆ ರಾಜಕೀಯ ಶಕ್ತಿ ಅಗತ್ಯ ; ಮುಳಬಾಗಿಲು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿಕೆ

    ಮುಳಬಾಗಿಲು: ರಾಜ್ಯದಲ್ಲಿ ಎಷ್ಟು ನದಿಗಳಿವೆ, ಉಪ ನದಿಗಳಿವೆ, ಎಷ್ಟು ನೀರು ಬಳಕೆಯಾಗುತ್ತಿದೆ, ಇನ್ನೆಷ್ಟು ನೀರು ಬಳಕೆಯಾಗಬೇಕಾಗಿದೆ ಎಂಬ ಸಂಪೂರ್ಣ ಅಂಕಿ ಅಂಶಗಳು ನನ್ನ ಬಳಿ ಇವೆ. ರಾಜ್ಯದ ನೀರಾವರಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅನುಭವದಿಂದ ಮಾತನಾಡುತ್ತಿದ್ದೇನೆ. ರಾಜ್ಯದ ನೀರಾವರಿ ಸಮಸ್ಯೆ ಬಗೆಹರಿಸಲು ಜನತಾ ಜಲಧಾರೆ ಕಾರ್ಯಕ್ರಮವನ್ನು ಜೆಡಿಎಸ್​ ಹಮ್ಮಿಕೊಂಡಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಂದು ಎಚ್​.ಡಿ.ದೇವೇಗೌಡ ಹೇಳಿದರು.

    ನಗರದ ಹೊರವಲಯದ ಕೋಲಾರ ಬೈಪಾಸ್​ ರಸ್ತೆಯ ಬಳಿ ಮಂಗಳವಾರ ಜೆಡಿಎಸ್​ನಿಂದ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಖರವಾದ ಅಂಕಿ ಅಂಶ ಒಳಗೊಂಡ ಜನತಾ ಜಲಧಾರೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಶಕ್ತಿ ಅತ್ಯವಶ್ಯಕವಾಗಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ಸಮಗ್ರ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.

    ಜೆಡಿಎಸ್​ ಅಭ್ಯರ್ಥಿ ಸಮೃದ್ಧಿ ವಿ.ಮಂಜುನಾಥ್​ ಅವರ ತಾಯಿ ಮೃತಪಟ್ಟ ಕಾರಣ ಮುಳಬಾಗಿಲಿನಲ್ಲಿ ಕಾರ್ಯಕ್ರಮ ತಡವಾಯಿತು. ಬೆಂಗಳೂರಿನಲ್ಲಿ ಪಕ್ಷದ ಕಚೇರಿ ಜೆ.ಪಿ ಭವನ ನಿರ್ಮಾಣಕ್ಕೆ ಸಮೃದ್ಧಿ ವಿ.ಮಂಜುನಾಥ್​ 25 ಲಕ್ಷ ರೂಪಾಯಿ ಸಹಾಯ ಮಾಡಿ, ಪಕ್ಷಕ್ಕೆ ಬೆನ್ನೆಲುಬಾಗಿದ್ದಾರೆ. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದು, ಈ ಬಾರಿ ಅಭ್ಯರ್ಥಿಯಾದ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆಜೆಡಿಎಸ್​ ಅನ್ನು ಅಧಿಕಾರಕ್ಕೆ ತರಬೇಕೆಂದು ಕೋರಿದರು.

    ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮಾತನಾಡಿ, 75 ವರ್ಷಗಳ ಕಾಲ ಆಳ್ವಿಕೆ ಮಾಡಿದ ರಾಷ್ಟ್ರೀಯ ಪಕ್ಷಗಳು ರಾಜ್ಯದ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಎತ್ತಿನಹೊಳೆ ಯೋಜನೆಗೆ 8 ಸಾವಿರ ಕೋಟಿ ರೂಪಾಯಿ ಆರಂಭದಲ್ಲಿ ಮೀಸಲಿಟ್ಟಿದ್ದು, ಈಗ ವೆಚ್ಚ 13 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಬಂದ ಲೋಕಸಭಾ ಚುನಾವಣೆ ವೇಳೆ ಕೋಲಾರ& ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಕೊಡುತ್ತೇವೆಂದು ಹೇಳಿದವರು, ನಂತರ ಆ ಯೋಜನೆಯನ್ನೇ ಮರೆತರು ಎಂದು ಟೀಕಿಸಿದರು.]

    ಮತ್ತೊಮ್ಮೆ ಸಾಲ ಮನ್ನಾ: ನಮ್ಮ ಸರ್ಕಾರವನ್ನು ತೆಗೆದು ರಾಜ್ಯದಲ್ಲಿ 40% ಸರ್ಕಾರ ಬರಲು ಕಾರಣ ಯಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಬ್ಬ ಸಾಮಾನ್ಯ ರೈತನ ಮಗ ಎಸ್​.ಐ ಉದ್ಯೋಗಕ್ಕಾಗಿ 70 ರಿಂದ 80 ಲಕ್ಷ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ, ಭ್ರಷ್ಟ ವ್ಯವಸ್ಥೆಯಲ್ಲಿ ಸಂಪಾದಿಸಿದ ಹಣದಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿಯಾದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ನೀಡುತ್ತೇನೆ ಎಂದು ಬೊಗಳೆ ಬಿಡುತ್ತಿದ್ದಾರೆ. ಜನರಿಗೆ ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸುವ ಚಿಂತನೆಗಳು ಅವರಿಗೆ ಇಲ್ಲ. ಜೆಡಿಎಸ್​ಗೆ ಅವಕಾಶ ನೀಡಿದರೆ ಮತ್ತೊಮ್ಮೆ ಸಹಕಾರಿ ಬ್ಯಾಂಕ್​ನಲ್ಲಿ ಸಾಲ ಪಡೆದಿರುವ ಮಹಿಳಾ ಸ್ವಸಹಾಯ ಸಂಗಳ 1500 ಕೋಟಿ ರೂಪಾಯಿ ಸಾಲ ಹಾಗೂ ಕೃಷಿಕರ ಸಾಲ ಮನ್ನಾ ಮಾಡುವುದರ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದರು.

    ಜೆಡಿಎಸ್​ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಎರಡು ದಿನಗಳಿಂದ ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಮಾವು, ಟೊಮ್ಯಾಟೊ ಬೆಳೆಗಳು ನಾಶವಾಗಿವೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಸಿ.ಎಂ.ಆಗಿದ್ದರೆ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುತ್ತಿದ್ದರು. ಆದರೆ ಬೊಮ್ಮಾಯಿ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹಾಸ್ಯ ಮಿಶ್ರಿತವಾಗಿ ಮಾತನಾಡಿದರಲ್ಲದೆ, ಬಿಜೆಪಿ ಸಂಸದ ಎಸ್​.ಮುನಿಸ್ವಾಮಿ, ಪೇತರ ಶಾಸಕ ಎಚ್​.ನಾಗೇಶ್​ ಈಗ ಎಲ್ಲಿ ಹೋದರು?, ಸಂಸದರು ಮುಳಬಾಗಿಲು ಮತ್ತು ಕೋಲಾರದಲ್ಲಿ ಬೆಂಕಿ ಹಚ್ಚುತ್ತಿದ್ದರೆ, ಕೋಲಾರದ ಅಂಜುಮಾನ್​ ಸಂಸ್ಥೆಯ ಅಧ್ಯಕ್ಷರು ಕ್ಲಾಕ್​ಟವರ್​ನಲ್ಲಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ, ಮುನಿಸ್ವಾಮಿಯಂತಹ ಶಕ್ತಿಗಳು ಮುಸ್ಲಿಂರ ಮೇಲೆ ಬಂದರೆ ಅವರನ್ನು ತಡೆಯಲು ಹಿಂದುಗಳೇ ಮುಂದೆ ನಿಂತು ರಕ್ಷಣೆ ನೀಡುತ್ತಾರೆ ಎಂದರು.

    ಜೆಡಿಎಸ್​ ಯುವ ಟಕ ರಾಜ್ಯ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದಾಗ ಕೆ.ಸಿ.ವ್ಯಾಲಿ, ಎಚ್​.ಎನ್​.ವ್ಯಾಲಿ ಹೆಸರಲ್ಲಿ ಬೆಂಗಳೂರಿನ ಕೊಳಚೆ ನೀರನ್ನು ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡುವ ಮೂಲಕ ಹಿರೋಶಿಮ ಮತ್ತು ನಾಗಸಾಕಿ ಮಾಡಲು ಹೊರಟಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಟೀಕಿಸಿ, ಕೃಷ್ಣ ಮತ್ತು ಕಾವೇರಿ ನೀರನ್ನು ನೀಡಲು ಜೆಡಿಎಸ್​ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

    ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಮೃದ್ಧಿ ವಿ.ಮಂಜುನಾಥ್​ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರೂ, 4 ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡಿಕೊಂಡು ಬರುತ್ತಿದ್ದೇನೆ. ೇತ್ರದಲ್ಲಿ ಪೇತರ ಶಾಸಕರಾಗಿದ್ದವರು ಯಾವ ರೀತಿ ನಡೆದುಕೊಂಡಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಕುಮಾರಣ್ಣ ಅವರನ್ನು ಮೂರನೇ ಬಾರಿ ಸಿಎಂ ಮಾಡಬೇಕೆಂದು ಮನವಿ ಮಾಡಿದರು.

    ಹೋರಾಟ ಮಾಡುವ ಸ್ಥಿತಿ: ಪಂಚರತ್ನ ಯೋಜನೆ ಬಹಳ ಮುಖ್ಯವಾಗಿದೆ. ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರ ಇರುವುದರಿಂದ ಎಲ್ಲ ನೀರಾವರಿ ಯೋಜನೆಗಳು ಆ ರಾಜ್ಯಗಳ ಪಾಲಾಗುತ್ತಿವೆ. ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ವಂಚನೆಯಾಗುತ್ತಿದೆ, ಇದನ್ನು ನೋಡಿಕೊಂಡು ಕೂರಲು ಸಾಧ್ಯವಿಲ್ಲ. ಕಾವೇರಿ, ಕೃಷ್ಣ, ಮಹಾದಾಯಿ ಯೋಜನೆಗಳು ಬಹುಮುಖ್ಯವಾದ ಯೋಜನೆಗಳಾಗಿದ್ದು, 2 ರಾಷ್ಟ್ರೀಯ ಪಕ್ಷಗಳು ನೀರಾವರಿ ಯೋಜನೆಗಳನ್ನು ಕಡೆಗಣಿಸಿವೆ, ಇದರಿಂದ ನಾವು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೇವೇಗೌಡ ಹೇಳಿದರು.

    ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ: 2006 ರಲ್ಲಿ ಸಿಎಂ ಆಗಿ ಕೋಲಾರ ಜಿಲ್ಲೆಯ ಯರ್ರಗೋಳ್​ ಯೋಜನೆಗೆ 50 ಕೋಟಿ ರೂಪಾಯಿ ಮೀಸಲಿರಿಸಿದ್ದು, ಈಗ ಡ್ಯಾಂ ನಿರ್ಮಾಣವಾಗಿ ನೀರು ಸಂಗ್ರಹಣೆಯಾಗಿದೆ. 2023ರಲ್ಲಿ ಸ್ವಂತ ಶಕ್ತಿಯಲ್ಲಿ ಜೆಡಿಎಸ್​ ಸರ್ಕಾರ ರಚನೆಯಾದರೆ ರೈತರ ಹೊಲಕ್ಕೆ ನೀರು, ಪ್ರತಿಮನೆಗೆ ಕುಡಿಯುವ ನೀರು, ಪಂಚರತ್ನ ಕಾರ್ಯಕ್ರಮಗಳ ಮೂಲಕ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್​.ಕೆ.ಜಿ ಯಿಂದ 12 ತರಗತಿವರೆಗೂ ಆಂಗ್ಲಮಾಧ್ಯಮ ಉಚಿತ ಗುಣಮಟ್ಟದ ಶಿಕ್ಷಣ, 30 ಹಾಸಿಗೆಯ ಆಸ್ಪತ್ರೆ ನಿರ್ಮಾಣಮಾಡಿ ಹೈಟೆಕ್​ ಚಿಕಿತ್ಸೆ ವ್ಯವಸ್ಥೆ ಮಾಡಿ, ಇಬ್ಬರು ವೈದ್ಯರು ಸೇರಿ ಆರೋಗ್ಯ ಸಿಬ್ಬಂದಿ ನೇಮಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

    ಎಚ್​ಡಿಡಿ, ಎಚ್​ಡಿಕೆಗೆ ರೈತರೇ ದೇವರು: ಬಿಜೆಪಿಯವರು ಮಾತೆತ್ತಿದರೆ ಹಿಂದುತ್ವ ಎನ್ನುತ್ತಾರೆ, ಅಧಿಕಾರಕ್ಕೆ ಬಂದ ನಂತರ ಮರೆಯುತ್ತಾರೆ. ನಂತರ ಸದಾನಂದಗೌಡರು ಹಿಂದಕ್ಕೆ, ಪ್ರಲ್ಹಾದ ಜೋಶಿ ಮುಂದಕ್ಕೆ, ಕಮಲಕ್ಕೆ ಸೂರ್ಯನ ಚಿಂತೆ, ಸರ್ಕಾರಕ್ಕೆ ಲಂಚದ ಚಿಂತೆ, ಪಿ.ಎಸ್​.ಐ ಹುದ್ದೆಗೆ ಲಾಂತರ ರೂಪಾಯಿ ಹಗರಣ, ಡಿ.ಕೆ.ಶಿಗೆ ಸೋನಿಯಾ ದೇವರು, ಬೊಮ್ಮಾಯಿಗೆ ಮೋದಿ ದೇವರು, ದೇವೇಗೌಡರು ಕುಮಾರಸ್ವಾಮಿಗೆ ರೈತರೇ ದೇವರಾಗಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದರು.

    ಯೋಜನೆಗಳ ಹೆಸರಲ್ಲಿ ಹಣ ಲೂಟಿ: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಆರಂಭಗೊಂಡ ಎತ್ತಿನಹೊಳೆ ಯೋಜನೆ ಕುಂಟುತ್ತಲೇ ಸಾಗುತ್ತಿದೆ. 2 ರಾಷ್ಟ್ರೀಯ ಪಕ್ಷಗಳು ಯೋಜನೆಗಳ ಹೆಸರಿನಲ್ಲಿ ಹಣ ಮಾಡುವುದನ್ನೇ ರೂಢಿಸಿಕೊಂಡಿವೆ. ಮೇಕೆದಾಟು ನೀರಾವರಿ ಯೋಜನೆ ಎಂದು ಕಾಂಗ್ರೆಸ್​ನವರು ಹೊರಟಿದ್ದಾರೆ. ಈ ಯೋಜನೆಗೆ ಡಿಪಿಆರ್​ ಮಾಡಿದ್ದು ಎಚ್​.ಡಿ.ಕುಮಾರಸ್ವಾಮಿ ಎಂಬುದನ್ನು ಅವರು ಮರೆತಿದ್ದಾರೆ ಎಂದು ನಿಖಿಲ್​ ಕುಮಾರಸ್ವಾಮಿ ಕಿಡಿ ಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts