More

    ರೈತರಿಗೆ ಅರ್ಧ ಗಂಟೆಯಲ್ಲೇ ಸಾಲ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

    ಮುಳಬಾಗಿಲು : ಡಿಸಿಸಿ ಬ್ಯಾಂಕ್ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಅರ್ಧ ಗಂಟೆಯಲ್ಲೇ ಸಾಲ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ಮುಳಬಾಗಿಲು ಶಾಖಾ ಕಚೇರಿಯಲ್ಲಿ ಸೋಮವಾರ ವಿಎಸ್ಸೆಸ್ಸೆನ್ ಅಧ್ಯಕ್ಷ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಪ್ರಗತಿಯ ಮಾಹಿತಿ ಪಡೆದರು. ಇದೇ ವೇಳೆ ತಾಲೂಕಿನ 24 ವಿಎಸ್ಸೆಸ್ಸೆನ್‌ಗಳಿಂದ ಸಂಗ್ರಹವಾದ 2 ಕೋಟಿ ಠೇವಣಿ ಹಣವನ್ನು ಬ್ಯಾಂಕಿಗೆ ಜಮೆ ಮಾಡಿಕೊಂಡರು. ಮಾ.28ರವರೆಗೆ 6 ಕೋಟಿ ಗುರಿ ಮುಟ್ಟಬೇಕು, ತಾಲೂಕಿನಿಂದ 8 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಪೂರ್ಣವಾಗಬೇಕೆಂದು ಸೂಚಿಸಿದರು. 100 ಕೋಟಿ ಠೇವಣಿ ಸಂಗ್ರಹಣೆ ಮೂಲಕ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳು ಅಭಿವೃದ್ಧಿಯತ್ತ ಸಾಗಬೇಕಾಗಿದೆ. ಇದಕ್ಕೆ ವಿಎಸ್ಸೆಸ್ಸೆನ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

    ಸಾಲ ಮರುಪಾವತಿ ಕಡ್ಡಾಯವಾಗಿ ಮಾಡಬೇಕಾಗಿದೆ. ಸಾಲ ಪಡೆಯುವುದು ಎಷ್ಟು ಮುಖ್ಯವೋ ಮರುಪಾವತಿಯೂ ಅಷ್ಟೇ ಮುಖ್ಯ. ವಿಎಸ್ಸೆಸ್ಸೆನ್ ವ್ಯಾಪ್ತಿಯ ಸಾರ್ವಜನಿಕರಿಂದ ಠೇವಣಿ ಸಂಗ್ರಹಣೆ ಮಾಡಿ ಜಮಾ ಮಾಡಬೇಕು. ಕಟ್ಟಕಡೆಯ ವ್ಯಕ್ತಿಗೂ ಸೇವೆ ದೊರೆಯುವಂತೆ ಮಾಡಬೇಕಾಗಿದೆ. ಈ ಹಿಂದೆ ಕಾರ್ಯದರ್ಶಿಗಳನ್ನು ಜನರು ಕಳ್ಳರ ರೀತಿ ಕಾಣುತ್ತಿದ್ದರು, ಈಗ ಕಾರ್ಯನಿರ್ವಹಣಾಧಿಕಾರಿಗಳಾಗಿ ರೈತರಿಗೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಾಮಾಣಿಕತೆಯಿಂದ ಸಾಲ ನೀಡುವ ಮೂಲಕ ಗೌರವ ಹೆಚ್ಚಿಸಿಕೊಂಡಿದ್ದಾರೆ. ಅದು ಮುನ್ನಡೆಯಬೇಕು ಎಂದರು.

    ಪ್ರತಿ ವಿಎಸ್ಸೆಸ್ಸೆನ್‌ನಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆಯಲು ಸಿದ್ಧರಾಗಬೇಕು. ಕೃಷಿ ಉತ್ಪನ್ನಗಳು, ಗೃಹ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಆಗಲೇ ಸಂಘಗಳು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಲಭ್ಯವಾಗುತ್ತದೆ. ನಗರದ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಕೃಷಿ ಮತ್ತಿತರ ಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

    ಎಂಎಸ್‌ಐಎಲ್ ಗೋದಾಮು ಸ್ಥಾಪನೆಗೆ ಬ್ಯಾಂಕ್ ಮುಂದಾಗಿದೆ. ವಿಎಸ್ಸೆಸ್ಸೆನ್‌ಗಳು ಗಣಕೀಕೃತಗೊಂಡಿದ್ದು ಆನ್‌ಲೈನ್ ಮೂಲಕವೇ ವ್ಯವಹಾರ ಮಾಡಲಾಗುತ್ತಿದೆ, ಇ-ಶಕ್ತಿ ಆ್ಯಪ್ ಅಪ್‌ಲೋಡ್ ಮಾಡಲಾಗುತ್ತಿದೆ, ಮೈಕ್ರೋ ಎಟಿಎಂಗಳ ಮೂಲಕ ಮಹಿಳಾ ಸ್ವಸಹಾಯ ಸಂಘಗಳು ಸೇರಿ ಖಾತೆದಾರರಿಗೆ ಆರ್ಥಿಕ ವ್ಯವಹಾರಗಳು ಮನೆಯ ಬಾಗಿಲಿಗೆ ನೀಡಬೇಕಾಗಿದೆ, ಪ್ರತಿನಿತ್ಯ ಉನ್ನತೀಕರಣದ ಬಗ್ಗೆ ಮಾಹಿತಿ ಪಡೆದು ಮುಂದುವರಿಯಬೇಕೆಂದು ಸಲಹೆ ನೀಡಿದರು.

    ಸಾಧನೆ ಕೇವಲ ಶೇ.20 ಆಗಿದ್ದು ಇನ್ನೂ ಶೇ.80 ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಎಸ್ಸೆಸ್ಸೆನ್‌ಗಳ ಆಡಳಿತ ಮಂಡಳಿಗಳು ಕಾರ್ಯನಿರ್ವಹಿಸಬೇಕು. ಸಾಲ ಪಡೆದವರು ಮರುಪಾವತಿ ಮಾಡದಿದ್ದಲ್ಲಿ ಅವರ ಮನೆಬಾಗಿಲಿನಲ್ಲಿ ಸತ್ಯಾಗ್ರಹ ಮಾಡಿ ವಸೂಲಿ ಮಾಡಬೇಕಾಗಿದೆ ಎಂದು ಸೂಚಿಸಿದರು.

    ಸಹಕಾರ ಇಲಾಖೆಯ ಎ.ಆರ್.ಸಿ.ಎಸ್. ನೀಲಪ್ಪನವರ್, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್, ಠೇವಣಿ ಘಟಕದ ವ್ಯವಸ್ಥಾಪಕ ದೊಡ್ಡಮುನಿ, ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಕೀಲಂ ಉಲ್ಲ, ಮುಳಬಾಗಿಲು ಶಾಖಾ ಬ್ಯಾಂಕ್ ವ್ಯವಸ್ಥಾಪಕ ಸಿ.ಚೆಲುವಸ್ವಾಮಿ, ಸಾಲ ವಸೂಲಾತಿ ಘಟಕದ ವ್ಯವಸ್ಥಾಪಕ ರಾಮಕೃಷ್ಣಾರೆಡ್ಡಿ, ಬೈರಕೂರು ವಿಎಸ್ಸೆಸ್ಸೆನ್ ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಪಿ.ಎಂ.ಸೂರ್ಯನಾರಾಯಣಗೌಡ, ಎಂ.ಎನ್.ಹಳ್ಳಿ ವಿಎಸ್ಸೆಸ್ಸೆನ್ ಅಧ್ಯಕ್ಷ ಪಿ.ಎಸ್.ರಮೇಶ್ ಬಾಬು ಸೇರಿ ತಾಲೂಕಿನ ವಿವಿಧ ವಿಎಸ್ಸೆಸ್ಸೆನ್ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts