More

    ಸ್ವಾವಲಂಬಿ ಜೀವನ ನಡೆಸುವವರಿಗೆ ಆಸರೆ ; ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಹೇಳಿಕೆ

    ಮುಳಬಾಗಿಲು : ಕೋಲಾರದ ಡಿಸಿಸಿ ಬ್ಯಾಂಕ್ ರೈತರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಸಾಲ ನೀಡುವ ಮೂಲಕ ಸಾಮಾನ್ಯ ಕುಟುಂಬಗಳು ಆರ್ಥಿಕ, ಸ್ವಾವಲಂಬನೆ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಹೇಳಿದರು.

    ತಾಲೂಕಿನ ಮಲ್ಲನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರಸಂಘ ಸಹಯೋಗದೊಂದಿಗೆ ಬುಧವಾರ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳ ಸದಸ್ಯರಿಗೆ ಸಂಚಾರಿ ಸಹಕಾರಿ ಬ್ಯಾಂಕ್ ಎಟಿಎಂ ಮೂಲಕ ಹಣ ಪಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ದೇಶದಲ್ಲಿ ಹೆಚ್ಚು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿರುವ ಹೆಗ್ಗಳಿಕೆ ಡಿಸಿಸಿ ಬ್ಯಾಂಕಿನದ್ದಾಗಿದೆ. ಸಾಲ ಪಡೆದ ಮಹಿಳೆಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು. ಪಕ್ಷಾತೀತ, ಜಾತ್ಯತೀತವಾಗಿ ಬ್ಯಾಂಕ್ ಆಡಳಿತ ಮಂಡಳಿ ಕಾರ್ಯನಿರ್ವಹಿಸುವ ಮೂಲಕ ವಾಣಿಜ್ಯ ಬ್ಯಾಂಕುಗಳಿಗೂ ಪೈಪೋಟಿ ನೀಡಿ ಸಾಮಾನ್ಯ ಜನರ ಮನೆ ಬಾಗಿಲಿಗೆ ಸಾಲ ನೀಡುವ ಮೂಲಕ ಆರ್ಥಿಕ ಸಾಕ್ಷರತೆ ಸಾರಲಾಗುತ್ತಿದೆ, ಸಾಲ ಪಡೆದವರು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ತಾಲೂಕಿನಲ್ಲಿ ಈಗಾಗಲೆ 390 ಕೋಟಿ ರೂ. ಸಾಲವನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾಗಿದ್ದು, ಇದನ್ನು 500 ಕೋಟಿ ರೂ.ಗೆ ಹೆಚ್ಚಿಸಲು ಪ್ರಯತ್ನ ನಡೆಸಲಾಗುತ್ತಿದೆ. ಸಾಲ ಪಡೆದಂತೆ ಮರುಪಾವತಿಯೂ ಮಾಡುತ್ತಿರುವುದರಿಂದ ಸಾಧನೆಗೆ ಪ್ರೇರೇಪಣೆಯಾಗಿದೆ. ಹೊಸದಾಗಿ ಸಾಲ ಪಡೆಯುವವರು ಸಕಾಲಕ್ಕೆ ಮರುಪಾವತಿ ಮಾಡುವುದನ್ನು ರೂಡಿಸಿಕೊಳ್ಳಬೇಕು. ಮಲ್ಲನಾಯಕನಹಳ್ಳಿ ವಿಎಸ್‌ಎಸ್‌ಎನ್‌ನಲ್ಲಿ ಸಾಲ ಪಡೆದ ಮಹಿಳೆಯರು 2 ಬಾರಿ ಸಾಲ ಮರುಪಾವತಿ ಮಾಡಿ 3ನೇ ಬಾರಿ ಸಾಲ ಪಡೆಯುತ್ತಿದ್ದಾರೆ, ಪಡೆದ ಸಾಲವನ್ನು ಸ್ವ ಉದ್ಯೋಗ, ವ್ಯಾಪಾರ, ಕೃಷಿ ಚಟುವಟಿಕೆ, ಸಣ್ಣ ಕೈಗಾರಿಕೆ ಮಾಡಲು ಉಪಯೋಗಿಸಿಕೊಳ್ಳಬೇಕು ಎಂದು ಸೂಚಿಸಿದರು.

    ಮಲ್ಲನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಸ್.ರಮೇಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಪಿಎಸ್.ರಮೇಶ್‌ಬಾಬು, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್, ನಿರ್ದೇಶಕರಾದ ತಿಮ್ಮರಾಜು, ಸುಬ್ಬಣ್ಣ, ಕೋಲಾರ ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿ ಅಧಿಕಾರಿ ದೊಡ್ಡಮುನಿ, ಮುಖಂಡರಾದ ವೆಂಕಟಪತಿಸ್ವಾಮಿ ಕೊಂಡಪ್ಪ, ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts