More

  ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ, ನ. 20 ರಂದು ರಾಜ್ಯಮಟ್ಟದ ಸಮಾರಂಭ

  ವಿಜಯಪುರ: 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನ. 20ರಂದು ವಿಜಯಪುರ ಜಿಲ್ಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಆಯೋಜಿಸಲಾಗಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.

  ಸಹಕಾರಿ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ ಪಂಡಿತ ಜವಾಹರಲಾಲ ನೆಹರು ಅವರ ಜನ್ಮ ದಿನದ ಹಿನ್ನೆಲೆ ಪ್ರತಿ ವರ್ಷ ಆಚರಿಸಲ್ಪಡುವ ಸಹಕಾರಿ ಸಪ್ತಾಹವನ್ನು ಈಗಾಗಲೇ ನ. 14 ರಿಂದ ಆಚರಿಸಲಾಗುತ್ತಿದೆ. ನ.20ರವರೆಗೆ ಈ ಸಪ್ತಾಹ ನಡೆಯಲಿದ್ದು, ಸಮಾರೋಪ ಸಮಾರಂಭವನ್ನು ವಿಜಯಪುರದಲ್ಲಿಯೇ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

  ರಾಜ್ಯಮಟ್ಟದ ಈ ಬೃಹತ್ ಸಮಾರಂಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಜನ ಸಮಾವೇಶಗೊಳ್ಳಲಿದ್ದಾರೆ. ಸುಮಾರು 600 ರಿಂದ 800 ವಾಹನಗಳಲ್ಲಿ ಜನ ಆಗಮಿಸಲಿದ್ದು ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಬ್ಯಾಂಕ್‌ನಲ್ಲಿ ಪಕ್ಕದಲ್ಲಿರುವ ವಿಶಾಲ ಮೈದಾನದಲ್ಲಿ ವೇದಿಕೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಹಕಾರ ಸಚಿವ ಕೆ.ರಾಜಣ್ಣ, ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. 70ನೇ ವರ್ಷದ ಸಪ್ತಾಹದ ಹಿನ್ನೆಲೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ 70 ಜನರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

  ನಿವೃತ್ತ ಅಪರ ಉಪ ನಿಬಂಧಕ ಎಂ.ಜಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿಯೇ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಂ.2 ನೇ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತಿತರ ಬೃಹತ್ ಜಿಲ್ಲೆಗಳು ಸಹಜವಾಗಿಯೇ ಆರ್ಥಿಕವಾಗಿ ಪ್ರಗತಿಯಲ್ಲಿವೆ. ಆದರೆ, ಸಣ್ಣ ಜಿಲ್ಲೆಯಾದರೂ ವಿಜಯಪುರ ಡಿಸಿಸಿ ಬ್ಯಾಂಕ್ ಸಾಕಷ್ಟು ಪ್ರಗತಿಯಲ್ಲಿದೆ. ಅವಿಭಜಿತ ವಿಜಯಪುರ ಜಿಲ್ಲೆ ಪರಿಗಣಿಸಿದರೆ ನಾವೇ ನಂ.1 ಎಂದು ಹೆಮ್ಮೆ ವ್ಯಕ್ತಪಡಿಸಿದರು.

  ಬ್ಯಾಂಕ್ ನಡೆದು ಬಂದ ದಾರಿ

  ಎಸ್.ಎಸ್.ಬೀಳಗಿಪೀರ ಮಾತನಾಡಿ, 1919 ಜು.28 ರಂದು ಕೇವಲ 38 ಸಾವಿರ ಶೇರು ಹಾಗೂ 25 ಸಾವಿರ ಠೇವಣಿಗಳೊಂದಿಗೆ ಆರಂಭಗೊಂಡ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದೆ. ಗುಳೆಕಾರರ ಜಿಲ್ಲೆ ಎಂದೇ ಖ್ಯಾತಿ ಪಡೆದಿದ್ದ ಅಂದಿನ ಬಿಜಾಪುರ ಜಿಲ್ಲೆಯಲ್ಲಿ ದಿ.ಪಾಂಡುರಂಗರಾವ್ ದೇಸಾಯಿ ಅವರು ಸ್ಥಾಪಿಸಿದ ಬ್ಯಾಂಕ್ ಇಂದು ಸಾಕಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ.

  1994-95 ರಲ್ಲಿ ಪ್ರತಿಯೊಂದು ಜಿಲ್ಲಾ ಬ್ಯಾಂಕ್‌ಗಳಿಗೆ ‘ಅಭಿವೃದ್ಧಿ ಕ್ರಿಯಾ ಯೋಜನೆ’ ಅಳವಡಿಸಿಕೊಳ್ಳಲು ನಬಾರ್ಡ್‌ನಿಂದ ಮಾರ್ಗಸೂಚಿ ಹೊರಡಿಸಿದ ಬಳಿಕ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿತು. 1996-97 ರಲ್ಲಿ ಶಿವಾನಂದ ಪಾಟೀಲರು ಬ್ಯಾಂಕ್ ಅಧ್ಯಕ್ಷರಾದ ಬಳಿಕ ಮತ್ತಷ್ಟು ಪ್ರಗತಿ ಕಂಡಿತು. ಸಕ್ಕರೆ ಕಾರ್ಖಾನೆಗಳಿಗೆ ಪ್ರೋತ್ಸಾಹ ನೀಡಿದ ಫಲವಾಗಿ ಇಂದು ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ 24 ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 7.25 ಲಕ್ಷ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ತೋಟಗಾರಿಕೆ ಬೆಳೆಗೆ ಪ್ರೋತ್ಸಾಹ ನೀಡಿದ ಫಲವಾಗಿ 65750 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ 3 ಲಕ್ಷ ಮೆಟ್ರಿಕ್ ಟನ್ ಲಿಂಬೆ ಉತ್ಪಾದನೆಯಾಗುತ್ತಿದ್ದು ಆ ಪೈಕಿ 2 ಲಕ್ಷ ಮೆಟ್ರಿಕ್ ಟನ್ ಲಿಂಬೆ ವಿಜಯಪುರ ಜಿಲ್ಲೆಯಲ್ಲಿಯೇ ಉತ್ಪಾದನೆಯಾಗುತ್ತಿದೆ. ಇದಕ್ಕೆಲ್ಲ ಬ್ಯಾಂಕ್‌ನ ಪ್ರೋತ್ಸಾಹವೂ ಕಾರಣ ಎಂದರು.

  ಸಾಲ ಸೌಲಭ್ಯ

  ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2.26 ಲಕ್ಷ ರೈತರಿಗೆ ಶೂನ್ಯ ಹಾಗೂ ರಿಯಾಯಿತಿ ಬಡ್ಡಿ ದರದಲ್ಲಿ ಒಟ್ಟು 1507 ಕೋಟಿ ರೂ.ಕೃಷಿ ಸಾಲ ನೀಡಲಾಗಿದೆ. ಪ್ಯಾಕ್ಸುಗಳ ಮಟ್ಟದಲ್ಲಿ ಒಟ್ಟು 874 ಕೋಟಿ ಠೇವು ಸಂಗ್ರಹಿಸಲಾಗಿದ್ದು, 514 ಕೋಟಿ ವಿವಿಧ ಕೃಷಿಯೇತರ ಉದ್ದೇಶಗಳಿಗಾಗಿ ಸಾಲ ನೀಡಲಾಗಿದೆ. ಹೂಡಿಕೆ ಹಾಗೂ ಸಾಲೇತರ ವ್ಯವಹಾರಗಳಲ್ಲಿಯೂ ಸಂಪನ್ಮೂಲ ತೊಡಗಿಸಿ ಲಾಭಯುತವಾಗಿ ಸಾಗಿದೆ ಎಂದರು.

  ಪರಿಣಾಮ ರೈತರು ಕೃಷಿ ಜೊತೆಗೆ ಪೂರಕ ಚಟುವಟಿಕೆ ಕೂಡ ಕೈಗೊಳ್ಳುತ್ತಿದ್ದಾರೆ. ಕೆಎಂಎಫ್ ಪ್ರತಿ ದಿನ 1.60 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಅವಿಭಜಿತ ವಿಜಯಪುರ ಜಿಲ್ಲೆಯ ಸಹಕಾರಿ ಬ್ಯಾಂಕ್ 2000-2001ನೇ ಸಾಲಿಗೆ ಇಡೀ ರಾಷ್ಟ್ರದಲ್ಲಿ ಒಣಬೇಸಾಯಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಎರಡನೇ ಅತ್ಯುತ್ತಮ ಬ್ಯಾಂಕ್ ಎಂದು ಪರಿಗಣಿಸಿ ನಬಾರ್ಡ್‌ನಿಂದ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಯಿತು. ನಂತರ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ನೀಡಲ್ಪಡುವ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಪ್ರಶಸ್ತಿ ಪಡೆಯುತ್ತಾ ಬಂದಿದೆ ಎಂದು ಬೀಳಗಿಪೀರ ತಿಳಿಸಿದರು.

  ನಿರ್ದೇಶಕ ಗುರುಶಾಂತ ನಿಡೋಣಿ, ಜೆ.ಕೊಟ್ರೋಶ, ಬಿ.ಎಸ್. ಪಾಟೀಲ ಯಾಳಗಿ, ಕಲ್ಲನಗೌಡ ಭೀಮನಗೌಡ ಪಾಟೀಲ, ಹಣಮಂತರಾಯ ಪಾಟೀಲ, ಸುರೇಶಗೌರ ಬಿರಾದಾರ, ಚಂದ್ರಶೇಖರ ಸೋಮನಗೌಡ ಪಾಟೀಲ, ಶೇಖರ ದಳವಾಯಿ, ರಾಜು ಕಸಬೇಗೌಡ, ಸುರೇಶಗೌಡ ಪಾಟೀಲ ಹಾಗೂ ಸತೀಶ ಪಾಟೀಲ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts