More

    ಜಲವಾನಿ ಫಾಲ್ಸ್‌ನಲ್ಲಿ ಜನಸಾಗರ

    ಬೆಳಗಾವಿ: ಉತ್ತರ ಕರ್ನಾಟಕದ ವಾಣಿಜ್ಯ ಹಬ್ ಎಂದೇ ಕರೆಯಲ್ಪಡುವ ಮಲೆನಾಡ ಸೆರಗಿನ ಬೆಳಗಾವಿ ಜಿಲ್ಲೆಯು ಜಲಪಾತಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿಯಾದದ್ದು. ಮಳೆಗಾಲದಲ್ಲಿ ಪ್ರಸಿದ್ಧ ಜಲಪಾತಗಳು ತುಂಬಿ ಹರಿಯುವುದರ ಜತೆಗೆ ಸಾಕಷ್ಟು ಪ್ರವಾಸಿಗರನ್ನೂ ಕೈ ಬೀಸಿ ಕರೆಯುತ್ತವೆ. ಆದರೆ, ಚಳಿಗಾಲದಲ್ಲೂ ಧುಮ್ಮಿಕ್ಕುವ ಜಲಪಾತವೊಂದು ಗೋವಾ-ಕರ್ನಾಟಕ ಗಡಿಭಾಗದ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿದ್ದು, ಜನರು ಸಾಗರೋಪಾದಿಯಲ್ಲಿ ಜಲಪಾತ ವೀಕ್ಷಣೆಗೆ ದಾಂಗುಡಿ ಇಡುತ್ತಿದ್ದಾರೆ.

    ವಿದೇಶಿ ಜಲಪಾತ ಹೋಲಿಕೆ: ಕರೊನಾ ಹಾವಳಿ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಪ್ರವಾಸ ಮಾಡಲಾಗದೇ ಬೇಸತ್ತ ಪ್ರಕೃತಿ ಪ್ರಿಯರು ಈಗಷ್ಟೇ ಪ್ರವಾಸದ ಕಡೆ ಮುಖ ಮಾಡಿದ್ದಾರೆ. ಹಾಗೆ ಪ್ರವಾಸ ಹೊರಟ ಜನರೇ ಜಲವಾನಿ ಜಲಪಾವನ್ನು ಶೋಧಿಸಿದ್ದಾರೆ. ಕೆಲ ತಿಂಗಳ ಹಿಂದೆ ಬೆಳಗಾವಿಯ ಗೆಳೆಯರ ಬಳಗ ಕಂಡು ಹಿಡಿದಿರುವ ಕರ್ನಾಟಕ, ಗೋವಾ ಗಡಿಯಲ್ಲಿರುವ ಜಲವಾನಿ ಜಲಪಾತ ವಿದೇಶಿ ದ್ವೀಪ ಪ್ರದೇಶದಗಳಲ್ಲಿ ಕಾಣಸಿಗುವ ಜಲಪಾತಗಳನ್ನು ಹೋಲುವಂತಿದೆ. ಸೂರಲ್ ಬಳಿ ಕಾಡಿನಲ್ಲಿ ಸುತ್ತಾಡಲು ಬಂದ ಬೆಳಗಾವಿ ಹಾಗೂ ಗೋವಾದ ಕೆಲ ಯುವಕರು ದಟ್ಟ ಅರಣ್ಯದಲ್ಲಿ ಧುಮ್ಮಿಕ್ಕುವ ಈ ಜಲಪಾತ ಕಂಡು ಅವಾಕ್ಕಾಗಿದ್ದಾರೆ. ಜಲಪಾತಕ್ಕೆ ಜಲವಾನಿ ಎಂದು ಹೆಸರಿಟ್ಟು, ಸ್ಥಳದಲ್ಲಿ ಸೆರೆ ಹಿಡಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲ್ಲಿ ಹರಿಬಿಟ್ಟಿದ್ದರು. ಜನರಿಂದ ಜನರಿಗೆ ಹಬ್ಬಿದ ಜಲವಾನಿಯ ಸುದ್ದಿ ಎಲ್ಲೆಡೆ ವ್ಯಾಪಿಸಿ, ಕೆಲವೇ ದಿನಗಳಲ್ಲಿ ಪ್ರಸಿದ್ಧವಾಗಿದೆ. ಅನಾಮಿಕ ಯುವಕರಿಂದ ಶೋಧಿಸಲ್ಪಟ್ಟ ಜಲವಾನಿ ಜಲಪಾತಕ್ಕೆ ಈಗ ಪ್ರತಿದಿನ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಸೂರಲ್‌ನ ಮಾರ್ಗದರ್ಶಿ ಯುವಕರ ಸಹಾಯದಿಂದ ಜಲಪಾತದ ಸ್ಥಳಕ್ಕೆ ಧಾವಿಸುತ್ತಿದ್ದಾರೆ.

    ನೂರು ರೂಪಾಯಿ ಶುಲ್ಕ: ಜಲವಾನಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಗೋವಾ ಅರಣ್ಯ ಇಲಾಖೆ ಶುಲ್ಕ ವಸೂಲಿ ಮಾಡುತ್ತಿದೆ. ಸೂರಲ್ ಬಳಿ ಪ್ರವೇಶ ಬಿಂದು ಸ್ಥಾಪಿಸಿ, ಪ್ರತಿ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಫಾಲ್ಸ್ ಜನಪ್ರಿಯವಾದ ಆರಂಭದ ದಿನಗಳಲ್ಲಿ 30 ರೂ. ಶುಲ್ಕವಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಒಬ್ಬರಿಗೆ 100, ಬೈಕ್ ಪಾರ್ಕಿಂಗ್‌ಗೆ 50 , ಕ್ಯಾಮರಾಗೆ 50 ಹೀಗೆ ಪ್ರತಿಯೊಂದಕ್ಕೂ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಪ್ರತಿದಿನ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋವಾ, ಮಹಾರಾಷ್ಟ್ರದಿಂದ ನೂರಾರು ಯುವಕ-ಯುವತಿಯರು ಭೇಟಿ ನೀಡುತ್ತಾರೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಕಾಲಿಡಲೂ ಜಾಗವಿರುವುದಿಲ್ಲ.

    ಹೇಗಿದೆ ‘ಕ್ಲೀನ್ ಪೂಲ್’ ಹೋಲುವ ಫಾಲ್ಸ್?

    ದಟ್ಟ ಅರಣ್ಯದಲ್ಲಿ ಧುಮ್ಮಿಕ್ಕುವ ಜಲವಾನಿ ಜಲಪಾತ ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ನೀಲಿ ವರ್ಣದ ಫಾಲ್ಸ್‌ಗಳನ್ನು ಹೋಲುತ್ತದೆ. ನೂರಾರು ಅಡಿ ಮೇಲಿಂದ ಬೀಳುವ ನೀರು ಈಜುಕೊಳ ಸೃಷ್ಟಿಸಿದಂತೆ ಭಾಸವಾಗುತ್ತದೆ. ಹರಿಯುವ ನೀರಿನಲ್ಲಿ 15 ರಿಂದ 20 ಅಡಿ ಆಳದ ನೆಲ ಗೋಚರಿಸುತ್ತದೆ. ಜಲವಾನಿ ಫಾಲ್ಸ್ ಚಲನಚಿತ್ರದಲ್ಲಿ ತೋರಿಸುವ ‘ಕ್ಲೀನ್ ಪೂಲ್’ ನಂತಿದ್ದು, ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದೆ. ಮೂರು ಕಡೆ ಕಲ್ಲುಗಳಿಂದ ಆವೃತವಾಗಿರುವ ಗುಡ್ಡದಿಂದ ಬೀಳುವ ನೀರು ಪ್ರವಾಸಿಗರನ್ನು ಸಮ್ಮೋಹಿತಗೊಳಿಸುತ್ತದೆ.

    ತಲುಪುವುದು ಹೇಗೆ?

    ಬೆಳಗಾವಿಯಿಂದ 50 ಕಿ.ಮೀ. ದೂರದಲ್ಲಿ ಈ ಜಲಪಾತವಿದೆ. ಬೆಳಗಾವಿ-ಗೋವಾ ರಸ್ತೆಯ ಬಳಿಸಿ ಕಣಂಕುಂಬಿ ಮೂಲಕ ಗೋವಾ- ಕರ್ನಾಟಕ ಗಡಿಯ ಸೂರಲ್ ತಲುಪಬೇಕು. ಸೂರಲ್ ಬಳಿ ಗೋವಾ ಅರಣ್ಯ ಇಲಾಖೆ ಸ್ಥಾಪಿಸಿರುವ ಕೇಂದ್ರದಲ್ಲಿ ಶುಲ್ಕ ಪಾವತಿಸಬೇಕು. ಅಲ್ಲಿಂದ ದಟ್ಟವಾದ ಕಾಡಿನಲ್ಲಿ 7 ಕಿ.ಮೀ. ಕಾಲ್ನಡಿಗೆ ಮೂಲಕ ಜಲವಾನಿ ತಲುಪಲು ಕನಿಷ್ಠ ಎರಡು ಗಂಟೆ ಬೇಕಾಗುತ್ತದೆ. ಜಲವಾನಿಗೆ ಹೋಗುವುದಾದರೆ ಬೆಳಗ್ಗೆ 11ರ ಒಳಗಾಗಿ ಸೂರಲ್ ಗ್ರಾಮದಲ್ಲಿರಬೇಕು. ಮಧ್ಯಾಹ್ನ 12ರ ನಂತರ ಪ್ರವೇಶ ಇರುವುದಿಲ್ಲ. ದಟ್ಟ ಅರಣ್ಯದಲ್ಲಿ ಕಾಲ್ನಡಿಗೆ ಮೂಲಕವೇ ಫಾಲ್ಸ್ ತಲುಪಬೇಕಾದ್ದರಿಂದ ವಯಸ್ಸಾದವರನ್ನು, ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗದಿದ್ದರೆ ಒಳ್ಳೆಯದು.

    | ಧರ್ಮರಾಜ ಪಾಟೀಲ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts