More

    ಅಧಿಕೃತವಾಗಿ ಚುನಾವಣಾ ಫಲಿತಾಂಶ ಪ್ರಕಟವಾಗದಿದ್ರೂ AI ಮೂಲಕ ಇಮ್ರಾನ್​ ಖಾನ್​ ಗೆಲುವಿನ ಭಾಷಣ

    ಇಸ್ಲಮಾಬಾದ್​: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಮುಗಿದು 36 ಗಂಟೆಗಳು ಕಳೆದರೂ ಇನ್ನೂ ಅಧಿಕೃತ ಫಲಿತಾಂಶ ಹೊರಬಿದ್ದಿಲ್ಲ. ಇದರ ನಡುವೆ ಜೈಲಿನಲ್ಲಿರುವ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ತಮ್ಮದೇ ಗೆಲುವು ಎಂದು ಘೋಷಣೆ ಮಾಡಿದೆ. ಇನ್ನೊಂದೆಡೆ ಮೂರು ಸಲ ಪ್ರಧಾನಿ ಆಗಿರುವ ನವಾಜ್ ಷರೀಫ್ ತಮ್ಮ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಪಕ್ಷದ್ದೇ ಗೆಲುವು ಎಂದು ಸ್ವಯಂಘೋಷಣೆ ಮಾಡಿಕೊಂಡಿರುವುದರಿಂದ ಪಾಕ್ ಚುನಾವಣಾ ಫಲಿತಾಂಶ ಗೊಂದಲದಲ್ಲೇ ಇರುವಂತಾಗಿದೆ.

    ಇದೀಗ ಇಮ್ರಾನ್​ ಖಾನ್​ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಜಯದ ಭಾಷಣ ಸಹ ಮಾಡಿದ್ದಾರೆ. ಜೈಲಿನಲ್ಲಿರು ತಮ್ಮ ನಾಯಕ ಇಮ್ರಾನ್​ ಖಾನ್​ ಅವರ ಧ್ವನಿಯನ್ನು ಕೃತಕ ಬುದ್ಧಿಮತೆ ಅಥವಾ ಎಐ ಮೂಲಕ ಜನರೇಟ್​ ಮಾಡಿ, ವಿಜಯದ ಭಾಷಣದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಎಐ ಜನರೇಟೆಡ್​ ಭಾಷಣದಲ್ಲಿ ಇಮ್ರಾನ್​ ಖಾನ್, ನವಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತದಾನದ ದಿನದಂದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನವಾಜ್​ ಅವರ ಲಂಡನ್​ ಪ್ಲ್ಯಾನ್​ ಫೇಲ್​ ಆಗಿದೆ ಎಂದಿದ್ದಾರೆ.

    ನಿಮ್ಮ ಮತಗಳಿಂದ ಲಂಡನ್​ ಪ್ಲ್ಯಾನ್​ ವಿಫಲವಾಗಿದೆ. ಯಾವೊಬ್ಬ ಪಾಕಿಸ್ತಾನಿಯೂ ಕೂಡ ನಿಮ್ಮನ್ನು (ನವಾಜ್​ ಷರೀಫ್​) ನಂಬುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮತದ ಶಕ್ತಿಯನ್ನು ನೋಡಿದ್ದಾರೆ, ಈಗ ನಿಮ್ಮ ಮತವನ್ನು ರಕ್ಷಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿ ಎಂದು ಜನರಿಗೆ ಇಮ್ರಾನ್​ ಕರೆ ನೀಡಿದ್ದಾರೆ.

    ನೀವು ನನ್ನ ನಂಬಿಕೆಗೆ ತಕ್ಕಂತೆ ನಡೆದುಕೊಂಡಿದ್ದೀರಿ ಮತ್ತು ಚುನಾವಣಾ ದಿನದಂದು ಭಾರೀ ಪ್ರಮಾಣದಲ್ಲಿ ಮತದಾನ ಮಾಡಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ‘ಲಂಡನ್ ಯೋಜನೆ’ ಫೇಲ್​ ಆಗಿದೆ. ನವಾಜ್ ಷರೀಫ್ ಕಡಿಮೆ ಬುದ್ಧಿಮತ್ತೆಯ ನಾಯಕ. ತಮ್ಮ ಪಕ್ಷವು 30 ಸ್ಥಾನಗಳಲ್ಲಿ ಹಿಂದುಳಿದಿದ್ದರೂ ವಿಜಯದ ಭಾಷಣ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ಸ್ವಾತಂತ್ರ್ಯದ ಮರುಸ್ಥಾಪನೆಗೆ ಅಡಿಪಾಯ ಹಾಕಿದ್ದಾರೆ. ಚುನಾವಣೆಯಲ್ಲಿ ಅಚ್ಚುಕಟ್ಟಾಗಿ ಗೆಲ್ಲಲು ನಮಗೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಅಭಿನಂದನೆಗಳು ಎಂದು ಇಮ್ರಾನ್​ ಹೇಳಿದ್ದಾರೆ.

    ಗುರುವಾರ ನಡೆದ ಚುನಾವಣೆಯಲ್ಲಿ ನವಾಜ್ ಷರೀಫ್ ಅವರ ಪಕ್ಷವು ಒಂದು ಪಕ್ಷವಾಗಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಆದಾಗ್ಯೂ, ಇಮ್ರಾನ್ ಖಾನ್ ಅವರ ಪಕ್ಷವನ್ನು ಚುನಾವಣೆಯಿಂದ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಒಂದೇ ಬಣವಾಗಿ ಸ್ಪರ್ಧಿಸುವ ಬದಲು ಸ್ವತಂತ್ರವಾಗಿ ಸ್ಪರ್ಧಿಸಿದ ಇಮ್ರಾನ್ ಖಾನ್ ಬೆಂಬಲಿಗರು ಒಟ್ಟಾರೆಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.

    ನವಾಜ್​ ಷರೀಫ್​ ಕೂಡ ಗೆಲುವನ್ನು ಪ್ರತಿಪಾದಿಸಿದ್ದಾರೆ. ಅವರ ಪಕ್ಷವು ಸ್ಪಷ್ಟ ಬಹುಮತ ಸಾಧಿಸಲು ವಿಫಲವಾದ ಬಳಿಕ ಸರ್ಕಾರ ರಚಿಸಲು ಪ್ರತಿಸ್ಪರ್ಧಿ ಪಕ್ಷಗಳನ್ನು ಒತ್ತಾಯಿಸಿದರು. ಪಾಕಿಸ್ತಾನ ಮುಸ್ಲಿಂ ಲೀಗ್ ಚುನಾವಣೆಯ ನಂತರ ಇಂದು ದೇಶದಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ ಮತ್ತು ಈ ದೇಶವನ್ನು ಕಷ್ಟದ ಸುಳಿಯಿಂದ ಹೊರತರುವುದು ನಮ್ಮ ಕರ್ತವ್ಯವಾಗಿದೆ. ಯಾರೇ ಜನಾದೇಶ ಪಡೆದರೂ, ಸ್ವತಂತ್ರರಾಗಲಿ ಅಥವಾ ಪಕ್ಷಗಳಾಗಿ ಜನಾದೇಶವನ್ನು ನಾವು ಗೌರವಿಸುತ್ತೇವೆ. ನಮ್ಮೊಂದಿಗೆ ಸೇರಿ ಈ ಗಾಯಗೊಂಡ ರಾಷ್ಟ್ರವು ತನ್ನ ಸಹಜ ಸ್ಥಿತಿಗೆ ಮರಳಲು ಸಹಾಯ ಮಾಡಲು ನಮಗೆ ಬೆಂಬಲ ನೀಡುವಂತೆ ಆಹ್ವಾನಿಸುತ್ತೇವೆ ಎಂದು ಷರೀಫ್ ಲಾಹೋರ್‌ನಲ್ಲಿ ಬೆಂಬಲಿಗರಿಗೆ ತಿಳಿಸಿದರು.

    ಪಾಕಿಸ್ತಾನದ ಚುನಾವಣಾ ಆಯೋಗವು ಒದಗಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 265 ರಲ್ಲಿ 224 ಕ್ಷೇತ್ರಗಳ ಫಲಿತಾಂಶಗಳನ್ನು ಘೋಷಿಸಲಾಗಿದೆ. ಸ್ವತಂತ್ರ ಅಭ್ಯರ್ಥಿಗಳು (ಹೆಚ್ಚಾಗಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದಿಂದ ಬೆಂಬಲಿತವಾಗಿದೆ) 92 ಸ್ಥಾನಗಳನ್ನು ಪಡೆದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ 63 ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 50. ಇತರೆ ಪಕ್ಷಗಳು 19 ಸ್ಥಾನಗಳನ್ನು ಪಡೆದುಕೊಂಡಿವೆ. (ಏಜೆನ್ಸೀಸ್​)

    ಇಮ್ರಾನ್ ಪಕ್ಷಕ್ಕೆ ಮುನ್ನಡೆ, ನಮ್ದೇ ಗೆಲುವು ಎಂದ ನವಾಜ್; ಅಧಿಕೃತವಾಗಿ ಪ್ರಕಟಿಸದ ಆಯೋಗ

    ಕೋರ್ಟ್ ವಿಚಾರಣೆಯಲ್ಲಿ ಲೇಡಿ ಜಡ್ಜ್​​ಗೆ ಲವ್ ಪ್ರಪೋಸ್ ಮಾಡಿದ ಕಳ್ಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts