More

    ಹೀಗೆ ಆರಂಭವಾಗಿದೆ ಮೂರನೆಯ ಮಹಾಯುದ್ಧ!

    ಅಮೆರಿಕದ ನೂರಾರು ಕಂಪನಿಗಳು ಚೀನಾದಲ್ಲಿ ಇರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ತಯಾರಿಸುತ್ತಿರುವ ವಸ್ತುಗಳು ಚೀನಾದಿಂದ ಹೊರಹೋಗದಂತೆ ಕಮ್ಯೂನಿಸ್ಟ್ ಸರ್ಕಾರ ತಡೆಯೊಡ್ಡತೊಡಗಿದೆ. ಇದರ ಪರಿಣಾಮವಾಗಿ ಅಮೆರಿಕನ್ನರು ತಾವು ಬಂಡವಾಳ ಹೂಡಿ ತಯಾರಿಸಿದ ವಸ್ತುಗಳನ್ನು ಪಡೆದುಕೊಳ್ಳಲಾಗದ ಸ್ಥಿತಿಗೆ ತಲುಪುತ್ತಿದ್ದಾರೆ.

    ಹೀಗೆ ಆರಂಭವಾಗಿದೆ ಮೂರನೆಯ ಮಹಾಯುದ್ಧ!ಎರಡನೆಯ ಜಾಗತಿಕ ಮಹಾಯುದ್ಧ ಮುಕ್ತಾಯವಾಗಿ ಇದೇ ಮೇ 8ಕ್ಕೆ ಎಪ್ಪತ್ತೈದು  ವರ್ಷಗಳಾದವು. ಈ ಮುಕ್ಕಾಲು ಶತಮಾನದಲ್ಲಿ ಜಗತ್ತು ಅಲ್ಲಲ್ಲಿ ನೂರಾರು ಸಣ್ಣಪುಟ್ಟ ಯುದ್ಧಗಳನ್ನು ಕಂಡಿದ್ದರೂ ಮೂರನೆಯ ಮಹಾಯುದ್ಧವನ್ನು ಕಂಡಿಲ್ಲ. ಯುದ್ಧದಂಚಿನಲ್ಲಿ ಜಗತ್ತು ನಿಂತ ಪ್ರಕರಣಗಳು ಹಲವಾರಿವೆ. ಅವುಗಳಲ್ಲಿ ಮುಖ್ಯವಾದವು 1947-48ರ ಬರ್ಲಿನ್ ಏರ್​ಲಿಫ್ಟ್, 1962ರ ಕ್ಯೂಬ ಕ್ಷಿಪಣಿ ವಿವಾದ, 1971ರ ಭಾರತ – ಪಾಕಿಸ್ತಾನ ಯುದ್ಧ. ಆಗೆಲ್ಲ ಮೂರನೆಯ ಮಹಾಯುದ್ಧದ ದಳ್ಳುರಿಗೆ ಸಿಲುಕುವುದರಿಂದ ಕೂದಲೆಳೆಯಲ್ಲಿ ಬಚಾವಾದ ಜಗತ್ತು ಇಂದು ಹೊಸದೊಂದು ಬಗೆಯ ಯುದ್ಧಕ್ಕೆ ಸಿಲುಕಿಹೋಗಿದೆ.

    ಯಾವುದೋ ವೈರಿ ರಾಷ್ಟ್ರ ಅಥವಾ ರಾಷ್ಟ್ರಗಳ ವಿರುದ್ಧ ಬಳಸಲೆಂದು ಚೀನೀ ಕಮ್ಯೂನಿಸ್ಟ್ ಪಾರ್ಟಿಯ ಆದೇಶದ ಮೇರೆಗೆ ಚೀನೀ ವೈರಸ್ ತಜ್ಞರು ಸೃಷ್ಟಿಸಿದ್ದ ನಾವೆಲ್ ಕರೊನಾ ವೈರಸ್ ಯಾರದೋ ಅಚಾತುರ್ಯದಿಂದ ಆರು ತಿಂಗಳ ಹಿಂದೆ ಲ್ಯಾಬ್​ನಿಂದ ಹೊರಬಿದ್ದು ಚೀನಾಗೇ ಮೊದಲು ಅಮರಿಕೊಂಡಿತು. ತನ್ನ ಯೋಜನೆ ಎಡವಟ್ಟಾದದ್ದನ್ನು ತಕ್ಕಮಟ್ಟಿಗಾದರೂ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲೋಸುಗ ಚೀನೀ ಕಮ್ಯೂನಿಸ್ಟ್ ಸರ್ಕಾರ ವೈರಸ್ ಅನ್ನು ಅಮೆರಿಕ ಮತ್ತು ಯೂರೋಪ್​ಗೆ ‘ರಫ್ತು’ ಮಾಡಿದ್ದೀಗ ಬಹಿರಂಗ ರಹಸ್ಯ. ನಂತರ ತಾನು ಮಾತ್ರ ವೈರಸ್ ತಡೆಗೆ ಅಗತ್ಯ ತಯಾರಿಯನ್ನು ಮಾಡಿಕೊಳ್ಳತೊಡಗಿದ ಚೀನಾ ಅಂಥದೇ ಪ್ರಯತ್ನದಲ್ಲಿ ಇತರ ದೇಶಗಳು ವಿಫಲವಾಗಲಿ ಎಂಬ ಉದ್ದೇಶದಿಂದಲೇ ಮೊದಲು ಹಾದಿ ತಪ್ಪಿಸುವ ಸುಳ್ಳುಗಳನ್ನೂ, ನಂತರ ಕಳಪೆ ಹಾಗೂ ಸೋಂಕುಪೂರಿತ ವೈದ್ಯಕೀಯ ಸಾಮಗ್ರಿಗಳನ್ನು ವೈರಸ್​ಪೀಡಿತ ದೇಶಗಳಿಗೆ ರಫ್ತು ಮಾಡಿತು. ಇದೆಲ್ಲದರ ಅರ್ಥ ನಾವೆಲ್ ಕರೊನಾವೈರಸ್ ಅನ್ನು ಚೀನಾ ಒಂದು ಅಸ್ತ್ರವಾಗಿ ಬಳಸಿದೆ! ಪರಿಣಾಮವಾಗಿ ಅಮೆರಿಕ ಮತ್ತು ಯೂರೋಪ್​ನಲ್ಲಿ ವೈರಸ್ ಕಾಳ್ಗಿಚ್ಚಿನಂತೆ ಹರಡುತ್ತಿದೆ, ಎರಡೂವರೆ ಲಕ್ಷಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿದೆ, ಮೂರು ಟ್ರಿಲಿಯನ್ ಡಾಲರ್​ಗಳ ಹಾನಿಯೊಂದಿಗೆ ಅರ್ಥವ್ಯವಸ್ಥೆ ಧರಾಶಾಯಿಯಾಗಿದೆ, ಯುದ್ಧದಿಂದ ಆಗಬಹುದಾದ ವಿನಾಶ ವೈರಸ್​ನಿಂದ ಆಗುತ್ತಿದೆ! ಅಂದರೆ ಮೂರನೆಯ ಮಹಾಯುದ್ಧ ಆರಂಭವಾಗಿದೆ!

    ಇದನ್ನೂ ಓದಿ  ಮುಂಬೈನಿಂದ ಕಳ್ಳ ದಾರಿ ಹಿಡಿದು ಬಂದವರಿಗೀಗ ಫಜೀತಿ

    ಇಂಥದೊಂದು ಜಗತ್​ಕಂಟಕ ಹೂಟಕ್ಕೆ ಚೀನಾ ಮುಂದಾದದ್ದು ಹೇಗೆ? ಉತ್ತರ ಸ್ಪಷ್ಟವಿಲ್ಲ. ಆದರೆ ಕಮ್ಯೂನಿಸ್ಟ್ ಚೀನಾ ಕುರಿತಂತೆ ಅಕ್ಯಾಡೆಮಿಕ್ ವಲಯಗಳಲ್ಲಿ ಆಗೊಮ್ಮೆ ಈಗೊಮ್ಮೆ ಒಂದು ವಿಷಯ ಪ್ರಸ್ತಾಪವಾಗುವುದುಂಟು. ಇದು ಹೊರಬಿದ್ದದ್ದು ಚೀನೀ ಕಮ್ಯೂನಿಸ್ಟ್ ವ್ಯವಸ್ಥೆಯ ಬಗ್ಗೆ ಭಿನ್ನಮತ ತಳೆದು ಅಲ್ಲಿಂದ ಹೊರಬಂದ ಕೆಲವರಿಂದ. ಅವರು ಹೇಳುವ ಪ್ರಕಾರ 1949ರಲ್ಲಿ ಅಧಿಕಾರ ಹಿಡಿದ ಚೀನೀ ಕಮ್ಯೂನಿಸ್ಟ್ ನಾಯಕರು ಚೀನಾವನ್ನು ಪ್ರಪಂಚದಲ್ಲಿ ನಂ.1 ಸ್ಥಾನಕ್ಕೇರಿಸಲು ನಿಗದಿ ಮಾಡಿದ ಸಮಯ ಒಂದುನೂರು ವರ್ಷಗಳು. ಅಂದರೆ 2049ರ ಹೊತ್ತಿಗೆ ಚೀನಾ ವಿಶ್ವನಾಯಕನ ಪಟ್ಟವೇರಬೇಕು! ಮೂಲತಃ ಮಾವೋ ಝೆದಾಂಗ್​ರ ಆಶಯವಾಗಿದ್ದ ಈ ಯೋಜನೆಯನ್ನು ಒಂದು ಪ್ರಾಕ್ಟಿಕಲ್ ಯೋಜನೆಯಾಗಿ ಬೆಳೆಸಿ ಅನುಷ್ಠಾನಗೊಳಿಸಿದ್ದು ದೆಂಗ್ ಷಿಯಾವೋಪಿಂಗ್ ಎನ್ನುತ್ತಾರೆ. ದೆಂಗ್​ರ ಯೋಜನೆಯನ್ನು ಹೀಗೆ ಸಂಕ್ಷೇಪಿಸಬಹುದು- ಚೀನೀ ಗಡಿಗಳ ಸುರಕ್ಷೆಗಾಗಿ ಸೋವಿಯೆತ್ ಯೂನಿಯನ್ ಅನ್ನು ನಿರ್ವೀರ್ಯಗೊಳಿಸುವ ಮೊದಲ ಹಂತ, ಜಾಗತಿಕ ಸೇನಾ-ಆರ್ಥಿಕ-ರಾಜಕಾರಣದ ಮುಂಚೂಣಿಯಲ್ಲಿರುವ ‘ಕ್ರಿಶ್ಚಿಯನ್ ರಾಷ್ಟ್ರಗಳು’ ಆರ್ಥಿಕವಾಗಿ ಚೀನಾದ ಮೇಲೆ ಅವಲಂಬಿತವಾಗುವಂತೆ ಮಾಡುವುದರ ಮೂಲಕ ಅವುಗಳ ಕೊರಳನ್ನು ಬೇಕೆಂದಾಗ ಹಿಚುಕಬಲ್ಲ ಸಾಮರ್ಥ್ಯನ್ನು ಚೀನಾಗೆ ತಂದುಕೊಡುವುದು ಎರಡನೆಯ ಹಂತ, ಮತ್ತು ಇವೆಲ್ಲ ತಯಾರಿಯೊಂದಿಗೆ ಮೂರನೆಯ ಹಾಗೂ ಅಂತಿಮ ಹಂತದಲ್ಲಿ ಅಮೆರಿಕವನ್ನು ಎದುರಿಸಿ ಮಣಿಸುವುದು.

    ಮೊದಲ ಹಂತವನ್ನು ಚೀನಾ ಮಾವೋರ ಕಾಲದಲ್ಲೇ ಸರಿಸುಮಾರು ಸಾಧಿಸಿಯಾಗಿತ್ತು. 1980ರ ದಶಕದಲ್ಲಿ ಸೋವಿಯೆತ್ ಯೂನಿಯನ್ ಆರ್ಥಿಕವಾಗಿ ಕುಸಿಯುತ್ತ ಸಾಗಿದಂತೆ ಚೀನಾದ ಅರ್ಥವ್ಯವಸ್ಥೆಯನ್ನು ಬಲಾಢ್ಯಗೊಳಿಸುವ ಮೂಲಕ ದೆಂಗ್ ಅದನ್ನು ಪೂರ್ಣಗೊಳಿಸಿದರು. ಅದೇ ಸಮಯದಲ್ಲಿ ಆರ್ಥಿಕ ಉದಾರೀಕರಣದ ಮೂಲಕ ಚೀನೀ ಅರ್ಥವ್ಯವಸ್ಥೆಯ ಬಾಗಿಲನ್ನು ವಿದೇಶೀ ಕಂಪನಿಗಳಿಗೆ ತೆರೆಯಲಾಯಿತು. ಚೀನಾ ಒದಗಿಸಿದ ಕಡಿಮೆ ಕೂಲಿಗೆ ದುಡಿಯಬಲ್ಲ ಕೆಲಸಗಾರರು ಮತ್ತು ಮುಷ್ಕರರಹಿತ ವಾತಾವರಣದ ಆಮಿಷಕ್ಕೆ ಸೋತು ನೂರಾರು ಬಹುರಾಷ್ಟ್ರೀಯ ಸಂಸ್ಥೆಗಳು ಅಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದವು. ಅದರ ಒಂದು ಪರಿಣಾಮವೆಂದರೆ ಇಂದು ಬೋಯಿಂಗ್ ವಿಮಾನಗಳಿಂದ ಆಪಲ್ ಫೋನ್​ಗಳವರೆಗೆ ಅಮೆರಿಕ ತನ್ನ ಜನತೆಗೆ ನೀಡುವ ಮತ್ತು ಇತರ ದೇಶಗಳಿಗೆ ರಫ್ತು ಮಾಡುವ ಅನೇಕಾನೇಕ ವಸ್ತುಗಳು ಇಡಿಯಾಗಿ ಅಥವಾ ಭಾಗಶಃ ತಯಾರಾಗುವುದು ಚೀನಾದಲ್ಲಿ. ಇದೇ ಪರಿಸ್ಥಿತಿ ಬಹುಪಾಲು ಪಶ್ಚಿಮ ಯೂರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾದ್ದು ಸಹ. ಇದರರ್ಥ ಕ್ರಿಶ್ಚಿಯನ್ ರಾಷ್ಟ್ರಗಳನ್ನು ಆರ್ಥಿಕವಾಗಿ ಚೀನಾದ ಮೇಲೆ ಅವಲಂಬಿತರನ್ನಾಗಿ ಮಾಡುವ ದೆಂಗ್ ಷಿಯಾವೋಪಿಂಗ್​ರ ಯೋಜನೆ ಹೀಗೆ ಯಶಸ್ವಿಯಾಗಿ ಅನುಷ್ಠಾನಗೊಂಡಿತು. ಇನ್ನು ಬಾಕಿ ಉಳಿದದ್ದು ಸಮಯ ನೋಡಿ ಅವುಗಳ ಕೊರಳು ಹಿಚುಕುವುದಷ್ಟೇ. ಆ ‘ಯೋಜನೆ’ಯ ಅನುಷ್ಠಾನ ಖಂಡಿತವಾಗಿಯೂ 2020ಕ್ಕೆ ನಿಗದಿಯಾಗಿರಲಿಲ್ಲ.

    ಇದನ್ನೂ ಓದಿ      ಈ ವ್ಯಕ್ತಿಗೆ ಬಿಲ್ ನೋಡಿ ಕರೆಂಟ್ ಹೊಡೆದಂಗಾಯ್ತು!

    ನಾವೆಲ್ ಕರೊನಾ ಸೋಂಕು ಲ್ಯಾಬ್​ನಿಂದ ಸಮಯಕ್ಕೆ ಮೊದಲೇ ಹೊರಬಂದು ಚೀನೀ ಕಮ್ಯೂನಿಸ್ಟ್ ಸರ್ಕಾರದ ಲೆಕ್ಕಾಚಾರವನ್ನು ಏರುಪೇರುಗೊಳಿಸಿತು. ಇಷ್ಟಾಗಿಯೂ, ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಚೀನೀ ಕುಟಿಲ ಯೋಜನೆಗಳ ಬಗ್ಗೆ ಮೇಲೆ ಹೇಳಿದ್ದೇನೆ. ಆ ಯೋಜನೆಗಳು ವೈರಸ್ ಅನ್ನು ಅಸ್ತ್ರವಾಗಿ ಬಳಸಿ ‘ಎದುರಾಳಿಗಳನ್ನು’ ನಾಶಮಾಡುವ ಅಥವಾ ತನ್ನ ಹತೋಟಿಗೆ ತೆಗೆದುಕೊಳ್ಳುವ ಚೀನೀ ಸರ್ಕಾರದ ಇರಾದೆಯನ್ನು ಜಗಜ್ಜಾಹೀರುಗೊಳಿಸಿವೆ. ಅಂದರೆ ಈಗ ಘಟಿಸುತ್ತಿರುವುದು ಯುದ್ಧ. ಯುದ್ಧವೆಂದರೆ ತಂತ್ರ-ಪ್ರತಿತಂತ್ರಗಳ, ಅವುಗಳಿಗೆ ಅನುಗುಣವಾಗಿ ಕ್ರಿಯೆ-ಪ್ರತಿಕ್ರಿಯೆಗಳ ಸರಣಿ. ಚೀನೀ ತಂತ್ರಗಳಿಗೆ ಪ್ರತಿಯಾಗಿ ಪೀಡಿತ ರಾಷ್ಟ್ರಗಳು ಪ್ರತಿತಂತ್ರ ಹೂಡಿವೆ. ವೈರಸ್​ನ ಸೃಷ್ಟಿ, ಅದರ ಪ್ರಸರಣದಲ್ಲಿ ಚೀನೀ ಸರ್ಕಾರದ ಸಕ್ರಿಯ ಪಾತ್ರ, ನಂತರ ‘ಕ್ರಿಶ್ಚಿಯನ್’ ರಾಷ್ಟ್ರಗಳು ಸೋಂಕಿನಿಂದ ತತ್ತರಿಸತೊಡಗಿದಾಗ ಉರಿಯುವ ಮನೆಯ ಗಳು ಹಿರಿಯುವಂತೆ ಆ ದೇಶಗಳ ಉತ್ಪಾದನಾ ಹಾಗೂ ಹಣಕಾಸು ಸಂಸ್ಥೆಗಳ ಷೇರುಗಳನ್ನು ಯದ್ವಾತದ್ವಾ ಖರೀದಿಸಿ ಆ ಸಂಸ್ಥೆಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಅಂದರೆ ಆ ದೇಶಗಳ ಅರ್ಥವ್ಯವಸ್ಥೆಯಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುವ ಚೀನಾದ ಹುನ್ನಾರ- ಈ ಎಲ್ಲ ಕಾರಣಗಳಿಂದಾಗಿ ಇಂದು ಜಗತ್ತು ಮುಖ್ಯವಾಗಿ ಕ್ರಿಶ್ಚಿಯನ್ ರಾಷ್ಟ್ರಗಳೇ ಒಂದು ಕಡೆ, ಚೀನಾವೇ ಒಂದು ಕಡೆ ಎನ್ನುವಂಥ ಸ್ಥಿತಿ ನಿರ್ವಣವಾಗಿದೆ. ತಮ್ಮ ಕಂಪನಿಗಳಲ್ಲಿ ಚೀನಾದ ಪ್ರಭಾವ ವಿಸ್ತರಿಸದಂತೆ ತಡೆಯುವ ಕ್ರಮಗಳನ್ನು ಸ್ಪೇನ್, ಜರ್ಮನಿ, ಇಟಲಿ ಹಾಗೂ ಆಸ್ಟ್ರೇಲಿಯಾಗಳು ತೆಗೆದುಕೊಂಡಿವೆ. ಅಮೆರಿಕದಲ್ಲಿ ಆ ಪ್ರಕ್ರಿಯೆ ಆರಂಭವಾಗಿದೆ. ಪ್ರಸಕ್ತ ‘ಯುದ್ಧ’ದ ಸನ್ನಿವೇಶದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಆ ರಾಷ್ಟ್ರಗಳ ಸಮಾನದುಃಖಿಗಳೂ, ಸಹಯೋಗಿಗಳೂ ಆಗಿರುವ ಜಪಾನ್ ಮತ್ತು ಭಾರತ ಸಹ ಆ ದಿಸೆಯಲ್ಲಿ ಕ್ರಮ ತೆಗೆದುಕೊಂಡಿವೆ.

    ಪ್ರಸಕ್ತ ಸನ್ನಿವೇಶಕ್ಕೆ ಚೀನಾವನ್ನು ಅಧಿಕೃತವಾಗಿ ಜವಾಬ್ದಾರಿ ಆಗಿಸುವ, ಆ ಮೂಲಕ ಕಮ್ಯೂನಿಸ್ಟ್ ಸರ್ಕಾರದ ಮನೋಸ್ಥೈರ್ಯವನ್ನು ಕುಂದಿಸುವ ಕ್ರಮಕ್ಕೂ ಪೀಡಿತ ರಾಷ್ಟ್ರಗಳು ಮುಂದಾಗಿವೆ. ವೈರಸ್ ಉಗಮದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು, ಪೀಡಿತ ರಾಷ್ಟ್ರಗಳಿಗೆ ಚೀನಾ ಪರಿಹಾರ ನೀಡಬೇಕು ಎಂಬ ಕೂಗು ದಿನೇದಿನೇ ಬಲವಾಗುತ್ತಿದೆ. ಈ ‘ತಂತ್ರ’ಕ್ಕೆ ಚೀನಾದ ‘ಪ್ರತಿತಂತ್ರ’ ಸ್ವಾರಸ್ಯಕರ. ತಾನು ತನ್ನ ಮೇಲೆ ಆರ್ಥಿಕವಾಗಿ ಅವಲಂಬಿತವಾಗುವಂತೆ ಮಾಡಿಕೊಂಡಿರುವ ತನ್ನ ‘ಎದುರಾಳಿ’ಗಳ ಕೊರಳು ಹಿಚುಕುವ ಕೃತ್ಯಕ್ಕೆ ಚೀನಾ ಮುಂದಾಗಿದೆ! ಇದನ್ನು ಎರಡು ಉದಾಹರಣೆಗಳ ಮೂಲಕ ಮನದಟ್ಟು ಮಾಡಲು ಪ್ರಯತ್ನಿಸುತ್ತೇನೆ.

    ಇದನ್ನೂ ಓದಿ    ಹೇಗಿದೆ ನೋಡಿ ಈ ಚನ್ನಿಗರಾಯನ ಮದ್ಯದ ಚಪಲ…!

    ಕರೊನಾ ಸೋಂಕಿನ ಉಗಮದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಹೇಳುವವರರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್​ರದ್ದು ಬಹುದೊಡ್ಡ ದನಿ. ಇದಕ್ಕೆ ಚೀನಾದ ಪ್ರತಿಕ್ರಿಯೆ ಕೆಟ್ಟಭಾಷೆಯ ನಿಂದನೆ ಮತ್ತು ಅರ್ಥಿಕ ಸಂಕಷ್ಟ ತಂದೊಡ್ಡುವ ಬೆದರಿಕೆ. ಚೀನಾದ ಮುಖ್ಯ ಕುಪ್ರಚಾರಕ ಮತ್ತು ಸರ್ಕಾರಿ ಪತ್ರಿಕೆ ‘ಗ್ಲೋಬಲ್ ಟೈಮ್್ಸ’ನ ಸಂಪಾದಕ ಹು ಷಿ ಜಿನ್ ಆಸ್ಟ್ರೇಲಿಯಾವನ್ನು ‘ಚೀನಾದ ಪಾದರಕ್ಷೆಗೆ ಅಂಟಿದ ಚೂಯಿಂಗ್ ಗಂ’ ಎಂದು ನಿಂದಿಸಿದ್ದಾನೆ. ಆ ಗಂ ಅನ್ನು ಒರೆಸಿಹಾಕಲು ‘ಕಲ್ಲು’ ಬೇಕು ಎಂದವನ ತೀರ್ವನ. ಆ ಕಲ್ಲು ಯಾವುದು ಎನ್ನುವುದನ್ನು ಹೇಳುವುದು ಕ್ಯಾನ್​ಬೆರಾದಲ್ಲಿರುವ ಚೀನೀ ರಾಯಭಾರಿ ಚೆಂಗ್ ಜಿಂಗ್ಯೆ. ತನಿಖೆಯ ಬಗ್ಗೆ ಮಾತಾಡುವ ತನ್ನ ನಿಲುವಿನಿಂದ ಹಿಂತೆಗೆಯದಿದ್ದರೆ ಆಸ್ಟ್ರೇಲಿಯಾದ ಅರ್ಥವ್ಯವಸ್ಥೆಯನ್ನು ಹಾಳುಗೆಡವುದಾಗಿ ಚೆಂಗ್ ಜಿಂಗ್ಯೆ ಬೆದರಿಕೆ ಹಾಕಿದ್ದಾನೆ. ಚೆಂಗ್ ಜಿಂಗ್ಯೆಗೆ ಹೀಗೆ ಚಂಗ್ ಚಂಗ್ ಎಂದು ಎಗರಾಡುವ ಧೈರ್ಯ ಬಂದದ್ದು ಹೇಗೆ? ಇಂದು ಆಸ್ಟ್ರೇಲಿಯಾದ ಅತಿ ದೊಡ್ಡ ವ್ಯಾಪಾರಿ ಸಹಯೋಗಿ ಚೀನಾ. ಅವೆರಡು ದೇಶಗಳ ವಾರ್ಷಿಕ ವ್ಯಾಪಾರದ ಮೌಲ್ಯ ಇನ್ನೂರು ಬಿಲಿಯನ್ ಡಾಲರ್​ಗಳು! ಆಸ್ಟ್ರೇಲಿಯಾದ ರಫ್ತಿನ 30% ಹೋಗುವುದು ಚೀನಾಗೆ. ಆ ದೇಶದ ಕಲ್ಲಿದ್ದಲು, ವೈನ್, ಬೀಫ್​ಗಳ ಅತಿ ದೊಡ್ಡ ಮಾರುಕಟ್ಟೆ ಚೀನಾ. ಇದು ಸಾಲದೆಂಬಂತೆ ಆಸ್ಟ್ರೇಲಿಯಾದ ಶಿಕ್ಷಣಸಂಸ್ಥೆಗಳಲ್ಲಿ ಕಲಿಯುತ್ತಿರುವ ಚೀನೀ ವಿದ್ಯಾರ್ಥಿಗಳಿಂದ ಆ ದೇಶಕ್ಕೆ ವಾರ್ಷಿಕವಾಗಿ ಸಿಗುತ್ತಿರುವುದು ಹನ್ನೆರಡು ಬಿಲಿಯನ್ ಡಾಲರ್​ಗಳು! ಇದೆಲ್ಲವನ್ನೂ ನಿಲ್ಲಿಸಿಬಿಡುವುದಾಗಿ ಚೆಂಗ್ ಜಿಂಗ್ಯೆ ಗುಟುರು ಹಾಕಿದ್ದಾನೆ.

    ಈಗ ಅಮೆರಿಕದತ್ತ ಹೊರಳೋಣ. ಕರೊನಾ ಸೋಂಕಿನಿಂದ ಅತಿಯಾಗಿ ನೋಂದಿರುವ ದೇಶ ಅಮೆರಿಕ. ಇದು ಚೀನೀ ಯೋಜನೆಗೆ ಅನುಗುಣವಾಗಿಯೇ ನಡೆಯುತ್ತಿದೆ! ಇದರಿಂದಾಗಿ ಅತೀವವಾಗಿ ರೋಷಗೊಂಡಿರುವ ಅಧ್ಯಕ್ಷ ಟ್ರಂಪ್, ಅವರಿಗಿಂತಲೂ ಹೆಚ್ಚಾಗಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಚೀನಾ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದಾರೆ. ವೈರಸ್​ಗೆ ಸಂಬಂಧಿಸಿ ಕಳೆದ ಐದು ತಿಂಗಳುಗಳಲ್ಲಿ ಚೀನಾ ಮತ್ತೆಮತ್ತೆ ಸುಳ್ಳು ಹೇಳಿ ಜಗತ್ತನ್ನು ಅಡ್ಡದಾರಿಗೆಳೆದ ಪ್ರಕರಣಗಳೆಲ್ಲವನ್ನೂ ಪಾಂಪಿಯೋ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ತನ್ನ ಮುಖವಾಡವನ್ನು ಹೀಗೆ ಕಳಚುತ್ತಿರುವ ಪಾಂಪಿಯೋ ಬಗ್ಗೆ ಚೀನಾದ ಪ್ರತಿಕ್ರಿಯೆ ಅದೇ ಆರ್ಥಿಕ ಸಂಕಷ್ಟದ ಬೆದರಿಕೆ ಹಾಗೂ ಕೀಳುಭಾಷೆಯ ನಿಂದನೆ.

    ಇದನ್ನೂ ಓದಿ    ಬಾಲಕನ ಹೊಟ್ಟೆಯಲ್ಲಿದ್ದವು ಹನ್ನೆರಡು ಅಯಸ್ಕಾಂತಗಳು!

    ಮೊದಲಿಗೆ ಆರ್ಥಿಕ ಸಂಕಷ್ಟದ ಬೆದರಿಕೆಯನ್ನು ನೋಡೋಣ. ಅಮೆರಿಕದ ನೂರಾರು ಕಂಪನಿಗಳು ಚೀನಾದಲ್ಲಿರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ತಯಾರಿಸುತ್ತಿರುವ ವಸ್ತುಗಳು ಚೀನಾದಿಂದ ಹೊರಹೋಗದಂತೆ ಕಮ್ಯೂನಿಸ್ಟ್ ಸರ್ಕಾರ ತಡೆಯೊಡ್ಡತೊಡಗಿದೆ. ಇದರ ಪರಿಣಾಮವಾಗಿ ಅಮೆರಿಕನ್ನರು ತಾವು ಬಂಡವಾಳ ಹೂಡಿ ತಯಾರಿಸಿದ ವಸ್ತುಗಳನ್ನು ಪಡೆದುಕೊಳ್ಳಲಾಗದ ಸ್ಥಿತಿಗೆ ತಲುಪುತ್ತಿದ್ದಾರೆ. ಇದು ಸದ್ಯಕ್ಕೆ ಗಂಭೀರ ಪರಿಣಾಮಗಳನ್ನು ಸೃಷ್ಟಿಸುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ. ಇತರ ಕಂಪನಿಗಳಂತೆ ಅಮೆರಿಕದ ಔಷದ ಕಂಪನಿಗಳೂ ತಮ್ಮ ಕಾರ್ಖಾನೆಗಳನ್ನು ಅಮೆರಿಕದಿಂದ ಹೊರಗೊಯ್ದು ಚೀನಾದಲ್ಲಿ ಸ್ಥಾಪಿಸಿದ್ದರ ಪರಿಣಾಮವಾಗಿ ಇಂದು ಅಮೆರಿಕ ಬಳಸುವ ಔಷಧಗಳು ಮತ್ತಿತರ ವೈದ್ಯಕೀಯ ಸಾಧನಗಳಲ್ಲಿ 80% ಉತ್ಪಾದನೆಯಾಗುವುದು ಚೀನಾದಲ್ಲಿ! ಪಾಂಪಿಯೋ ಅವರ ವಾಗ್ದಾಳಿಗೆ ಪ್ರತಿಯಾಗಿ ಇಂದು ಆ ವೈದ್ಯಕೀಯ ಸಾಮಗ್ರಿಗಳು ಚೀನಾದಿಂದ ಹೊರಹೋಗದಂತೆ ಚೀನೀ ಸರ್ಕಾರ ತಡೆಯೊಡ್ಡಿದೆ. ಅಮೆರಿಕನ್ ಕಂಪನಿಗಳು ತಯಾರಿಸಿದ ಔಷಧಗಳಿರಲಿ, ಮಾಸ್ಕ್​ಗಳೂ ಕೂಡ ಇಂದು ಅಮೆರಿಕಕ್ಕೆ ತಲುಪುತ್ತಿಲ್ಲ! ಪರಿಣಾಮವಾಗಿ ಕರೊನಾ ಸೊಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯನ್ನೇ ಅಮೆರಿಕ ಕಳೆದುಕೊಂಡಂತಾಗಿದೆ.

    ಇನ್ನು ಕೀಳುಭಾಷೆಯ ನಿಂದನೆಯತ್ತ ಹೊರಳುವುದಾದರೆ ಅದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ‘ಗ್ಲೋಬಲ್ ಟೈಮ್್ಸ’ ಪತ್ರಿಕೆ ಪಾಂಪಿಯೋ ಅವರನ್ನು ‘ಸುಳ್ಳುಗಾರ, ಹುಚ್ಚ, ವಿದೂಷಕ’ ಎಂದೆಲ್ಲ ನಿಂದಿಸಿದೆ. ಸರ್ಕಾರಿ ವಾರ್ತಾಸಂಸ್ಥೆ ಷಿನ್​ಹುವಾ ಎರಡು ದಿನಗಳ ಹಿಂದೆ ಪಾಂಪಿಯೋ ಅವರ ಇಪ್ಪತ್ತಮೂರು ಆಪಾದನೆಗಳನ್ನು ನಿರಾಕರಿಸುವ ಹನ್ನೊಂದು ಸಾವಿರ ಪದಗಳ ದೀರ್ಘ ಲೇಖನವೊಂದನ್ನು ಪ್ರಕಟಿಸಿದೆ! ಆದರೆ ಆ ಲೇಖನವೇ ಸುಳ್ಳುಗಳ ಕಂತೆ ಎನ್ನುವುದು ಬೇರೆ ವಿಷಯ. ತಮಾಷೆಯೆಂದರೆ ನಾಸ್ತಿಕ ಚೀನಾ ಪಾಂಪಿಯೋರನ್ನು ನಿಂದಿಸಲು ಧರ್ಮವನ್ನು ಎಳೆದು ತಂದಿದೆ. ‘ಒಳ್ಳೆಯ ಕ್ರಿಶ್ಚಿಯನ್ ಎನಿಸಿಕೊಳ್ಳುವ ಯೋಗ್ಯತೆ ಪಾಂಪಿಯೋಗಿಲ್ಲ’ ಎಂದು ಆಪಾದಿಸುವ ‘ಗ್ಲೋಬಲ್ ಟೈಮ್್ಸ’ ಪತ್ರಿಕೆ ‘ಸುಳ್ಳು ಹೇಳುವವನು ನಾಶವಾಗುತ್ತಾನೆ’ ಎಂಬ ಬೈಬಲ್​ನ ಸೂಕ್ತಿಯೊಂದನ್ನು ಪಾಂಪಿಯೋ ವಿರುದ್ಧ ಬಳಸಿದೆ. ಭೂತದ ಬಾಯಲ್ಲಿ ಭಗವದ್ಗೀತೆ!

    ಈ ವೈರಸ್ ಯುದ್ಧ ಶಸ್ತ್ರಾಸ್ತ್ರ ಯುದ್ಧಕ್ಕೆ ತಿರುಗಬಹುದೇ? ಆ ಸಾಧ್ಯತೆ ದಕ್ಷಿಣ ಹಾಗೂ ಪೂರ್ವ ಚೀನಾ ಸಮುದ್ರಗಳಲ್ಲಿ ಮತ್ತು ಭಾರತ-ಚೀನಾ ಗಡಿಯಲ್ಲಿ ಕಳೆದವಾರವಷ್ಟೇ ಕಾಣಿಸಿಕೊಂಡಿದೆ. ಜಗತ್ತು, ಮುಖ್ಯವಾಗಿ ಚೀನಾ ವಿವೇಕಿಯಾಗಬೇಕಾದ್ದು ಈ ಕ್ಷಣದ ಜರೂರು.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts