More

    ಜಗದಗಲ: ಇಸ್ರೇಲನ್ನು ಕೆಣಕಿ ಇರುವೆ ಬಿಟ್ಟುಕೊಂಡಿರುವ ಇರಾನ್

    ಜಗದಗಲ: ಇಸ್ರೇಲನ್ನು ಕೆಣಕಿ ಇರುವೆ ಬಿಟ್ಟುಕೊಂಡಿರುವ ಇರಾನ್  ಇರಾನ್​ನ ನತಾಂಜ್ ನಗರದಲ್ಲಿರುವ ಅಣುಶಕ್ತಿ ಸಂಯಂತ್ರದಲ್ಲಿ ಇದೇ ಭಾನುವಾರ ಘಟಿಸಿದ ಸ್ಪೋಟವನ್ನು ಭಯೋತ್ಪಾದಕ ದಾಳಿ ಎಂದು ‘ಇರಾನಿಯನ್ ಅಟಾಮಿಕ್ ಎನರ್ಜಿ ಆರ್ಗನೈಜೇಶನ್’ (ಆಯ್ಎಇಓ) ಮುಖ್ಯಸ್ಥ ಅಲಿ ಅಕ್ಬರ್ ಸಲೇ ಆಪಾದಿಸಿರುವುದು ಮತ್ತು ದಾಳಿಕಾರರ ವಿರುದ್ಧ ಪ್ರತೀಕಾರ ಕ್ರಮಕ್ಕೆ ತೆಹರಾನ್ ಕಾರ್ಯಯೋಜನೆ ರೂಪಿಸುತ್ತಿರುವುದಾಗಿ ಇರಾನೀ ಸರ್ಕಾರೀ ಸೂತ್ರಗಳು ಹೇಳಿರುವುದು ಇಡೀ ಪ್ರಕರಣದ ಜತೆಗೆ ಪಶ್ಚಿಮ ಏಷ್ಯಾದ ಭೂ-ಸಾಮರಿಕ ಹಾಗೂ ಭೂ-ರಾಜಕೀಯ ಸ್ಥಿತಿಗತಿಗಳ ಬಗ್ಗೆ ಹೊಸದೊಂದು ಕೋನದಿಂದ ನೋಡಲು ನಮ್ಮನ್ನು ಪ್ರೇರೇಪಿಸುತ್ತದೆ.

    ಇಸ್ಪಹಾನ್ ಪ್ರಾಂತ್ಯದಲ್ಲಿರುವ ಈ ನತಾಂಜ್ ಯುರೇನಿಯಂ ಸಂಸ್ಕರಣಾ ಸಂಯಂತ್ರದಲ್ಲಿ ಹಿಂದಿನ ದಿನವಷ್ಟೇ ಅಧ್ಯಕ್ಷ ಹಸನ್ ರುಹಾನಿ ಹಿಂದಿನವುಗಳಿಗಿಂತಲೂ ಐವತ್ತು ಪಟ್ಟು ವೇಗದಲ್ಲಿ ಯುರೇನಿಯಂ ಸಂಸ್ಕರಿಸಬಲ್ಲ ಹೊಸ ಐಆರ್-9 ಸೆಂಟ್ರಿಪ್ಯೂಜ್​ಗಳನ್ನು ಉದ್ಘಾಟಿಸಿದ್ದರು. ಅದಾದ ಕೆಲವೇ ತಾಸುಗಳಲ್ಲಿ ಸಂಭವಿಸಿದ ಸ್ಫೋಟ ಮತ್ತು ಅದರಿಂದಾಗಿ ಇಡೀ ಸಂಯತ್ರಕ್ಕೆ ವಿದ್ಯುತ್ ಪೂರೈಕೆ ನಿಂತುಹೋದದ್ದನ್ನು ಆಯ್ಎಇಓ ವಕ್ತಾರರು ಮೊದಲಿಗೆ ‘ಆಕಸ್ಮಿಕ’ ಎಂದಷ್ಟೇ ಬಣ್ಣಿಸಿದ್ದರು. ಆದರೀಗ ಅದು ‘ನ್ಯೂಕ್ಲಿಯರ್ ಟೆರರಿಸಂ’ ಎಂದು ತೆಹರಾನ್ ಅಧಿಕೃತವಾಗಿ ಆಪಾದಿಸಿದೆ ಮತ್ತು ಈ ಕೃತ್ಯದ ಹಿಂದಿರುವುದು ಇಸ್ರೇಲ್​ನ ಮೊಸ್ಸಾದ್ ಗುಪ್ತಚರ ಸಂಸ್ಥೆ ಎಂದು ತನ್ನದಷ್ಟೇ ಅಲ್ಲ, ಅಮೆರಿಕನ್ ಗುಪ್ತಚರ ಮೂಲಗಳನ್ನೂ ಆಧರಿಸಿ ಸೂಚಿಸಿಯೂ ಇದೆ.

    ಈ ಸ್ಪೋಟದಿಂದ ಇರಾನ್​ನ ಅಣ್ವಸ್ತ್ರ ಕಾರ್ಯಕ್ರಮ ಕನಿಷ್ಟ ಒಂಬತ್ತು ತಿಂಗಳುಗಳು ಹಿಂದಕ್ಕೆ ಜಾರಿದೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಯಾವ ಮಾತನ್ನೂ ಆಡದ ಇಸ್ರೇಲ್, ನತಾಂಜ್ ಸಂಯತ್ರಕ್ಕೆ ಆಗಿರುವ ಹಾನಿ ಇರಾನಿಯನ್ನರು ಹೇಳುವುದಕ್ಕಿಂತಲೂ ಭಾರಿಯಾಗಿದೆ ಎಂದಿದೆ! ನತಾಂಜ್ ಪ್ರಕರಣ ಘಟಿಸಿರುವುದು ಕಳೆದವಾರವಷ್ಟೇ ಕಂಡುಬಂದ ಎರಡು ಬೆಳವಣಿಗೆಗಳ ಹಿನ್ನೆಲೆಯಲ್ಲಿ. ಒಂದು- ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರಿಂದ ಸ್ಥಗಿತಗೊಳಿಸಲ್ಪಟ್ಟಿದ್ದ ಡಿಸೆಂಬರ್ 2015ರ ಇರಾನ್ ಜತೆಗಿನ ಬೃಹದ್ ರಾಷ್ಟ್ರಗಳ ಒಪ್ಪಂದವನ್ನು ಮರುಜೀವಗೊಳಿಸಲು ಹೊಸ ಅಧ್ಯಕ್ಷ ಜೋ ಬೈಡೆನ್ ಪ್ರಯತ್ನ ಆರಂಭಿಸಿದ್ದು, ಎರಡು- ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಇಸ್ರೇಲ್ ಯಾರ ಮೇಲೂ ಅವಲಂಬಿಸಿಲ್ಲ, ಸ್ವತಂತ್ರವಾಗಿ ಕಾರ್ಯಯೋಜನೆ ರೂಪಿಸುವ ಮನಸ್ಸು ಮತ್ತು ಸಾಮರ್ಥ್ಯಗಳೆರಡೂ ದೇಶಕ್ಕಿವೆ ಎಂದು ಪ್ರಧಾನಿ ಬೆನ್ಯಾಮಿನ್ ನೇತನ್​ಯಾಹು ಗುಡುಗಿದ್ದು.

    ನತಾಂಜ್ ಸಂಯಂತ್ರದಲ್ಲಿ ಆಕಸ್ಮಿಕ ಘಟಿಸಿರುವುದು ಅಥವಾ ಇರಾನ್​ನ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಿಲುಗಡೆಗೆ ತರಲು ಇಸ್ರೇಲ್ ಪ್ರಯತ್ನಿಸಿದ್ದು ಇದೇ ಮೊದಲಲ್ಲ. ಕಳೆದ ಜುಲೈನಲ್ಲಿಯೂ ಇಸ್ಪಹಾನ್ ಪ್ರಾಂತ್ಯದ ಪವರ್ ಗ್ರಿಡ್ ಹಾನಿಗೊಳಗಾಗಿ, ವಿದ್ಯುತ್ ಪೂರೈಕೆ ನಿಂತುಹೋಗಿತ್ತು. ಆಗಲೂ ಇಸ್ರೇಲ್​ನತ್ತ ಅನುಮಾನದ ಮುಳ್ಳು ತಿರುಗಿತ್ತು. ಅದಕ್ಕೆ ಎರಡು ವರ್ಷಗಳ ಹಿಂದೆ ಘಟಿಸಿದ್ದಂತೂ ಅಸಾಧಾರಣ ಪ್ರಕರಣ. ರಾಜಧಾನಿ ತೆಹರಾನ್​ನಲ್ಲಿನ ಪತ್ರಾಗಾರವೊಂದಕ್ಕೇ ನುಗ್ಗಿದ್ದ ಇಸ್ರೇಲಿ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ ಇರಾನೀ ಅಣ್ವಸ್ತ್ರ ಕಾರ್ಯಯೋಜನೆಗಳ ಪೂರ್ಣ ಮಾಹಿತಿಗಳನ್ನೊಳಗೊಂಡ 500 ಕಿಲೋಗ್ರಾಂಗಳಿಗಿಂತಲೂ ಹೆಚ್ಚಿನ ಕಾಗದಪತ್ರಗಳನ್ನು ಅಪಹರಿಸಿದ್ದಲ್ಲದೆ, ಇರಾನೀ ಸುರಕ್ಷಾಪಡೆಗಳ ಕಣ್ಣುತಪ್ಪಿಸಿ ತನ್ನ ದೇಶಕ್ಕೆ ಸಾಗಿಸಿಕೊಂಡಿತ್ತು! ಇರಾನ್​ನ ಅಣ್ವಸ್ತ್ರ ಕಾರ್ಯಯೋಜನೆಗಳ ಪೂರ್ಣ ಮಾಹಿತಿ ಇಸ್ರೇಲ್​ಗೆ ದಕ್ಕಿದ್ದು ಹೀಗೆ. ಆ ಮಾಹಿತಿಗಳು ಅಮೆರಿಕಕ್ಕೂ ತಲುಪಿದ ಸಾಧ್ಯತೆ ಇದೆ. ಆ ಕಾರಣದಿಂದಾಗಿಯೇ ಟ್ರಂಪ್ ಆಡಳಿತ ಇರಾನ್ ಬಗ್ಗೆ ಕಟು ನಿರ್ಣಯಗಳನ್ನು ಕೈಗೊಂಡಿದ್ದು, ಇರಾನ್​ನಲ್ಲಿ ಮೊಸ್ಸಾದ್ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದು. ಇದರ ಅಂಗವಾಗಿಯೇ, ಇರಾನೀ ಅಣ್ವಸ್ತ್ರ ಯೋಜನೆಯ ಪ್ರಮುಖ ಪಾತ್ರಧಾರಿ ಮೊಹ್ಸೇನ್ ಫಕ್ರ್​ಜಾದೆಯವರ ಹತ್ಯೆಯೂ ಕಳೆದ ನವೆಂಬರ್​ನಲ್ಲಿ ಆಗಿಹೋಯಿತು!

    ಯಾವುದೇ ಮುಸ್ಲಿಂ ದೇಶ ಅಣ್ವಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ತನ್ನ ಅಸ್ತಿತ್ವದ ದೃಷ್ಟಿಯಿಂದ ಅತ್ಯಗತ್ಯ ಎಂಬ ನೀತಿಯನ್ನು ಯಹೂದಿ ರಾಷ್ಟ್ರ ಇಸ್ರೇಲ್ ಕಳೆದ ಅರ್ಧ ಶತಮಾನದಿಂದಲೂ ಬಹಿರಂಗವಾಗಿಯೇ ಪ್ರದರ್ಶಿಸುತ್ತ ಬಂದಿದೆ. ಅದು ಮೊದಲು ಕಾಣಸಿಕ್ಕಿದ್ದು ನಲವತ್ತು ವರ್ಷಗಳ ಹಿಂದೆ. ಸದ್ದಾಂ ಹುಸೇನ್​ರ ಇರಾಕ್ ಅಣ್ವಸ್ತ್ರ ಯೋಜನೆ ಆರಂಭಿಸಿದಾಗ, 1981 ಜೂನ್ 7ರಂದು ಇರಾಕ್​ನ ಒಸಿರಾಕ್ ಅಣು ಸಂಯಂತ್ರದ ಮೇಲೆ ನೇರ ವಾಯುದಾಳಿ ಎಸಗಿ ನಾಶಗೊಳಿಸಿತು. ಮತ್ತು ಅಲ್ಲಿಗೆ ಇರಾಕ್​ನ ಅಣ್ವಸ್ತ್ರ ಬಯಕೆ ಶಾಶ್ವತವಾಗಿ ನೆಲಕಚ್ಚುವಂತೆ ಮಾಡಿತು. ಪಾಕಿಸ್ತಾನದ ಅಣ್ವಸ್ತ್ರ ಬಯಕೆಯ ಬಗ್ಗೆ ಇಸ್ರೇಲ್​ನ ನೀತಿಯೂ ಇಲ್ಲಿ ಉಲ್ಲೇಖಾರ್ಹ. ಪಾಕಿಸ್ತಾನ ಹೊಂದುವ ಅಣ್ವಸ್ತ್ರ ಇಡೀ ಮುಸ್ಲಿಂ ಜಗತ್ತಿಗೆ ಸೇರಿರುವುದಾಗಿರುತ್ತದೆ ಎಂದು ಪ್ರಧಾನಮಂತ್ರಿ ಜುಲ್ಪೀಕರ್ ಆಲಿ ಭುಟ್ಟೊ ಘೊಷಿಸಿದ್ದು ಮತ್ತು ಪಾಕಿಸ್ತಾನ ಹೊಂದಬಹುದಾದ ಅಣ್ವಸ್ತ್ರವನ್ನು ‘ಇಸ್ಲಾಮಿಕ್ ಬಾಂಬ್’ ಎಂದು ಜಾಗತಿಕ ಮಾಧ್ಯಮ ಬಣ್ಣಿಸಿದ್ದು ಮುಸ್ಲಿಂ ಜಗತ್ತಿನ ಬದ್ಧವೈರಕ್ಕೆ ಗುರಿಯಾಗಿದ್ದ ಯೆಹೂದಿ ರಾಷ್ಟ್ರಕ್ಕೆ ಆತಂಕ ಮೂಡಿಸಿದ್ದು ಸಹಜವೇ ಆಗಿತ್ತು. ಹೀಗಾಗಿ ಕಹೂತಾ ಅಣು ಸಂಯಂತ್ರದ ಮೇಲೆ ದಾಳಿಯೆಸಗಿ ನಾಶಗೊಳಿಸಲು ಇಸ್ರೇಲ್ ಯೋಜನೆ ರೂಪಿಸಿತು. ಆದರೆ, ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಭಾರತದ ಸಹಕಾರ ಅತ್ಯಗತ್ಯವಾಗಿತ್ತು. ಇಸ್ರೇಲ್​ನಿಂದ ಹೊರಟು ಪಾಕಿಸ್ತಾನ ತಲುಪಿ, ಕಹೂತಾ ಮೇಲೆ ದಾಳಿಯೆಸಗಿದ ಎಫ್-16 ಯುದ್ಧವಿಮಾನಗಳಿಗೆ ತಾಯಿನಾಡಿಗೆ ಹಿಂತಿರುಗಲು ಹತ್ತಿರದಲ್ಲೇ ಮರುಇಂಧನ ಪೂರೈಕೆ ವ್ಯವಸ್ಥೆಗೆ ಇಸ್ರೇಲ್ ಬಯಸಿದ್ದು ಗುಜರಾತ್​ನಲ್ಲಿನ ಜಾಮ್ಗರ್ ವಾಯುನೆಲೆಯನ್ನು. ಆದರೆ, ಭಾರತ ನಿರಾಕರಿಸಿದ ಕಾರಣ ಇಸ್ರೇಲೀ ಯೋಜನೆ ಜಾರಿಯಾಗಲಿಲ್ಲ. ಆಗಿಯೇಬಿಟ್ಟಿದ್ದರೆ…! ಮುಂದಿನ ಕಾಲುಶತಮಾನದಲ್ಲಿ ಇರಾನ್ ಅಣ್ವಸ್ತ್ರ ಕಾರ್ಯಯೋಜನೆ ರೂಪಿಸಿತು. ಸ್ವತಃ ಅಣುಭೌತವಿಜ್ಞಾನಿಯಾಗಿದ್ದ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ದೇಶಕ್ಕೆ ಅಣ್ವಸ್ತ್ರ ದೊರಕಿಸಿಕೊಡುವ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದು ಆತಂಕಕಾರಿ ಬೆಳವಣಿಗೆ ಎಂದು ಎಲ್ಲೆಡೆ ಬಿಂಬಿತವಾಯಿತು. ಇದು ಇಸ್ರೇಲ್​ಗೆ ವಿಶೇಷವಾಗಿ ಆತಂಕ ಸೃಷ್ಟಿಸಿದ್ದಕ್ಕೆ ಕಾರಣಗಳಿದ್ದವು.

    ಮುಸ್ಲಿಂ ಜಗತ್ತಿನ ನಾಯಕತ್ವಕ್ಕಾಗಿ ಸೌದಿ ಅರೇಬಿಯಾದ ಜತೆಗೆ ಜಿದ್ದಿಗೆ ಬಿದ್ದ ಇರಾನ್ ಜಾಗತಿಕ ಮುಸ್ಲಿಂ ಸಮುದಾಯದ ಮನಗೆಲ್ಲುವ ಉದ್ದೇಶದಿಂದ ಯೆಹೂದಿ ರಾಷ್ಟ್ರ ಇಸ್ರೇಲ್ ವಿರುದ್ಧ ದಿನನಿತ್ಯದ ವಾಗ್ದಾಳಿ ಆರಂಭಿಸಿದ್ದಲ್ಲದೆ ಲೆಬನಾನ್​ನಲ್ಲಿ ಇಸ್ರೇಲ್-ವಿರೋಧಿ ಶಿಯಾ ಧರ್ವಿುಯ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯನ್ನು ಸೃಷ್ಟಿಸಿ ಸಾಕತೊಡಗಿದ್ದೀಗ ಇತಿಹಾಸ. ದಶಕದ ಹಿಂದೆ ಭಾರತ, ಅಜರ್​ಬೈಜಾನ್ ಹಾಗೂ ಮಲೇಷ್ಯಾ ಸೇರಿದಂತೆ ಅರ್ಧ ಡಜನ್ ಏಷ್ಯನ್ ದೇಶಗಳಲ್ಲಿ ಇಸ್ರೇಲಿ ಹಿತಾಸಕ್ತಿಗಳ ಹಾಗೂ ರಾಜತಂತ್ರಜ್ಞರ ಮೇಲೆ ಇರಾನ್-ಪ್ರಾಯೋಜಿತ ಭಯೋತ್ಪಾದಕ ದಾಳಿಗಳು ನಡೆದ ಪರಿಣಾಮವಾಗಿ, ಇರಾನ್ ಅಣ್ವಸ್ತ್ರ ಹೊಂದಿದರೆ, ಅದರಿಂದ ತನಗಾಗಬಹುದಾದ ಅಪಾಯದ ಅರಿವನ್ನು ಇಸ್ರೇಲ್ ಸ್ಪಷ್ಟವಾಗಿಯೇ ಮನಗಂಡಿತು. ಆದರೆ ಅದರ ಆತಂಕವನ್ನು ಪೂರ್ಣವಾಗಿ ಗ್ರಹಿಸುವಲ್ಲಿ ಒಬಾಮ ಸರ್ಕಾರ ವಿಫಲಗೊಂಡಿತು. ಅಮೆರಿಕ, ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಚೀನಾ ಒಟ್ಟುಗೂಡಿ 2015 ಡಿಸೆಂಬರ್​ನಲ್ಲಿ ಇರಾನ್ ಜತೆ ಮಾಡಿಕೊಂಡ ಅಣ್ವಸ್ತ್ರ ನಿಯಂತ್ರಣ ಒಪ್ಪಂದ ಮತ್ತು ತೆರವುಗೊಳಿಸಿದ ಕೆಲವು ಆರ್ಥಿಕ ನಿರ್ಬಂಧಗಳು ಇಸ್ರೇಲ್​ಗೆ ಅರ್ತಾಕ ಹಾಗೂ ಅವಾಸ್ತವಿಕ ಎನಿಸಿದ್ದು ನಿಜ. ಕೊನೆಗೂ ಇಸ್ರೇಲಿ ಆತಂಕವನ್ನು ಅಮೆರಿಕ ಅರ್ಥಮಾಡಿಕೊಳ್ಳತೊಡಗಿದ್ದು ಡೊನಾಲ್ಡ್ ಟ್ರಂಪ್ ಶ್ವೇತಭವನ ಪ್ರವೇಶಿಸಿದ ನಂತರವಷ್ಟೇ. ಅಧ್ಯಕ್ಷ ಟ್ರಂಪ್, ಇರಾನ್​ನ ವಿಶ್ವಾಸಾರ್ಹತೆಯನ್ನು ಸಕಾರಣವಾಗಿ ಶಂಕಿಸಿದ್ದಲ್ಲದೆ ಡಿಸೆಂಬರ್ 2015ರ ಒಪ್ಪಂದದಿಂದ ಅಮೆರಿಕವನ್ನು ಹೊರಗೊಯ್ದರು.

    ಕಳೆದವರ್ಷ, ನತಾಂಜ್​ಸಂಯಂತ್ರ ಮತ್ತು ಇತರ ಹಲವೆಡೆ ಘಟಿಸಿದ ಬೆಂಕಿ ಆಕಸ್ಮಿಕ, ಸ್ಪೋಟ, ವಿದ್ಯುತ್ ಪೂರೈಕೆ ವ್ಯತ್ಯಯ ಮುಂತಾದ ‘ಆಕಸ್ಮಿಕ’ಗಳಿಗೆ ಇಸ್ರೇಲ್ ಜತೆ ಅಮೆರಿಕವೂ ಕಾರಣ ಎಂಬ ಮಾತು ಬಂದದ್ದುಂಟು. ಇದರರ್ಥ ಇರಾನ್​ನ ಅಣ್ವಸ್ತ್ರ ಯೋಜನೆ ತಡೆಯಲು ಇಸ್ರೇಲ್ ಮತ್ತು ಟ್ರಂಪ್​ರ ಅಮೆರಿಕ ಕೈಜೋಡಿಸಿದ್ದವು ಎನ್ನುವುದು ಸ್ಪಷ್ಟ. ಇಸ್ರೇಲ್-ಅಮೆರಿಕ ಜಂಟಿ ಕಾರ್ಯಯೋಜನೆ ಏಕಾಏಕಿ ನಿಲುಗಡೆಗೆ ಬಂದದ್ದು ಜೋ ಬೈಡೆನ್ ಅಧ್ಯಕ್ಷರಾದಾಗ. ಹಿಂದಿನ ಡೆಮಾಕ್ರೆಟಿಕ್ ಅಧ್ಯಕ್ಷ ಬರಾಕ್ ಒಬಾಮರ ನೀತಿಗಳನ್ನೇ ಮುಂದುವರಿಸುವಂತೆ ತೋರಿದ ಬೈಡೆನ್ ಇರಾನ್ ಬಗ್ಗೆ ಮೃದುನೀತಿ ತಳೆಯತೊಡಗಿದ್ದು, ಅಣ್ವಸ್ತ್ರ ನಿಯಂತ್ರಣ ಒಪ್ಪಂದಕ್ಕೆ ಮರುಜೀವ ನೀಡಲು ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಚೀನಾ ಜತೆ ಸೇರಿ ಪ್ರಯತ್ನ ಆರಂಭಿಸಿದ್ದು ಇಸ್ರೇಲ್​ಗೆ ನಿರಾಶೆಯ ಪರಮಾವಧಿ. ಆದರೆ ಆ ಯಹೂದಿ ರಾಷ್ಟ್ರ ಏಕಾಂಗಿಯಾಗಿ ಹೋರಾಟವನ್ನು ಆರಂಭಿಸಿದ್ದನ್ನು ಕಳೆದೆರಡು ತಿಂಗಳುಗಳು ಅನಾವರಣಗೊಳಿಸಿವೆ. ಪ್ರಧಾನಮಂತ್ರಿ ಬೆನ್ಯಾಮಿನ್ ನೇತನ್​ಯಾಹು ತನ್ನ ದೇಶದ ಅಸ್ತಿತ್ವದ ಪ್ರಶ್ನೆಯನ್ನು ಇರಾನೀ ಅಣ್ವಸ್ತ್ರ ಯೋಜನೆಗೆ ಜೋಡಿಸಿದ್ದಲ್ಲದೆ, ಅಗತ್ಯವಿರುವ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಇಸ್ರೇಲ್​ನ ಜನ್ಮಸಿದ್ಧ ಹಕ್ಕು ಎಂದು ಘೊಷಿಸಿದರು. ಬಹುಶಃ ಅದರ ಪರಿಣಾಮವೇ ನತಾಂಜ್ ಸ್ಪೋಟ. ಇಸ್ರೇಲ್​ನ ಈ ಕೃತ್ಯ ಇರಾನೀ ನ್ಯೂಕ್ಲಿಯರ್ ಯೋಜನೆಗೆ ಹೊಡೆತ ನೀಡಿದೆ.

    ಇಡೀ ಪ್ರಕರಣದಲ್ಲಿ ಇರಾನ್ ಅರಿಯಲು ದಾರುಣವಾಗಿ ವಿಫಲಗೊಂಡ ಹಲವು ವಿಷಯಗಳಿವೆ. ಶಿಯಾ ಇರಾನ್ ಅದೆಷ್ಟೇ ಹೆಣಗಾಡಿದರೂ ಸುನ್ನಿ ಬಹುಸಂಖ್ಯಾತ ಮುಸ್ಲಿಂ ಜಗತ್ತನ್ನು ಸೌದಿ ಅರೇಬಿಯಾದಿಂದ ವಿಮುಖಗೊಳಿಸಿ ತನ್ನೆಡೆ ತಿರುಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಆ ಮರೀಚಿಕೆಯ ಬೆನ್ನುಹತ್ತಿದ ಇರಾನೀ ಧರ್ಮಗುರುಗಳು ಅನಗತ್ಯವಾಗಿ ಇಸ್ರೇಲ್​ನ ವಿರೋಧ ಕಟ್ಟಿಕೊಂಡಿದ್ದಾರೆ. ಮೊಸ್ಸಾದ್​ನ ಅಗಾಧ ಬೇಹುಗಾರಿಕಾ ಸಾಮರ್ಥ್ಯವನ್ನು ಸರಿಗಟ್ಟುವ ಶಕ್ತಿಯೂ ತೆಹರಾನ್​ಗಿಲ್ಲ, ಇಸ್ರೇಲ್ ಬಳಿ ಈಗಾಗಲೇ ಅಣ್ವಸ್ತ್ರಗಳಿವೆ ಮತ್ತು ಅವುಗಳನ್ನು ಇರಾನ್​ನ ಮೂಲೆಮೂಲೆಗೂ ಕೊಂಡೊಯ್ಯಬಲ್ಲ ಯುದ್ಧವಿಮಾನಗಳು ಮತ್ತು ಕ್ಷಿಪಣಿಗಳು ಬತ್ತಳಿಕೆಯಲ್ಲಿವೆ ಎನ್ನುವ ವಾಸ್ತವವೂ ಇರಾನೀ ನಾಯಕತ್ವಕ್ಕೆ ಕಾಣುತ್ತಿಲ್ಲ. ಹೀಗಾಗಿ, ಅನಗತ್ಯವಾಗಿ ಇಸ್ರೇಲನ್ನು ಕೆಣಕಿ ಇರಾನೀ ನಾಯಕರು ಇರುವೆ ಬಿಟ್ಟುಕೊಂಡಿದ್ದಾರೆ ಎನ್ನದೇ ವಿಧಿಯಿಲ್ಲ.

    ಇನ್ನೂ ಅಚ್ಚರಿಯ ವಿಷಯವೆಂದರೆ ಸುನ್ನಿ ಜಗತ್ತು ಇಸ್ರೇಲ್ ಜತೆಗಿನ ಪಾರಂಪರಿಕ ದ್ವೇಷವನ್ನು ಬದಿಗೊತ್ತಿ ಸ್ನೇಹಕ್ಕೆ ಮುಂದಾಗಿದೆ. ಅವುಗಳಿಗೀಗ ಇಸ್ರೇಲ್​ಗಿಂತಲೂ ಇರಾನ್ ಮತ್ತು ಅದರ ಜತೆಗೂಡಿರುವ ಟರ್ಕಿ ದೊಡ್ಡ ಶತ್ರುಗಳಾಗಿ ಕಾಣುತ್ತಿವೆ. ಹೀಗಾಗಿಯೇ ಅಧ್ಯಕ್ಷ ಟ್ರಂಪ್​ರ ಮಧ್ಯಸ್ಥಿಕೆಯಲ್ಲಿ ಶ್ರೀಮಂತ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹರೀನ್ ಇಸ್ರೇಲ್ ಜತೆ ಸ್ನೇಹ ಕುದುರಿಸಿಕೊಂಡಿವೆ. ಇದಕ್ಕೆ ಹಿರಿಯಣ್ಣ ಸೌದಿ ಅರೇಬಿಯಾದ ಪೂರ್ಣ ಬೆಂಬಲ ಹಾಗೂ ಸಹಕಾರವಿದೆ. ಇರಾನ್-ಇಸ್ರೇಲ್ ಹಣಾಹಣಿಯಲ್ಲಿ ಈ ದೇಶಗಳು ಇಸ್ರೇಲ್ ಪರ. ಮುಸ್ಲಿಂ-ಯೆಹೂದೀ ವೈಮನಸ್ಯಕ್ಕಿಂತ ಸುನ್ನಿ-ಶಿಯಾ ದ್ವೇಷ ಆಳವಾದದ್ದು ಎನ್ನುವುದನ್ನು ಇಂದಿನ ಪಶ್ಚಿಮ ಏಷ್ಯಾ ಜಗತ್ತಿಗೆ ಸಾರುತ್ತಿದೆ.

    ಈಗ, ಈ ಪ್ರಕರಣವನ್ನು ಭೂ-ರಾಜಕೀಯ ಮತ್ತು ಭೂ-ಸಾಮರಿಕ ಸ್ಥಿತಿಗತಿಗಳ ಜತೆ ಸಮೀಕರಿಸೋಣ. ಹಿಂದಿನ ಟ್ರಂಪ್ ಆಡಳಿತ ಪಶ್ಚಿಮ ಏಷ್ಯಾದಲ್ಲಿ ಅಮೆರಿಕಕ್ಕೆ ದೊರಕಿಸಿಕೊಟ್ಟಿದ್ದ ನಿರ್ಣಾಯಕ ಪಾತ್ರವನ್ನು ತೊರೆದು ಇಂದಿನ ಬೈಡೆನ್​ರ ಅಮೆರಿಕ ಈ ವಲಯದಿಂದ ಕಾಲುತೆಗೆಯುವ ಸೂಚನೆ ನೀಡುತ್ತಿದ್ದಂತೆ ಅಲ್ಲಿ ಉಂಟಾದ ಶಕ್ತಿಶೂನ್ಯತೆಯನ್ನು ತುಂಬಲು ರಷ್ಯಾ ಮತ್ತು ಚೀನಾ ಧಾವಿಸಿವೆ. ಇಂದು ರಷ್ಯಾ ಇಸ್ರೇಲ್ ಪರ ನಿಂತಿದೆ! ಶೀತಲ ಸಮರ ಕಾಲದಲ್ಲಿ ಊಹಿಸಲೂ ಆಗದಿದ್ದ ಸಂಗತಿ ಇದು. ರಷ್ಯಾಗೆ ಪ್ರತಿಸ್ಪರ್ಧಿಯಾಗಿ ಕಾಲಿಟ್ಟಿರುವ ಚೀನಾ, ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಶಾಂತಿ ಏರ್ಪಡಿಸುವ ಪ್ರಯತ್ನ ಹಮ್ಮಿಕೊಂಡು ನಿರ್ಣಾಯಕ ಪಾತ್ರಧಾರಿಯ ಸ್ಥಾನವನ್ನು ಗಳಿಸಿಕೊಳ್ಳಲು ಲೆಕ್ಕಹಾಕುತ್ತಿದೆ.

    ಇಂದು ಇತರ ದೇಶಗಳ ಜತೆ ತನ್ನ ಸಂಬಂಧಗಳನ್ನು ನಿರ್ಧರಿಸುವುದು ಅವು ಇರಾನ್ ಬಗ್ಗೆ ಅನುಸರಿಸುವ ನೀತಿಗಳು ಎಂದು ಇಸ್ರೇಲ್ ಮೌನವಾಗಿಯೇ ಸಾರಿಹೇಳಿದೆ. ಇರಾನನ್ನು ರಷ್ಯಾ ಮಿತ್ರನಂತೆ ನೋಡುತ್ತಿಲ್ಲವಾದ ಕಾರಣ ಮಾಸ್ಕೋ ಬಗ್ಗೆ ಮೃದು ಹಾಗೂ ಸ್ನೇಹಪರ ನಿಲುವನ್ನು ಪ್ರದರ್ಶಿಸತೊಡಗಿದೆ. ಇಂತಹ ನೀತಿಯನ್ನು ಚೀನಾ ಬಗ್ಗೆ ಇಸ್ರೇಲ್ ತೋರಿಸಿಲ್ಲ. ಕಳೆದ ವರ್ಷ ತೆಹರಾನ್ ಜತೆ ಬೀಜಿಂಗ್ ಮಾಡಿಕೊಂಡ 400 ಮಿಲಿಯನ್ ಡಾಲರ್ ಮೊತ್ತದ, 25 ವರ್ಷ ಅವಧಿಯ, ಆರ್ಥಿಕ ಮುಖವಾಡದ ರಹಸ್ಯ ರಕ್ಷಣಾ ಒಪ್ಪಂದವನ್ನು ಇಸ್ರೇಲ್ ಸಹಿಸುತ್ತಿಲ್ಲ. ಚೀನಾದ ಈ ನೀತಿ ತನಗೆ ಹಾನಿಕಾರಕ ಎಂದು ತೋರಿಸಲು ಇಸ್ರೇಲ್ ಆಯ್ದುಕೊಂಡ ವಿಧಾನ ಕುತೂಹಲಕರ. ಕಳೆದ ವರ್ಷದ ಮಧ್ಯಭಾಗದವರೆಗೂ ಚೀನಾ ಜತೆಗಿನ ಸಂಬಂಧಗಳನ್ನು ಆರೋಗ್ಯಕರ ಸ್ಥಿತಿಯಲ್ಲಿಡಲು ಹೊಂದಾಣಿಕೆಗಳಿಗೆ ತಯಾರಾಗಿದ್ದ ಇಸ್ರೇಲ್ ಈಗ ಕಟುಧೋರಣೆ ಅನುಸರಿಸತೊಡಗಿದೆ.

    ಪ್ರಮುಖ ಅರಬ್ ದೇಶಗಳು ಇಸ್ರೇಲ್ ಜತೆ ಐತಿಹಾಸಿಕ ವೈರತ್ವ ಬದಿಗಿಟ್ಟು ಸ್ನೇಹವರ್ಧನೆ ಮಾಡಿಕೊಳ್ಳುತ್ತಿರುವಾಗ, ಬೈಡನ್ ಮತ್ತು ಜಿನ್​ಪಿಂಗ್ ಇರಾನ್ ಮತ್ತು ಪ್ಯಾಲೆಸ್ತೇನ್ ಪರವಾದ ನೀತಿಗಳನ್ನು ಅನುಸರಿಸತೊಡಗಿರುವುದು ಅರ್ತಾಕವಷ್ಟೇ ಅಲ್ಲ, ಸ್ವಹಿತಘಾತಕ ಸಹ. ಈ ನೀತಿಗಳಿಂದ ಅವು ಇಸ್ರೇಲ್​ನಿಂದ ದೂರ ಸರಿದಿರುವುದರ ಜತೆಗೆ ಶಿಯಾ ಇರಾನನ್ನು ದ್ವೇಷಿಸುವ ಸುನ್ನಿ ರಾಷ್ಟ್ರಗಳಾದ, ಸೌದಿ ಅರೇಬಿಯಾ ಮತ್ತು ಯುಎಇಗಳ ಅವಕೃಪೆಗೂ ಪಾತ್ರವಾಗಿವೆ. ಇಲ್ಲಿ ಲಾಭವಾಗುತ್ತಿರುವುದು ರಷ್ಯಾಗೆ. ಈ ಹೊಸ ಸ್ನೇಹವನ್ನು ಇಸ್ರೇಲ್ ಉಪಯೋಗಿಸಿಕೊಳ್ಳುತ್ತಿರುವುದು ಇರಾನನ್ನು ಒಳಗೂ ಹೊರಗೂ ಕಾಡುವುದರ ಮೂಲಕ. ನತಾಂಜ್ ಸಂಯಂತ್ರಕ್ಕೆ ಹಾನಿಯೆಸಗಿದ ಮರುದಿನವೇ ಸಿರಿಯಾದಲ್ಲಿ ಇರಾನೀ-ಬೆಂಬಲಿತ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಮೇಲೆ ಅತ್ಯುಗ್ರ ದಾಳಿ ಎಸಗಿ ಅದರ ಬೆನ್ನುಮೂಳೆ ಮುರಿದಿದೆ.

    ಈಗ ನಾವು ಗಮನಿಸಬೇಕಾದ್ದು ಇರಾನ್​ನ ಹಸನ್ ರುಹಾನಿ, ಅಮೆರಿಕದ ಜೋ ಬೈಡೆನ್ ಮತ್ತು ಚೀನಾದ ಜಿನ್​ಪಿಂಗ್ ಯಾವಯಾವ ಪಾಠಗಳನ್ನು ಕಲಿತಿದ್ದಾರೆ ಎನ್ನುವುದನ್ನು. ಇಂದು ಇರುವೆ ಬಿಟ್ಟುಕೊಂಡ ಗತಿ ರುಹಾನಿಯವರಿಗಾದರೆ ನಾಳೆ ಅದೇ ಗತಿ ಬೈಡೆನ್ ಮತ್ತು ಜಿನ್​ಪಿಂಗ್​ರಿಗೂ ಆಗುತ್ತದೆಯೇ, ಆ ಮೂಲಕ ಚಾಣಾಕ್ಷ ಪುತಿನ್ ವಿಜಯದ ನಗೆ ಬೀರಬಹುದೇ ಎನ್ನುವುದು ಸದ್ಯದ ಕುತೂಹಲ.

    ‘ಈ ಸಲ ಕಪ್ ನಮ್ದೆ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts