More

    “ಮಹಿಳೆಯೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಕಾಲ ಬಂದಿದೆ”

    ನವದೆಹಲಿ : ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಗಳ ಹುದ್ದೆಗೆ ಮಹಿಳೆಯೊಬ್ಬರು ನೇಮಕವಾಗುವ ಕಾಲ ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಹೇಳಿದ್ದಾರೆ. ಅರ್ಹ ಮಹಿಳಾ ವಕೀಲರನ್ನು ಹೈಕೋರ್ಟ್​ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಪರಿಗಣಿಸಲು ಕೋರಿರುವ ಅರ್ಜಿಯ ವಿಚಾರಣೆ ವೇಳೆ ಈ ಮಾತು ಹೇಳಿದ್ದಾರೆ.

    1950ರಲ್ಲಿ ದೇಶದ ಸುಪ್ರೀಂ ಕೋರ್ಟ್​ ಅಸ್ತಿತ್ವಕ್ಕೆ ಬಂದಾಗಿನಿಂದ 48 ಸಿಜೆಐಗಳ ನೇಮಕಾತಿಯಾಗಿದ್ದು, ಈವರೆಗೂ ಒಬ್ಬ ಮಹಿಳಾ ನ್ಯಾಯಮೂರ್ತಿಯೂ ಈ ಸ್ಥಾನ ಅಲಂಕರಿಸಿಲ್ಲ. ಏಪ್ರಿಲ್ 24 ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ನಿವೃತ್ತರಾಗುತ್ತಿದ್ದು, ನ್ಯಾಯಮೂರ್ತಿ ಎನ್.ವಿ.ರಮಣ ಅವರು ಮುಂದಿನ ಸಿಜೆಐ ಆಗಿ ನೇಮಕಗೊಂಡಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿ ಕಿಡ್ನ್ಯಾಪ್​: ಆರೋಪಿ ಕೊಟ್ಟ ಕಾರಣ ಕೇಳಿ ದಂಗಾದ ಪೊಲೀಸರು!

    ‘ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್​ಗಳಲ್ಲಿ ವಕಾಲತ್ತು ನಡೆಸುತ್ತಿರುವ ಅರ್ಹ ಪ್ರತಿಭಾನ್ವಿತ ಮಹಿಳಾ ವಕೀಲರನ್ನು ಹೈಕೋರ್ಟ್​ಗಳ ನ್ಯಾಯಾಧೀಶರಾಗಿ ನೇಮಕ ಮಾಡಲು ನಿರ್ದೇಶನ’ ಕೋರಿ ಸುಪ್ರೀಂ ಕೋರ್ಟ್ ವುಮೆನ್ ಲಾಯರ್ಸ್​​ ಅಸೋಸಿಯೇಷನ್ ರಿಟ್ ಅರ್ಜಿ ಸಲ್ಲಿಸಿದೆ. ಹಾಲಿ ದೇಶದ ವಿವಿಧ ಹೈಕೋರ್ಟ್​ಗಳಲ್ಲಿ ನೇಮಕವಾಗಿರುವ ಮಹಿಳಾ ನ್ಯಾಯಮೂರ್ತಿಗಳ ಪಟ್ಟಿಯನ್ನು ಒದಗಿಸಿರುವ ಈ ಅರ್ಜಿಯಲ್ಲಿ ಉಚ್ಛ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 11.04 ರಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂದು ಹೇಳಲಾಗಿದೆ.

    1950 ರಿಂದ 2020 ರವರೆಗೆ ಸುಪ್ರೀಂ ಕೋರ್ಟ್​ನಲ್ಲಿ ಒಟ್ಟು 247 ನ್ಯಾಯಮೂರ್ತಿಗಳಲ್ಲಿ ಕೇವಲ 8 ಜನ ಮಹಿಳಾ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. ಹಾಲಿ ಸುಪ್ರೀಂ ಕೋರ್ಟ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಮಹಿಳಾ ನ್ಯಾಯಮೂರ್ತಿ ಎಂದರೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್​ಅನ್ನು ಪ್ರತಿವಾದಿಯಾಗಿ ಸೇರಿಸಲು ಅನುಮತಿ ಕೋರಿ ಅರ್ಜಿದಾರರ ವಕೀಲರಾದ ಸ್ನೇಹ ಕಲಿತ ನಿನ್ನೆ ಉಪಅರ್ಜಿ ಸಲ್ಲಿಸಿದರು.

    ಇದನ್ನೂ ಓದಿ: ಮರ್ಕಜ್​ ಮಸೀದಿಯಲ್ಲಿ 50 ಜನಕ್ಕೆ ನಮಾಜ್ ಮಾಡಲು ಅವಕಾಶ : ಹೈಕೋರ್ಟ್

    ವಿಚಾರಣೆಯ ವೇಳೆ ಮುಖ್ಯನ್ಯಾಯಮೂರ್ತಿ ಬೊಬ್ಡೆ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು, “ಮಹಿಳೆಯರ ಹಿತಾಸಕ್ತಿ ನಮ್ಮ ಗಮನದಲ್ಲಿದೆ. ಇದಕ್ಕಾಗಿ ಮನೋಭಾವ ಬದಲಾಗುವ ಅಗತ್ಯ ಇಲ್ಲ. ಸುಪ್ರೀಂ ಕೋರ್ಟ್​ನ ಪ್ರತಿ ಕೊಲೆಜಿಯಮ್​ ಮಹಿಳಾ ಅಭ್ಯರ್ಥಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಪರಿಗಣಿಸುತ್ತದೆ. ಮಹಿಳೆಯರು ನೇಮಕಗೊಳ್ಳುತ್ತಾರೆ ಎಂದು ಆಶಿಸೋಣ” ಎಂದಿತು. ಜೊತೆಗೆ, “ಉಚ್ಛ ನ್ಯಾಯಾಂಗದಲ್ಲಿ ಮಾತ್ರ ಏಕೆ ? ಮಹಿಳೆಯೊಬ್ಬರು ಸಿಜೆಐ ಆಗುವ ಕಾಲ ಬಂದಿದೆ” ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು.

    ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲು ಸುಪ್ರೀಂ ಕೋರ್ಟ್​ನ ಕೊಲೆಜಿಯಮ್ ಸಿದ್ಧವಿದೆ ಎಂದ ನ್ಯಾಯಮೂರ್ತಿಗಳು, “ಮಹಿಳಾ ವಕೀಲರನ್ನು ನ್ಯಾಯಾಧೀಶರಾಗಿ ನೇಮಕ ಮಾಡುವ ಬಗ್ಗೆ ವಿಚಾರಿಸಿದಾಗ, ಅವರು ಬಹುತೇಕ ತಮ್ಮ ಮನೆಯ ಅಥವಾ ಮಕ್ಕಳ ಜವಾಬ್ದಾರಿಯ ವಿಷಯ ಹೇಳಿ ನಿರಾಕರಿಸುತ್ತಾರೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನನಗೆ ಹೇಳಿದ್ದಾರೆ” ಎಂದೂ ಸಿಜೆಐ ಹೇಳಿದರು. (ಏಜೆನ್ಸೀಸ್)

    ಯುಗಾದಿ ಶಾಕ್ : ಅತ್ತೆ-ಮಾವನಿಗೆ ಚೂರಿ ಇರಿದ ಅಳಿಯ ಈಗ ಪೊಲೀಸರ ಅತಿಥಿ !

    ನೀಟ್-ಪಿಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ಮುಂದೂಡಿಕೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts