More

    ವಿಜಯನಗರ 31ನೇ ಜಿಲ್ಲೆ; ಸರ್ಕಾರದಿಂದ ಅಂತಿಮ ಅಧಿಸೂಚನೆ ಪ್ರಕಟ

    ಬಳ್ಳಾರಿ: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಸೋಮವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಈ ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದ ಮೂಲಕ ಅಂತಿಮ ಅಧಿಸೂಚನೆ ಹೊರಡಿಸಿದೆ. 2020ರ ಡಿ.14ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಹಾಗೂ ಸಲಹೆ ಆಹ್ವಾನಿಸಲಾಗಿತ್ತು. ಇವುಗಳನ್ನು ಪರಿಗಣಿಸಿ ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ವಿಜಯನಗರ ಜಿಲ್ಲೆ ರಚಿಸಲಾಗಿದೆ. ಆರು ತಾಲೂಕುಗಳಾದ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ಒಳಗೊಂಡು ಹೊಸಪೇಟೆ ಕೇಂದ್ರಸ್ಥಾನವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ವಿಜಯನಗರ ಜಿಲ್ಲೆಯು ಪೂರ್ವಕ್ಕೆ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆ, ಪಶ್ಚಿಮಕ್ಕೆ ಗದಗ ಮತ್ತು ಹಾವೇರಿ ಜಿಲ್ಲೆ, ಉತ್ತರಕ್ಕೆ ಕೊಪ್ಪಳ ಜಿಲ್ಲೆ, ದಕ್ಷಿಣಕ್ಕೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕುಗಳ ಸರಹದ್ದು ಹೊಂದಿರಲಿದೆ.

    ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ಈ ಐದು ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿ ಮುಂದುವರಿಯಲಿವೆ. ಬಳ್ಳಾರಿ ಜಿಲ್ಲೆಯು ಪೂರ್ವ ಮತ್ತು ದಕ್ಷಿಣಕ್ಕೆ ಆಂಧ್ರಪ್ರದೇಶ, ಪಶ್ಚಿಮಕ್ಕೆ ವಿಜಯನಗರ ಜಿಲ್ಲೆ, ಉತ್ತರಕ್ಕೆ ರಾಯಚೂರು ಜಿಲ್ಲೆಯ ಸರಹದ್ದು ಹೊಂದಿರಲಿದೆ. ಈ ಅಧಿಸೂಚನೆಯು ರಾಜ್ಯಪತ್ರದಲ್ಲಿ ಪ್ರಕಟವಾದ ದಿನದಿಂದಲೇ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆಯ ಭೂ ಮಾಪನ ವಿಭಾಗದ ಅಧೀನ ಕಾರ್ಯದರ್ಶಿ ವಿ.ಟಿ.ರಾಜ್ಯಶ್ರೀ ರಾಜ್ಯಪಾಲರ ಹೆಸರಿನಲ್ಲಿ ರಾಜ್ಯಪತ್ರ ಪ್ರಕಟಿಸಿದ್ದಾರೆ.

    ವಿಜಯ ಪಥ

    • ಸೆ.18, 2019- ಆನಂದ ಸಿಂಗ್ ನೇತೃತ್ವದ ನಿಯೋಗದಿಂದ ಸಿಎಂಗೆ ಮನವಿ
    • ನ.17, 2020-ವಿಜಯನಗರ ಜಿಲ್ಲೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ
    • ಡಿ.14,2020- ಹೊಸ ಜಿಲ್ಲೆಗೆ ಗಡಿ ನಿಗದಿ, ಆಕ್ಷೇಪಣೆ, ಸಲಹೆಗೆ ಆಹ್ವಾನ
    • ಫೆ.8, 2021-ಅಂತಿಮ ಅಧಿಸೂಚನೆ ಪ್ರಕಟ

    ನಮ್ಮ ಬಹಳ ದಿನಗಳ ಬೇಡಿಕೆ ಈಡೇರಿದೆ. ನಮ್ಮ ಸಂಕಲ್ಪ ಹಾಗೂ ವಿರೂಪಾಕ್ಷೇಶ್ವರನ ಆಶೀರ್ವಾದದಿಂದ ವಿಜಯನಗರ ಜಿಲ್ಲೆ ರಚನೆಯಾಗಿದೆ. ವಿಜಯನಗರ ವೈಭವವನ್ನು ಸಂಭ್ರಮದಿಂದ ಆಚರಿಸಲಾಗುವುದು. ದೊಡ್ಡಮಟ್ಟದಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿ ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಕೇಂದ್ರದ ನಾಯಕರನ್ನು ಆಹ್ವಾನಿಸಲಾಗುವುದು.

    | ಆನಂದ ಸಿಂಗ್ ಮೂಲಸೌಕರ್ಯ, ಹಜ್ ಮತ್ತು ವಕ್ಪ್ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts