More

    ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್

    • ಮೈಸೂರು : ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಪಕ್ಷ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
    • ಕೆ.ಆರ್.ನಗರ ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ಇತಿಹಾಸ ಇರುವ ಪಕ್ಷ. ಬಿಜೆಪಿಗೆ ಇತಿಹಾಸ ಇಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಹಾಕುತ್ತೇನೆ. 2 ಲಕ್ಷ ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಈಗ ಜನರನ್ನು ಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು.
      ದೇಶಕ್ಕೆ ದೂರವಾಣಿ ಸಂಪರ್ಕ, ಆಹಾರ ಭದ್ರತೆ ಕಾಯ್ದೆಗಳಂತಹ ಬಡವರ ಪರವಾದ ಹತ್ತು ಹಲವು ಯೋಜನೆಗಳನ್ನು ಕಾಂಗ್ರೆಸ್ ತಂದಿದೆ. ರಾಹುಲ್ ಗಾಂಧಿ ಅವರು ಜೋಡೋ ಯಾತ್ರೆಯ ಮೂಲಕ ದೇಶಾದ್ಯಂತ ಬಡವರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದು ತಿಳಿಸಿದರು.
      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ 5 ಗ್ಯಾರಂಟಿ ಭರವಸೆಗಳನ್ನು ಪೂರೈಸಿದೆ. ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ಇಲ್ಲದ ಸಾಲ, ಹಾಲಿಗೆ 5 ರೂ. ಪ್ರೋತ್ಸಾಹ ಧನ, 1,500 ಕೋಟಿ ರೂ. ರೈತರಿಗೆ ವಿಮೆ. 35 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ ಎಂದು ತಿಳಿಸಿದರು.

    • ಎಚ್‌ಡಿಕೆ ವಿರುದ್ಧ ವಾಗ್ದಾಳಿ : ಕಾಂಗ್ರೆಸ್ಸಿಗರು ಮಾತನಾಡದಷ್ಟು ಬಿಜೆಪಿ, ಆರ್‌ಎಸ್‌ಎಸ್ ಮತ್ತು ನರೇಂದ್ರ ಮೋದಿ ಅವರ ಬಗ್ಗೆ ಜೆಡಿಎಸ್‌ನವರು ಮಾತನಾಡಿ ವಿರೋಧಿಸಿದ್ದರು. ಆದರೆ ಈಗ ಅವರೊಂದಿಗೆ ಕೈಜೋಡಿಸಿ ಚುನಾವಣೆಗೆ ನಿಂತಿದ್ದಾರೆ. ಕೇವಲ 37 ಸೀಟು ಗೆದ್ದಿದ್ದ ನಿಮಗೆ ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡಲಾಗದೇ ನೀವು ಅಧಿಕಾರ ಕಳೆದುಕೊಂಡರೆ ಅದಕ್ಕೆ ಯಾರು ಹೊಣೆ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎನ್.ಚಲುವರಾಯಸ್ವಾಮಿ ಗುಡುಗಿದರು.

    • ಪದೇ ಪದೆ ಕ್ಷೇತ್ರಗಳನ್ನು ಬದಲಾಯಿಸಿ ಉಪ ಚುನಾವಣೆಗಳಿಗೆ ಕಾರಣರಾಗುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಮಂಡ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡಬೇಕು. ಸರಳ ವ್ಯಕ್ತಿತ್ವದ ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.
      ಶಾಸಕ ಡಿ.ರವಿಶಂಕರ್ ಮಾತನಾಡಿ, ಪ್ರತಿ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರ ಇಡಿ ದೇಶದಲ್ಲೇ ಸದ್ದು ಮಾಡುತ್ತದೆ. ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೇರೆ ಪಕ್ಷದವರ ವದಂತಿಗಳಿಗೆ ಕಿವಿ ಕೊಡದೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮತ ಕೇಳಿ ಎಂದರು.

    • ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿದರು.

    • ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕ ಚಂದ್ರು, ಜಿಪಂ ಮಾಜಿ ಸದಸ್ಯರಾದ ಸಿದ್ದಪ್ಪ, ರಾಜಯ್ಯ, ಶಿವರಾಮು, ಜಿ.ಆರ್.ರಾಮೇಗೌಡ, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ನಟರಾಜು, ಮಿಕ್ಸರ್‌ಶಂಕರ್, ಶಿವುನಾಯಕ್, ಜಾವೀದ್‌ಪಾಷಾ, ಸೈಯದ್ ಸಿದ್ದೀಕ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮಂಜುನಾಥ್, ಮಾಜಿ ಸದಸ್ಯರಾದ ವೀಣಾ ದಿಲೀಪ್, ಕೆ.ಪಿ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ನಗರಾದ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ಜಯಂತ್, ಸಂದೇಶ್ ಇತರರು ಇದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts