More

    ಗ್ಯಾರಂಟಿ ಕೊಟ್ಟರೆ ಹೆಚ್ಚು ಸೀಟು ಗೆಲ್ಲುತ್ತೇವೆಂಬುದು ಭ್ರಮೆ

    ಕೊಳ್ಳೇಗಾಲ: ಭಾರತ ಒಕ್ಕೂಟದ ಕಾಂಗ್ರೆಸ್ ಪಕ್ಷ 1 ಪ್ರಣಾಳಿಕೆ ಬಿಡುಗಡೆ ಮಾಡಿ 25 ಗ್ಯಾರಂಟಿಯನ್ನು ಘೋಷಿಸಿದೆ. 5 ಗ್ಯಾರಂಟಿ ಕೊಟ್ಟು 136 ಸೀಟು ಗೆದ್ದಂತೆ 25 ಗ್ಯಾರಂಟಿ ಕೊಟ್ಟರೆ 270 ಸೀಟು ಗೆಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

    ತಾಲೂಕಿನ ಉಗನೀಯ ಗ್ರಾಮದ ಹೊರವಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯ ಆವರಣದಲ್ಲಿ ಶನಿವಾರ ಸತ್ತೇಗಾಲ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.

    ಸಿದ್ದರಾಮಯ್ಯ ಅವರೇ ಕೊಟ್ಟಿರುವ 5 ಗ್ಯಾರೆಂಟಿಗೆ ಎಸ್‌ಇಪಿ ಹಾಗೂ ಟಿಎಸ್‌ಪಿಯ 25 ಸಾವಿರ ಕೋಟಿಯನ್ನು ಬಳಕೆ ಮಾಡಿಕೊಂಡು ಜನರಿಗೆ ನೀಡಿದ್ದಾರೆ. ಕಾಂಗ್ರೆಸ್ ಆಟ ಇನ್ನು ಮುಂದೆ ನಡೆಯುವುದಿಲ್ಲ ಎಂದರು.

    ದೇಶದ 97 ಕೋಟಿ ಮತದಾರರು ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿ ಆಗಬೇಕೆಂದು ಇಚ್ಛಿಸಿದ್ದಾರೆ. ಈ ಗೆಲುವು ಅವರ 10 ವರ್ಷದ ಅಬಿವೃದ್ಧಿಯ ಮಾರ್ಗದ ವೇಗ ಹೆಚ್ಚಾಗಲಿದೆ. ಕಾಂಗ್ರೆಸ್ ಮದ್ಯದ ಬೆಲೆಯನ್ನು ಶೇ.20 ರಷ್ಟು ಏರಿಕೆ ಮಾಡಿದೆ. ಇದರಿಂದ ಬರುವ ಆದಾಯವನ್ನು ಗ್ಯಾರಂಟಿ ಎಂದೇಳಿ 2 ಸಾವಿರ ರೂ.ಗಳನ್ನು ಮಹಿಳೆಯರಿಗೆ ನೀಡುತ್ತಿದ್ದು ಗಂಡನ ಜೇಬಿನಿಂದ ಕಿತ್ತು ಹೆಂಡತಿಗೆ ಕೊಟ್ಟಂತಾಗಿದೆ. ಇದು ಸಿದ್ದರಾಮಯ್ಯ ಅವರ ಎಕನಾಮಿಕ್ಸ್ ಎಂದರು.

    ಕಿಸನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರ ಖಾತೆಗೆ 6 ಸಾವಿರ ರೂ. ನೇರವಾಗಿ ನೀಡುತ್ತಿದೆ. ರಸಗೊಬ್ಬರಕ್ಕೆ 3.500 ರೂ. ಸಬ್ಸಿಡಿ ನೀಡುತ್ತಿದೆ. ಇದು ಯಾರ ಕಣ್ಣಿಗೂ ಕಾಣುವುದಿಲ್ಲ. ಕೇಂದ್ರ ಸರ್ಕಾರ ಇಷ್ಟೆಲ್ಲ ಕೆಲಸವನ್ನು ಮತಕ್ಕಾಗಿ ಮಾಡಿಲ್ಲ ಎಂದು ಹೇಳಿದರು.

    ಮತದಾರರು ಆಲೋಚಿಸಿ ಮತ ನೀಡಿ, ಒಳ್ಳೆಯವರನ್ನ ಗೆಲ್ಲಿಸಿದರೆ ಒಳ್ಳೆಯ ಆಡಳಿತ, ಕೆಟ್ಟವರನ್ನ ಗೆಲ್ಲಿಸಿದರೆ ಕೆಟ್ಟ ಆಡಳಿತ ಬರುತ್ತದೆ. ನೀತಿವಂತರನ್ನು ಗೆಲ್ಲಿಸಿದರೆ ನೈತಿಕ ಆಡಳಿತ ಬರುತ್ತದೆ. ಅನೈತಿಕವಾಗಿರುವವರನ್ನು ಗೆಲ್ಲಿಸಿದರೆ ಅನೈತಿಕ ಆಡಳಿತ ವ್ಯವಸ್ಥೆ ಬರುತ್ತದೆ. ಎಸ್. ಬಾಲರಾಜ್ ಒಳ್ಳೆಯ ವ್ಯಕ್ತಿ ಅವರಿಗೆ ಮತ ನೀಡಿ ಎಂದರು.

    ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಚುನಾವಣೆ ಗೆಲುವಿನ ಹಾದಿಯನ್ನು ಸುಲಭ ಮಾಡಲಿದೆ. ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಿದೆ. ದೇಶದ ಅಭಿವೃದ್ಧಿಗಾಗಿ ಸರಳ, ಸಜ್ಜನಿಕೆ ವ್ಯಕ್ತಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರಿಗೆ ಮತ ನೀಡಿ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

    ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಮಾತನಾಡಿ, ಅಧಿಕಾರ ಇರುವ ಮನೆಗೆ ಅಧಿಕಾರ ಕೊಡಬೇಡಿ. ನನ್ನಂತ ಸಾಮಾನ್ಯ ವ್ಯಕ್ತಿಗೂ ನೀಡಿ. ದೊಡ್ಡ ಅಧಿಕಾರದಲ್ಲಿದ್ದವರೆ ಮತ್ತೊಂದು ಅಧಿಕಾರ ಬೇಕೆಂದು ಕೇಳುತ್ತಿದ್ದಾರೆ. ಜನ ಸೇವೆ ಮಾಡಲು ನನಗೆ ಅವಕಾಶ ಕೊಡಿ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು. ಈ ಕ್ಷೇತ್ರ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು. ಬಿಜೆಪಿ ಮುಖಂಡರಾದ ಡಾ.ಎಸ್.ದತ್ತೇಶ್‌ಕುಮಾರ್, ಪ್ರೀತಮ್ ನಾಗಪ್ಪ, ಒಬಿಸಿ ಜಿಲ್ಲಾಧ್ಯಕ್ಷ ಬಿ. ವೆಂಕಟೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts