More

    ಮುಂಬೈ ವಿರುದ್ಧದ ಸೋಲಿನ ಬೆನ್ನಲ್ಲೇ ಡೆಲ್ಲಿ ತಂಡಕ್ಕೆ ಎದುರಾಯಿತು 2 ಆಘಾತ!

    ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೆರಡು ಆಘಾತಗಳು ಎದುರಾಗಿವೆ.

    ಹಿರಿಯ ವೇಗಿ ಇಶಾಂತ್ ಶರ್ಮ ಪಕ್ಕೆಲುಬು ಗಾಯದಿಂದಾಗಿ ಐಪಿಎಲ್ 13ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಮವಾರ ತಿಳಿಸಿದೆ. 32 ವರ್ಷದ ಅವರು ಟೂರ್ನಿಯಲ್ಲಿ ಇದುವರೆಗೆ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಸನ್‌ರೈಸರ್ಸ್‌ ವಿರುದ್ಧದ ಆ ಪಂದ್ಯದಲ್ಲಿ 4 ಓವರ್ ಎಸೆದು ವಿಕೆಟ್‌ರಹಿತವಾಗಿ 26 ರನ್ ಬಿಟ್ಟುಕೊಟ್ಟಿದ್ದರು.

    ಅ.7ರಂದು ತಂಡದ ಅಭ್ಯಾಸದ ವೇಳೆ ಇಶಾಂತ್‌ಗೆ ಎಡ ಪಕ್ಕೆಲುಬು ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಇಶಾಂತ್ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಲಭ್ಯರಾಗುವ ಬಗ್ಗೆ ಸ್ಪಷ್ಟವಾಗಿಲ್ಲ.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಇನ್ನು ಕನಿಷ್ಠ ಒಂದು ವಾರ ಕಾಲ ಐಪಿಎಲ್‌ನಿಂದ ದೂರ ಉಳಿಯಲಿದ್ದಾರೆ. ರಿಷಭ್‌ಗೆ ವೈದ್ಯರು ಒಂದು ವಾರ ವಿಶ್ರಾಂತಿ ಸೂಚಿಸಿದ್ದಾರೆ ಎಂದು ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಭಾನುವಾರ ಮುಂಬೈ ವಿರುದ್ಧದ ಪಂದ್ಯದ ಬಳಿಕ ಈ ವಿಷಯವನ್ನು ತಿಳಿಸಿದ್ದಾರೆ.

    ರಾಜಸ್ಥಾನ ರಾಯಲ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದ ವೇಳೆ ರಿಷಭ್ ಗಾಯದ ಸಮಸ್ಯೆಗೆ ಸಿಲುಕಿದ್ದರು. ಡೆಲ್ಲಿ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನು ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ ತುಂಬಿದ್ದಾರೆ. ಮುಂದಿನ 1 ವಾರ ಅವಧಿಯಲ್ಲಿ ಡೆಲ್ಲಿ 2 ಪಂದ್ಯ ಆಡಲಿದ್ದು, ರಿಷಭ್ ಅ. 20ರಂದು ಪಂಜಾಬ್ ವಿರುದ್ಧದ ಪಂದ್ಯಕ್ಕೆ ಮರಳುವ ನಿರೀಕ್ಷೆ ಇದೆ.

    ಈ ಮುನ್ನ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಐಪಿಎಲ್‌ನಿಂದ ಹೊರಬಿದ್ದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಡೆತ ನೀಡಿದ್ದರೆ, ಮತ್ತೋರ್ವ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಗಾಯದಿಂದಾಗಿ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಅಮಿತ್ ಮಿಶ್ರಾ ಬದಲಿಗೆ ಡೆಲ್ಲಿ ತಂಡ ಬೇರೆ ಆಟಗಾರರನ್ನು ಸೇರಿಸಿಕೊಂಡಿರಲಿಲ್ಲ. ಆದರೆ ಇಶಾಂತ್ ಶರ್ಮ ಬದಲಿಗೆ ಬೇರೆ ವೇಗಿಯನ್ನು ತಂಡಕ್ಕೆ ಸೇರ್ಪಡೆಗೊಳಿಸುವ ನಿರೀಕ್ಷೆ ಇದೆ. ಸದ್ಯ ವೇಗಿ ಪ್ರದೀಪ್ ಸಂಗ್ವಾನ್ ನೆಟ್ ಬೌಲರ್ ಆಗಿ ತಂಡದ ಜತೆಗಿದ್ದು, ಅವರನ್ನೇ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

    ಅಪ್ಪ-ಅಮ್ಮನಾಗುತ್ತಿರುವ ವಿಷಯ ಹಂಚಿಕೊಂಡ ಮಾಜಿ ಕ್ರಿಕೆಟಿಗ, ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts