More

    ನಿಜವಾದ ಸಂತೋಷ ಎಂದರೆ ಇದೇನಾ?; ಸೆಲೆಬ್ರಿಟಿ ಕಾರ್ನರ್​

    ನಿಜವಾದ ಸಂತೋಷ ಎಂದರೆ ಇದೇನಾ?; ಸೆಲೆಬ್ರಿಟಿ ಕಾರ್ನರ್​ಕರೊನಾ ಮತ್ತು ಲಾಕ್​ಡೌನ್ ನಂತರ ಜನಜೀವನ ಸಾಕಷ್ಟು ಬದಲಾಗಿದೆ. ಹಲವರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಕೆಲಸದಲ್ಲಿರುವವರು ಸಹ ಅಷ್ಟೇನೂ ನೆಮ್ಮದಿಯಿಂದಿಲ್ಲ. Problemಗೆ solution ಸಿಗದಿದ್ದಾಗ ಏನು ಮಾಡಬೇಕು? ಪ್ರಾಬ್ಲಮ್ಮೇ ಸಲ್ಯೂಷನ್ ಆಗಬೇಕು.

    ಹೌದು, ನಾವು ಬದಲಾಗುವುದಕ್ಕೆ ಮತ್ತು ನಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಇದು ಸಕಾಲ. ನಾವು ಬರೀ ಒಂದು ವಿಷಯದ ನೆಗೆಟಿವ್ ಅಂಶಗಳನ್ನಷ್ಟೇ ಯೋಚಿಸಿ ಮನಸ್ಸು ಕೆಡಿಸಿಕೊಳ್ಳುತ್ತಿದ್ದೇವೆಯೇ ಹೊರತು, ಅದರಲ್ಲಿನ ಪಾಸಿಟಿವ್ ಅಂಶಗಳ ಬಗ್ಗೆ ಯೋಚಿಸುತ್ತಿಲ್ಲ. ಉದಾಹರಣೆಗೆ, ನಾನು ಎಲ್ಲೂ ಹೊರಗಡೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಮನೆಯಲ್ಲಿರುವ ಪ್ರಯೋಜನಗಳನ್ನು ತಿಳಿದುಕೊಳ್ಳುತ್ತಾ ಹೋಗಬೇಕು. ಮನೆಯಲ್ಲಿದ್ದುಕೊಂಡೇ ಬೇರೆ ಏನಾದರೂ ಮಾಡುವುದಕ್ಕೆ ಸಾಧ್ಯವಾ ಎಂದು ಯೋಚಿಸಬೇಕು. ಬದುಕಬೇಕು ಎಂದರೆ ಬದಲಾಗುತ್ತಾ ಹೋಗಬೇಕು. ಅನಿವಾರ್ಯತೆ ಇದ್ದಾಗ ಮನುಷ್ಯ ಒಗ್ಗಿಕೊಳ್ಳಬೇಕಾಗುತ್ತದೆ. ಅದಕ್ಕೇ ಹೇಳಿದ್ದು, Problemಗೆ ಬೇರೆ solution ಹುಡುಕೋಕೆ ಆಗದಿದ್ದಾಗ, ಸಮಸ್ಯೆಯೇ ಪರಿಹಾರವಾಗುತ್ತದೆ. ಸಂಬಳ ಕಡಿಮೆಯಾಯಿತು ಎಂದರೆ, ಅದರಲ್ಲೇ ಬದುಕುವುದಕ್ಕೆ ಪ್ರಯತ್ನ ಮಾಡಬೇಕು. ಇದು ಹೇಳುವಷ್ಟು ಸುಲಭವಲ್ಲದಿರಬಹುದು. ಆದರೆ, ಪರಿಸ್ಥಿತಿ ಸರಿಹೋಗುವವರೆಗೂ ಬೇರೆ ಯಾವ ದಾರಿ ಇದೆ ಹೇಳಿ?

    ಆಧುನಿಕ ಪ್ರಪಂಚವು ನಮ್ಮ ಮುಂದೆ ಹಲವು ಆಯ್ಕೆಗಳನ್ನು ಇಟ್ಟಿದೆ. ಅದೇ ಹಳೆಯ ಯೋಚನೆಗಳಿಂದ ಹೊರಬಂದು, ನಾವು ಹೊಸದಾಗಿ ಇನ್ನೇನೋ ಯೋಚಿಸಬೇಕಿದೆ. ಸರ್ಟಿಫಿಕೇಟ್ ಇದ್ದರಷ್ಟೇ ಕೆಲಸ ಸಿಗೋದು ಎಂಬ ಮನಸ್ಥಿತಿ ಎಲ್ಲರಲ್ಲೂ ಇದೆ. ಮುಂದಿನ ದಿನಗಳಲ್ಲಿ ಅದು ಬದಲಾಗುತ್ತದೆ. ವೈವಿಧ್ಯಮಯ ಕೆಲಸಗಳು ಶುರುವಾಗುತ್ತವೆ. ಈಗ ಮುಂಚಿನ ತರಹ ಇಂಜಿನಿಯರಿಂಗ್, ಮೆಡಿಕಲ್ ಅಂತ ನಾಲ್ಕೈದು ಪ್ರಮುಖ ವೃತ್ತಿಗಳೇನಿದ್ದವು, ಅಷ್ಟಕ್ಕೇ ಸೀಮಿತವಲ್ಲ. ಇನ್ನು ಮುಂದೆ ಬೇರೆಬೇರೆ ತರಹ ಕೆಲಸಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ, ಹಿಂದೆ ಒಂದು ಚಾನಲ್ ಮಾಡುವುದಕ್ಕೆ ಎಷ್ಟೆಲ್ಲ ಕಷ್ಟ ಇತ್ತು. ಈಗ ಯೂಟ್ಯೂಬ್ ಚಾನಲ್​ಗಳ ಮೂಲಕ ಯಾರು ಬೇಕಾದರೂ ಚಾನಲ್ ಮಾಡಬಹುದು ಅಂತಾಗಿದೆ. ಮುಂಚೆ ಒಂದು ಚಾನಲ್​ಗೆ ಒಂದಿಷ್ಟು ಜನರ ಅವಶ್ಯಕತೆ ಇತ್ತು. ಈಗ ಎಲ್ಲವನ್ನೂ ಒಬ್ಬರೇ ಮಾಡುತ್ತಾರೆ. ಅವರೇ ಆಂಕರಿಂಗ್ ಮಾಡುತ್ತಾರೆ, ಸ್ಕ್ರಿಪ್ಟ್ ಗಳನ್ನೂ ಬರೆಯುತ್ತಾರೆ. ಹೀಗೆ ಹಲವು ಬದಲಾವಣೆಗಳಾಗುತ್ತಿರುವಾಗ, ಹೊಸಹೊಸ ಆವಿಷ್ಕಾರಗಳಾಗುತ್ತಿರುವಾಗ, ಅದೇ ಹಳೆಯ ಪ್ರಪಂಚದಲ್ಲಿ ಸಿಕ್ಕಿಕೊಳ್ಳಬಾರದು. ಇದುವರೆಗೂ Survival of the Fittest ಅಂತ ಮಾತ್ರ ಇತ್ತು. ಇನ್ನು ಮುಂದೆ ಅದು Survival of the Quickest ಅಂತ ಬದಲಾಗುತ್ತದೆ ಎಂದು ಯಾರೋ ಹೇಳುತ್ತಿದ್ದರು. ಎಷ್ಟು ನಿಜ ಅಲ್ವಾ?

    ಯಾರು ಚುರುಕಾಗಿರುತ್ತಾರೋ ಅಥವಾ ಯಾರು ಮೊದಲು ಯೋಚನೆ ಮಾಡಿ ಹೆಜ್ಜೆ ಇಡುತ್ತಾರೋ ಅವರಿಗೆ ಮೊದಲ ಆದ್ಯತೆ ಇರುತ್ತದೆ. ಇದೆಲ್ಲದರಿಂದ ಮತ್ತೆ ಅದೇ ಹಳೆಯ ಸರ್ಟಿಫಿಕೇಶನ್ ಕೋರ್ಸ್​ಗಳಿಗಾಗಿ ಸಾಲಸೋಲ ಮಾಡಿ ಮಕ್ಕಳನ್ನು ಓದಿಸುತ್ತೀನಿ ಅನ್ನೋದು ಕಡಿಮೆಯಾಗಬಹುದು. ಏಕೆಂದರೆ, ಮಕ್ಕಳಿಗೆ ಬೇರೇನೋ ಆಸೆ ಇರುತ್ತದೆ. ಅವರಿಗೆ ಇದೇ ಓದು, ಇದನ್ನೇ ಮಾಡು ಎಂದು ಒತ್ತಡ ಹಾಕಿದರೆ ಮನೆಯಲ್ಲಿ ಹತಾಶೆ ಹೆಚ್ಚುತ್ತದೆ. ಹೀಗಿದ್ದರೇ ಯಶಸ್ವಿ ಅಂತ ಯೋಚನೆ ಮಾಡುವ ಬದಲು ಬೇರೆ ತರಹ ಯೋಚಿಸುವುದನ್ನು ಮೊದಲಿಗೆ ನಾವು ಕಲಿಯಬೇಕು. ನಾವೇನು ಯಶಸ್ಸು ಅಂತ ಅಂದುಕೊಂಡಿದ್ದೇವೋ, ಅದು ನಿಜವಾದ ಯಶಸ್ಸಲ್ಲ, ಶಾಂತಿಯುತವಾಗಿ ಬದುಕುವುದು-ನೀನು ಇಷ್ಟಪಡುವ ಕೆಲಸ ಮಾಡುವುದು ನಿಜವಾದ ಯಶಸ್ಸು ಅಂತ ಅರ್ಥ ಮಾಡಿಸಬೇಕು. ಏಕೆಂದರೆ, ಮುಂಚೆ ಕೆಲವೇ ಕೆಲವು ಕೆಲಸಗಳಿದ್ದವು. ಈಗ ಸಾವಿರ ಕೆಲಸಗಳಿವೆ. ಯಾವುದನ್ನಾದರೂ ಮಾಡಿ ನೆಮ್ಮದಿಯಿಂದ ಬದುಕಬಹುದು. ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡುವುದು ಶಿಕ್ಷಣಾನಾ? ಅರಮನೆಯಲ್ಲಿ ಕುಳಿತುಕೊಳ್ಳುವವನು ರಾಜಾನಾ? ಕಚೇರಿಯಲ್ಲಿ ಕೂತು ಕೆಲಸ ಮಾಡುವವನು ಅಧಿಕಾರಿನಾ? ಯಾವುದೂ ಅಲ್ಲ. ಅಧಿಕಾರಿ ಹೊರಬರಬೇಕು. ರಾಜ ಅರಮನೆಯಿಂದ ಹೊರಬಂದು ತನ್ನ ಪ್ರಜೆ ಹೇಗಿದ್ದಾನೆ ಎಂದು ಗಮನಿಸಬೇಕು. ಶಿಕ್ಷಣ ಸಹ ನಾಲ್ಕು ಗೋಡೆಗಳನ್ನು ಒಡೆದು ಬರಬೇಕು. ಪ್ರಪಂಚವೇ ಶಿಕ್ಷಣ ಆಗಬೇಕು.

    ಸೂಕ್ಷ್ಮವಾಗಿ ಒಮ್ಮೆ ಯೋಚಿಸಿ, ಹೊರಗೆ ಎಷ್ಟೆಲ್ಲ ಶಿಕ್ಷಣವಿದೆ ಅಂತ. ನಿಜಕ್ಕೂ ಸ್ಕಿಲ್ ಎಜುಕೇಶನ್ ಕಲಿಸಲಾಗದಷ್ಟು ಶಿಕ್ಷಣಗಳಿವೆ. ಕೃಷಿ, ಅಡುಗೆ, ಕಾರ್ಪೆಂಟರಿ, ಚಿತ್ರಕಲೆ, ಸಂಗೀತ … ಜಗತ್ತೇ ಕಲಿಸುವ ಶಿಕ್ಷಣ ವ್ಯವಸ್ಥೆ ಇರುವಾಗ ನಾವ್ಯಾಕೆ ಈ ವ್ಯಾಪಾರದ ಶಿಕ್ಷಣವನ್ನು ಬೆನ್ನುಹತ್ತುತ್ತಿದ್ದೇವೋ ಗೊತ್ತಿಲ್ಲ. ಹಾಗಂತ ನಾನು ಈ ವ್ಯವಸ್ಥೆಯನ್ನು ವಿರೋಧಿಸುತ್ತಿಲ್ಲ. ಬೇಸಿಕ್ ಶಿಕ್ಷಣ ಬೇಕೇಬೇಕು. ಅದನ್ನು ನಿಮ್ಮ ಮನೆಯಲ್ಲೂ ಕಲಿಸಬಹುದು. ಭಾಷೆ, ಗಣಿತ, ಜನರಲ್ ನಾಲೆಜ್ ಇವೆಲ್ಲವೂ ಎಲ್ಲರಿಗೂ ಬೇಕಾಗಿದ್ದೇ. ಇದರ ಮೇಲೆ ಯಾರು ಬೇಕಾದರೂ, ತಮಗಿಷ್ಟವಾಗಿದ್ದನ್ನು ಕಲಿಯಬಹುದು. ಇದರಿಂದ ಮೊದಲನೆಯದಾಗಿ ಜೀವನ ಎಂದರೇನು ಎಂದು ಅರ್ಥವಾಗುತ್ತದೆ. ನಾವೆಷ್ಟು ಗೊಂದಲಗಳಲ್ಲಿ ಕಳೆದುಹೋಗಿದ್ದೇವೆ ಎಂದರೆ, ಜೀವನ ಎಂದರೆ ಬರೀ ಸಂಪಾದನೆ, ಯಶಸ್ಸು ಎಂದರೆ ಮನೆ ಕಟ್ಟೋದು ಅಥವಾ ಸ್ವಂತ ಕಾರಿನಲ್ಲಿ ಓಡಾಡೋದು ಎಂದಾಗಿಬಿಟ್ಟಿದೆ. ನನ್ನ ಪ್ರಕಾರ, ಯಶಸ್ಸು ಎಂದರೆ ಅದಲ್ಲ. ಪ್ರತಿಕ್ಷಣ ಸಂತೋಷವಾಗಿರುವುದೇ ನಿಜವಾದ ಯಶಸ್ಸು. ಸಂತೃಪ್ತಿ ಸಿಗುವ ಕೆಲಸ ಮಾಡುವುದೇ ನಿಜವಾದ ಯಶಸ್ಸು.

    ಹಾಗಾಗಿ, ಒಂದು ಅದ್ಭುತವಾದ ಬದಲಾವಣೆ ಮೊದಲು ನಮ್ಮಲ್ಲೇ ಆಗಬೇಕು. ಅದಕ್ಕೇ ಹೇಳಿದ್ದು ಪ್ರಾಬ್ಲಮ್ಮೇ ಸಲ್ಯೂಷನ್ ಆಗುತ್ತದೆ ಅಂತ. ಇಲ್ಲಿ ಹೊಸ ಪರಿಹಾರ ಹುಡುಕುವುದಕ್ಕೆ ಹೋದರೆ, ಮತ್ತೆ ಹಳೆಯ ವ್ಯವಸ್ಥೆಗೆ ಅಂಟಿಕೊಳ್ಳಬೇಕಾಗುತ್ತದೆ. ಅದರ ಬದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಿದೆ. ಒಂದಂತೂ ಸತ್ಯ. ಯಾರ ಜೀವನದಲ್ಲೂ ಯಾರೂ ಬದಲಾವಣೆ ತರುವುದಕ್ಕೆ ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ನಾವೇ ಬದಲಾವಣೆ ತಂದುಕೊಳ್ಳಬೇಕು. ಇದನ್ನೇ ನಾನು ಪ್ರಜಾಕೀಯ ಮೂಲಕ ಹೇಳಲು ಹೊರಟಿರುವುದು. ನಾನೊಬ್ಬನೇ ರಾಜಕೀಯದಲ್ಲಿ ಬದಲಾವಣೆ ತರುತ್ತೀನಿ ಎಂದರೆ ಆಗುವುದಿಲ್ಲ. ಅದನ್ನು ಎಲ್ಲರೂ ಸೇರಿ ಮಾಡಬೇಕು. ಇದು ಬರೀ ರಾಜಕೀಯ ಮಾತ್ರವಲ್ಲ, ಸಾಮಾಜಿಕ, ಶೈಕ್ಷಣಿಕ … ಹೀಗೆ ಪ್ರತಿಯೊಂದು ವಿಷಯದಲ್ಲೂ ಇನೋವೇಟಿವ್ ಆಗಿ ಯೋಚಿಸುವ ಕಾಲ ಇದು. ಹತಾಶರಾಗದೆ, ಹೊಸ ಸವಾಲುಗಳನ್ನು ಸ್ವೀಕರಿಸುವ; ಹಿಂದೆ ಹೀಗಿದ್ದೆ, ಮುಂದೆ ಹೀಗೆ ಮಾಡುತ್ತೀನಿ ಎಂದು ಹೊರಡುವ ಕಾಲ ಇದು. ಹೋರಾಟ ಇದ್ದಾಗಲೇ ಮನುಷ್ಯ ಏನಾದರೂ ಆಗುವುದಕ್ಕೆ ಸಾಧ್ಯ. Out of the Box ಯೋಚಿಸುವುದು ಬಹಳ ಮುಖ್ಯ. ಮತ್ತೆ ಹಳೆಯ ಮನಸ್ಥಿತಿಗೆ ಮರಳಿದರೆ, ನಾವು ಬದಲಾಗುವುದಕ್ಕೆ ಸಾಧ್ಯವೇ ಇಲ್ಲ.

    ಸಂತೋಷ ಎಂದರೆ ಇದಲ್ಲ, ಬೇರೇನೋ ಇದೆ ಅಂತ ತಡವಾಗಿ ಗೊತ್ತಾಗುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ಮನೆ ಕಟ್ಟಬೇಕು ಅಥವಾ ಕಾರು ಕೊಂಡು ಜುಮ್ಮಂತ ಓಡಾಡಿದರೆ ಮನುಷ್ಯ ಯಶಸ್ವಿ ಎಂದು ಇಷ್ಟು ದಿನ ಫೀಡ್ ಮಾಡಲಾಗಿತ್ತು. ನಿಜವಾದ ಸಂತೋಷ ಎಂದರೆ ಅದಲ್ಲ ಎಂದು ಕ್ರಮೇಣ ಅರ್ಥವಾಗುತ್ತಿದೆ. ಆ ಸತ್ಯವನ್ನು ಹೇಳಿದರೆ, ಎಲ್ಲವೂ ಆದಮೇಲೆ ಹೀಗೆ philosophical ಆಗಿ ಮಾತಾಡುತ್ತಾರೆ ಅಂತನಿಸಬಹುದು. ಯೋಚನೆ ಮಾಡಿ, ನಿಜವಾದ ಸಂತೋಷ ಎಂದರೆ ಇದೇನಾ? ಖಂಡಿತಾ ಅಲ್ಲ. ನಿಜವಾದ ಸಂತೋಷ ಬೇರೆಲ್ಲೋ ಇದೆ. ಇದನ್ನೆಲ್ಲ ಚಿಕ್ಕಂದಿನಿಂದಲೇ ಅರ್ಥ ಮಾಡಿಸಿದರೆ ಮನುಷ್ಯ ಹತಾಶೆಗೆ ಒಳಗಾಗುವ ಪ್ರಮೇಯವೇ ಬರುವುದಿಲ್ಲ. ಜೀವನ ಎನ್ನುವುದು ನಾಳೆಯಲ್ಲ, ಇವತ್ತು ಎಂದು ಬಾಲ್ಯದಿಂದ ಹೇಳಿಕೊಟ್ಟರೆ, ಆಗ ಎಲ್ಲರೂ ಸಂತೋಷವಾಗಿರುತ್ತಿದ್ದರು. ಕೇವಲ ಮನೆ, ಕಾರು, ಸಾಧನೆ ಎಂಬ ಸುಳಿಯಲ್ಲಿ ಸಿಗದೆ, ತಮಗೆ ಇಷ್ಟವಾದ ಕೆಲಸಗಳನ್ನು ಮಾಡಿಕೊಂಡು ತೃಪ್ತಿಯಿಂದ ಇರುತ್ತಿದ್ದರು. ಈಗಲೂ ತಡವಾಗಿಲ್ಲ. ಕಾರು, ಮನೆ, ಕಾಸ್ಟ್ಲಿ ಡ್ರೆಸ್ … ಎಂಬ ಪೊಳ್ಳು ವಿಷಯಗಳ ಬಗ್ಗೆ ಕೊರಗುತ್ತಲೇ ಇರುತ್ತೀರಾ? ಅಥವಾ ಬದಲಾವಣೆಗೆ ಮುನ್ನುಡಿ ಬರೆಯುತ್ತೀರಾ?

    ಆಯ್ಕೆ, ನಿಮಗೇ ಬಿಟ್ಟಿದ್ದು…

    (ಲೇಖಕರು ಖ್ಯಾತ ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts