More

    ನೀರಾವರಿ ಕನಸು ನನಸಾಗಲಿದೆಯೇ?

    ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಮಹಾಲಕ್ಷ್ಮೀ ಹಾಗೂ ಕರಗಾಂವ ಏತ ನೀರಾವರಿ ಯೋಜನೆಗಳು ಸಾಕಾರಗೊಳ್ಳುವ ಕನಸು ಕಾಣುತ್ತಿದ್ದಾರೆ ಈ ಭಾಗದ ಜನ. ಈಗ ಜಿಲ್ಲೆಯವರೇ ಆದ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿರುವುದರಿಂದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ರೈತರ ಬಹುದಿನಗಳ ಕನಸು ನನಸಾಗಿಸುವ ನಿರೀಕ್ಷೆ ಹೆಚ್ಚಿದೆ.

    ಜೂ. 16ರಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಏತ ನೀರಾವರಿ ಯೋಜನೆಗೆ ಒಳಪಡುವ ರೈತರ ಜತೆಗೆ ಸಮಾಲೋಚಿಸಿ ನೀರಾವರಿ ಯೋಜನೆಯ ಸ್ಥಳ ಪರಿಶೀಲನೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ಜಲಸಂಪನ್ಮೂಲ ಖಾತೆಯೇ ಬೇಕು ಎಂದು ಪಟ್ಟುಹಿಡಿದು ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ಹಿರಿಯ ರಾಜಕಾರಣಿ ರಮೇಶ ಜಾರಕಿಹೊಳಿ ಅವರಾದರೂ, ಚಿಕ್ಕೋಡಿ ತಾಲೂಕಿನಲ್ಲಿ ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ.

    ಚಿಕ್ಕೋಡಿ ಪಶ್ಚಿಮ ಭಾಗದ ರೈತರ ಬಹು ನಿರೀಕ್ಷಿತ ಮಹಾಲಕ್ಷ್ಮೀ ಏತ ನೀರಾವರಿ ಹಾಗೂ ಮಡ್ಡಿ ಪ್ರದೇಶವೆಂದೇ ಕರೆಯಲ್ಪಡುವ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕರಗಾಂವ ಏತ ನೀರಾವರಿಗೆ ಸಚಿವರು ಹಸಿರು ನಿಶಾನೆ ತೋರಿದಲ್ಲಿ ಈ ಭಾಗ ನೀರಾವರಿಯಾಗಿ ಕ್ಷೇತ್ರ ಅಭಿವೃದ್ಧಿಯಾಗಲಿದೆ. ನೀರಾವರಿಯಿಂದ ವಂಚಿತಗೊಂಡ ತಾಲೂಕಿನ ಪಶ್ಚಿಮ ಭಾಗದ ಚಿಂಚಣಿ, ಕುಪ್ಪಾಣವಾಡಿ, ಕೋಥಳಿ ಸೇರಿ 17 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ.

    ತಾಲೂಕಿನ ಕಲ್ಲೋಳ ಹತ್ತಿರ ಹರಿಯುವ ಕೃಷ್ಣಾ ಮತ್ತು ದೂಧಗಂಗಾ ನದಿಯಿಂದ ನೀರನ್ನು ಎತ್ತಿ ಮುಂಗಾರು ಹಂಗಾಮಿನಲ್ಲಿ ಅನುಕೂಲವಾಗಲು ರೈತರ ಜಮೀನುಗಳಿಗೆ ನೀರುಣಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ. ಸುಮಾರು 0.92 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಕರಗಾಂವ ಏತ ನೀರಾವರಿಗೆ ನೀರಿನ ಹಂಚಿಕೆಯಾಗಿಲ್ಲ. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಮತ್ತು ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆಗಳ ಅನುಷ್ಠಾನಕ್ಕೆ ವಿಳಂಬವಾಗಿವೆ. ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ ರೈತರ ಜಮೀನಿಗೆ ನೀರು ತಂದೇ ತರುತ್ತೇನೆ ಎಂದು ಚಿಕ್ಕೋಡಿ-ಸದಲಗಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಆದರೆ, ಅವರ ಆಡಳಿತದಲ್ಲಿ ಯೋಜನೆಗೆ ಅನುಮೋದನೆ ಸಿಗಲಿಲ್ಲ, ಪ್ರಸ್ತಾವನೆಯೂ ಸರ್ಕಾರದ ಮಟ್ಟದಲ್ಲಿ ಇದ್ದು, ಕ್ಯಾಬಿನೆಟ್‌ನಲ್ಲಿ ಮಂಜೂರು ಪಡೆಯುವ ಕಾರ್ಯ ಮಾತ್ರ ಬಾಕಿ ಇದೆ.

    | ಸುಭಾಸ ದಲಾಲ ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts